ತುಮಕೂರು ಲೈವ್

ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ‌ ಹಸಿವಿಗೆ ತತ್ತರ

Publicstory. in


ತುಮಕೂರು: ಲಾಕ್ ಡೌನ್ ನಂತರ‌ ಜಿಲ್ಲೆಯಾದ್ಯಂತ ಬಡವರು, ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಜಿ ಶಾಸಕರು, ಶಾಸಕರು, ವಿವಿಧ ಸಂಘ ಸಂಸ್ಥೆಗಳು ಮಾಡುತ್ತಾ ಜನರ‌ ಹಸಿವು ನೀಗಿಸುತ್ತಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕ್ಷೇತ್ರದಲ್ಲೆ ಅಲೆ‌ಮಾರಿಗಳು ಹಸಿವಿ‌ನಿಂದ ತತ್ತರಿಸುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ರಾಮ್ ಗೋಪಾಲ್ ಥಿಯೇಟರ್ ಹಿಂಭಾಗದಲ್ಲಿ ಅಲೆಮಾರಿ ಜನಾಂಗಕ್ಕೆ ಸೇರಿದ ಕೆಲವು ಕುಟುಂಬಗಳು ವಾಸವಿದ್ದು, ಇದೀಗ ಕೊರೋನಾ ಕಾರಣದಿಂದ ಗೃಹಬಂಧನಕ್ಕೊಳಗಾಗಿ ಒಪ್ಪತ್ತಿನ ಊಟಕ್ಕೂ ತತ್ವಾರ ಪಡುವಂತಾಗಿದೆ.

ಸ್ವಂತ ಸೂರಿಲ್ಲದೇ ಗುಡಿಸಲು,ಜೋಪಡಿಯಲ್ಲಿ ವಾಸವಿರುವ ಇವರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಕೆಲವೊಂದು ಸೌಲಭ್ಯದಿಂದ ವಂಚಿತರಾಗಿದ್ದು, ಇದೀಗ ಲಾಕ್ಡೌನ್ ಕಾರಣದಿಂದಾಗಿ ಒಪ್ಪೊತ್ತಿನ ಕೂಳಿಗೂ ಗತಿಯಿಲ್ಲದ ಪರಿಸ್ಥಿತಿ ಒದಗಿದೆ.

ಕೂದಲು, ಹೇರ್ಪಿನ್, ಸೂಜಿ ಹೀಗೆ ಸಣ್ಣಪುಟ್ಟ ವಸ್ತುಗಳನ್ನು ಹಳ್ಳಿಗಳಲ್ಲಿ ಸುತ್ತಿ ಮಾರಾಟ ಮಾಡುತ್ತಾ ಅದರ ವ್ಯಾಪಾರದಿಂದಲೇ ತುತ್ತಿನ ಚೀಲ ತುಂಬಿಸಿಕೊಳ್ಳುವ ಇವರಿಗೆ ತಿಂಗಳಿನಿಂದಲೂ ವ್ಯಾಪಾರವೂ ಇಲ್ಲ,ಅತ್ತ ಕೂಲಿ ನಾಲಿಯೂ ಇಲ್ಲದೇ ಸಂಕಷ್ಟ ಎದುರಾಗಿದೆ.

ಇದನ್ನು ಓದಿ

ಕರೋನಾ ಭೀತಿಯಿಂದಾಗಿ ಹಳ್ಳಿಗಳಲ್ಲಿ ಅವರನ್ನು ಬಿಟ್ಟುಕೊಳ್ಳುವುದಿಲ್ಲ. ಕೈಯಲ್ಲಿದ್ದ ಪುಡಿಗಾಸು ಖಾಲಿಯಾಗಿ ನಿತ್ಯಜೀವನ ಮಾಡುವುದು ದುರ್ಬರವಾಗಿ ಮನೆಮಂದಿ ಮಕ್ಕಳ ಹೊಟ್ಟೆ ಹೇಗೆ ತುಂಬಿಸಬೇಕು ಎಂಬ ಚಿಂತೆ ಕಾಡುತ್ತಿದೆ.

ಸರ್ಕಾರದಿಂದ ರೇಷನ್ ಕಾರ್ಡಿಗೆ ಕೊಟ್ಟಿದ್ದ ಅಕ್ಕಿ- ಗೋದಿ ಖಾಲಿಯಾಗಿದೆ. ಅಲೆಮಾರಿ ಸಂಘದ ಅಧ್ಯಕ್ಷ ರಾಜಪ್ಪ ದಾನಿಗಳ ನೆರವಿನಿಂದ ಕೊಡಿಸಿದ್ದ ಅಕ್ಕಿ-ಬೇಳೆ-ಎಣ್ಣೆ ಕೆಲವು ದಿನ ಹೊಟ್ಟೆ ತುಂಬಿಸಿದ್ದು ಇದೀಗ ಅದು ಸಹ ಖಾಲಿಯಾಗಿದೆ. ಲಾಕ್ಡೌನ್ ಮುಂದುವರಿಯುತ್ತಿರುವುದರಿಂದ ಮುಂದೇನು ಎನ್ನುವ ಚಿಂತೆ ಅಲೇಮಾರಿಗಳನ್ನು ಕಾಡುತ್ತಿದೆ.

ಇತ್ತೀಚೆಗಷ್ಟೇ ಚಿಕ್ಕನಾಯಕನಹಳ್ಳಿಯಲ್ಲಿ ಕೆಲವೊಂದು ಅಲೆಮಾರಿಗಳ ಗುಡಿಸಲುಗಳಿಗೆ ತಾಲೂಕು ನ್ಯಾಯಾಧೀಶರು, ವಕೀಲರು ಭೇಟಿ ನೀಡಿ ಆಹಾರ ಸಾಮಗ್ರಿ ವಿತರಣೆ ಮಾಡಿದ್ದರು. ಅದೇ ರೀತಿ ಈ ಭಾಗದಲ್ಲಿರುವ ಅಲೆಮಾರಿ ಕುಟುಂಬಗಳಿಗೆ ನೆರವು ನೀಡಲಿ ಎನ್ನುತ್ತಾರೆ ಹುಳಿಯಾರಿನ ಕೆಲವು ಜನರು.

ತಾಲ್ಲೋಕು ಆಡಳಿತ ಅಲೆಮಾರಿಗಳ ವಾಸ್ತವ ಚಿತ್ರಣ ಅರಿತು, ಸ್ಥಿತಿಗತಿ ಬಗ್ಗೆ ಗಮನಹರಿಸಿ ಅವಶ್ಯ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಲಿ. ಪಟ್ಟಣದಲ್ಲಿನ ದಾನಿಗಳು ಮುಂದೆ ಬಂದು ನಮ್ಮ ಕೈ ಹಿಡಿಯಲಿ ಅಲೆ‌ಮಾರಿಗಳು ಪಬ್ಲಿಕ್ ಸ್ಟೋರಿ.ಇನ್ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Comment here