ಜನಮನ

ಇಂಥ ಜಿಲ್ಲಾಧಿಕಾರಿಗಳು ಏಕೆ ಎಲ್ಲೆಡೆ ಸಿಗುತ್ತಿಲ್ಲ….

ಒಬ್ಬ ಜಿಲ್ಲಾಧಿಕಾರಿಗೆ ಸಾಧ್ಯವಾಗಿದ್ದು…….!

ನಿನ್ನೆ ನನ್ನ ಅಧಿಕಾರಿ ಮಿತ್ರರಾದ ಡಾ. ರಾಜೇಂದ್ರ ಪ್ರಸಾದ್ ಅವರು, ಮಹಾರಾಷ್ಟ್ರದ ಜಿಲ್ಲಾಧಿಕಾರಿಯೊಬ್ಬರು ಕೋವಿಡ್ ಸಮಸ್ಯೆಯನ್ನು ನಿಭಾಯಿಸುತ್ತಿರುವ ರೀತಿಯ ಕುರಿತಂತೆ ಮಾಹಿತಿಯನ್ನು ಕಳುಹಿಸಿದ್ದರು.‌

ಅದರ ಜಾಡು ಹಿಡಿದು ಹುಡುಕುತ್ತಾ ಹೋದಂತೆ ಹಲವು ಮಾಹಿತಿಗಳು ಸಿಕ್ಕವು.
ಈ ಗೆಳೆಯ ರಾಜೇಂದ್ರ ಪ್ರಸಾದ್ ಬ್ಯೂರಾಕ್ರಸಿಗೆ ಬರದಿದ್ದರೆ ಕರ್ನಾಟಕದ ಅತ್ಯುತ್ತಮ ತಳಿವಿಜ್ಞಾನಿಗಳಲ್ಲಿ ಒಬ್ಬರಾಗಿರುತ್ತಿದ್ದರು.

ಅವರು ಕಳಿಸಿದ ಮಾಹಿತಿ ಮಹಾರಾಷ್ಟ್ರದ ನಂದೂರ್ ಬಾರ್ ಜಿಲ್ಲೆಯ ಜಿಲ್ಲಾಧಿಕಾರಿಯ ಕೆಲಸಕ್ಕೆ ಸಂಬಂಧಿಸಿದ್ದು.
ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ನಂದೂರ್ ಬಾರ್ ಎಂಬುದೂ ಒಂದು.

ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ಗಡಿಗಳನ್ನು ಹಂಚಿಕೊಂಡು ಬದುಕುತ್ತಿರುವ ಈ ಜಿಲ್ಲೆಯಲ್ಲಿ ಶೇ 75 ಕ್ಕೂ ಹೆಚ್ಚು ಬುಡಕಟ್ಟು ಜನರಿದ್ದಾರೆ. ಬುಡಕಟ್ಟುಗಳಲ್ಲಿ ಭಿಲ್ಲರು,ಪವಾರರು, ಕೊಕಣಿ, ಮಾವ್ ಚಿ, ಗಾವಿತ್,ಧಂಕಾ ಮುಂತಾದವರಿದ್ದಾರೆ. ಮಾನುಭಾವ ಪಂಥದ ಆರಾಧಕರೂ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆ ಇದು.

ಈ ಜಿಲ್ಲೆಯಲ್ಲಿ ಶೇ.45.5 ರಷ್ಟು ಜನ ಭಿಲ್ ಭಾಷೆಯನ್ನು ಮಾತನಾಡುತ್ತಾರೆ. ಶೇ.16.6 ರಷ್ಟು ಜನ ಮಾತ್ರ ಮರಾಠಿ ಮಾತನಾಡುತ್ತಾರೆ.
ಜಿಲ್ಲೆಯಲ್ಲಿನ ಸಾಕ್ಷರರ ಪ್ರಮಾಣ ಕೇವಲ 46%. ಸಾಕ್ಷರ ಮಹಿಳೆಯರ ಪ್ರಮಾಣ 38% ಮಾತ್ರ.
ನಗರ ವಾಸಿಗಳ ಪ್ರಮಾಣ 15.45%. ಅಷ್ಟೆ.

ಶಂಬಾ ಜೋಶಿಯವರು ಖಾನ್ ದೇಶ/ ಕನ್ಹ ದೇಶ/ ಕೃಷ್ಣ ದೇಶ ಎಂದು ಕರೆಯುವ ಪ್ರಾಂತ್ಯದಲ್ಲಿರುವ ಈ ಜಿಲ್ಲೆಯ ಉತ್ತರದ ಭಾಗವನ್ನು ನರ್ಮದಾ ನದಿ ನೇವರಿಸಿಕೊಂಡು ಹರಿಯುತ್ತಾಳೆ. ಈ ಪ್ರದೇಶಕ್ಕೆ ರಸಿಕ, ನಂದನಗಿರಿ ಎಂಬ‌ ಪುರಾತನ ಹೆಸರುಗಳೂ ಇವೆ. ಚರಿತ್ರೆ ,ಪುರಾಣಗಳ ಪುಟಗಳಲ್ಲಿ ಅತ್ಯಂತ ಆಳವಾದ ಹೆಜ್ಜೆ ಗುರುತುಗಳಿರುವ ಈ ನೆಲದ ಎಡಭಾಗದಲ್ಲಿ ಸೂರತ್ ನ ನೆಲ ಶುರುವಾಗುತ್ತದೆ. ಅಲ್ಲಿಂದಾಚೆಗೆ ತುಸು ದೂರದಲ್ಲಿ ಭರುಕಚ್ಛವಿದೆ. ಬಹುಶಃ ಕೃಷ್ಣ, ದ್ರೌಪದಿ, ರುಕ್ಮಿಣಿ, ಕುಂತಿ ಬಲರಾಮರು ಇಲ್ಲಿ ಓಡಾಡಿರಬಹುದು. ನಮ್ಮ ಪಶುಪಾಲಕರ ಪ್ರಧಾನ ಗೂಡು ಇದು.

ಇಂಥದೊಂದು ಜಿಲ್ಲೆಗೆ ಈಗ ಡಾ. ರಾಜೇಂದ್ರ ಭರೂಡ್ ಎಂಬ ವೈದ್ಯಕೀಯ ಹಿನ್ನೆಲೆಯ, ಅತ್ಯಂತ ಹಿಂದುಳಿದ ಬುಡಕಟ್ಟಿಗೆ ಸೇರಿದ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇಶದ ದೊಡ್ಡ ದೊಡ್ಡ ಜನರೆಲ್ಲ ಡಿಸೆಂಬರ್‌ ಹೊತ್ತಿಗೆ ಕೋವಿಡ್ ಮುಗಿಯಿತು ಎಂದು ಸಂಭ್ರಮ ಪಡುತ್ತಿರುವಾಗ ಈ ವ್ಯಕ್ತಿ ಮಳೆಯ ಸೂಚನೆ ಅರಿತ ಇರುವೆಯ ಹಾಗೆ ಆಕ್ಸಿಜನ್ ಘಟಕಗಳನ್ನು, ಆಂಬ್ಯುಲೆನ್ಸ್ ಗಳನ್ನು, ಹಾಸಿಗೆಗಳನ್ನು ಹೊಂದಿಸಲು ನಿರಂತರವಾಗಿ ಶ್ರಮಿಸಿದ್ದಾರೆ.

16 ಲಕ್ಷ ಜನಸಂಖ್ಯೆಯ ಈ ಬುಡಕಟ್ಟು ಜನರ ಜಿಲ್ಲೆಗೆ ಕೊರೋನಾದ ಎರಡನೇ ಅಲೆ ದಾಳಿ ಮಾಡಿದರೆ ಯಾವ ರೀತಿಯಿಂದಲೂ ಕಾಪಾಡಲಾಗದೆಂದು ಭಾವಿಸಿದ ಜಿಲ್ಲಾಧಿಕಾರಿ ತನ್ನ ಆಡಳಿತದ ತಿಜೋರಿಯಲ್ಲಿ ಮೂಲೆ ಮುಡುಕುಗಳಲ್ಲಿ ಎಷ್ಟು ದುಡ್ಡಿದೆ ಎಂದು‌ ಹುಡುಕಿದ್ದಾರೆ.
ಪ್ರಕೃತಿ ವಿಕೋಪ ನಿಧಿ, ತುಸುವೇ ಇರುವ ಅಭಿವೃದ್ಧಿ ನಿಧಿಗಳನ್ನು ಬಳಸಿ ಏನು ಮಾಡಬಹುದೆಂದು ನೋಡಿದ್ದಾರೆ. ಸಾಕಾಗದಿದ್ದಾಗ ಸಿಎಸ್ಆರ್‌( ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ಯೋಜನೆಯಡಿ ಉಳ್ಳವರ ಮನವೊಲಿಸಿ ನವೆಂಬರ್ ,ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ದಿನಕ್ಕೆ 48 ಲಕ್ಷ ಲೀಟರ್ ಸಾಮರ್ಥ್ಯದ ಲಿಕ್ವಿಡ್ ಆಕ್ಸಿಜನ್ ಘಟಕಗಳನ್ನು ಪ್ರಾರಂಭಿಸಿದ್ದಾರೆ. ಒಂದು ಘಟಕದ ಬೆಲೆ ಸುಮಾರು 85 ಲಕ್ಷ ರೂಪಾಯಿಗಳು. ಇವತ್ತು ನಾವು ಬೊಗಸೆ ಆಕ್ಸಿಜನ್ನಿಗಾಗಿ ಒದ್ದಾಡುತ್ತಿರುವಾಗ ಈ ಅಧಿಕಾರಿ ಮೈಮರೆಯದೆ ಆಕ್ಸಿಜನ್ ವ್ಯವಸ್ಥೆ ಇರುವ 1300 ಆಕ್ಸಿಜನ್ ವ್ಯವಸ್ಥೆ ಇರುವ ವೆಂಟಿಲೇಟರ್ ಗಳುಳ್ಳ ಐ ಸಿ ಯು ಬೆಡ್ ಗಳನ್ನು ಪ್ರಾರಂಭಿಸಿದ್ದಾರೆ. 27 ಆಂಬ್ಯುಲೆನ್ಸ್ ಗಳನ್ನು ಖರೀದಿಸಿದ್ದಾರೆ. ಅವುಗಳಲ್ಲಿ ಎರಡನ್ನು ಶವಸಂಸ್ಕಾರಕ್ಕೆ ಮೀಸಲಿರಿಸಿದ್ದಾರೆ. 50 ಲಕ್ಷ ರೂಪಾಯಿ ಮೌಲ್ಯದ ರೆಮ್ ಡಿ ಸಿವಿರ್ ಔಷಧಿ ಖರೀದಿಸಿಕೊಂಡಿದ್ದಾರೆ. 24 ಗಂಟೆಗಳೂ ಸ್ಪಂದಿಸುವ ಸಹಾಯ ಕೇಂದ್ರಗಳನ್ನು ತೆರೆದಿದ್ದಾರೆ. ಹಳ್ಳಿಗಳಿಗೆ ಹೋಗಿ ರೋಗಿಗಳ ಟೆಸ್ಟ್ ಸ್ಯಾಂಪಲ್ ಸಂಗ್ರಹಿಸಿ ಟೆಸ್ಟ್ ಮಾಡಿ ಮಾಹಿತಿ ಮುಟ್ಟಿಸುವ, ಕೊರೋನ ಬಂದವರಿಗೆ ಧೈರ್ಯ ತುಂಬುವ ತಂಡಗಳನ್ನು ರಚಿಸಿದ್ದಾರೆ. 7000 ಐಸೋಲೆಷನ್ ಬೆಡ್ ಗಳು ಸೇರಿ ಸುಮಾರು 11000 ಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ರೈಲು ಬೋಗಿಗಳನ್ನೂ ಐಸೋಲೇಷನ್ ಬೆಡ್ ಮಾಡಿದ್ದಾರಂತೆ.

ಕೊರೋನ ಸೋಂಕಿತರ ಆಕ್ಸಿಜನ್ ಮಟ್ಟ 85 ಕ್ಕಿಂತ ಕೆಳಗೆ ಇಳಿಯುತ್ತಾ ಹೋದರೆ ಶೇ.90 ರಷ್ಟು ಆಕ್ಸಿಜನ್ ಅನ್ನು ರೋಗಿಗೆ ಕೃತಕವಾಗಿ ನೀಡಬೇಕಾಗುತ್ತದೆ. ಪರಿಸ್ಥಿತಿ ಅಷ್ಟು ಕಠಿಣವಾಗದಂತೆ ನೋಡಿಕೊಂಡರೆ ಶೇ.30 ರಷ್ಟು ಮಾತ್ರ ಆಕ್ಸಿಜನ್ ಕೊಟ್ಟು ರೋಗಿಯ ಆರೋಗ್ಯವನ್ನು ಸುಧಾರಿಸಬಹುದು ಎನ್ನುವ ತಿಳುವಳಿಕೆ ಅವರದು. ಆಕ್ಸಿಜನ್ ಅನ್ನು ಪೈಪ್ ಮೂಲಕವೆ ಸರಬರಾಜು ಮಾಡುತ್ತಾರಂತೆ. ಒಬ್ಬಿಬ್ಬರು ವೈದ್ಯರು. ನಾಲ್ಕೈದು ದಾದಿಯರು ಸುಮಾರು 200 ಜನ ರೋಗಿಗಳ ಆರೈಕೆ ಮಾಡಬಹುದು ಎನ್ನುತ್ತಾರೆ.

ಕೋವಿಡ್ ಮೊದಲ ಅಲೆಯಲ್ಲಿ ಈ ಜಿಲ್ಲೆಯಲ್ಲಿ ದಿನವೊಂದಕ್ಕೆ ದಾಖಲಾದ ಗರಿಷ್ಠ ಸಂಖ್ಯೆ 190. ಎರಡನೆ ಅಲೆಯಲ್ಲಿ ಇಷ್ಟೆಲ್ಲ ಮುನ್ನೆಚ್ಚರಿಕೆ ನಡುವೆಯೂ ಸೋಂಕಿತರ ಸಂಖ್ಯೆ ದಿನವೊಂದಕ್ಕೆ 1200 ರ ವರೆಗೆ ತಲುಪಿದೆ. ಈಗ ಆ ಸಂಖ್ಯೆ 300 ಕ್ಕೆ ಇಳಿದಿದೆ ಎನ್ನುತ್ತಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ ಸುನಾಮಿಯ ಎರಡನೆಯ ಅಲೆ ಅಪ್ಪಳಿಸಿ ಥರಗುಟ್ಟಿಸುತ್ತಿದ್ದಾಗ ಈ ಜಿಲ್ಲಾಧಿಕಾರಿ ತಮ್ಮ ಮುಂದಾಲೋಚನೆಯಿಂದ, ಸೈಂಟಿಫಿಕ್ ಟೆಂಪರ್ಮೆಂಟಿನಿಂದ‌ ತಣ್ಣಗೆ ತನ್ನ ಜಿಲ್ಲೆಯನ್ನು ಕಾಪಾಡಿಕೊಂಡಿದ್ದಾರೆ. ವೈದ್ಯಕೀಯ ಕಾಲೇಜುಗಳಿಲ್ಲದ, ದೊಡ್ಡ ಆಸ್ಪತ್ರೆಗಳೂ ಇಲ್ಲದ ಬುಡಕಟ್ಟು ಜನರೇ ತುಂಬಿರುವ ಜಿಲ್ಲೆಯ ಜನರಿಗೆ ಗಂಭೀರ ಆರೋಗ್ಯ ಸಮಸ್ಯೆಗಳಾದರೆ ಸೂರತ್ ಗೋ ಇಲ್ಲ ಭೋಪಾಲ್ ಗೋ, ದೂರದ ಮುಂಬೈಗೋ ಹೋಗಬೇಕಿತ್ತು. ಆದರೆ ಈಗ ನಂದೂರ್ ಬಾರ್ ನ ಸಣ್ಣ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೇ.20 ಕ್ಕೂ ಹೆಚ್ಚಿನ ರೋಗಿಗಳು ಗುಜರಾತು, ಮಧ್ಯಪ್ರದೇಶ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಗೆ ಸೇರಿದವರಂತೆ.

ಈ ಜಿಲ್ಲಾಧಿಕಾರಿ ನವೆಂಬರ್ ನಿಂದ ಮಾರ್ಚ್ ವರೆಗೆ ಮಾಡಿಕೊಳ್ಳುತ್ತಿದ್ದ ಸಿದ್ಧತೆಗಳನ್ನು ನೋಡಿ ಸಹೋದ್ಯೋಗಿಗಳು ಗೇಲಿ ಮಾಡುತ್ತಿದ್ದರಂತೆ. ಕೆಲ ದೊಡ್ಡ ದೊಡ್ಡ ಜನರೂ ಟೀಕೆ ಮಾಡಿದ್ದರಂತೆ. ಈಗ ಕಾಲವೇ ಅವರಿಗೆ ಉತ್ತರ ನೀಡಿದೆ ಎನ್ನುತ್ತಾರೆ.

ಚರಿತ್ರೆ, ವಿಜ್ಞಾನ ಗೊತ್ತಿರುವ ಎಂಥವರಿಗೂ ಅರ್ಥವಾಗುವ ಸಂಗತಿ ಇದು; ಡಾರ್ವಿನ್ ಥಿಯರಿ ಪ್ರಕಾರ ವೈರಸ್ಸು ತನ್ನ ಉಳಿವಿಗಾಗಿ ಸಂಘರ್ಷಕ್ಕೆ ಇಳಿಯುತ್ತದೆ. ಅದಕ್ಕಾಗಿ ಅದು ಮ್ಯುಟೇಷನ್ ಹೊಂದುತ್ತಲೇ ಇರುತ್ತದೆ. ಅದರ ಉಗ್ರತೆ ಎರಡು ವರ್ಷ ಇರಬಹುದು ಅಥವಾ ನಾಲ್ಕು ವರ್ಷ ಇರಬಹುದು. ಚರಿತ್ರೆಯಲ್ಲಿ ಅನೇಕ ವೈರಸ್ಸು ಗಳು ಮಾಡಿದ ದಾಳಿಗಳಿಂದ ನಾವು ಪಾಠ ಕಲಿಯಬೇಕು ಎನ್ನುವ ಕಾಮನ್ ಸೆನ್ಸಿನ ಮಾತುಗಳನ್ನು ಈ ಅಧಿಕಾರಿ ಆಡುತ್ತಾರೆ. ಇಂಥ ಇವರ ಕಾಮನ್ ಸೆನ್ಸು ಜಿಲ್ಲೆಯೊಂದನ್ನು ರಕ್ಷಿಸಿದೆ.

ಇವರ ಬಗ್ಗೆ ಬರೆಯಲು ಇನ್ನೊಂದು ಕಾರಣವಿದೆ. ಈತ ತಾಯಿಯ ಹೊಟ್ಟೆಯಲ್ಲಿ ಭ್ರೂಣರೂಪದಲ್ಲಿದ್ದಾಗಲೇ ಇವರ ತಂದೆ ಮಲೇರಿಯಾಗೆ ತುತ್ತಾಗಿ ಮರಣ ಹೊಂದುತ್ತಾರೆ. ಕಬ್ಬಿನ ಸೋಗೆಯ ಗುಡಿಸಲಲ್ಲಿ ಈ ಮಗು ಬೆಳೆಯುತ್ತದೆ. ಇವರ ವಿಧವೆ ತಾಯಿ ತಮ್ಮ ಮತ್ತು ಪಕ್ಕದ ಊರುಗಳ ಹೊಲ, ಗದ್ದೆಗಳಲ್ಲಿ ಕೂಲಿ ಮಾಡಿ ಮಗುವನ್ನು ಸರ್ಕಾರಿ ಶಾಲೆಗಳಲ್ಲಿ ಓದಿಸುತ್ತಾರೆ. ಮಗು ಓದುತ್ತದೆ. ಮುಂಬೈನ ಮೆಡಿಕಲ್ ಕಾಲೇಜಿನಲ್ಲೂ ಸೀಟು‌ ಪಡೆದು ವೈದ್ಯನಾಗುತ್ತದೆ. ಮುಂದೆ 2013 ರಲ್ಲಿ ಐ ಎ ಎಸ್ ಅಧಿಕಾರಿಯಾಗಿ ತನ್ನ ರಾಜ್ಯದ ಕೇಡರ್ಗೇ ಆಯ್ಕೆಯಾಗುತ್ತಾರೆ. ಕೋವಿಡ್ ನಿಂದ ತನ್ನ ಜನರನ್ನು ರಕ್ಷಿಸುವುದಕ್ಕೊ ಎಂಬಂತೆ ತಾನು ಹುಟ್ಟಿದ ಜಿಲ್ಲೆಗೇ ಈಗ ನಿಯೋಜನೆಗೊಂಡಿದ್ದಾರೆ.

ಈ ನಂದೂರ್ ಬಾರ್ ಬಾಬಾಸಾಹೇಬರು ಹುಟ್ಟಿದ ರತ್ನಗಿರಿ ಜಿಲ್ಲೆಗೆ 753 ಕಿ.ಮೀ ದೂರದಲ್ಲಿದೆ. ಅವರ ಸಮಾಧಿ ಸ್ಥಳವಾದ ಚೈತ್ಯಭೂಮಿಗೆ 443 ಕಿ.ಮೀ ದೂರದಲ್ಲಿದೆ.ಬಡ ಬುಡಕಟ್ಟಿಗೆ ಸೇರಿದ, ತಂದೆಯ ಮುಖವನ್ನೆ ಕಾಣದ, ಗುಡಿಸಲಲ್ಲಿ ಬೆಳೆದ, ತಾಯಿಯ ಮಣ್ಣ ವಾಸನೆಯ ಸೆರಗಿನಲ್ಲಿ ಆಡಿದ, ಸರ್ಕಾರಿ ಶಾಲೆಯ ಈ ಹುಡುಗನ ಬಗ್ಗೆ ದೇಶವೇ ಇಂದು ಮಾತನಾಡುತ್ತಿದೆ. ತನ್ನ ಸಂವಿಧಾನ ಹೀಗೆಲ್ಲ ಉಸಿರಾಡುತ್ತಿದೆ ಎಂದು ಬಾಬಾ ಸಾಹೇಬರು ಒಂದಿಷ್ಟು ಖುಷಿ ಪಡುತ್ತಿರಬೇಕು!


ಈ ಲೇಖನವನ್ನು ಡಾ.ವೆಂಕಟೇಶ್ ನೆಲ್ಲುಕುಂಟೆ ಅವರ ಫೇಸ್ ಬುಕ್ ವಾಲ್ ನಿಂದ ಪಡೆಯಲಾಗಿದೆ

Comment here