ಅಂತರಾಳ

ಇಂದಿರಾಗಾಂಧಿ ವಿರುದ್ಧ ರಾಜಕುಮಾರ್ ಸ್ಪರ್ಧೆ ಮಾಡಿಸಲು ಸಜ್ಜಾಗಿದ್ದೆ’ ಎಂದರು ದೇವೇಗೌಡರು

ಜಿ ಎನ್ ಮೋಹನ್


ನಾನು ಇನ್ನೂ ಆಫೀಸ್ ನೊಳಗೆ ಕಾಲಿಟ್ಟಿರಲಿಲ್ಲ. ಫೋನ್ ರಿಂಗಾಯಿತು.

ಒಂದೇ ಏಟಿಗೆ ಫೋನ್ ಎತ್ತುವ ಆಸಾಮಿಯೇ ನಾನಲ್ಲ. ಹಾಗಾಗಿ ಸುಮ್ಮನಿದ್ದೆ. ಯಾವಾಗ ಮೇಲಿಂದಮೇಲೆ ಆ ಫೋನ್ ಸಡ್ಡು ಮಾಡಲು ಪ್ರಾರಂಭಿಸಿತೋ ಎತ್ತಿದೆ.

ಆ ಕಡೆಯಿಂದ ಎಚ್ ಡಿ ಕುಮಾರಸ್ವಾಮಿ. ‘ಏನ್ ಮೋಹನ್, ಅಪ್ಪನ್ನ ತುಂಬಾ ನಗಿಸಿಬಿಟ್ಟರಂತೆ. ತುಂಬಾ ಗೆಲುವಾಗಿದ್ರಂತೆ ಅವರು ಹಾಗೆ ಮನಸ್ಸು ಬಿಚ್ಚಿ ಮಾತಾಡೋದೇ ಅಪರೂಪ. ನಿಮಗೆ ಥ್ಯಾಂಕ್ಸ್ ಹೇಳ್ಬೇಕು’ ಎಂದರು.

ಅರೆ! ನಾನು ಕಬ್ಬನ್ ಪಾರ್ಕ್ ನಲ್ಲಿ ಸುಮಾರು ಎರಡು ಗಂಟೆ ಹೊತ್ತು ದೇವೇಗೌಡರು ನಮ್ಮ ಮನೆಯ ಹಿರಿಯಣ್ಣನೇನೋ ಎಂಬಂತೆ ಮಾತಿಗೆ ಕೂರಿಸಿಕೊಂಡದ್ದು ಏನು ಮಾತಾಡಿದ್ದೆ ಎನ್ನುವುದು ಎಲ್ಲವೂ ಅವರಿಗೆ ಆಗಲೇ ಪಾಸ್ ಆಗಿತ್ತು.

‘ಓ! ರಾಜಕಾರಣವೇ’ ಎಂದುಕೊಂಡು ಕ್ಯಾಬಿನ್ ಸೇರಿಕೊಂಡೆ.

ನನ್ನ ಜೊತೆ ಅಷ್ಟೂ ಹೊತ್ತು ಕಲ್ಲು ಬೆಂಚಿನ ಮೇಲೆ, ಹುಲ್ಲು ಹಾಸಿನ ಮೇಲೆ, ಮಣ್ಣಿನ ನೆಲದ ಮೇಲೆ ಕುಳಿತ, ನಿಂತ, ನಕ್ಕ, ಮುಖ ಸಪ್ಪೆ ಮಾಡಿಕೊಂಡ, ಕೆಲವೊಮ್ಮೆ ಭಾವುಕರಾದ ದೇವೇಗೌಡರು ನೆನಪಾದರು.

ಕುಮಾರಸ್ವಾಮಿ ಅವರಿಗೆ ಹಾರ್ಟ್ ಬೈ ಪಾಸ್ ಆದಾಗ ಆಸ್ಪತ್ರೆಯಲ್ಲಿದ್ದ ಅಷ್ಟೂ ಸಮಯ ಅವರ ಹಾಸಿಗೆಗೆ ಅಂಟಿಕೊಂಡು ಜಪಮಾಲೆ ಹಿಡಿದು ಪ್ರಾರ್ಥಿಸಿದ್ದು ಇದೆ ದೇವೇಗೌಡರು.

ಪತ್ನಿ ಚನ್ನಮ್ಮನವರ ಮೇಲೆ ಆಸಿಡ್ ಅಟ್ಯಾಕ್ ಆದಾಗ ದಿನಗಟ್ಟಲೆ ಊಟ ಬಿಟ್ಟವರು, ಕಣ್ಣೀರು ಹಾಕಿದವರು ಈ ದೇವೇಗೌಡರು.

ಚಿಕ್ಕಬಳ್ಳಾಪುರದಿಂದ ಹರದನಹಳ್ಳಿಗೆ ಆಲೂಗಡ್ಡೆ ಮಾರಲು ಬರುತ್ತಿದ್ದವರೊಬ್ಬರು ಚನ್ನಮ್ಮ ಅವರ ಬಗ್ಗೆ ಪ್ರಸ್ತಾಪ ಮಾಡಿದರು. ದೇವೇಗೌಡರು ಅಮ್ಮ ಹೇಳಿದ ಹುಡುಗಿಯನ್ನು ಮದುವೆಯಾದರು.

ದೇವೇಗೌಡರು ಅವರ ಎಂದಿನ ಶೈಲಿಯಲ್ಲಿ ನನ್ನ ಹೆಗಲ ಮೇಲೆ ಕೈ ಹಾಕಿ ಏನೂ ಮಾತನಾಡಲಿಲ್ಲ. ಆದರೆ ನಾನು ಅವರ ಅನುಗಾಲದ ಮಿತ್ರನೇನೋ ಎನ್ನುವಂತೆ ಅಂತರಂಗದ ಮಾತುಗಳನ್ನಾಡಲು ಆರಂಭಿಸಿದರು.

ನನಗೆ ಅವಾಗ ಮೂರು ವರ್ಷ. ಮನೆ ಅಂಗಳದಲ್ಲಿ ಮಣ್ಣಲ್ಲಿ ಆಡ್ತಾ ಇದ್ದೆ. ಇನ್ನೂ ಸ್ಕೂಲಿಗೆ ಸೇರಿಸಿರಲಿಲ್ಲ ನನ್ನ. ಒಬ್ಬ ಬುಡಬುಡಿಕೆ ಬಾರಿಸುತ್ತಾ ಮನೆ ಅಂಗಳಕ್ಕೆ ಬಂದ. ಅಲ್ಲೇ ಇದ್ದ ನನ್ನನ್ನು ನೋಡಿದವನೇ ‘ಈ ಹುಡುಗ ಚಕ್ರವರ್ತಿ ಆಗ್ತಾನೆ’ ಅಂತ ಭವಿಷ್ಯ ಹೇಳಿದ.

ನಮ್ಮ ದೊಡ್ಡಮ್ಮನಿಗೆ ಇನ್ನಿಲ್ಲದ ಸಿಟ್ಟು ಬಂತು. ‘ಮೂಗಲ್ಲಿ ಗೊಣ್ಣೆ ಸುರಿಸ್ಕೊಂಡು ಕುಂತಿರೋ ಇವನು ಚಕ್ರವರ್ತಿ ಆಗ್ತಾನಾ, ಭಿಕ್ಷಕ್ಕೆ ಬಂದಿದೀಯಾ, ಭಿಕ್ಷಾ ತಗೊಂಡು ಸುಮ್ಮನೆ ಹೋಗು’ ಅಂತ ಕೂಗಾಡಿದರು.

ನನ್ನ ಅಮ್ಮ ದನದ ಕೊಟ್ಟಿಗೆಯಲ್ಲಿ ಕಸ ಗುಡಿಸುತ್ತಾ ಇದನ್ನೆಲ್ಲಾ ಸುಮ್ಮನೆ ನೋಡ್ತಾ ನಿಂತಿದ್ದರು. ಆ ಅಷ್ಟೂ ದೃಶ್ಯ ಈಗಲೂ ನನ್ನ ಕಣ್ಣ ಮುಂದಿದೆ. ಚಕ್ರವರ್ತಿ ಅಂದರೆ ನನಗೆ ಅರ್ಥಾನೂ ಸುಮಾರು ಕಾಲ ಗೊತ್ತಿರಲಿಲ್ಲ ಎಂದು ನಕ್ಕರು.

ನಮ್ಮಮ್ಮ ಹರದನಳ್ಳಿ ದೇವೇಗೌಡರಿಗೆ ಎರಡನೆಯ ಹೆಂಡತಿ. ನಮ್ಮ ತಂದೆಯ ಮೊದಲನೇ ಹೆಂಡತಿಗೆ ಕಾಲರಾ ಬಂದು ತೀರಿಹೋದರು.

ನನ್ನ ಅಮ್ಮನಿಗೆ ಅದು ಯಾರು ದೇವಮ್ಮ ಅಂತ ಹೆಸರಿಟ್ಟರೋ ನಿಜಕ್ಕೂ ಇನ್ನಿಲ್ಲದ ದೈವ ಭಕ್ತೆ ಆಕೆ. ಪ್ರತೀ ದಿನ ಹೋಗಿ ನಮ್ಮೂರ ದೇವಸ್ಥಾನಕ್ಕೆ ರಂಗೋಲಿ ಹಾಕಿ ಬರುತ್ತಿದ್ದರು. ಈ ದೇವರು ಪೂಜೆ ಎಲ್ಲಾ ನನಗೆ ಬಂದಿರೋದು ಅವರಿಂದಾನೆ ಅನಿಸುತ್ತೆ ಎಂದು ನನ್ನ ಕಡೆ ನೋಡಿದರು.

ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಅವರು ಆ ವೇಳೆಗಾಗಲೇ ಪೂಜೆ ಮಗಿಸಿ ಬಂದಿದ್ದರು ಎನ್ನುವುದಕ್ಕೆ ಹಣೆಯ ಮೇಲೂ, ಕಿವಿಯ ಮೇಲೂ ಸಾಕಷ್ಟು ಸಾಕ್ಷಿಗಳಿದ್ದವು.

ನನಗೆ ಅವರು ಇನ್ನೂ ಆಗ ತಾನೇ ಮೀಸೆ ಬಂದ ಕಾಲಕ್ಕೆ ಹಾಕಿ ಬ್ಯಾಟ್ ತುಂಡಾಗುವಂತೆ ತಮ್ಮ ಕಾಲೇಜಿನ ಹುಡುಗನೊಬ್ಬನನ್ನು ಬಡೆದಿದ್ದು ಗೊತ್ತಿತ್ತು.

ಹಾಗಾಗಿ ಮೆಲ್ಲಗೆ ನೀವು ರಾಜಕಾರಣಕ್ಕೆ ಹಾಕಿ ಬ್ಯಾಟ್ ಬೀಸಿಯೇ ಬಂದಿರಿ ಆಲ್ವಾ ಎಂದೆ.

ಗೌಡರು ಆ ಕಾಲಕ್ಕೆ ಜಾರಿಕೊಂಡರು.

ಪಾಲಿಟೆಕ್ನಿಕ್ ಓದುವಾಗ ಆದ ಘಟನೆ ಅದು. ಕ್ಲಾಸಿನ ಯೂನಿಯನ್ ಗೆ ಮೊದಲೆರಡು ವರ್ಷ ಪ್ರೆಸಿಡೆಂಟ್ ಆಗಿದ್ದವನು ಹಾಸನದ ಡಿ ಎಂ ಓ ರವರ ಮಗ. ಆತ ಬೈಕ್ ನಲ್ಲಿ, ಕಾರ್ ನಲ್ಲಿ ಬರ್ತಾ ಇದ್ದ. ನಾವೋ ಬಾಡಿಗೆ ರೂಮ್ ಮಾಡಿಕೊಂಡು ಅಡಿಗೆ ಮಾಡಿಕೊಂಡು ಓದುತ್ತಿದ್ದ ಹುಡುಗರು.

ಮೂರನೇ ವರ್ಷ ಯಾರು ಪ್ರೆಸಿಡೆಂಟ್ ಅನ್ನುವ ಪ್ರಸ್ತಾಪ ಬಂದಾಗ, ’ನಾನು ಆಗುತ್ತೇನೆ’ ಎಂದೆ. ಅವನು ಒರಟಾಗಿ, ’ಯಾವನೋ ಅವನು ಗಂಡು’ ಎಂದು ಮಾತನಾಡಿದ.

ಆಗ ನಾನು ಹಾಕಿ ಆಡ್ತಾ ಇದ್ದೆ. ಕೈಯಲ್ಲಿ ಹಾಕಿ ಸ್ಟಿಕ್ ಇತ್ತು, ಏನು ಸಿಟ್ಟು ಬಂತೋ ಎನೋ, ಬೀಸಿ ಹೊಡೆದೆ. ಸ್ಟಿಕ್ ಮುರಿದೇ ಹೋಯಿತು…

’ನಿನ್ನ ಡಿಸ್ ಕ್ವಾಲಿಫೈ ಮಾಡ್ತೀನಿ, ನೀನು ಮಿಸ್ ಬಿಹೇವ್ ಮಾಡಿದ್ದೀಯಾ’ ಅಂತ ಪ್ರಿನ್ಸಿಪಾಲ್ ಬೈದರು. ನಾನು ಸುಮ್ಮನೆ ನಿಂತೆ. ಆದರೆ ಎಲೆಕ್ಷನ್ ಗೆ ಕಂಟೆಸ್ಟ್ ಮಾಡದೇ ಬಿಡಲಿಲ್ಲ. ಗೆದ್ದೇ ಸಹಾ.. ಎಂದರು.

ಅವರಿಗೆ ತಮ್ಮ ಎಂದೂ ಮಾತನಾಡದ ವಿಷಯಗಳನ್ನು ಮಾತನಾಡುವ ಹುಕಿ ಬಂದಿತ್ತು.

ಕಬ್ಬನ್ ಪಾರ್ಕ್ ನ ಹಸಿರು ಹುಲ್ಲಿನ ಮೇಲೆ ನನ್ನನ್ನೂ ಕೂರಿಸಿಕೊಂಡವರೇ ಹೊಳೇನರಸಿಪುರದಲ್ಲಿ ನಾನು ಹೈಸ್ಕೂಲಿಗೆ ಹೋಗುವಾಗ ಒಂದು ದೊಡ್ಡ ಪಾಠ ಕಲಿತೆ ಎಂದರು.

ನಾನು ನನ್ನ ನೋಟ್ಸ್ ಚೆಕ್ ಮಾಡಿಕೊಂಡೆ. ಉಹುಂ ಆ ವಿಷಯ ಇರಲೇ ಇಲ. ನಾನೂ ದೊಡ್ಡ ಕಿವಿ ಮಾಡಿಕೊಂಡೆ.

ಹಾಗೆ ಅಲ್ಲಿರುವಾಗ ನನ್ನ ಬಟ್ಟೆಗಳನ್ನು ತೊಳೆಯಲು ಹೊಳೆಗೆ ಹೋಗುತ್ತಿದ್ದೆ. ಬಟ್ಟೆ ತೊಳೆದು ಬಂಡೆಯ ಮೇಲೆ ಒಣಗಿಹಾಕಿ, ಈಜು ಹೊಡೆದೆ. ವಾಪಸ್ ಬರುವಾಗ ನೋಡಿದರೆ ಬೀಗದ ಕೈ ಎಲ್ಲೋ ಕಳೆದುಹೋಗಿದೆ. ಆ ಬಟ್ಟೆಗಳನ್ನೆಲ್ಲಾ ಮುದುರಿಟ್ಟುಕೊಂಡು ನಾನಿದ್ದ ಬಾಡಿಗೆ ಮನೆಗೆ ಬಂದು ಮನೆ ಓನರ್ ಹತ್ತಿರ ನನ್ನ ಬಟ್ಟೆಗಳನ್ನು ಕೊಟ್ಟು ಮತ್ತೆ ಹೊಳೆ ದಂಡೆಗೆ ಓಡಿದೆ.

ಅಲ್ಲೆಲ್ಲಾ ಹುಡುಕಿದೆ. ಅಲ್ಲಿ ನನಗೆ ಎರಡು ರುಪಾಯಿ ನೋಟು ಸಿಕ್ಕಿತು. ಖುಷಿಯಲ್ಲಿ ಕೈಗೆತ್ತಿಕೊಂಡೆ. ಬೀಗ ರಿಪೇರಿ ಮಾಡುವವನಿಗೆ ಮೂರಾಣೆ ಕೊಟ್ಟು ಬೀಗ ತೆಗೆಸಿದೆ.

ಮಿಕ್ಕ ದುಡ್ಡಿಗೆ ನಾವು ಹುಡುಗರೆಲ್ಲಾ ಊರಿನ ಫೇಮಸ್ ಹೋಟಲ್ ವೆಂಕಟೇಶಭವನ್ ಗೆ ಹೋಗಿ ದೋಸೆ, ಆಂಬೊಡೆ ಎಲ್ಲಾ ತಿಂದು ಸಂತೋಷಪಟ್ಟೆವು. ಆಗ ನಾನು ಶಾಲೆಗೆ ಫೀಸ್ ಕಟ್ಟಲೆಂದು ಪುಸ್ತಕದಲ್ಲಿ ಎರಡೆರಡು ರೂಗಳ ಎರಡು ನೋಟುಗಳನ್ನಿಟ್ಟುಕೊಂಡಿದ್ದೆ.

ಶಾಲೆಗೆ ಹೋಗಿ ನೋಡ್ತೀನಿ, ಅದಿಲ್ಲ. ಏನಾಯ್ತು ಎಂದು ಬಂದ ದಾರಿಯಲ್ಲೇ ಹೋಗಿ ಹುಡುಕಿದೆ, ಸಿಗಲೇ ಇಲ್ಲ. ಆಗ ನಮ್ಮ ರೂಂನಲ್ಲಿ ಅಡಿಗೆ ಮಾಡಿಕೊಳ್ಳಲೆಂದು ೨೦ ಸೇರು ರಾಗಿ, ಎರಡು ಸೇರು ಅಕ್ಕಿ, ಸ್ವಲ್ಪ ಬೇಳೆ ಎಲ್ಲಾ ಕೊಟ್ಟಿದ್ದರು. ನಾನೇ ಅಡಿಗೆ ಮಾಡಿಕೊಳ್ಳುತ್ತಿದ್ದೆ. ಏನು ಮಾಡಲೂ ತೋಚದೆ ರುಪಾಯಿಗೆ ಮೂರು ಸೇರಿನ ಹಾಗೆ ಹನ್ನೆರಡು ಸೇರು ರಾಗಿ ಮಾರಿದೆ, ಫೀಸ್ ಕಟ್ಟಿದೆ,

ಆ ತಿಂಗಳೆಲ್ಲಾ ಒಂದು ಹೊತ್ತು ಊಟ, ಒಂದು ಹೊತ್ತು ಉಪವಾಸ. ಅಲ್ಲಿಗೆ ನನಗೆ ಸಿಕ್ಕ ೨ ರೂಪಾಯಿ ಪರರಿಗೆ ಖರ್ಚು ಮಾಡಿ ನಾನು ನನ್ನ ನಾಲ್ಕು ರುಪಾಯಿ ಕಳೆದುಕೊಂಡಿದ್ದೆ. ಪರರ ದುಡ್ಡನ್ನು ಮುಟ್ಟಬಾರದು ಎನ್ನುವುದಕ್ಕೆ ಇದು ಒಳ್ಳೆಯ ಪಾಠವಾಗಿತ್ತು.

‘ಅಮ್ಮನ ಬೆನ್ನ ಹಿಂದೆಯೇ ಸುತ್ತುತ್ತಿದ್ದ ಸಂಕೋಚದ ಹುಡುಗ ನೀವು. ಪ್ರಧಾನಿ ಆದಿರಿ..’ ಎಂದು ನಾನು ಮುಖ್ಯವಾದ ಪಾಯಿಂಟ್ ಎತ್ತಲು ಹೋದೆ.

ಅವರು ನನ್ನ ಮಾತು ಮುಂದುವರಿಸಲೂ ಬಿಡದೆ ನನ್ನ ಬದುಕಿನಲ್ಲಿ ಇಂತಹ ಭಗವಂತನ ಆಟಗಳು ತುಂಬಾ ಆಗಿದೆ. ಓದು ಮುಗಿಸಿ ಏನು ಮಾಡೋದು ಅಂತ ಗೊತ್ತಿಲ್ಲದೇ ಇದ್ದಾಗಲೂ ಇಂತಹದ್ದೇ ಭಗವಂತನ ಆತ ಆಯ್ತು ಎಂದರು.

ನಾನು ೧೦೦ ರೂಪಾಯಿ ಸಾಲ ಮಾಡಿ ಕಂಟ್ರಾಕ್ಟ್ ಕೆಲಸಕ್ಕೆ ಇಳಿದೆ. ವೀರಪ್ಪ ಅಂತ ಒಬ್ಬರು ಒಂದು ಕುಯ್ ಗತ್ತಿ ಇಟ್ಟುಕೊಂಡು ಹುಲ್ಲು ಕತ್ತರಿಸುತ್ತಾ ಕೂತಿದ್ದರು.

ಒಮ್ಮೆ ನನ್ನನ್ನು ನೋಡಿ ಯಾರಪ್ಪ ನೀನು ಎಂದರು. ನಾನು ಹರದನಹಳ್ಳಿ ದೊಡ್ಡಣ್ಣನ ಮಗ ಎಂದೆ. ’ಓಹೋ, ತುಂಬಾ ಚೆನ್ನಾಗಿ ಬದುಕಿದ ಮನೆ ಕಣಪ್ಪ. ಏನೋ ಈಗ ಹೀಗೆ ತೊಂದರೆ ಆಗಿದೆ. ನಿನ್ನ ಕಾಲಕ್ಕೆ ಇದು ಮೊದಲಿನಂತೆ ಸರಿ ಆದರೂ ಆಗಬಹುದು ಎಂದರು.

ನಾನು ಕೈ ಮುಗಿದು, ’ವೀರಪ್ಪನವರೆ, ಒಂದು ನೂರು ರೂಪಾಯಿ ಕೊಡ್ತೀರಾ’ ಎಂದು ಕೇಳಿದೆ. ಅವರು, ’ಅಯ್ಯೋ ಅಷ್ಟು ದುಡ್ಡು ನನ್ನ ಹತ್ತಿರ ಇಲ್ಲವಲ್ಲ, ಒಳ್ಳೆಯ ಕಷ್ಟಕ್ಕೆ ಬಂತಲ್ಲಾ, ಬಾ’ ಎಂದು ನನ್ನನ್ನು ಕರೆದುಕೊಂಡು, ಮೂರು ಮಹಡಿ ನಂಜುಂಡಶೆಟ್ಟರು ಅಂತ ಅವರ ಬಳಿ ಕರೆದುಕೊಂಡು ಹೋದರು.

ತಮ್ಮ ಕಿವಿಗಳಲ್ಲಿದ್ದ ಹತ್ತಕಡಕು ಬಿಚ್ಚಿಟ್ಟು, ’ನೂರು ರುಪಾಯಿ ಕೊಡು’ ಎಂದರು. ಆ ನೂರು ರೂಪಾಯಿ ಒದೆಯಲ್ಲಾ ಅದು ನನಗೆ ಇಂದಿಗೂ ಮರೆಯಲಾಗದ ನೂರು ರೂಪಾಯಿ. ಆ ದುಡ್ಡು ತೆಗೆದುಕೊಂಡು ನಾನು ಕಂಟ್ರಾಕ್ಟ್ ಕೆಲಸ ಶುರು ಮಾಡಿದೆ. ಪುಣ್ಯಾತ್ಮ ಅವರು ಎಂದು ಧ್ಯಾನಸ್ಥರಾದರು.

ನನಗೋ ಅವರು ರಾಜಕೀಯದಲ್ಲಿ ಬ್ಯಾಟ್ ಬೀಸಿದ್ದಾರೆ ಬಗ್ಗೆ ಕುತೂಹಲವಿತ್ತು. ಅವರ ಧ್ಯಾನಕ್ಕೆ ಭಂಗ ಬಂದರೂ ಬರಲಿ ಎಂದು ‘ನಿಮ್ಮ ರಂಗ ಪ್ರವೇಶ ಹೇಗೆ’ ಎಂದು ಕೇಳಿಯೇಬಿಟ್ಟೆ.

‘ನನ್ನ ರಾಜಕೀಯ ಗುರುಗಳು ಎ ಜಿ ರಾಮಚಂದ್ರ ರಾಯರು. ಬದುಕಿನ ಪಾಠಗಳನ್ನೂ ಅವರು ನನಗೆ ಹೇಳಿಕೊಟ್ಟವರು, ಕುಡಿಯುವುದು ತಪ್ಪು ಎಂದು ಹೇಳಿಕೊಟ್ಟವರು. ಎಂದೂ ಕುಡಿದವನಲ್ಲ ನಾನು. ೧೯೫೭ರಲ್ಲಿ ಅವರು ತಾವೇ ದೆಹಲಿಗೆ ಹೋಗಿ, ಈ ಸಲ ಚುನಾವಣೆಗೆ ನಾನು ನಿಲ್ಲಲ್ಲ, ಈ ಹುಡುಗನಿಗೆ ಸೀಟ್ ಕೊಡಿ ಅಂದರು. ಸೀಟ್ ಸಿಕ್ಕಿತು, ಎಲೆಕ್ಷನ್ ಗೆ ನಿಂತೆ, ಗೆದ್ದೆ.

ನನ್ನ ಹತ್ತಿರ ೧೦ ರೂ ಇಲ್ಲ. ಗೆದ್ದ ಮೇಲೆ ಒಬ್ಬೊಬ್ಬರೇ ಶುರು ಮಾಡಿದರು, ’ನಾನು ನೂರು ಖರ್ಚು ಮಾಡಿದ್ದೇನೆ, ನನ್ನದು ೨೦೦ ಆಯಿತು’ ಹೀಗೆ. ಎಲ್ಲಾ ಬರೆದುಕೊಂಡೆ. ನಮ್ಮ ಜಮೀನನ್ನು ಭೂ ಅಡಮಾನ ಬ್ಯಾಂಕಿಗೆ ೧೩ ಸಾವಿರಕ್ಕೆ ಅಡ ಇಟ್ಟೆ. ಎಲ್ಲರನ್ನೂ ಕರೆದು ಆ ಸಾಲ ತೀರಿಸಿದೆ. ಅಲ್ಲಿಂದ ನನ್ನ ರಾಜಕೀಯ ಜೀವನ ಪ್ರಾರಂಭ ಆಯ್ತು.

ನಾನು ಅವರ ಬಿ ಪಿ ಏರಿಸಬಹುದಾದ ಪ್ರಶ್ನೆಯನ್ನು ಕೈನಲ್ಲಿಟ್ಟುಕೊಂಡು ಕಾಯುತ್ತಿದ್ದೆ. ‘ಸಾರ್, ಕುಮಾರಸ್ವಾಮಿ ಅವರು ಬಿಜೆಪಿ..’ ಎಂದು ಹೇಳುತ್ತಿದ್ದಂತೆ ಒಂದೇ ಏಟಿಗೆ ನನ್ನ ಮಾತನ್ನೇ ತುಂಡರಿಸಿ ಹಾಕುವರಂತೆ ‘ನನ್ನ ಜೀವನದಲ್ಲೇ ನಾನು ಮೊದಲ ಬಾರಿಗೆ ಈ ಸುದ್ದಿ ಕೇಳಿದ ತಕ್ಷಣವೇ ತಲೆತಿರುಗಿ ಬಿದ್ದೆ. ಅದುವರೆಗೂ ಯಾವ ಬಿ ಪಿ ಯೂ ನನ್ನ ಹತ್ರ ಸುಳಿದಿರಲಿಲ್ಲ. ಆದರೆ ಅವತ್ತು ನನ್ನ ಬಿಪಿ ೨೨೦ / ೧೫೦ ಇತ್ತು’.

‘ಹೊರಗಡೆ ಎಲ್ಲಾ ದೇವೇಗೌಡರು ಸಂಚುಮಾಡಿ ಬಿಜೆಪಿ ಜೊತೆ ಸಂಬಂಧ ಮಾಡಿದರು ಎಂದು ಮಾತನಾಡಿಕೊಂಡರು. ಕುಮಾರಸ್ವಾಮಿ ದಾರಿ ತಪ್ಪಿದಾಗ ನಾನು ಮೂರುತಿಂಗಳು ಅವರ ಮುಖ ನೋಡಲಿಲ್ಲ ಗೊತ್ತಾ’ ಎಂದು ನನ್ನನ್ನು ನೋಡಿದರು.

ನಾನು ಅವರೇ ಮಾತನಾಡಲಿ ಎಂದು ಸುಮ್ಮನಿದ್ದೆ ಅವರಿಗೆ ಇನ್ನೂ ಹೇಳುವುದು ಇದೆ ಎನ್ನುವುದು ಅವರ ಮುಖದಲ್ಲಿ ಚಿಮ್ಮಿದ್ದ ಸಿಟ್ಟಿನಿಂದಲೇ ಗೊತ್ತಾಗುತ್ತಿತ್ತು.

‘ನನ್ನ ಆರೋಗ್ಯ ತೀರಾ ಹೆಚ್ಚುಕಡಿಮೆ ಆದಾಗ ನನ್ನನ್ನು ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಬಂದರು. ಆಗ ಆ ಮುಖ್ಯಮಂತ್ರಿಗಳಿಗೆ ವಿಷಯ ಗೊತ್ತಾಯಿತು. ಮನೆಗೆ ಬಂದ ಕುಮಾರಸ್ವಾಮಿ ‘ನಾನು ಬಿಜೆಪಿಗೆ ಮಾತುಕೊಟ್ಟೆ, ಸರ್ಕಾರ ಮಾಡಿದೆ. ಇವತ್ತೇ ರಾಜಿನಾಮೆ ಕೊಡ್ತೀನಿ’ ಅಂದರು. ನಾನು ಹೇಳಿದ್ದು ಒಂದೇ ಮಾತು, ’ನಾನು ಗಳಿಸಿದ ಆಸ್ತಿ ನಾಶ ಆಯ್ತು, ಇನ್ನು ಅದನ್ನು ಮತ್ತೆ ಸಂಪಾದನೆ ಮಾಡಕ್ಕಾಗಲ್ಲ, ಹೋಗು’ ಎಂದೆ.

‘ಒಂದು ಜುಡಿಷಿಯಲ್ ಕಾಂಪ್ಲೆಕ್ಸ್ ಉದ್ಘಾಟನೆ ಮಾಡುವಾಗ ಕುಮಾರಸ್ವಾಮಿ ’ನಾನು ಯಾವಾಗ ರಾಜಿನಾಮೆ ಕೊಡುತ್ತೇನೋ ಗೊತ್ತಿಲ್ಲ, ರೇವಣ್ಣ ನನ್ನ ಅಣ್ಣ, ನಮ್ಮ ತಂದೆ ಮನಸ್ಸಿನಲ್ಲೇನಿದೆಯೋ ಗೊತ್ತಿಲ್ಲ, ಅವರೇ ಮುಖ್ಯಮಂತ್ರಿ ಆಗಬೇಕು ಅಂತಿತ್ತೇನೋ’ ಎಂದು ಹೇಳಿದರು.

ಬಾರ್ ಅಸೋಸಿಯೇಶನ್ ಅಧ್ಯಕ್ಷ ಜಗದೀಶ್ ನಮ್ಮನೆಗೆ ಓಡಿಬಂದರು, ಏನ್ ಸಾರ್ ಯಾವತ್ತು ರಾಜಿನಾಮೆ ಕೊಡ್ತೀನೋ ಗೊತ್ತಿಲ್ಲ ಅಂತಿದಾರೆ ಅಂದರು. ನಾನು ’ಅಧಿಕಾರ ಬಿಡೋದು ಅಷ್ಟು ಸುಲಭಾನಾ? ಹೋಗಿ ಸುಮ್ಮನೆ’ ಅಂದೆ’ ಎಂದರು.

ಅವರ ಮುಖದಲ್ಲಿ ಕಂಡ ಸಿಟ್ಟೇ ನನಗೆ ಇನ್ನೊಂದು ಪ್ರಶ್ನೆಯನ್ನು ತಕ್ಷಣ ಅವರ ಮುಂದೆ ಇಡಲು ಕಾರಣವಾಯಿತು.

‘ಸರ್ ದೇವೇಗೌಡ್ರಿಗೆ ತುಂಬಾ ಸಿಟ್ಟು ಅಂತಾರೆ. ಹೌದಾ?’ ಎಂದೆ.

‘ಹೌದು. ತಪ್ಪುಮಾಡಿದ್ರೆ ನೇರ ಮುಖಕ್ಕೇ ಹೇಳುತ್ತೇನೆ. ರಾಮಕೃಷ್ಣ ಹೆಗಡೆ ಒಂದು ಸಲ ನಿಮ್ಮ ಶತ್ರುವನ್ನ ನೀವೇ ಹುಟ್ಟು ಹಾಕಿಕೊಳ್ಳುತ್ತೀರಿ, you not only speak the truth, you speak the naked truth and you also create your own enemies’ ಅಂದರು. t doesn’t matter ಅಂದಿದ್ದೆ ನಾನು’.

‘ಇದೇ ಸಿಟ್ಟು ಅವರಿಗೆ ಆ ಕಾಲದಲ್ಲಿ ಇಂದಿರಾಗಾಂಧಿಯ ಬಗ್ಗೆಯೂ ಇತ್ತು. ಅದಕ್ಕೆ ಕೇಳಿದೆ. ಚಿಕ್ಕಮಗಳೂರು ಎಲೆಕ್ಷನ್ ನಲ್ಲಿ ನೀವು ದೊಡ್ಡ ಪ್ಲಾನ್ ಮಾಡಿದ್ರಿ’ ಅಂತ.

‘ಇಂದಿರಾಗಾಂಧಿಯವರು ೭೭ರಲ್ಲಿ ಚುನಾವಣೆಯಲ್ಲಿ ಸೋತಾಗ ಇಲ್ಲಿ ಚಿಕ್ಕಮಗಳೂರಿನಲ್ಲಿ ಡಿ ಬಿ ಚಂದ್ರೇಗೌಡರು ರಿಸೈನ್ ಮಾಡಿದರು. ಇಂದಿರಾಗಾಂಧಿ ಇಲ್ಲಿ ಚುನಾವಣೆಗೆ ನಿಲ್ಲುತ್ತಾರೆ ಎಂದಾಗ, ಅವರಿಗೆ ಸಮಾನವಾಗಿ ನಿಲ್ಲಬಲ್ಲ ವ್ಯಕ್ತಿ ಡಾ ರಾಜ್ ಕುಮಾರ್ ಎಂದುಕೊಂಡು ಅವರ ಬಳಿ ಹೋದೆ’.

‘ಗಂಟೆಗಟ್ಟಲೆ ಕನ್ವಿನ್ಸ್ ಮಾಡೋಕೆ ಪ್ರಯತ್ನಿಸಿದೆ. ಅವರು ಬಿಲ್ ಕುಲ್ ಒಪ್ಪಲಿಲ್ಲ. ನಾನೂ ಸಹಾ ಜಗ್ಗಲಿಲ್ಲ. ಅವರನ್ನ ಒಪ್ಪಿಸಿಯೇ ಸಿದ್ಧ ಅಂತ ತಯಾರಿ ಮಾಡಿದೆ. ಅದಕ್ಕಾಗಿ ಎಂಜಿಆರ್ ಬಳಿ ಹೋದೆ. ಅವರು ಹೇಳಿದ್ರೆ ರಾಜಕುಮಾರ್ ಒಪ್ತಾರೆ ಅಂತ’.

‘ಆದರೆ ಎಂಜಿಆರ್ ಅವರು ’ರಾಜ್ ಕುಮಾರ್ ಬಹಳ ಎತ್ತರಕ್ಕೆ ಬೆಳೆದಿರುವ ಕಲಾವಿದ, ಅವರನ್ನು ಒತ್ತಾಯ ಮಾಡಬೇಡಿ’ ಎಂದರು. ನಾನು ಅಲ್ಲಿಗೆ ನನ್ನ ಪ್ರಯತ್ನ ಕೈಬಿಟ್ಟೆ’ ಎಂದರು.

ರಾಜಕುಮಾರ್ ಅವರೇ ಸರಿ ಇಂದಿರಾಗಾಂಧಿಗೆ ಸ್ಪರ್ಧೆ ನೀಡಲು ಎಂದು ದೇವೇಗೌಡರು ನಿರ್ಧರಿಸಲು ಕಾರಣ ಇತ್ತು. ಯಾಕಂದರೆ ಅವರು ವಿರೋಧ ಪಕ್ಷದ ನಾಯಕರಾಗುವವರೆಗೆ ರಾಜಕುಮಾರ್ ಅವರ ಎಲ್ಲಾ ಸಿನಿಮಾಗಳನ್ನ ನೋಡಿದ್ದರು.

ಹಾಗಾಗಿ ನಿಮಗೆ ಸಿನೆಮಾ ಮೋಹ ಜಾಸ್ತಿ ಅಂತ ಒಂದು ಫುಲ್ ಟಾಸ್ ಹಾಕಿದೆ.

ಅವರು ನಕ್ಕು ‘ರಾಜ್ ಕುಮಾರ್ ಅಂದ್ರೆ ಕ್ಲಾಸಿಕ್ ಆಕ್ಟರ್ ಬಿಡಿ’ ಅಂದರು.

‘ಮೌಲ್ಯಗಳ ಮೇಲೆ ಬರುವ ಸಿನಿಮಾಗಳು ನನಗಿಷ್ಟ. ಭೂತಯ್ಯನ ಮಗ ಅಯ್ಯು, ಹಿಂದಿಯಲ್ಲಿ ಬೂಟ್ ಪಾಲೀಶ್, ಆವಾರ ಹೀಗೆ ನೀತಿಬೋಧನೆ ಇರುವ ಚಿತ್ರಗಳನ್ನು ನೋಡಿದ್ದೆ’ ಎಂದು ‘ಬೆಳ್ಳಿ’ ಕಾಲವನ್ನು ಬಿಚ್ಚಿಟ್ಟರು.

ಅವರ ಜೊತೆ ಅಷ್ಟೂ ಹೊತ್ತು ಮಾತನಾಡುವಾಗ ನಾನು ವಿಶೇಷವಾಗಿ ಗಮನಿಸಿದ್ದು ಚನ್ನಮ್ಮನವರ ಬಗ್ಗೆ ಅವರಿಗಿದ್ದ ಅಪಾರ ಪ್ರೀತಿಯನ್ನು.

‘ಯಾವಾಗ ಚಿಕ್ಕಬಳ್ಳಾಪುರದ ಹನುಮಪ್ಪ ಬಂದು ಚನ್ನಮ್ಮನವರನ್ನು ನನಗೆ ಜೊತೆ ಮಾಡಿ ಹೋದನೋ ಅವತ್ತಿನಿಂದ ಇವತ್ತಿನವರೆಗೆ ನಾನು ಒಂದು ಸಲವೂ ಅವರ ಜೊತೆ ಜಗಳ, ಮನಸ್ತಾಪ ಮಾಡಿಕೊಂಡದ್ದೇ ಇಲ್ಲ. ಅವರು ನನ್ನ ಮನಸನ್ನ ಒಂದು ದಿನವೂ ನೋಯಿಸಿಲ್ಲ. ನಾನು ನನ್ನ ಜೀವನದ ಏನನ್ನೂ ಅವರ ಹತ್ತಿರ ಮುಚ್ಚಿಟ್ಟಿಲ್ಲ’ ಎಂದರು.

ನನಗೆ ಕೇಳಲೇಬೇಕಾಗಿದ್ದದ್ದು ಅಂತಹ ಚನ್ನಮ್ಮನವರ ಮೇಲೆ ಆದ ಆಸಿಡ್ ದಾಳಿಯ ಬಗ್ಗೆ.

‘ಸರ್ ರಾಜಕಾರಣ ಮಾಡಿದ್ದು ನೀವು, ಆಸಿಡ್ ಬಿದ್ದಿದ್ದು ಪತ್ನಿಗೆ, ಏನನ್ನಿಸಿತು ಸರ್ ಆ ಕ್ಷಣ? ‘ಎಂದೆ.

‘ಯಾವ ಕಾಲದಲ್ಲಿ ಬಿತ್ತು ಅದು? ಆಗ ಯಾರು ಮುಖ್ಯಮಂತ್ರಿ ಆಗಿದ್ದರು? ಯಾರು ಎಂಪಿ ಆಗಿದ್ದರು? ಯಾರ ಪ್ರೇರಣೆ? ಇಲ್ಲ ನಾನು ಚರ್ಚೆಗೆ ಹೋಗೋದಿಲ್ಲ, ಅವರ ಹೆಸರುಗಳನ್ನೂ ತೆಗೆಯುವುದಿಲ್ಲ’ ಎಂದು ಮೌನಕ್ಕೆ ಜಾರಿದರು.

ಅವರ ಮನದ ದುಗುಡ ಕಡಿಮೆ ಮಾಡಲೋ ಎಂಬಂತೆ ನಾನು ‘ನೀವು ಒಂದು ಥರಾ 24×7 ನ್ಯೂಸ್ ಚಾನಲ್ ಇದ್ದ ಹಾಗೆ ಸಾರ್’ ಅಂದ.

ಅವರು ತಕ್ಷಣ ನಕ್ಕುಬಿಟ್ಟರು. ೨೪ ಗಂಟೆಯೂ ರಾಜಕಾರಣವನ್ನೇ ಉಸಿರಾಡುವ ಎಚ್ ಡಿ ದೇವೇಗೌಡರ ಮುಖದಲ್ಲಿ ಆ ನಗು ಇತ್ತಲ್ಲಾ ಅದು ‘ಶತಮಾನದ ನಗು’.

Comment here