ತುಮಕೂರು ಲೈವ್

ಅಯ್ಯೋ! ಎಷ್ಟೊಂದು ಮಕ್ಕಳಿಗೆ ಕಚ್ಚೇ ಬಿಟ್ಟಿತು ನಾಯಿ…

ತುಮಕೂರು: ನಗರದಲ್ಲಿ ನಾಯಿಗಳ ಹಿಂಡು ದಾಳಿ ನಡೆಸಿ 10 ಹೆಚ್ಚು ಮಕ್ಕಳನ್ನು ಗಾಯಗೊಳಿಸಿರುವ ಘಟನೆ ಜೂನ್ 11 ರಂದು ನಡೆದಿದೆ.

ನಜರಾಬಾದ್ ನ ಸ್ಮಶಾನ ಹಿಂಭಾಗ ಮಸೀದಿ ರಸ್ತೆಯಲ್ಲಿ ನಾಯಿಗಳು ದಾಳಿ ನಡೆಸಿ ಮಕ್ಕಳನ್ನು ಕಚ್ಚಿ ಗಾಯಗೊಳಿಸಿವೆ.

ಕೈ, ಕಾಲು, ತೊಡೆಯ ಭಾಗಕ್ಕೆ ಬಾಯಿ ಹಾಕಿರುವ ನಾಯಿಗಳು ಮಾಂಸಖಂಡ ಹೊರಬರುವಂತೆ ಬರುವಂತೆ ಕಚ್ಚಿವೆ. ಕೂಡಲೇ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ನಾಯಿಗಳು ದಾಳಿ ನಡೆಸಿರುವುದಕ್ಕೆ ನಗರ ಪಾಲಿಕೆಯೇ ಕಾರಣ. ಹಂದಿ ಹಿಡಿಯುವ ಪಾಲಿಕೆ ನಾಯಿಗಳ ಹಾವಳಿಯನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಚ್ಚ ಪಾಲಿಕೆಯೇ ಭರಿಸಲಿ


ತುಮಕೂರಿನ ಹನ್ನರಡನೇ ವಾರ್ಡ್ ನಲ್ಲಿ ನಾಯಿಗಳು ದಾಳಿ ನಡೆಸಿ 10ಕ್ಕೂ ಹೆಚ್ಚು ಮಂದಿ ಮಕ್ಕಳಿಗೆ ಕಚ್ಚಿ ಗಾಯಗೊಳಿಸಿದ್ದು, ನಗರಪಾಲಿಕೆಯೇ ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕು ಎಂದು ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಒತ್ತಾಯಿಸಿದ್ದಾರೆ.

ಜೂನ್ 11ರಂದು ಮಧ್ಯಾಹ್ನ ನಜರಾಬಾದ್ ನ ಸ್ಮಶಾನದ ಹಿಂಬಾಗ ಮಸೀದಿ ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ನಾಯಿಗಳ ಹಿಂಡು ದಾಳಿ ನಡೆಸಿ ತೀವ್ರ ಗಾಯಗೊಳಿಸಿದೆ. ಇದಕ್ಕೆ ನಗರ ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿದ್ದಾರೆ.

ಹಂದಿಗಳನ್ನು ಹಿಡಿಯುವಲ್ಲಿ ಮುತುವರ್ಜಿ ತೋರಿಸುವ ಅಧಿಕಾರಿಗಳು ನಾಯಿ ದಾಳಿ ಬಗ್ಗೆ ಜಾಣಮೌನ ವಹಿಸಿದ್ದಾರೆ. ಪೊದೆಗಳಿಗೂ ನುಗ್ಗಿ ಹಂದಿಗಳನ್ನು ಹಿಡಿಯಲಾಗುತ್ತದೆ. ಆದರೆ ದಿನಬೆಳಗು ಮಕ್ಕಳ ಮೇಲೆರಗುವ ನಾಯಿಗಳ ಹಿಂಡನ್ನು ನಿಯಂತ್ರಿಸುವಲ್ಲಿ ಪಾಲಿಕೆ ವಿಫಲವಾಗಿದೆ.

ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ನಾಯಿಗಳು ಹೆಚ್ಚದಂತೆ ಸಂತಾನಹರಣ ಚಿಕಿತ್ಸೆ ಮಾಡಬೇಕು. ಮಕ್ಕಳ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ

Comment here