ಅಂತರಾಳ

ಓ ಮೋಡಣ್ಣಾ, ನಾನೂ ಬರುವೆನು ಕೈ ನೀಡಣ್ಣಾ..’

ಜಿ ಎನ್ ಮೋಹನ್


‘ಇನ್ನೇನು ಹನಿಯೊಡೆದು ನೆಲಕ್ಕುರುಳಿಯೇ ಸೈ ‘ ಎನ್ನುವಂತಿದ್ದ ಆಕಾಶ ನೋಡಿ ನನ್ನ ಎದೆ ಢವಗುಟ್ಟತೊಡಗಿತು.

ಆಗಲೇ ಸೂರ್ಯ ಇನ್ನೇನು ನಾನು ಮುಳುಗಿಯೇ ಸಿದ್ಧ ಎಂದು ವರಾತ ಆರಂಭಿಸಿದ್ದ. ನನ್ನ ಕೈಲ್ಲಿದ್ದ ಕ್ಯಾಮರಾ ನನ್ನನ್ನು ಸುಮ್ಮನೆ ಕೂರಲುಬಿಟ್ಟಿರಲಿಲ್ಲ.

ಎಲ್ಲರೂ ‘ಗುಮ್ಮಟನಗರಿ’ಯಲ್ಲಿ ಗೋಳಗುಮ್ಮಟ ನೋಡಲು ಹೆಜ್ಜೆ ಹಾಕುತ್ತಿದ್ದರೆ ನಾನು ಅವರ ವಿರುದ್ಧ ದಿಕ್ಕು ಹಿಡಿದಿದ್ದೆ.

ವಿಜಾಪುರದ ಹೊರ ವಲಯದಲ್ಲಿ ನಿರ್ಮಿತಿ ಕೇಂದ್ರ ಮಳೆ ನೀರು ಸಂಗ್ರಹಣೆಯ ಬಗ್ಗೆಯೇ ಒಂದು ಪಾರ್ಕ್ ರೂಪಿಸಿತ್ತು.

ವಿಶಾಲ ಅಂಗಳದಲ್ಲಿ ಎತ್ತ ಕಣ್ಣು ಹಾಯಿಸಿದರೂ ಮಳೆ ನೀರನ್ನು ಹೇಗೆಲ್ಲಾ ಸಂಗ್ರಹಿಸಬಹುದು ಎಂದು ಹೇಳುವ ಶಿಲ್ಪಗಳು.

ಆಗ ನನಗೆ ಕಂಡದ್ದು ಒಂದು ದೊಡ್ಡ ಕೊಡಪಾನವನ್ನು ನೇರವಾಗಿ ಆಕಾಶಕ್ಕೆ ಎತ್ತಿ ಹಿಡಿದ ಆ ಮೂರು ಜನರ ಶಿಲ್ಪ! ಆಗಸದಲ್ಲಿ ಆಗಲೇ ಮಳೆ ಹೊತ್ತ ಮೋಡಗಳು ಆ ಕೊಡಪಾನದೊಳಗೇ ಜಾರಿ ಬೀಳುವಂತೆ ಚಿನ್ನಾಟವಾಡತೊಡಗಿತ್ತು.

ಅವರ ಚಿತ್ರ ತೆಗೆಯಬೇಕೆಂದರೆ ನಾನು ನೇರಾನೇರ ನೆಲದ ಮೇಲೆಯೇ ಮಲಗಬೇಕು. ನಾನು ಹಾಗೆ ಮಲಗಿ ಕ್ಯಾಮರಾ ಕ್ಲಿಕ್ಲಿಸಿದ್ದೇ ತಡ 94ದೇಶಗಳ 30 ಸಾವಿರ ಮಂದಿ ಇದು stratocumulus ಎಂದು ಕೂಗಿ ಹೇಳಿದರು.

ಕುಪ್ಪಳ್ಳಿಯಲ್ಲಿದ್ದೆ.

ಕುವೆಂಪು ಅವರು ಚಿರ ನಿದ್ರೆಯಲ್ಲಿರುವ ತಾಣವೇ ಹಾಗಿದೆ. ಎಂಥಹವರನ್ನೂ ಕೈಬೀಸಿ ಕರೆಯುತ್ತದೆ, ನಿಸರ್ಗಕ್ಕೆ ಚೌಕಟ್ಟು ಹಾಕುವಂತೆ ಕೆ ಟಿ ಶಿವಪ್ರಸಾದ್ ಬೃಹತ್ ಶಿಲೆಗಳವಿನ್ಯಾಸ ರೂಪಿಸಿದ್ದರು.

ಅವನ್ನು ಹೇಗಾದರೂ ವಿಶಿಷ್ಠವಾಗಿಸಬೇಕಲ್ಲಾ ಎಂದು ನಾನು ಆ ಕಲ್ಲಿನ ಶಿಲ್ಪವನ್ನು ನೀಲಾಕಾಶದ ಹಿನ್ನೆಲೆ ಬರುವಂತೆ ಹೊಂದಿಸಿಕೊಂಡೆ. ಕ್ಲಿಕ್… ಅದೇ 94 ದೇಶಗಳ 30 ಸಾವಿರ ಮಂದಿ ಇದನ್ನು cumulus ಎಂದು ಬಣ್ಣಿಸಿ ಹೇಳಿದರು.

ಯಾವುದೇ ಒಂದು ಪೋಟೋ ನೋಡಿದರೆ ಸಾಕು ಇದರ ಫ್ರೇಮ್ ಹೇಗಿದೆ, ಕ್ಯಾಮೆರಾ ಕೋನ ಹೇಗಿರಬೇಕಾಗಿತ್ತು, ಅಪರ್ಚರ್, ಎಕ್ಸ್ಪೋಷರ್ ಹೀಗೆ ಮಾತ್ರ ಪಾಠ ಕೇಳಿ ಗೊತ್ತಿದ್ದ ನಾನು ಇದೇನಪ್ಪಾ ಎಂದು ದಂಗಾಗಿ ಹೋಗಿದ್ದೆ.

ಆದರೆ ಅಷ್ಟೂ ದೇಶಗಳ, ಅಷ್ಟೂ ಜನರು ಮಾತನಾಡುತ್ತಿದ್ದುದು ನನ್ನ ಪೋಟೋಗಳ ಬಗ್ಗೆ ಅಲ್ಲ, ನನ್ನ ಫೋಟೋಗಳ ಸೌಂದರ್ಯದ ಬಗ್ಗೆ ಅಲ್ಲ, ಪೋಟೋದಲ್ಲಿ ಏನು ಸೆರೆ ಹಿಡಿಯಲು ಯತ್ನಿಸಿದ್ದೆ ಎನ್ನುವುದರ ಬಗ್ಗೆ ಅಲ್ಲ, ಆದರೆ ಆ ಪೋಟೋದಲ್ಲಿ ಕಾಣಿಸುತ್ತಿದ್ದ ಮೋಡಗಳ ಬಗ್ಗೆ…

ಇವರೇ ‘ಮೋಡಾಡಿಗಳು’

ಎಲ್ಲಿ ಮೋಡ ಕಂಡರೂ ಬಿಟ್ಟ ಕಣ್ಣು ಬಿಟ್ಟಂತೆ ನಿಲ್ಲುವವರು. ಮೋಡಕ್ಕೆ ಕ್ಯಾಮರಾ ಗುರಿ ಇಡುವವರು. ಯಾವ ಮೋಡ, ಎಷ್ಟು ದಪ್ಪ, ಯಾವ ಯಾವ ದೇಶದಲ್ಲಿ ಈ ಮೋಡ ಕಾಣುತ್ತದೆ ಎಂದು ಲೆಕ್ಕ ಹಾಕುವವರು. ಮೋಡದಲ್ಲಿರುವ ನೀರ ಹನಿಗಳೆಷ್ಟು ಎಂದು ಕರಾರುವಕ್ಕಾಗಿ ಹೇಳಬಲ್ಲವರು. ಪ್ರತೀದಿನ ಆಕಾಶಕ್ಕೇ ಕಣ್ಣು ನೆಟ್ಟು ಕೂರುವವರು.

ಆರ್ಥಾತ್ ಮೋಡದ ಪ್ರೇಮಿಗಳು.

ಇಂಗ್ಲೆಂಡ್ ನ ಸಾಮರ್ ಸೆಟ್ ನಲ್ಲಿರುವ ಗಾವಿನ್ ಪ್ರೆಟೋರ್ ಪಿನ್ನೆಗೆ ಒಂದು ದಿನ ಮೋಡದ ಬಗ್ಗೆ ಉಪನ್ಯಾಸ ನೀಡುವಂತೆ ಸಾಹಿತ್ಯ ಸಮ್ಮೇಳನವೊಂದರ ಸಂಘಟಕರಿಂದ ಆಹ್ವಾನ ಬಂತು.

ನಮ್ಮ ಕಾಳಿದಾಸನ ಮೇಘದೂತ, ಕವಿಗಳ ಮೋಡದ ನಂಟುವಿನಂತಹ ವಿಷಯಗಳು ಇಂಗ್ಲಿಶ್ ಸಾಹಿತ್ಯದಲ್ಲಿ ಏನೇನಿದೆಯೋ ಅದನ್ನೆಲ್ಲಾ ಹುಡುಕಿ ಗಾವಿನ್ ಮಾತನಾಡಬೇಕಿತ್ತು.

ಮೋಡದ ಬಗ್ಗೆ ಭಾಷಣಾನಾ ಅಂತ ಬಿಟ್ಟ ಕಣ್ಣು ಬಿಟ್ಟ ಗಾವಿನ್ ಭಾಷಣ ತಯಾರಿಗೆ ಕೂತರು. ಅರೆ! ಎಷ್ಟು ತಿಳಿದರೂ ಮುಗಿಯದ ವಿಷಯ ಮೋಡದಲ್ಲಿದೆ ಎಂದು ಅವರಿಗೆ ಗೊತ್ತಾಗಿ ಹೋಯಿತು.

ಸರಿ ಮೋಡಕ್ಕೆ ಇವರು ಅಂಟಿಕೊಂಡರೋ ಇಲ್ಲಾ ಮೋಡವೇ ಇವರನ್ನು ಆಂಟಿಸಿಕೊಂಡಿತೋ ಅಂತೂ ಅಂದಿನಿಂದ ಗ್ರಾವಿನ್ ಗೆ ಮೋಡದ್ದೇ ಗುಂಗು. ಹಾಗಾಗಿ Cloud spotters guide ಬರೆದರು.

ಒಂದು ದಿನ ತನ್ನಂತೆ ಮೋಡದ ಹುಚ್ಚರು ಇನ್ನೂ ಸಾಕಷ್ಟಿರಬಹುದಲ್ಲಾ ಎನ್ನುವ ಯೋಚನೆ ಬಂದದ್ದೇ ತಡ Cloud Lovers, Unite! ಎನ್ನುತ್ತಾ ಕ್ಲೌಡ್ ಆಪ್ರಿಶಿಯೇಷನ್ ಸೊಸೈಟಿ ರೂಪಿಸಿಯೇಬಿಟ್ಟರು. (cloudappreciationsociety.org).

‘ಓ ಮೋಡಣ್ಣಾ, ಓ ಮೋಡಣ್ಣಾ ನಾನೂ ಬರುವೆನು ಕೈ ನೀಡಣ್ಣಾ..’ ಎನ್ನುತ್ತಾ ಒಬ್ಬರ ಹಿಂದೆ ಒಬ್ಬರು ಅಮೇರಿಕಾದಿಂದ ಜಪಾನ್ ವರೆಗೆ ಫಿಜಿ, ಭೂತಾನ್, ಕೆನ್ಯ, ವಿಯಟ್ನಾಂ ಹೀಗೆ 94ದೇಶಗಳಿಂದ ಮೋಡದ ಹುಚ್ಚರು ಮೋಡದ ಈ ತಾಣವನ್ನು ಸೇರಿಯೇಬಿಟ್ಟರು.

ವಿಜಾಪುರ ಹಾಗೂ ಕುಪ್ಪಳ್ಳಿಯ ನನ್ನ ಪೋಟೋ ಈ ತಾಣ ತಲುಪಿದ್ದೇ ತಡ ಕೊಡಪಾನದ ಮೇಲೆ ತೂಗಾಡುತ್ತಿದ್ದ ಮಳೆ ಹೊತ್ತ ಆ ಭಾರೀ ಕಪ್ಪು ಮೋಡಗಳು ಅವರ ಕಣ್ಣು ಸೆಳೆಯಿತು.

ಕುಪ್ಪಳ್ಳಿಯ ನೆತ್ತಿಯಲ್ಲಿ ಮಟ ಮಟ ಮಧ್ಯಾಹ್ನ ತೂಗುತ್ತಿದ್ದ ಹಿಂಜಿದ ಹರಳೆಯ ಆ ಬಿಳಿ ಮೋಡ ಸಹಾ ಈ ಕೂಟದ ಚರ್ಚೆಗೆ ವಸ್ತುವಾಯಿತು.

ಕೊನೆಗೆ ಈ ಮೋಡ stratocumulus, cumulus ಮೋಡಗಳು ಎಂದು ಗುರುತಿಸಿ ಹೇಳಿದ್ದೇ ನಾನು ಗೂಗಲ್ ನ ಮೊರೆ ಹೊಕ್ಕೆ, ಮೋಡದ ಪುಸ್ತಕಗಳನ್ನು ಕೊಂಡೆ.

ಆಗಲೇ ನನಗೆ ಗೊತ್ತಾಗುತ್ತಾ ಹೋದದ್ದು ಮೋಡದ ಗಾತ್ರ, ಅದು ಇರುವ ಎತ್ತರದ ಮೇಲೆ ಮೋಡಗಳನ್ನು ವರ್ಗೀಕರಿಸುತ್ತಾ ಹೋಗುತ್ತಾರೆ.

ಯಾವುದೇ ಮೋಡವಾದರೂ ಅದು ವಿಶ್ವ ಸಂಸ್ಥೆಯ ವಿಶ್ವ ಪವನಶಾಸ್ತ್ರ ವಿಭಾಗದ ಮನ್ನಣೆ ಪಡೆದಿರಬೆಕು. ಈ ಮೋಡಗಳಿಗೆಲ್ಲಾ ಲ್ಯಾಟಿನ್ ಹೆಸರು ನೀಡಿದ್ದಾರೆ.

ಹೀಗೆ ಮೋಡಕ್ಕೂ ಹೆಸರು ಕೊಡಲು ಚಾಲನೆ ನೀಡಿದ್ದು ಇಂಗ್ಲೆಂಡ್ ನಲ್ಲಿದ್ದ ಒಬ್ಬ ಔಷಧ ಶಾಸ್ತ್ರಜ್ಞ. 19ನೆಯ ಶತಮಾನದಲ್ಲಿ ಮೋಡಗಳ ನಾಮಕರಣ ಆರಂಭವಾಯಿತು ಅಂತ.

ನೋಡಲು ಒಂದು ಅರಳೆ ಮೂಟೆಯಂತೆ ಕಾಣುವ ಮೋಡ 80ಆನೆಯಷ್ಟು ತೂಕವಿರುತ್ತದೆ. ಗುಡುಗು ಮಿಂಚು ಹೊತ್ತು ತರುವ ಮೋಡಗಳಂತೂ ಎವರೆಸ್ಟ್ ಶಿಖರಕ್ಕಿಂತ ಎರಡು ಪಟ್ಟು ಎತ್ತರ ಇರುತ್ತದೆ.

‘ಆಕಾಶ ನೋಡೋಕೆ ನೂಕುನುಗ್ಗಲೇ…’ ಎನ್ನುವ ಮಾತನ್ನಂತೂ ಕ್ಲೌಡ್ ಅಪ್ರಿಶಿಯೇಷನ್ ಸೊಸೈಟಿ ಸುಳ್ಳು ಮಾಡಿ ಹಾಕಿದೆ. ಜಗತ್ತಿನಾದ್ಯಂತ ಇಂದು ಸಾವಿರಾರು ಜನ ಬಿಟ್ಟ ಕಣ್ಣು ಬಿಟ್ಟುಕೊಂತ ಆ ಆಕಾಶ ನೋಡುತ್ತಿದ್ದಾರೆ.

ಕ್ಯಾಮರಾ ಹೊತ್ತು ತಿರುಗುತ್ತಾ, ಸಿಕ್ಕ ಸಿಕ್ಕ ಮೋಡಗಳನ್ನು ಸೆರೆಹಿಡಿಯುವ, ಇಂತಹ ಮೋಡಗಳೇ ಬೇಕು ಎಂದು ಕಾದು ಕೂತು ಕಾಡಲ್ಲಿ ಹುಲಿ ಚಿತ್ರ ತೆಗೆಯುವಂತೆ ದಿನಗಟ್ಟಲೆ ತಪಸ್ಸು ಮಾಡಿ ಅವರೂಪದ ಪೋಟೋ ಕ್ಲಿಕ್ಕಿಸುವ ಛಾಯಾಗ್ರಾಹಕರು ಇಲ್ಲಿದ್ದಾರೆ.

ಮೋಡ ಎನ್ನುವುದೇ ಒಂದು ಆರ್ಟ್ ಗ್ಯಾಲರಿ. ದಿನಕ್ಕೊಂದು ಕಲಾಕೃತಿ ಆಗಸದಲ್ಲಿ ಮೂಡುತ್ತಾ ಹೋಗುತ್ತದೆ. ಆ ಬಣ್ಣದ ಮಿಶ್ರಣ, ಅಷ್ಟಗಲದ ಕ್ಯಾನ್ವಾಸ್ ಇನ್ನೆಲ್ಲಿ ನೋಡಲು ಸಾಧ್ಯ ಹೇಳಿ ಎನ್ನುವ ಕಲಾವಿದರು ಇಲ್ಲಿದ್ದಾರೆ.

ಮೋಡವನ್ನು ಶಾಸ್ತ್ರೋಕ್ತವಾಗಿ ವಿವರಿಸುವ ಖಗೋಳಶಾಸ್ತ್ರಜ್ಞರಿದ್ದಾರೆ. ಮೋಡಗಳ ಇತಿಹಾಸದ ಬೆನ್ನತ್ತಿರುವ ಇತಿಹಾಸಕಾರರಿದ್ದಾರೆ.

ಮೋಡಗಳಿಗೆ ಮಾರು ಹೋಗಿ ಅದರ ಬಗ್ಗೆ ರಾಗಗಳನ್ನು ಸೃಷ್ಟಿಸಿರುವ ಸಂಗೀತಗಾರರಿದ್ದಾರೆ. ಪ್ರತೀ ದಿನ ‘ಮೋಡ ಕವಿದ ವಾತಾವರಣ’ ಎಂದು ನುಡಿಯಬೇಕಾದ ಟಿವಿ ಹವಾಮಾನ ಸುದ್ದಿ ವಾಚಕರಿದ್ದಾರೆ. ಮೋಡದ ಬಗ್ಗೆ ಕವಿತೆಗಳನ್ನು ಬರೆದವರ ಸಂಖ್ಯೆಯಂತೂ ಇನ್ನಿಲ್ಲದಷ್ಟು…

ಮೋಡ ಎಂಬ ಹುಚ್ಚು ಜಗತ್ತಿನಾದ್ಯಂತ ಹರಡಿದೆ. 96 ವರ್ಷದ ಅಜ್ಜನಿಂದ ಹಿಡಿದು, ಬೊಗಳುವ ಕೆಲಸವನ್ನೂ ಮರೆತು ಸದಾ ಆಕಾಶ ನೋಡುತ್ತಾ ಕೂರುವ ದಿಬ್ಬ ಎನ್ನುವ ನಾಯಿಯವರೆಗೆ, ಅರ್ಥಶಾಸ್ತ್ರಜ್ಞ ಹುದ್ದೆಗೆ ರಾಜಿನಾಮೆ ಬಿಸಾಕಿ ಮೋಡದ ಪೇಂಟಿಂಗ್ ಮಾಡುತ್ತಾ ಇರುವ ಜೋರ್ಜ್ ಫಿನ್ ವರೆಗೆ ಈ ಹುಚ್ಚು ತಗುಲಿಹೋಗಿದೆ.

ಮಕ್ಕಳಿಗೆ ಬಾಲ್ಯದಿಂದಲೇ ಮೋಡದ ಹುಚ್ಚು ಹತ್ತಿಸಲು ಶಾಲೆಯಲ್ಲಿ ಮೋಡದ ಪಾಠ ಮಾಡುವ ಪ್ರಯತ್ನ ಕ್ಲಿಕ್ ಆಗಿದೆ. ಊಟದ ಸಮಯದಲ್ಲಿ ಮೋಡದ ಕ್ಲಾಸ್, ಕ್ರಾಫ್ಟ್ ಸಮಯದಲ್ಲಿ ಮೋಡದ ಪೇಪರ್ ಕಟಿಂಗ್, ಶಾಲೆಯ ಮೂಲೆಯಲ್ಲಿ ಮೋಡದ ಕಾರ್ನರ್, ಮೋಡದ ಬಗ್ಗೆ ಕ್ವಿಜ್..

ಹೀಗೆ ಎಲ್ಲೆಲ್ಲೂ ಮೋಡ, ಮೋಡ. ಅದಿರಲಿ ಮೋಡದ ಡಿಸೈನ್ ಹೊತ್ತ ಪ್ಯಾಂಟ್, ಟಿ ಶರ್ಟ್ ಗಳು ಸಹಾ ಮಾರುಕಟ್ಟೆಗೆ ಬಂದಿದೆ.

ಮೋಡಕ್ಕೂ ಒಂದು ಮರ್ಯಾದೆ ತಂದು ಕೊಡಬೇಕು ಎನ್ನುವುದು ಈ ಮೋಡಣ್ಣದಿರ ಹೋರಾಟ.

ಮೋಡದ ಬಗ್ಗೆ ವಿಶ್ವಸಂಸ್ಥೆಗೆ ತಾತ್ಸಾರ ಎಂದು ಮೋಡ ಪ್ರೇಮಿಗಳು ಗುಡುಗಿದ್ದಾರೆ. ಮೋಡದ ಅಧ್ಯಯನ, ದಾಖಲೀಕರಣವನ್ನು ವಿಶ್ವ ಪವನಶಾಸ್ತ್ರ ಸಂಸ್ಥೆ ಸರಿಯಾಗಿ ಮಾಡುತ್ತಿಲ್ಲ ಎನ್ನುವ ಮೋಡಣ್ಣರು ಮೋಡದ ಅಟ್ಲಾಸ್ ರೂಪಿಸಲು ಕಾರಣರಾಗಿದ್ದಾರೆ. ಅಷ್ಟೇ ಅಲ್ಲ ಇವರೆಲ್ಲಾ ಸೇರಿ ಹೊಸ ಮೋಡವನ್ನೂ ಪತ್ತೆ ಹಚ್ಚಿದ್ದಾರೆ.

ಈ ಮೋಡಣ್ಣಂದಿರ ಲೆಕ್ಕದಲ್ಲಿ ನಮ್ಮ ರವೀಂದ್ರನಾಥ ಟ್ಯಾಗೂರರೂ ಸೇರಿ ಹೋಗಿದ್ದಾರೆ.

‘ನನ್ನ ಬದುಕಿನಲ್ಲಿ ಮೋಡಗಳು ತೇಲಿ ಬರುತ್ತಿವೆ. ಅವು ಬರುತ್ತಿರುವುದು ಮಳೆ ಸುರಿಸಲೋ ಇಲ್ಲಾ ಮಿಂಚು ಗುಡುಗು ಉಂಟು ಮಾಡಲು ಅಲ್ಲ. ಬದಲಿಗೆ ಅಸ್ತಮಿಸುತ್ತಿರುವ ನನ್ನ ಬಾನಂಗಳಕ್ಕೆ ಬಣ್ಣ ನೀಡಲು ಬರುತ್ತಿದೆ’ ಅಂದದ್ದೇ ತಡ ಟ್ಯಾಗೂರ್ ಮೋಡಣ್ಣರ ಲಿಸ್ಟ್ ನಲ್ಲಿ ದಾಖಲಾಗಿ ಹೋಗಿದ್ದಾರೆ.

ಮಡಿಕೇರಿಯ ರಾಜಾ ಸೀಟ್ ನಲ್ಲಿ ಅಡ್ಡಾಡಬೇಕಾಗಿ ಬಂತು.

ಕಾಲ ಕೆಳಗೆ ಮೋಡಗಳು ಹಾರಿ ಹೋಗುತ್ತಿದ್ದವು. ‘ಹಿಂಜಿದ ಅರಳೆಯು ಗಾಳಿಗೆ ಹಾರಿ ಮೋಡಗಳಾಗಿಹವೆ..?’ಎಂದು ಹಾಡಿಕೊಂಡೆ.

ಹಾಗೆ ಮೋಡದ ಬಗ್ಗೆ ಹಾಡಿಕೊಂಡದ್ದು ಕ್ಲೌಡ್ ಅಪ್ರಿಶಿಯೇಷನ್ ಸೊಸೈಟಿಗೆ ಈ ವೇಳೆಗೆ ಕೇಳಿಸಿರಲೇಬೇಕು.. ಖಂಡಿತಾ.

Comment here