ಜನಮನ

ಅನ್ನ ಹಾಕವ್ವೋ ಇವತ್ತೂ ಇಟ್ಟೇ ತಿನ್ಬೇಕ ಅಂದ್ರೇ…

ಶೋಭಾ


ದೇವರು ಭಕ್ತಿಯಿಂದ ಬೇಡಿದ್ರೆ ಕೇಳಿದನ್ನೆಲ್ಲಾ ಕೊಡ್ತಾನಂತೆ. ದೇವರು ಅಂತಾ ಇದ್ದಾರೋ ಇಲ್ವೋ ಗೊತ್ತಿಲ್ಲ ಆದರೆ ಅದೊಂದು ನಂಬಿಕೆ ಮಾತ್ರ, ಇದೆ.

ನಾನು ಮಾತ್ರ ಒಬ್ಬಳನ್ನ ನೋಡಿದ್ದೀನಿ ಅವರು ಖಂಡಿತವಾಗಿಯೂ ದೇವರೆ . ದೇವರು ಕೇಳಿದ್ದು ಮಾತ್ರ ಕೊಟ್ರೇ ಇವಳು ಕೇಳೋ ಮುಂಚೇನೆ ಕೊಡ್ತಾಳೆ ಬೇಕಾದರೆ ತನ್ನ ಸರ್ವಸ್ವವನ್ನೂ ಕೂಡ. ಅವಳು ಅಮ್ಮಾ….!!

ನೆನಪಿದ್ಯಾ ಆ ದಿನಗಳು ಹಬ್ಬಕ್ಕೆ ನಮಗೆಲ್ಲಾ ಹೊಸ ಬಟ್ಟೆ ಹಾಕ್ಸಿ ತಾನು ಮಾತ್ರ ಹಳೆಯ ಸೀರೆಯಲ್ಲೆ ಸಮಾಧಾನ ಪಟ್ಕೊತಿದ್ಲು. ಕೇಳಿದ್ರೇ ಹೇಳುತಿದ್ಲು, ಏ.. ನನಗ್ಯಾಕ್ ಹೊಸಬಟ್ಟೆ ನನ್ನ ಹತ್ರ ಈಗ್ಲೇ ಬೇಕಾದಷ್ಟು ಇದೆ ಅಂತ.

ನಿಜಕ್ಕೂ ಅವಳಲ್ಲಿ ಬೇಕಾದಷ್ಟು ಇತ್ತು. ಅದು ಅವಳ ನಿಷ್ಕಲ್ಮಷವಾದ ಪ್ರೀತಿ. ಪ್ರತಿ ಸಲ ನಾವು ಆಟ ಆಡಲು ಹೋಗಿ ಗಾಯ ಮಾಡ್ಕೊಂಡು ಬಂದಾಗೆಲ್ಲಾ ಸರೀಗ್ ಬೈತಿದ್ಲು. ಆಗ ಆ ಗಾಯಕ್ಕೆ ಮುಲಾಮು ಹಚ್ಚೋವಾಗೆಲ್ಲಾ ಆಕೆಯ ಕಣ್ಣಲ್ಲಿ ಜಿನುಗುತಿದ್ದ ನೀರು ಹೇಳ್ತಿತ್ತೂ, ಬಿದ್ದಿದ್ದೂ ನಾನಾದ್ರೂ ನೋವಾಗಿರೋದು ಅವಳಿಗೆ ಅಂತಾ…

ಇವತ್ತು ನಾವೆಲ್ಲಾ ಸಾಕಷ್ಟು ಬೆಳೆದಿದ್ದೀವಿ, ಅಗತ್ಯಕ್ಕಿಂತ ಜಾಸ್ತಿನೆ ಬೆಳೆದಿದ್ದೀವಿ.
ನಮ್ಮ ಅಮ್ಮನತ್ರ ಕೂತ್ಕೊಂಡು ಮಾತಾಡೋಕು ಟೈಮ್ ಇಲ್ಲದಷ್ಟು ಬೆಳೆದಿದ್ದೀವಿ. ಟೈಮ್ ಇದ್ರೂ ಏನ್ ಮಾತಾಡೋದು ಅವಳತ್ರ, ಅವಳಿಗೆ ಏನ್ ತಾನೆ ಗೊತ್ತಿದೆ ಅಂತ….?

ಆದರೆ ತನ್ನ ಒಡಲೊಳಗಿನ ನೋವು ಮಾತ್ರ ಆಕೆ ಯಾರಿಗೂ ಕಾಣದಂತೆ ತನ್ನ ಸೆರಗಂಚಿನಲ್ಲಿ ಬಚ್ಚಿಟ್ಟುಕೊಂಡು ಏನೂ ಅರಿಯದವಳಂತೆ ಒಲೆಯ ಮೇಲೆ ಅರ್ಧಂಬರ್ಧ ತಿರುವಿ ಇಟ್ಟಿದ್ದ ಇಟ್ಟಿನ ಪಾತ್ರೆ ಓಗೊಲೆ ಮೇಲೆತ್ತಿಡಲು ಹೋಗ್ತಾಳೆ. ಅದು ಅಮ್ಮಾ.

ಎಷ್ಟೋ ಸಲ ದೀಪಾವಳಿಯ ದಿನ ಎಲ್ಲರ ಮನೆಯಲ್ಲೂ ಪಟಾಕಿಯ ಸದ್ದು ಸಡಗರ ಸಂಭ್ರಮದೊಂದಿಗೆ ಹಬ್ಬವನ್ನು ಮಾಡ್ತಿದ್ದಾಗ, ತನ್ನ ಮಕ್ಕಳಿಗೆ ಪಟಾಕಿ ತಂದುಕೊಡಲು ಕಾಸಿಲ್ಲದೆ ಮನೆಯಿಂದ ಆಚೆ ಬಿಡದೆ “ಪಟಾಕಿಯ ಬೆಂಕಿ ಕಣ್ಣಿಗೆ ಬಡಿಯುತ್ತೆ ಅಂತ ಸುಳ್ಳು ಹೇಳಿ ತನ್ನ ಮಡಿಲಿನಲ್ಲಿಟ್ಟುಕೊಂಡು ಹಬ್ಬದ ಅಡುಗೆ ಅಂತ ಮಾಡಿದ್ದ ಬೆಳಿಗ್ಗೆ ಅನ್ನಕ್ಕೆ ಚೂರು ಮೊಸರಾಕಿ ತಿನ್ನಿಸಿ ಮಲಗಿಸಿ ತಾನು ಹಸಿದು ಮಲಗಿದವಳ ಮೊಗ್ಗಲ ದಿಂಬೆಲ್ಲಾ ನೆಂದು ನೀರಾಗಿರುತಿತ್ತೂ. ಯಾಕಂದ್ರೆ ಅನ್ನ ಕಾಣ್ತಾ ಇದ್ದದ್ದೇ ಹಬ್ಬ ಹರಿದಿನಗಳಲ್ಲಿ ಮಾತ್ರ, ಅದೂ ಚೂರು ಪಾರು.
ಅದು ಅಮ್ಮ.

ಒಮ್ಮೆ ಉಗಾದಿ ಹಬ್ಬದ ದಿನ ಮನೆಯ ಬಾಗಿಲಿಗೆ ಹಸಿರು ತೋರಣ ತೊಡಿಸಿ ಸಿಂಗಾರ ಮಾಡುವಾಗ ನಮಗೆಲ್ಲಾ ಪಕ್ಕದ ಮನೆಯ ಊರಣದ ಘಮ ಮೂಗಿಗೆ ತಟ್ಟಿತ್ತು ಆ ಮನೆಯಲ್ಲಿ ಮಕ್ಕಳು ಎಣ್ಣೆ ಸ್ನಾನ ಮಾಡಿ ಹೊಗೆದಿಟ್ಟಿದ್ದ ಅಂಗಿಯನ್ನು ತೊಟ್ಟು ಬೀದಿಯಲ್ಲಾ ನಲವತ್ತು ರೌಂಡ್ ಹಾಕೊಂಡು ಬಂದಿದ್ರೂ ಮನೆಯೊಳಗೆ ಊರಣದ ಘಮಲು ಬರುತ್ತಿರಲಿಲ್ಲ.

ಹಬ್ಬದ ದಿನ ಅಪ್ಪ ಮನೆಗೆ ಬರುವ ದಾರಿಯನ್ನು ಅಮ್ಮಾ ಕಾದು ಕೂತಿರಬೇಕಿತ್ತು. ಅಪ್ಪ ತಂದ ಜೋಳಿಗೆಯಲ್ಲಿ ಅಮ್ಮ ಅಕ್ಕಿ ಕಾಳುಗಳನ್ನು ಹೆಕ್ಕಿ ತೆಗೆದು ಸಿಕ್ಕಿದ ಪಾವೋ ಅಚ್ಚೇರೋ ಅಕ್ಕಿಯನ್ನ ತೊಳೆದು ಸಗಣಿಯಿಂದ ತಾರಿಸಿ ರಂಗೋಲೆ ಬಿಟ್ಟು ವಪ್ಪಾ ಮಾಡಿದ್ದ ಆ ಹಸಿ ಒಲೆಯಮೇಲೆ ಇಡುತಿದ್ಲು.

ಬೆಂದ ಅನ್ನವನ್ನ ಮೊದಲು ದೇವರಿಗೆ ಎಡೆ ಇಟ್ಟು ಪೂಜೆ ಆದ ನಂತರವಷ್ಟೇ ಮಕ್ಕಳಿಗೆ ತಣಿಗೆಯಲ್ಲಿ ಮುದ್ದೆ ಸಾರು. “ಅನ್ನ ಹಾಕವ್ವೋ ಇವತ್ತೂ ಇಟ್ಟೇ ತಿನ್ಬೇಕ ಅಂದ್ರೇ…

ಹೇಳೋಳೂ, ಹೂಂ ಅದು ಉಣ್ಕೋ ಆಮೇಲೆ ಹೊಟ್ಟೆ ತುಂಬಾ ಅನ್ನ ಉಣ್ಣೂವಂತೆ ಅಂತಾ ನೀರು ತರೋಕೆ ಕೋಣೆಯೊಳಕ್ಕೆ ಹೋದರೆ ಇಟ್ಟು ಉಂಡೂ ಅವ್ವಾ ಅನ್ನಾ ಅನ್ನೋವರೆಗೂ ಆಚೆ ಬರ್ತಿರಲಿಲ್ಲಾ. ಯಾಕಂದ್ರೆ ಅವಳಿಗೆ ಅಳೋಕೆ ಅಂತ ಜಾಗ ಇದ್ದದ್ದೇ ಕೋಣೆಯಲ್ಲಿದ್ದ ಸಣ್ಣ ಜಾಗ.
ಅದು ಅಮ್ಮಾ .

ಮಾರನೇ ದಿನ ವಸ್ತೊಡಕು. ಎಲ್ಲರ ಮನೆಯಲ್ಲೂ ಬೆಳಿಗ್ಗೆ ಇಂದಲೇ ಕೋಳಿ/ಮಾಂಸ ಘಮ್ ಅನ್ನೋ ವಾಸನೆಯೊಂದಿಗೆ ಎಚ್ಚರ ಆಗ್ತಿದ್ದ ಮಕ್ಕಳಿಗೆ ಅವಳೇಳೋಳೂ ಅಪ್ಪನು ತರೋಕ್ಕೋಗವ್ರೆ ಬರ್ತರೆ ಮಖಾ ತೊಳ್ಕಂಡೂ ಅನ್ನ ಉಣ್ಕಳಿ ಅಷ್ಟರಲ್ಲಿ ನಿಮ್ಮಪ್ಪ ತಂದ್ಮೇಲೆ ನಾವು ಮಾಡೂವ ಅಂತಾ ಹೇಳಿ ಮಖಾ ತೊಳೆದು ನೆನ್ನೆ ಮಿಕ್ಕಿದ್ದ ಇಟ್ಟೋ ಅನ್ನಕ್ಕೋ ಮೊಸರು ಜಾಸ್ತಿ ಬೇಕಾಗುತ್ತೆ ಅಂತಾ ನೀರ್ ಮಜ್ಜಿಗೆ ಮಾಡಿ ಅದರಲ್ಲಿ ರುಚಿಗೆ ತಕ್ಕಷ್ಟು ಉಪ್ಪುಹಾಕಿ ಮಕ್ಕಳಿಗೆ ಕೊಟ್ಟು ಮದ್ಯಾಹ್ನ ಎರಡು, ಮೂರು,ನಾಲ್ಕು, ಗಂಟೆ ಆದರು ಬಾರದನ್ನು ಕಂಡ ಅವ್ವಾ ಮನೆಯ ಮೊಗ್ಗಲಲ್ಲೆ ಇದ್ದ ಹಿಪ್ಪುನೇರಳೆ ತೋಟಕ್ಕೆ ಹೋಗಿ ಉಪ್ಸಾರಿಗೆ ಬೇಕಾಗುವ ಸೊಪ್ಪು ತಂದು ಮುದ್ದೆ ಮಾಡಿ ಉರುಳಿಕಾಳು ಉರಿದು ಉಪ್ಸಾರ್ ಮಾಡಿ ಹಸಿವು ತಾಳದೆ ಸುಸ್ತಾಗಿ ಮಲಗಿದ್ದ ಮಕ್ಕಳಿಗೆಬ್ಬಸಿ ತಣಿಗೆಗೆ ಹಾಕೊಟ್ಟರೆ ಮೃಷ್ಟಾನ್ನ ಭೋಜನ ಸಿಕ್ಕಂತೆ ತಿಂದು ಮುಗಿಸಿದ್ರೂ ಐದೂ ಮಕ್ಕಳು. ಮಕ್ಕಳಿಗೆ ಮರೆತೆ ಹೋಗಿತ್ತೂ ಅವತ್ತು ವಸ್ತೊಡಕು ಅಂತಾ. ಅದು ಅಮ್ಮ.

ಹೌದಲ್ವಾ…
ಹಾಗಿದ್ರೇ ಒಂದು ಸಲ ಕಣ್ ಮುಚ್ಕೊಳ್ಳಿ, ಮುಚ್ಕೊಂಡ್ರಾ…
ನಿಮ್ಮ ತಾಯಿ ನಿಮಗೆ ಅಂತ ಏನೆಲ್ಲಾ ಕಷ್ಟಪಟ್ಟಿದ್ದಾರೆ ಅಂತಾ ಒಮ್ಮೆ ಯೋಚನೆಮಾಡಿ, ಯೋಚನೆಮಾಡಿ. ಅಂತಾ ತಾಯಿನಾ ನಾವು ದೂರ ಮಾಡ್ಕೊತ್ತಿದ್ದೀವಿ ಅಂತ ನೋವಾಗುತ್ತಲ್ವಾ..? ನೋವಾಗುತ್ತಲ್ವಾ..?

ಆಗಿದ್ದಾಗೋಗಿದೆ ಬಿಟ್ಬಿಡಿ. ಇವತ್ತು ಮತ್ತೆ ಮಕ್ಕಳಾಗಿ. ಒಂದ್ಸಲ ನಿಮ್ಮ ತಾಯಿನ ಪ್ರೀತಿಯಿಂದ ತಬ್ಕೊಳ್ಳಿ. ತುಂಬಾ ಬೆಳೆದಿದ್ದೀವಿ ಹೇಗಪ್ಪಾ ತಬ್ಕೊಳ್ಳೋದು ಅಂತ ನಾಚಿಕೆ ಅನ್ಸುತ್ತಾ..? ತಾಯಿ ಮುಂದೆ ಮತ್ತೆ ಮಗುವಾಗಲು ಅದೆಂಥಾ ನಾಚಿಕೆ. ಒಂದ್ಸಲ ಅವಳನ್ನ ತಬ್ಕೊಳ್ಳಿ ಆ ಜೀವಾ ನ , ಒಂದೇ ಒಂದು ಸಲ ಕೇಳಿ, ”ಹೇಗಿದ್ದೀಯಾ” ಅಂತಾ…
ನೀವು ಆ ರೀತಿ ಕೇಳಿದ ತಕ್ಷಣ ಆ ಜೀವ ಬಹಳ ಖುಷಿಪಡುತ್ತೆ….
JUST LOVE YOUR LIFE
LOVE YOUR MOTHER.

ಇಂದಿಗೂ “ಅಮ್ಮಾ” ಅಂದ್ರೇ ಅದೊಂದು ಮಹಾನ್ ಗ್ರಂಥಗಳಲ್ಲಡಗಿರುವ ಶಬ್ದವೇ ”ಶಕ್ತಿ” ಆ “ಮಹಾಶಕ್ತಿ”ಯೇ ಅಮ್ಮನ ರೂಪದಲ್ಲಿ ಬಂದು ನಮಗೆ ಜನುಮ ನೀಡಿ ಬದುಕು ಕಟ್ಟಿಕೊಡುತ್ತಾಳೆ. ಅವಳೇ ಅಮ್ಮಾ…..

ಅಮ್ಮ ಯಾವತ್ತೂ ಅಮ್ಮನೇ. ಇದು ಮನೆಯಲ್ಲೂ ಸತ್ಯ, ದೇಶದಲ್ಲೂ ಸತ್ಯ ಪ್ರಪಂಚಕ್ಕೂ “ಅಮ್ಮ” ಅನ್ನೋ ಮಾತೇ ಸತ್ಯ…
ಅಮ್ಮನ ಹೆಸರಿನಲ್ಲೆ ಅಡಗಿದೆಯೊಂದು ದಿವ್ಯ “ಮಹಾಶಕ್ತಿ “

Comment here