ಅಂತರಾಳಸಾಹಿತ್ಯ ಸಂವಾದ

‘ಆಗೋಲ್ಲ’ ಅನ್ನೋ ಶಬ್ದವೇ ನನಗೆ ಆಗೋದಿಲ್ಲ ಅಂದರು ವಿಜಯ ಸಂಕೇಶ್ವರ

ಜಿ ಎನ್ ಮೋಹನ್


‘ವಿಜಯ ಸಂಕೇಶ್ವರ’ ಅವರ ಹೆಸರೇನು?
ಅಂತಹ ಒಂದು ಪ್ರಶ್ನೆಯನ್ನು ನಾನೇದಾದರೂ ನಿಮ್ಮ ಮುಂದಿಟ್ಟರೆ ನೀವು ಗಹಗಹಿಸಿ ನಗುತ್ತೀರಿ ಗೊತ್ತು.

ಗಂಗಾವತಿ ಪ್ರಾಣೇಶ್ ಹಾಸ್ಯ ಕಾರ್ಯಕ್ರಮದಲ್ಲಿ ‘ಕಿತ್ತೂರು ಚನ್ನಮ್ಮನ ಊರಿನ ಹೆಸರೇನು?’ ಅಂತ ಪ್ರಶ್ನೆ ಕೇಳ್ತಾರಲ್ಲಾ
ಥೇಟ್ ಅದೇ ಸ್ಟೈಲ್ ನಲ್ಲಿದೆ ನನ್ನ ಪ್ರಶ್ನೆ ಕೂಡಾ ಅನ್ನೋದು ನೀವು ಆಗಲೇ ಬರೆದಿರುವ ತೀರ್ಮಾನ.

‘ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು’ ಅನ್ನೋದು ಪತ್ರಿಕೋದ್ಯಮದ ಒಂದು ರೂಲ್

ಹಾಗೆಯೇ ‘ವಿಜಯ ಸಂಕೇಶ್ವರ’ ಅನ್ನೋದು ಅವರ ಹೆಸರು ಅಂತ ನಮಗೆ ಗೊತ್ತಿದ್ದರೂ ‘ಅದು ಹೌದಾ’ ಅಂತ ನಾನು ಅದನ್ನು ಪರೀಕ್ಷೆಗೆ ಒಳಪಡಿಸಿದಾಗ ಗೊತ್ತಾದದ್ದು ಅವರ ಹೆಸರು ವಿಜಯ ಸಂಕೇಶ್ವರ ಅಲ್ಲ ‘ವಿಜಯ ತುಬಕಿ’

ಆಶರ್ಯ ಆದರೂ ನಿಜ!

ಬೆಳಗಾವಿ ಜಿಲ್ಲೆಯ ಜಮಖಂಡಿಯ ತುಬಕಿ ಊರಿನವರಾದ ವಿಜಯ ಸಂಕೇಶ್ವರ ಅವರ ಪೂರ್ವಜರಿಗೆಲ್ಲಾ ಇದ್ದ ಹೆಸರು ತುಬಕಿ ಎಂದೇ.

‘ಆದರೆ ನಮ್ಮ ತಂದೆ ಹುಟ್ಟಿ ಬೆಳೆದದ್ದು ಬೆಳಗಾವಿಯ ಗಡಿ ಊರು ಸಂಕೇಶ್ವರದಲ್ಲಿ. ಅಲ್ಲಿಂದ ಸುಮಾರು 90 ವರ್ಷಗಳ ಹಿಂದೆ ಗದಗಕ್ಕೆ ಬಂದು ಅಲ್ಲಿಯೇ ತಮ್ಮ ಬದುಕು ಕಂಡುಕೊಂಡರು.
ನಮ್ಮ ತಂದೆಯ ಹೆಸರಿನ ಜೊತೆಗೂ ಇದ್ದದ್ದು ತುಬಕಿಯೇ.
ಆದರೆ ನಾವು ಸಂಕೇಶ್ವರದ ಕಡೆಯಿಂದ ಬಂದವರು ಎನ್ನುವ ಕಾರಣಕ್ಕೆ ಗದಗಿನ ಮಂದಿ ನಮ್ಮ ಹೆಸರಿನ ಜೊತೆಗೆ ಸಂಕೇಶ್ವರ ಸೇರಿಸಿಬಿಟ್ಟರು.
ಅದೇ ಪರ್ಮನೆಂಟ್ ಆಯ್ತು ಎಂದು ವಿಜಯ ‘ತುಬಕಿ’ ಸಂಕೇಶ್ವರ ಅವರು ನಸುನಕ್ಕರು.

ಗದಗ ಎಂದರೆ ಮೊದಲು ನೆನಪಾಗುವುದೇ ಕುಮಾರವ್ಯಾಸ, ವೀರ ನಾರಾಯಣ ಗುಡಿ ಹಾಗೂ ಕರ್ಣಾಟ ಭಾರತ ಕಥಾಮಂಜರಿ.
ಆದರೆ ಪಟ್ಟಿ ಅಷ್ಟಕ್ಕೇ ನಿಲ್ಲುವುದಿಲ್ಲ
ಕರ್ನಾಟಕದ ಹಲವಾರು ಸುಶಿಕ್ಷಿತ ತಲೆಮಾರಿನ ಮನಸ್ಸಿನಲ್ಲಿ ಅಚ್ಚೊತ್ತಿರುವ ಇನ್ನೊಂದು ಪುಸ್ತಕ ‘ಡಿ ಕೆ ಭಾರದ್ವಾಜ್ ಡಿಕ್ಷನರಿ’

‘ಭಾರದ್ವಾಜ್ ಡಿಕ್ಷನರಿ ನನ್ನ ತಂದೆಯ ಕನಸು.
ಅವರಿಗೆ ಕನ್ನಡಕ್ಕೊಂದು ಪದಕೋಶ ಮಾಡಬೇಕು ಎನ್ನುವ ಕನಸಿತ್ತು.
1944ರಲ್ಲಿ ಆ ಕನಸು ನನಸು ಮಾಡಿಕೊಂಡರು. ನಾನು ಇನ್ನೂ ಹುಟ್ಟಿಯೇ ಇರಲಿಲ್ಲ. ಈಗಲೂ ಸಹಾ ಒಂದು ವರ್ಷದಲ್ಲಿ ಕನಿಷ್ಠ 4 ಲಕ್ಷ ಪ್ರತಿ ಖರ್ಚಾಗುತ್ತದೆ.
ನನಗೆ ಮರಾಠಿ ಪದಕೋಶ ಮಾಡಬೇಕು ಎನ್ನುವ ಉತ್ಸಾಹ ಬಂತು.
ನಾನೇ ಮರಾಠಿ ಕಲಿತು ಪಂಡಿತರ ಬೆನ್ನು ಬಿದ್ದು ಮರಾಠಿ ಡಿಕ್ಷನರಿ ಮಾಡಿದೆ.
ವಿಚಿತ್ರ ನೋಡಿ ಮಹಾರಾಷ್ಟ್ರದಲ್ಲಿ ಹುಟ್ಟಿದ ಅಪ್ಪ ಕನ್ನಡ ಡಿಕ್ಷನರಿ ಮಾಡಿದರು. ಕರ್ನಾಟಕದಲ್ಲಿ ಹುಟ್ಟಿದ ನಾನು ಮರಾಠಿ ಡಿಕ್ಷನರಿ ಮಾಡಿದೆ ಎಂದು ನಕ್ಕರು.

ಹೀಗೆ ಮಾತನಾಡುತ್ತಿದ್ದಾಗ ನನ್ನ ಕಣ್ಣು ಮೇಲಿಂದ ಮೇಲೆ ಅವರ ಮೂಗಿನತ್ತ ಹೋಗುತ್ತಿತ್ತು.
ಪ್ರತಿಯೊಬ್ಬರ ಚಲನ ವಲನವನ್ನೂ ಇನ್ನಿಲ್ಲದಷ್ಟು ಸೂಕ್ಷ್ಮದಿಂದ ಗಮನಿಸುವ ವಿಜಯ ಸಂಕೇಶ್ವರರಿಗೆ ಇದು ಗೊತ್ತಾಗಿ ಹೋಯಿತೇನೋ

‘ನನ್ನ ಮೂಗು ಇಂದಿರಾಗಾಂಧಿಯ ಮೂಗಿನ ಹಾಗಿತ್ತು.
ನನಗೆ 12 ವರ್ಷ ಇದ್ದಾಗ ಮೂಗಿನಲ್ಲಿ ಏನೋ ಹುಣ್ಣಾಯಿತು.
ಇಂಜೆಕ್ಷನ್ ಕೊಟ್ಟವರು ಸರಿಯಾಗಿ ಕೊಡದ ಕಾರಣ್ ಸೆಪ್ಟಿಕ್ ಆಯಿತು.
ಇಡೀ ಒಂದು ವರ್ಷ ನಾನು ನರಳುವಂತೆ ಮಾಡಿತು. ಆಮೇಲೆ ನೋಡಿದರೆ ಇಂದಿರಾಗಾಂಧಿಯವರ ಮೂಗಿನಂತಿದ್ದ ಮೂಗು ಹೀಗೆ ಆಗಿ ಹೋಗಿತ್ತು’ ಎಂದರು.

ಅವರು ವಿಷಾದದಿಂದ ಈ ಮಾತು ಹೇಳುತ್ತಿದ್ದಾರೇನೋ ಎಂದು ಅವರತ್ತ ನೋಡಿದೆ
ಅವರ ಮುಖದಲ್ಲಿ ಒಂದು ತುಂಟ ನಗು ಮೂಡಿತ್ತು. ಏನೋ ಹೇಳುವ ಉತ್ಸಾಹದಲ್ಲಿದ್ದರು. ನಾನೂ ಕಿವಿಯಾದೆ.

‘ಈ ಮೂಗು ನನಗೆ ತುಂಬಾ ಅಮೂಲ್ಯವಾದ ಗಿಫ್ಟ್ ಕೊಟ್ಟಿದೆ’ ಎಂದರು.
ನಾನು ಮುಖವನ್ನು ಕ್ವಶ್ಚನ್ ಮಾರ್ಕ್ ಆಗಿ ಬದಲಿಸಿಕೊಂಡೆ.

‘ನನ್ನ ಅಪ್ಪನಿಗೆ ನನ್ನ ಮೂಗಿನದ್ದೇ ಚಿಂತೆ ಆಗಿ ಹೋಗಿತ್ತು. ಇವನಿಗೆ ಹೇಗಪ್ಪಾ ಹೆಣ್ಣು ಕೇಳುವುದು ಅಂತ
ಆಗ ನನ್ನ ಮೂಗಿನ ಆಕಾರವನ್ನೇ ಲೆಕ್ಕಿಸದೆ ನನ್ನನ್ನು ಮದುವೆ ಆಗ್ತೀನಿ ಅಂತ ವಾಲೆಂಟರಿಯಾಗಿ ಮುಂದೆ ಬಂದದ್ದು ಈಕೆ’
ಎನ್ನುತ್ತಾ ಪಕ್ಕದಲ್ಲಿದ್ದ ತಮ್ಮ ಪತ್ನಿಯತ್ತ ಬೊಟ್ಟು ಮಾಡಿದರು
ಅವರ ಮುಖದಲ್ಲೂ ಒಂದು ಸಂಭ್ರಮವಿತ್ತು.

‘ನೀವು ಲಾರಿ ಹತ್ತಿ ಅದರ ಸ್ಟೀರಿಂಗ್ ಹಿಡಿದಾಗ ನಿಮಗೆ ಇನ್ನೂ 20 ವರ್ಷ’
ಅಂತ ನಾನು ನನ್ನ ಮಾತಿನ ಸ್ಟೀರಿಂಗ್ ಅನ್ನು ಇನ್ನೊಂದು ದಿಕ್ಕಿಗೆ ಹೊರಳಿಸಿದೆ.
‘ಹೌದು, ಆ ವೇಳೆಗೆ ಮುದ್ರಣ ಕ್ಷೇತ್ರದಲ್ಲಿದ್ದ ನಾವು ಡೈವರ್ಸಿಫೈ ಆಗಲೇಬೇಕು ಅಂತ ನನಗೆ ತೀವ್ರವಾಗಿ ಅನಿಸಿತ್ತು. ಬೇರೆ ಬ್ಯುಸಿನೆಸ್ ಮಾಡಲೇಬೇಕು ಎಂದು ನಿರ್ಧರಿಸಿದೆ’.

‘ಅದು ಸರಿ ಆದರೆ ಅದಕ್ಕೆ ಲಾರಿಯೇ ಯಾಕೆ ಆಗ್ಬೇಕಿತ್ತು’ ಅಂತ ನಾನು ಪ್ರಶ್ನೆಯನ್ನು ಮುಂದಿಟ್ಟೆ.

‘ನಾನು ತುಂಬಾ ಯೋಚಿಸಿಯೇ ಲಾರಿ ಬ್ಯುಸಿನೆಸ್ ಮಾಡುವ ಮನಸ್ಸು ಮಾಡಿದ್ದು.
ಲಾರಿ ಬೇರೆ ಬ್ಯುಸಿನೆಸ್ ಗಳಂತಲ್ಲ. ಅದು ಮೊದಲ ದಿನದಿಂದಲೇ ಆದಾಯ ತಂದುಕೊಡುತ್ತದೆ’ ಎಂದರು.

‘ನಾನು ಲಾರಿ ಬ್ಯುಸಿನೆಸ್ ಮಾಡುವ ಮೊದಲು ನನಗೆ ಸಾಲ ಹುಟ್ಟುವುದು ತುಂಬಾ ಸುಲಭವಿತ್ತು. ಆದರೆ ನಾನು ಲಾರಿ ಹತ್ತಿದ ಕೂಡಲೇ ನಮ್ಮ ಬಂಧು ಬಳಗಕ್ಕೆ ನನ್ನ ಮೇಲೆ ವಿಶ್ವಾಸ ಕಡಿಮೆಯಾಯಿತು. ಸಾಲವೇ ಹುಟ್ಟುತ್ತಿರಲಿಲ್ಲ’ ಎಂದರು.

ರಾತ್ರಿ ಡ್ರೈವರ್ ಬರುವ ವೇಳೆಗೆ ತಾವೇ ಲಾರಿ ಓಡಿಸಿಕೊಂಡು ನೂರಾರು ಕಿ ಮೀ ಹೋಗುತ್ತಿದ್ದ ವಿಜಯ ಸಂಕೇಶ್ವರ ಅವರನ್ನು ‘ಆದರೂ ಲಾರಿ ಕ್ಷೇತ್ರದಲ್ಲೇ ಸಕ್ಸಸ್ ಹೇಗೆ ಕಂಡುಕೊಂಡಿರಿ’ ಅಂದೆ.

‘ಅದು ಲಾರಿ ಇರಲಿ, ಬಸ್ ಇರಲಿ, ವಿಜಯ ಕರ್ನಾಟಕ ಇರಲಿ, ವಿಜಯ ವಾಣಿ ಇರಲಿ ಅದು ಕೇಳೋದು ಇನ್ವಾಲ್ವ್ಮೆಂಟ್ ಅನ್ನು ಮಾತ್ರ. ಯಾವುದೇ ಕ್ಷೇತ್ರದಲ್ಲಿ ಗೆಲ್ಲಬೇಕು ಅಂದ್ರೆ ಅದಕ್ಕೆ ಒಂದೇ ಕೀಲಿ ಕೈ- ಸಂಪೂರ್ಣ ತೊಡಗಿಸಿಕೊಳ್ಳುವಿಕೆ.

ಡಾ ರಾಜಕುಮಾರ್ ಕೃಷ್ಣದೇವರಾಯ ಆಗಿಬಿಡಲು ಹಾಕಿದ್ದು 100 ಪರ್ಸೆಂಟ್ ಇನ್ವಾಲ್ವ್ಮೆಂಟ್’ ಎಂದು ವಿವರಿಸುತ್ತಾ ಇದ್ದರು.

‘ಲಾರಿ ಟೈರ್ ನೋಡಿದ್ರೆ ಸಾಕು ಅದು ಮಾಡಿರೋ ಲಾಭ ಲೆಕ್ಕ ಮಾಡಿ ಹೇಳ್ತಾರೆ’ ಎನ್ನುವ ಮಾತು ಪತ್ರಿಕಾ ರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ಸು.
ಹಾಗಾಗಿ ನಾನು ಅವರಿಗೆ ಕೇಳಿಯೇ ಬಿಟ್ಟೆ ‘ಹೌದಾ!’ ಅಂತ.
‘ನಾನು ಕಣ್ಣಂಚಿನಲ್ಲಿಯೇ ಲಾರಿ ಜಾತಕ ಹೇಳಿಬಿಡುತ್ತಿದ್ದೆ. ಈಗ ಅದೆಲ್ಲಾ ಬೇಕಾಗಿಲ್ಲ ಈಗ ಕಂಪ್ಯೂಟರ್ ಗಳೇ ಕ್ಕ ಹಾಕಿ ನನ್ನ ಮುಂದಿಡುತ್ತೆ’ ಎಂದರು.

ಲಾರಿ ಇಟ್ಟಮೇಲೆ ಕಾರು ಮಾರಿ, ಸ್ಕೂಟರ್ ಮಾರಿ ಮತ್ತೆ ಸೈಕಲ್ ತುಳಿದ ‘ರಿವರ್ಸ್ ಗ್ರೋಥ್’ ದಾಖಲೆಯೂ ವಿಜಯ ಸಂಕೇಶ್ವರ ಅವರಿಗಿದೆ.

‘ಇವೆಲ್ಲವೂ ನನಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಛಲದಿಂದ ಬೇರು ಬಿಡಲು ಕಾರಣವಾಯಿತು.

ನನ್ನ ಮದುವೆ ಸಮಯದಲ್ಲಿ ‘ಯಾವ ಕಾರಣಕ್ಕೂ ಇವನ ಕೈಗೆ ನಿನ್ನ ಒಡವೆ ಕೊಡಬೇಡ’ ಎನ್ನುವ ಕಿವಿ ಮಾತನ್ನು ನನ್ನ ತಂದೆ ನನ್ನ ಹೆಂಡತಿಗೆ ಹೇಳಿದ್ದರು.
ಅಷ್ಟು ಆತಂಕ ಇತ್ತು ನನ್ನ ಲಾರಿ ಪ್ರಯೋಗದ ಮೇಲೆ.

ಹಾಗೆ ಹೇಳುವಾಗ ಅವರ ಗೋಡೌನ್ ಗೆ ಬೆಂಕಿ ಬಿದ್ದ ಪ್ರಕರಣ ಅವರಿಗೆ ನೆನಪಿಗೆ ಬಂತು.

ದಾವಣಗೆರೆಯಲ್ಲಿದ್ದ ನಮ್ಮ ಗೋಡೌನ್ ಗೆ ಬೆಂಕಿ ಬಿತ್ತು. ಒಂದು ಕೋಟಿ ನಷ್ಟ.
ನಾನು ಸಾಲ ತೆಗೆದುಕೊಂಡಿದ್ದ ಸುಂದರಂ ಫೈನಾನ್ಸ್ ಕಂಪನಿಗೆ ನಾನೇ ನೋಟಿಸ್ ಕೊಟ್ಟೆ
ಮೂರು ತಿಂಗಳು ನಾನು್ ಕಂತು ಕಟ್ಟಲಾಗುವುದಿಲ್ಲ. ನೀವೂ ಕೇಳಬಾರದು. ನಿಮ್ಮಿಂದ ಒಂದು ನೋಟೀಸ್ ಕೂಡಾ ಬರಬಾರದು ಅಂತ
ಮಾರನೆಯ ದಿನ ನೋಡ್ತೇನೆ ನೋಟೀಸ್ ಬಿಡಿ, ಫೈನಾನ್ಸ್ ಕಂಪನಿಯ ಸಿಬ್ಬಂದಿಯೇ ನನ್ನ ಎದುರು ಹಾಜರ್.

ನಾನು ಪತ್ರ ಬರೆದರೂ ಹೀಗೆ ಧಮಕಿ ಹಾಕ್ತಾರಲ್ಲ ಅಂದುಕೊಂಡು ಬಾಯಿ ತೆರೆಯಬೇಕು ಆಗ ಆ ಸ್ಟಾಫ್ ನನ್ನ ಕೈಗೆ 10 ಲಕ್ಷ ಇಟ್ಟರು.
ನಿಮ್ಮ ರೀತಿ ಸಾಲ ಕೊಟ್ಟವರಿಗೇ ನೋಟಿಸ್ ಕೊಟ್ಟಿದ್ದು ಯಾರೂ ಇಲ್ಲ. ಆತ ಪ್ರಾಮಾಣಿಕ ಹೋಗಿ ಇನ್ನಷ್ಟು ದುಡ್ಡು ಕೊಟ್ಟು ಬನ್ನಿ ಅಂತ ಮ್ಯಾನೇಜರ್ ಕಳಿಸಿದ್ದಾರೆ ಅಂದರು.

ನನ್ನ ಮುಂದೆ ಪ್ರಾಮಾಣಿಕ ಕೆಲಸಕ್ಕೆ ಪ್ರತಿಫಲ ಸಿಗುತ್ತೆ ಎನ್ನುವುದು ನಿಚ್ಚಳವಾಗಿ ಹೋಯ್ತು ಎಂದರು.

ಹಾಗೆ ಅಂದುಕೊಂಡ ನಂತರ ವರ್ಷದಲ್ಲೇ ವಿ ಆರ್ ಎಲ್ ಬಸ್ ಗಳೂ, ವಿಜಯ ಕರ್ನಾಟಕ ಹೀಗೆ ಅನೇಕ ಪ್ರಯೋಗಗಳು ಯಶಸ್ಸಿನ ಹೈವೇಗಿಳಿದವು.

‘ನನ್ನೊಳಗೊಬ್ಬ ಹುಟ್ಟು ಸೈನಿಕನಿದ್ದಾನೆ. ಹಾಗಾಗಿ ನನಗೆ ಚಾಲೆಂಜ್ ಗಳತ್ತ ಮುನ್ನುಗ್ಗೋದು ಇಷ್ಟ’ ಎಂದರು ವಿಜಯ ಸಂಕೇಶ್ವರ.

ವಿ ಆರ್ ಎಲ್ ನ ಲಾರಿ, ಬಸ್ ಗಳಿಗೆ ಹಳದಿ ಬಣ್ಣ ತಂದಾಗ ಅವರ ಲಾರಿ ಡ್ರೈವರ್ ಒಬ್ಬ ‘ಈ ಬಣ್ಣ ಚೆನ್ನಾಗಿಲ್ಲ ನಾನು ಮಾರ್ಕೆಟ್ ಗೆ ತಗೊಂಡು ಹೋಗುವುದಿಲ್ಲ’ ಅಂದ.
ಒಂದು ಕ್ಷಣ ಅವನತ್ತ ನೋಡಿದ ಸಂಕೇಶ್ವರ್ ಅವನಿಂದ ಕೀ ತೆಗೆದುಕೊಂಡು ತಾವೇ ಮಾರ್ಕೆಟ್ ಗೆ ಲಾರಿ ಡ್ರೈವ್ ಮಾಡಿಕೊಂಡು ಹೋಗಿದ್ದರು.

ಇದನ್ನ ನೆನಪಿಸಿದೆ.
‘ಹೌದು ನನಗೆ ಆಗೋಲ್ಲ ಅನ್ನೋ ಶಬ್ದವೇ ಆಗಿ ಬರೋದಿಲ್ಲ’ ಎಂದರು.

‘ವಿಜಯ ಕರ್ನಾಟಕ’ ಆರಂಭಿಸಿದಾಗ ಇವರು ಲಾರಿ ಹತ್ತಿದಾಗ ಹೇಗೆ ಮನೆಯವರೆಲ್ಲಾ ಬೆಚ್ಚಿ ಬಿದ್ದಿದ್ದಾರೋ ಅಕ್ಷರಷಃ ಹಾಗೆಯೇ ಕರ್ನಾಟಕ ಬೆಚ್ಚಿಬಿದ್ದಿತ್ತು.

ನಾನು ‘ವಿಜಯಕರ್ನಾಟಕ’ದ 10 ಸೆಂಟರ್ ಆರಂಭಿಸ್ತೇನೆ ಅಂತ ಘೋಷಿಸಿದೆ. ವ್ಯವಹಾರಸ್ಥರು ನಕ್ಕರು.
ಹತ್ತು ಬಿಡು ಎರಡು ಸೆಂಟರ್ ಮಾಡೋದಕ್ಕೇ 10 ವರ್ಷ ಬೇಕು ಎಂದು ಕಾಮೆಂಟ್ ಮಾಡಿದರು.

‘ಆದರೆ ನಾನು ಕೇವಲ ಮೂರು ತಿಂಗಳಲ್ಲಿ ಹುಬ್ಬಳ್ಳಿ ಆವೃತ್ತಿ ಶುರು ಮಾಡಿದೆ. ಆಗ ನಮ್ಮ ಪ್ರಸಾರ ಕೇವಲ 6 ಸಾವಿರ ಇತ್ತು. ಇನ್ನು ಮೂರು ವರ್ಷದಲ್ಲಿ ನಮ್ಮ ಪತ್ರಿಕೆ ಪ್ರಸಾರ 5 ಲಕ್ಷ ಇರುತ್ತೆ ಅಂತ ಘೋಷಿಸಿದೆ’. ಎಲ್ಲರೂ ಮುಸಿ ಮುಸಿ ನಕ್ಕರು.

ಆದರೆ ಎರಡು ವರ್ಷ ತುಂಬುವುದರೊಳಗೆ ವಿಜಯ ಕರ್ನಾಟಕ ಪ್ರಸಾರ 5 ಲಕ್ಷ ದಾಟಿತ್ತು.

‘ಎರಡು ವರ್ಷದಲ್ಲೇ..’ ಎಂದು ನಾನು ಹೇಳುತ್ತಿದ್ದಂತೆಯೇ ವಿಜಯ ಸಂಕೇಶ್ವರ್
‘ಎರಡಲ್ಲ.. ಒಂದು ವರ್ಷ ಎಂಟು ತಿಂಗಳು’ ಎಂದು ನನ್ನನ್ನು ತಿದ್ದಿದರು.’

Comment here