Publicstory.in
ತುಮಕೂರು: ಎತ್ತಿನ ಹೊಳೆಯ ಬೈರಗೊಂಡ್ಲು ಜಲಾಶಯದ ನಿರ್ಮಾಣಕ್ಕೆ ಭೂಸ್ವಾಧೀನಕ್ಕೊಳಪಡುವ ರೈತರ ಜಮೀನಿಗೆ ಸೂಕ್ತ ಪರಿಹಾರ ದರ ನಿಗಧಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಗಾಗಿ ಕೊರಟಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಬೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಕುರಿತು ಜಿಲ್ಲಾಧಿಕಾರಿ ಕಛೇರಿಯಲ್ಲಿ ಜರುಗಿದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರ ಜಮೀನು ಭೂಸ್ವಾಧೀನವಾಗುತ್ತಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುತ್ತಿರುವ ಪ್ರತಿ ಎಕರೆಗೆ 32ಲಕ್ಷ ರೂ.ಗಳ ಪರಿಹಾರ ದರದಂತೆ ಕೊರಟಗೆರೆ ತಾಲ್ಲೂಕಿನ ರೈತರಿಗೂ ದೊರೆಯಬೇಕೆನ್ನುವುದು ನನ್ನ ಆಶಯವಾಗಿದೆ.
ಈ ನಿಟ್ಟಿನಲ್ಲಿ ಸಭೆಯಲ್ಲಿ ವ್ಯಕ್ತವಾಗಿರುವ ಬೇಡಿಕೆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯೋಜನೆ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಹಾಗೂ ಆ ಭಾಗದ ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಯೋಜನೆಗೆ ಭೂಸ್ವಾಧೀನವಾಗುವ ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇರಿದಂತೆ ಇತರೆ ಕಡೆ ರೈತರಿಗೆ ನೋಟೀಸ್ ನೀಡಿರುವುದಿಲ್ಲ.
ನಿಯಮಾನುಸಾರ ರೈತರಿಗೆ ಭೂ-ಪರಿಹಾರ ನೀಡುವುದು ತಡವಾದರೂ ಸಹ ಮೊದಲು ನೋಟೀಸ್ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಾಸಕ ಡಾ: ಜಿ. ಪರಮೇಶ್ವರ್ ಮಾತನಾಡಿ ಬೈರಗೊಂಡ್ಲು ಜಲಾಶಯವು ದೊಡ್ಡಬಳ್ಳಾಪುರ ಹಾಗೂ ಕೊರಟಗೆರೆ ತಾಲ್ಲೂಕಿನ ಪ್ರದೇಶಗಳಲ್ಲಿ ನಿರ್ಮಾಣವಾಗುತ್ತಿದ್ದು, ಪಕ್ಕದ ತಾಲ್ಲೂಕಿನ ರೈತರಿಗೆ ನೀಡುವ ಪರಿಹಾರ ಧನದ ಪ್ರಮಾಣದಲ್ಲಿಯೇ ನಮ್ಮ ತಾಲ್ಲೂಕಿನ ರೈತರಿಗೂ ಪರಿಹಾರವನ್ನು ಸರ್ಕಾರ ನೀಡಬೇಕು.
ಕಳೆದ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಎತ್ತಿನ ಹೊಳೆ ಯೋಜನೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಭೂಪರಿಹಾರ ದರವನ್ನು ನಿಗಧಿಪಡಿಸುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಸೂಕ್ತ ಪ್ರಸ್ತಾವನೆ ಪಡೆದು ಕ್ಯಾಬಿನೆಟ್‍ನಲ್ಲಿ ಪ್ರಸ್ತಾಪ ಮಾಡಬೇಕೆಂದು ತೀರ್ಮಾನಿಸಲಾಗಿತ್ತು.
ಅದರಂತೆ ಜಲಾಶಯ ನಿರ್ಮಾಣದಿಂದ ಈ ಭಾಗಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಜನಪ್ರತಿನಿಧಿಗಳೆಲ್ಲರು ರೈತರ ಮನವೊಲಿಸಿದ್ದಾಗಿದೆ. ಜಲಾಶಯದ ಕಾಮಗಾರಿಗಾಗಿ ಬೈರಗೊಂಡ್ಲು ಗ್ರಾಮ ಸುತ್ತಮುತ್ತಲಿನ 5 ಹಳ್ಳಿಗಳು ಮುಳುಗಡೆಯಾಗಿ ಸ್ಥಳಾಂತರಗೊಳ್ಳಲಿದೆ.
ಹೆಚ್ಚುವರಿಯಾಗಿ 350 ಕೋಟಿ ರೂ.ಗಳ ಭೂ ಪರಿಹಾರವನ್ನು ನಮ್ಮ ಭಾಗದ ರೈತರಿಗೆ ದೊರೆಯಬೇಕು. ಪ್ರತಿ ಎಕರೆಗೆ 32 ಲಕ್ಷ ರೂ. ಭೂ ಪರಿಹಾರ ಒದಗಿಸುವ ಕುರಿತು ಮುಖ್ಯಮಂತ್ರಿಗಳ ಮನವೊಲಿಸಬೇಕೆಂದು ಅವರು ಸಚಿವರಿಗೆ ಮನವಿ ಮಾಡಿದರು.
ಬೈರಗೊಂಡ್ಲು ಸುತ್ತಮುತ್ತಲಿನ ಗ್ರಾಮಗಳ ರಸ್ತೆ, ಚರಂಡಿ, ಮತ್ತಿತರ ಮೂಲಭೂತ ಸೌಕರ್ಯದ ಕಾಮಗಾರಿಗಳಿಗಾಗಿ 150 ಕೋಟಿ ರೂ.ಗಳ ಮಂಜೂರಾತಿ ನೀಡಲಾಗಿತ್ತು.ಈ ಪೈಕಿ ಮೊದಲನೇ ಹಂತದಲ್ಲಿ 50 ಕೋಟಿ ರೂ. ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಇನ್ನುಳಿದ 100 ಕೋಟಿ ರೂ.ಗಳನ್ನು ತಡೆಹಿಡಿಯದೆ ಬಿಡುಗಡೆ ಮಾಡಿ ಆ ಭಾಗದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯನ್ನು ಮುಂದುವರೆಸಬೇಕು. ಕೊರಟಗೆರೆ ತಾಲ್ಲೂಕಿನಲ್ಲಿ ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳುವಾಗ ಜನಪ್ರತಿನಿಧಿಗಳ ಗಮನಕ್ಕೆ ತರದೆ ಟೆಂಡರ್‍ದಾರರು ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ಅವುಗಳ ಆರಂಭದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು ಕಾಮಗಾರಿ ಆರಂಭಿಸಿದರೆ ಸೂಕ್ತ ಎಂದು ಅವರು ತಿಳಿಸಿದರು.
Comment here