ಅಂತರಾಳ

‘ಅಮ್ಮ’ ವಿಜಯಮ್ಮ

ಜಿ ಎನ್ ಮೋಹನ್


ಇವತ್ತು ಅಮ್ಮನ ದಿನ ಎಂದರು
ನನಗೆ ಆ ದಿನ, ಈ ದಿನಗಳ ಬಗ್ಗೆಯೇ ತಕರಾರಿದೆ
ಆದರೂ ಅಮ್ಮ ಎಂದ ತಕ್ಷಣ ನೆನಪಿಗೆ ಬಂದದ್ದು ನನ್ನ ಅಮ್ಮ ವಿಜಯಮ್ಮ
ನಾನು ಈ ಹಿಂದೆ ಬರೆದಿದ್ದ ಒಂದು ಪುಟ್ಟ ನೋಟ್ ಇಲ್ಲಿದೆ
—–

ಈ ವಾರ ಎರಡು ಘಟನೆಗಳಿಗೆ ನಾನು ಸಾಕ್ಷಿಯಾದೆ
ಒಂದು ವೇದಿಕೆಯ ಮೇಲೆ,
ಇನ್ನೊಂದು ತೆರೆಯ ಮೇಲೆ

ಒಂದು ಅಪ್ಪ,
ಇನ್ನೊಂದು ಅಮ್ಮ

ಒಬ್ಬ ಪುರುಷ,
ಇನ್ನೊಬ್ಬ ಮಹಿಳೆ

ಒಬ್ಬ ಅಮೀರ್ ಖಾನ್,
ಇನ್ನೊಬ್ಬರು ವಿಜಯಮ್ಮ

**

‘ಅಮ್ಮ’ ಎಂದೇ ನಮ್ಮೆಲ್ಲರಿಂದಲೂ ಕರೆಸಿಕೊಳ್ಳುವ ಡಾ ವಿಜಯಾ ಅವರು ಬರೆದ ಲೇಖನಗಳ ಸಂಕಲನ ‘ಚಿತ್ತ ಕೆತ್ತಿದ ಚಿತ್ರ’ ಬಿಡುಗಡೆಯಿತ್ತು.

ಇಡೀ ಕಾರ್ಯಕ್ರಮದ ಉದ್ದಕ್ಕೂ ಅಮ್ಮ ತಲೆ ತಗ್ಗಿಸಿಯೇ ಕುಳಿತಿದ್ದರು.

ಯಾವಾಗಲೂ ತಲೆ ಎತ್ತಿ ನಡೆಯುವ, ಸುತ್ತ ಇದ್ದವರ ಜೊತೆ ಗದ್ದಲ ಮಾಡುತ್ತಾ ಕೂರುವ, ಒಂದು ಕ್ಷಣವೂ ನಗು ವೇಸ್ಟ್ ಆಗಬಾರದು ಎನ್ನುವಂತೆ ನೋಡಿಕೊಳ್ಳುವ ಅಮ್ಮ ಅವತ್ತು ತಲೆ ತಗ್ಗಿಸಿ ಕುಳಿತೇ ಇದ್ದರು ಮತ್ತು ಮೌನಕ್ಕೆ ಶರಣಾಗಿ ಹೋಗಿದ್ದರು

ಅವರು ಮಾತನಾಡುವ ಸಮಯ ಬಂದಾಗ –
ನಾನು ಈ ಮಕ್ಕಳಿಗೆ ನಿಮಗೆ ಏನು ಬೇಕು ಎಂದು ಕೇಳಲಿಲ್ಲ,
ನಿಮಗೆ ಏನು ಇಷ್ಟ ಎಂದು ಕೇಳಲಿಲ್ಲ.
ಬದಲಿಗೆ ನನಗೆ ಆಗಿದ್ದು ಮಾಡುತ್ತಾ ಹೋದೆ.
ಅವರು ನನಗೆ ಹೊಂದಿಕೊಳ್ಳುತ್ತಾ ಹೋದರು.

ನನ್ನ ಸಮಯ, ಅನಿವಾರ್ಯತೆ ನನ್ನನ್ನು ಹಾಗೆ ಕೇಳದಂತೆ ಮಾಡಿಬಿಟ್ಟಿತ್ತು.

ಅವರಿಗೆ ನಾನು ಋಣಿಯಾಗಿರಬೇಕು

**
ಕೈಯಲ್ಲಿ ಕತ್ತರಿ ಹಿಡಿದಿದ್ದ ಆತ ಎದುರು ನಿಂತಿದ್ದ.
ಮುಂದೆ ಕುಳಿತಿದ್ದ ಹುಡುಗಿ ಕಣ್ಣೀರಾಗಿ ಹೋಗಿದ್ದಳು

ಪಪ್ಪಾ.. ಬೇಡ ಪಪ್ಪಾ.. ಎನ್ನುತ್ತಾ ರೋಧಿಸುತ್ತಿದ್ದಳು
ಎದುರಿಗೆ ನಿಂತಿದ್ದ ತಂಗಿಯ ಮುಖದಲ್ಲೂ ಗಾಬರಿ ಚಿಮ್ಮುತ್ತಿತ್ತು

ಇದನ್ನೆಲ್ಲಾ ನೋಡುತ್ತಾ ನಿಂತಿದ್ದ ಆಕೆಯ ಅಮ್ಮ ನೋವು ತಿನ್ನುತ್ತಾ ಇದ್ದರು.

ಅವರ ಎದುರು ನಿಂತ ಆ ಅಪ್ಪ ಅಮೀರ್ ಖಾನ್ ಅಲಿಯಾಸ್ ಮಹಾವೀರ್ ಸಿಂಗ್ ಪೋಗಟ್

ಮುಖದಲ್ಲಿ ಮಾತ್ರ ಒಂದು ಗೆರೆಯೂ ಹೆಚ್ಚು ಕಮ್ಮ್ಮಿಯಾಗಲಿಲ್ಲ
ಆತ ನಿಶ್ಚಯಿಸಿ ಆಗಿತ್ತು

ಎದುರಿಗಿದ್ದ ಕ್ಷೌರಿಕ ತನ್ನ ಬೆಳೆದ ಮಗಳ ತಲೆಗೂದಲು ಕತ್ತರಿಸಲೇಬೇಕು.
ಕತ್ತರಿಸುತ್ತಾನೆ ಅಷ್ಟೇ.. ಎನ್ನುವುದೂ ಅವನಿಗೆ ಗೊತ್ತಿತ್ತು.
ಇಲ್ಲದಿದ್ದರೆ ಆತನಿಗೆ ಅದನ್ನು ಕತ್ತರಿಸಿ ಹಾಕುವುದೂ ಗೊತ್ತಿತ್ತು.

**

ಚಿಕ್ಕ ವಯಸ್ಸಿನಲ್ಲೇ ಎರಡು ಮಕ್ಕಳನ್ನು ಹಡೆದ,
ಇನ್ನೂ ಕನಸುಗಳ ವಸಂತ ಕಾಲಿಡುವ ಮುಂಚೆಯೇ ಮನೆಯಿಂದ ಹೊರಬೀಳಬೇಕಾಗಿ ಬಂದ
ವಿಜಯಮ್ಮ ಗುಬ್ಬಿಯಾಗಿ ಹೋಗಿದ್ದರು

ನಾನು ‘ಏನು ಬೇಕು ನಿಮಗೆ’ ಎಂದು ಕೇಳದೇ ಬೆಳಸಿದ ಮಕ್ಕಳು ಇಂದು
ಹೀಗೆಲ್ಲಾ ನನಗಾಗಿ ನಿಂತಿದ್ದಾರಲ್ಲ ಎಂದು

ಕ್ಷಮಿಸಿ ಮಕ್ಕಳೇ ಎನ್ನುವ ಮಾತು ಗಂಟಲಲ್ಲಿತ್ತೇನೋ

ಎಂದೂ ವಿಚಲಿತವಾಗದ ಅಮ್ಮನ ಕಂಠವೂ ಅಂದು ಒಂದಿಷ್ಟು ಅಲುಗಿತ್ತು.

ಕಣ್ಣಂಚಿಗೆ ಬಂದ ನೀರು ಹೊರಗೆ ಜಾರಲಿಲ್ಲ ಅಷ್ಟೇ

ತನ್ನ ಸ್ಥಿತಿಯಿಂದಾಗಿ ಮಕ್ಕಳ ಕನಸನ್ನು ಕೊಂದೆನಲ್ಲಾ ಎಂದು ಅವರಿಗೆ ಅನಿಸಿತ್ತು

ತನ್ನ ಸ್ಥಿತಿಯಿಂದಾಗಿ ಮಕ್ಕಳ ಬೇಕು ಬೇಡ ನೋಡಲಾಗಲಿಲ್ಲವಲ್ಲ ಎಂದು ಮನಸ್ಸು ನೊಂದಿತ್ತು

**
ಆ ಕತ್ತರಿ ಹಿಡಿದು ಕೂದಲನ್ನು ಕತ್ತರಿಸುತ್ತಾ ಇದ್ದವನ ಎದುರು ನಿಂತಿದ್ದ
ಆತನೂ ವಿಚಲಿತನಾಗಿರಲಿಲ್ಲ
ಏಕೆಂದರೆ ಆತನಿಗೆ ಕನಸುಗಳಿತ್ತು
ಆತನಿಗೆ ಅದನ್ನು ನನಸು ಮಾಡಿಕೊಳ್ಳಲಾಗಿರಲಿಲ್ಲ

ಆತ ಒಂದೇ ಮಾತಿನಲ್ಲಿ ಹೇಳಿಬಿಟ್ಟಿದ್ದ
ನನ್ನ ಕನಸನ್ನು ಇವರ ಮೂಲಕ ನನಸು ಮಾಡಿಕೊಳ್ಳುತ್ತೇನೆ

ಹಾಗಾಗಿಯೇ ಇವನು ಮಕ್ಕಳ ಕನಸೇನು ಎಂದು ಕೇಳಲು ಸಿದ್ಧನಿರಲಿಲ್ಲ
ಮಕ್ಕಳ ಬೇಕು ಬೇಡಗಳನ್ನು ತಿಳಿಯಲು ಬಿಲ್ ಕುಲ್ ಒಪ್ಪಿರಲಿಲ್ಲ
ಮಕ್ಕಳೇ ತಮ್ಮ ಇಷ್ಟಗಳನ್ನು ಹೇಳುತ್ತಿದ್ದರೂ ಕಿವಿಗೊಟ್ಟಿರಲಿಲ್ಲ
ಬೇಕು ಎನ್ನುವುದಕ್ಕಿಂತಲೂ ಹೆಚ್ಚಾಗಿ ಇದು ಬೇಡಪ್ಪಾ ಎಂದು ಗೋಗರೆಯುವಾಗಲೂ ಆತ ಅದಕ್ಕೆ ಸೊಪ್ಪು ಹಾಕಿರಲಿಲ್ಲ

**

ವ್ಯತ್ಯಾಸ ಇಷ್ಟೇ ಇತ್ತು
ಮಕ್ಕಳ ಕನಸು ಏನೆಂದು ತಿಳಿಯಲಾಗಲಿಲ್ಲವಲ್ಲ ಎಂದು ಅವಲತ್ತುಕೊಳ್ಳುತ್ತಿದ್ದ ಅಮ್ಮನನ್ನು
ಸಮಾಜ ಇನ್ನಿಲ್ಲದಂತೆ ಕಾಡಿಸಿತ್ತು, ನೋಯಿಸಿತ್ತು,
ಕೀಳರಿಮೆಯಿಂದ ಒದ್ದಾಡುವಂತೆ ಮಾಡಿತ್ತು

ಆದರೆ ಅಲ್ಲಿ ನಿಮ್ಮ ಕನಸುಗಳು ನನಗೆ ಬೇಕಿಲ್ಲ ನನ್ನ ಗುರಿ ಅಷ್ಟೇ ನನಗೆ
ಎಂದವನ ಜೊತೆ ಇಡೀ ದೇಶ ನಿಂತುಬಿಟ್ಟಿತ್ತು

ಶಹಬಾಷ್ ಗಿರಿ ನೀಡಿತ್ತು

ಮೂರು ದಿನಕ್ಕೆ ನೂರು ಕೋಟಿಗೂ ಹೆಚ್ಚು ಹಣ ಬಾಚಿಕೊಳ್ಳುವಂತೆ ಮಾಡಿತ್ತು

**
ಒಂದೆಡೆ ಬಿಕ್ಕುತ್ತಿದ್ದ ಅಮ್ಮ
ಇನ್ನೊಂದೆಡೆ ಸಂಭ್ರಮಿಸಿ ಮೀಸೆ ತಿರುವುತ್ತಿದ್ದ ಅಪ್ಪ

**
ಒಂದೆಡೆ ಚಿತ್ತ, ಚಿತ್ರ ಬರೆಯಲು ಯತ್ನಿಸುತ್ತಿತ್ತು
ಇನ್ನೊಂದೆಡೆ ದಂಗಲ್ ಬೆಳ್ಳಿ ತೆರೆಯೇರಿ ದೇಶ ಉನ್ಮಾದ ಚಿಮ್ಮಿಸುತ್ತಿತ್ತು

**

ಆ ಮಕ್ಕಳಿಗೆ ಕನಸಿತ್ತು.
ಎಲ್ಲರಂತೆ ಎಲ್ಲರಷ್ಟೇ ಸಮಯ ಮಲಗಬೇಕು,
ಎಲ್ಲರಂತೆ ಕನಸು ಬೀಳಬೇಕು
ಎಲ್ಲರಿಗೂ ಬೆಳಕಾದಾಗಲೇ ಬೆಳಕಾಗಬೇಕು ಎಂದು

ಎಲ್ಲರಂತೆ ಪಾನಿಪೂರಿ ತಿನ್ನಬೇಕು
ಎಲ್ಲರಂತೆ ತಲೆಗೂದಲಿರಬೇಕು
ಎಲ್ಲರಂತೆ ಅದಕ್ಕೆ ಟೇಪು, ಒಂದಿಷ್ಟು ಹೂವು
ತಲೆಗಿಷ್ಟು ಎಣ್ಣೆಎಲ್ಲರಂತೆ ತುಟಿಗೆ ಲಿಪ್ ಸ್ಟಿಕ್

ಎಲ್ಲರಂತೆ ಒಂದಿಷ್ಟು ಐಸ್ ಕ್ರೀಮ್
ಎಲ್ಲರಂತೆ ಒಂದಿಷ್ಟು ಡಾನ್ಸ್

ಚಿನ್ನ ಚಿನ್ನ ಆಸೈ..

ಅಪ್ಪನ ಮುಂದೆ ಅವರು ಅದನ್ನು ಹೇಳಿಕೊಂಡಿದ್ದರೂ ಕೂಡಾ

**
ಆ ಮಕ್ಕಳಿಗೆ ಕನಸಿತ್ತೋ ಇಲ್ಲವೋ ಗೊತ್ತೇ ಆಗಿರಲಿಲ್ಲ
ಅವರು ಹೇಳಲೂ ಇಲ್ಲ
ಬದುಕು ಕಟ್ಟಲು ಹೊರಟಿದ್ದ ಅಮ್ಮನ ಹಿಂದೆ ನಡೆದು ಬಂದುಬಿಟ್ಟವು ಬೆನ್ನಿಗಿದ್ದ ನೆರಳಿನಂತೆ

**
ಒಬ್ಬ ಅಪ್ಪ
ಒಬ್ಬ ಅಮ್ಮ

**
ಒಬ್ಬ ಪುರುಷ
ಒಬ್ಬ ಮಹಿಳೆ

**
ಒಂದು ಮಣ್ಣಿನ ಅಖಾಡ
ಇನ್ನೊಂದು ಬದುಕಿನ ಅಖಾಡ

Comment here