ಜಸ್ಟ್ ನ್ಯೂಸ್

ಆಸ್ಪತ್ರೆಯಲ್ಲಿ ಮಹಿಳೆ ಸಾವು: ಸಂಬಂಧಿಕರ ಧರಣಿ

ತುಮಕೂರು ಜಿಲ್ಲೆ ಪಾವಗಡದಲ್ಲಿ  ಖಾಸಗಿ ಆಸ್ಪತ್ರೆಯ ವೈದ್ಯೆಯೊಬ್ಬರ ಅಜಾಗರೂಕತೆಯಿಂದ ಮಹಿಳೆ ಅಸುನೀಗಿದ್ದಾರೆ ಎಂದು ಮೃತರ ಪೋಷಕರು ಭಾನುವಾರ ಆಸ್ಪತ್ರೆ ಬಳಿ ಧರಣಿ ನಡೆಸಿದರು.

ಆಂಧ್ರ ಪ್ರದೇಶದ ರೊದ್ದಂ ಮಂಡಲಂ ವೈ.ಟಿ.ರೆಡ್ಡಿ ಪಲ್ಲಿಯ ಸೌಭಾಗ್ಯ(28) ಎಂಬುವರನ್ನು ಹೆರಿಗೆಗಾಗಿ ಪಟ್ಟಣದ ಅಮರಾಪುರ ರಸ್ತೆಯ ಹೆರಿಗೆ ಆಸ್ಪತ್ರೆಗೆ ಕರೆತರಲಾಗಿತ್ತು. ಬೆಳಿಗ್ಗೆ 7 ಕ್ಕೆ ಶಸ್ತ್ರ ಚಿಕಿತ್ಸೆ(ಸಿಜೇರಿಯನ್) ಮಾಡಿದ್ದಾರೆ. ಆದರೆ ಮಹಿಳೆಯ ಸ್ಥಿತಿಯ ಬಗ್ಗೆ ಸಂಬಂಧಿಕರಿಗೆ ತಿಳಿಸದೆ ವೈದ್ಯೆ ಮರೆ ಮಾಚಿದ್ದಾರೆ ಎಂದು ಮಹಿಳೆಯ ಮಾವ ವೆಂಕಟೇಶ್ ಆರೋಪಿಸಿದರು.

ಕಡೆಯ ಗಳಿಗೆಯಲ್ಲಿ ಮಹಿಳೆಯನ್ನು ಬೇರೆಡೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ತುರ್ತು ವಾಹನ ಬರುವ ವೇಳೆಗೆ ಆಕೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೂರು ಅಥವಾ ನಾಲ್ಕನೇ ಸಿಜೇರಿಯನ್ ಆದರೂ ಮಾಡುತ್ತೇನೆ ಖರ್ಚು ಜಾಸ್ತಿ ಆಗುತ್ತೆ. ಜೀವಕ್ಕೆ ಭಯವಿಲ್ಲ ಎಂದು ಹಲ ತಿಂಗಳುಗಳಿಂದ ತಪಾಸಣೆ ನಡೆಸುತ್ತಿದ್ದ ಧನದಾಹಿ ವೈದ್ಯೆ ಕಡೆಗಳಿಗೆಯಲ್ಲಿ ಇದು 3 ನೇ ಸಿಜೇರಿಯನ್ ಆಗಿದ್ದರಿಂದ ಹೀಗಾಗಿದೆ ಎಂದು ಕೈ ಎತ್ತಿದ್ದಾರೆ. ಹಣಕ್ಕಾಗಿ ಇವರು ಏನು ಬೇಕಾದರೂ ಮಾಡುತ್ತಾರೆ ಎಂದು ಸಂಬಂಧಿಕರು ದೂರಿದರು.

ಮೃತ ದೇಹ ಪಡೆಯಲು ನಿರಾಕರಿಸಿ ಆಸ್ಪತ್ರೆ ಬಳಿ ಸಂಬಂಧಿಕರು ಧರಣಿ ನಡೆಸಿದರು.

 

Comment here