ಸಾಹಿತ್ಯ ಸಂವಾದ

ಅಜ್ಞಾತಿಗಳ ಆತ್ಮ ಚರಿತ್ರೆ

ಡಾ.ಶ್ವೇತಾರಾಣಿ ಎಚ್


ಕಾದಂಬರಿ ಭಾಗ-2

( ಇಲ್ಲಿಯವರಿಗೆ: ಕರಣಿಕರ ಮನೆಯಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕರಣಿಕರ ಮನೆಯಲ್ಲಿ ಏನೊ ನಡೆಯುತ್ತಿದೆ ಎಂದು ಹಲವಾರು ಮಂದಿ ಹಲವು ತರ ಮಾತನಾಡಿಕೊಂಡರು. ಕರಣಿಕರಾದರೊ ಮನೆಯಲ್ಲೂ ಮೌನ ವಹಿಸಿದ್ದರು. ).

ತೋಟವನ್ನು ಎರಡು ಮೂರು ಸುತ್ತು ಹಾಕಿಕೊಂಡು ಬಂದರೂ ಕರಣಿಕರಿಗೆ ಮನಸ್ಸು ಸಮಾಧಾನಗೊಳ್ಳಲಿಲ್ಲ. ಬೇಲಿಯ ಮೇಲೊಂದು ಹಾವುರಾಣಿ ನೋಡಿದರು. ಹಾವುರಾಣಿ ಕಂಡಾಗ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು. ಏನೋ ಮನಸ್ಸಿಗೆ ತೋಚಿದಂತಾಗಿ ಬಿರಬಿರನೇ ಮನೆಯ ಕಡೆಗೆ ಹೆಜ್ಜೆ ಹಾಕಿದರು.

ಹೊತ್ತು ಮುಳುಗಿದ ಕಾರಣ ಮನೆದೇವರು ನರಸಿಂಹಸ್ವಾಮಿ ದೇವರ ವಿಗ್ರಹದ ಮುಂದೆ ದೀಪ ಹಚ್ಚಿ ಊಟಕ್ಕೆ ಕುಳಿತರು. ಮನೆಯ ಎಲ್ಲ ಗಂಡಾಳುಗಳು ಊಟಕ್ಕೆ ಕುಳಿತಿದ್ದರು, ಎಲ್ಲರ ಮುಖವನ್ನೊಮ್ಮೆ ನೋಡಿದರು, ಕೆಲವರು ಏನೂ ಗೊತ್ತೇ ಇಲ್ಲದಂತೆ ಊಟ ಮಾಡುತ್ತಿದ್ದರೆ, ಬೊಮ್ಮೇಗೌಡನ ಕಣ್ಣಲ್ಲಿ ಮಾತ್ರ ರೋಷ ಉಕ್ಕುತ್ತಿರುವುದನ್ನು, ಅನ್ಯಮನಸ್ಕನಂತೆ ಊಟ ಮಾಡುತ್ತಿರುವುದನ್ನು ಕಂಡರು. ಬೇರೆಯವರು ತಮ್ಮಲ್ಲಿರುವ ರೋಷವನ್ನು ಕರಣಿಕರ ಮುಂದೆ ತೋರಗೊಡುತ್ತಿಲ್ಲ ಎಂಬುದನ್ನು ಅರಿಯದಷ್ಟು ಕರಣಿಕ ನರಸೇಗೌಡರು ದಡ್ಡರೇನು ಆಗಿರಲಿಲ್ಲ. ಆದರೆ, ಮನೆಯ ಹೆಂಗಸೆರೆದರು ಏನನ್ನು ಅವರು ಮಾತನಾಡುತ್ತಿರಲಿಲ್ಲ. ಹೆಂಗಸರ ಬಳಿ ಆಡಿದ ಮಾತು ಹೆಚ್ಚು ದಿನ ಗುಟ್ಟಾಗಿ ಉಳಿಯುವುದಿಲ್ಲ ಎಂಬುದು ಅವರ ಗಟ್ಟಿ ನಿಲುವಾಗಿತ್ತು. ಆದರೆ ಅಮ್ಮನ ವಿಷಯ ಬಂದಾಗ ಮಾತ್ರ ಅವರು ಇದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದರು. ಅಮ್ಮನ ಬಳಿ ಏನೇ ಹೇಳಿದರೂ ಗುಟ್ಟು ರಟ್ಟಾಗುವುದಿಲ್ಲ ಎಂಬುದು ಒಂದಾದರೆ, ತಪ್ಪಾದರೆ ತಿದ್ದುತ್ತಾಳೆ ಎಂಬ ನಂಬಿಕೆಯೂ ಕಾರಣವಾಗಿತ್ತು. ಅಪ್ಪ ಹೋದ ಮೇಲೆ ಎಲ್ಲವೂ ಅಮ್ಮನಲ್ಲಿ ಹೇಳಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ರಾತ್ರಿ ಅಮ್ಮನಿಗೆ ಹೇಳಿಯೇ ತೀರಬೇಕು ಎಂದು ಮನಸ್ಸಿನಲ್ಲೇ ಲೆಕ್ಕಹಾಕಿಕೊಂಡು ಊಟ ಮುಗಿಸಿ ಎದ್ದರು.

ಅಜ್ಞಾತಿಗಳ ಆತ್ಮಚರಿತ್ರೆ ಭಾಗ ೧ ಓದಲು ಇಲ್ಲಿ ಕ್ಲಿಕ್ ಮಾಡಿ

ಎರಡು-ಮೂರು ದಿನಗಳೇ ಕಳೆದಿರಬೇಕು. ಅದೇ ತೊಳಲಾಟದಲ್ಲಿದ್ದ ಕರಣಿಕರು ಒಂದು ಭಾರೀ ಉಪಾಯವನ್ನೇ ಮಾಡಿದರು. ಯಾರಿಗೂ ಅನುಮಾನ ಬಾರದಿರುವಂತೆ ಮುತುವರ್ಜಿ ವಹಿಸಿದ್ದರು. ಮನೆಯ ಕೆಲವರಿಗೂ ಅದರ ಗುಟ್ಟು ಬಿಟ್ಟುಕೊಡಲಿಲ್ಲ. ಹಿಂದಲ ಕೋಣೆಯಲ್ಲಿ ಒಂದಿಬ್ಬರು ಮನೆಯ ಗಂಡಾಳುಗಳನ್ನೇ ಕರೆದುಕೊಂಡು ಒಂದೇ ಸಮನೇ ಎರಡು ಮೂರು ದಿನ ಬಾಗಿಲು ಹಾಕಿಕೊಂಡು 20 ಆಳುದ್ದದ್ದ ಗುಂಡಿ ತೆಗೆದರು., ಮನೆ ಎಂದರೇ ಅದೇನು ಸುಮ್ಮನೇ ಮನೆಯೇ ಹಿಂದಲಕೋಣೆ ಎಂದರೆ 200 ಅಡಿ ಉದ್ದಕ್ಕೂ ಅಗಲಕ್ಕೂ ಇದ್ದ ಕೋಣೆ. ಬರೀ ಮಡಕೆ, ದೊಡ್ಡದೊಡ್ಡ ವಾಡೆಗಳನ್ನು ಜೋಡಿಸಿಟ್ಟದ್ದರು, ಮುನ್ನೂರಕ್ಕೂ ಹೆಚ್ಚಿದ್ದವು ವಾಡೆಗಳು, ನೂರಾರು ಮೂಟೆ ರಾಗಿ, ಭತ್ತವನ್ನು ತುಂಬಿ ತುಂಬಿ ಮಡಗಿದ್ದರು. 50 ಗಡಿಗೆಗಳ ಸಾಲಿನಲ್ಲಿ ಒಂದು ಸಾಲು ಪೂರಾ ತುಪ್ಪದ ಗಡಿಗೆಗಳೇ ಆಗಿದ್ದವು. ಕೆಲವು ದೊಡ್ಡ ಮಡಿಕೆಗಳ ತುಂಬಾ ಮೊಟ್ಟೆಗಳೇ ತುಂಬಿ ಇಡಲಾಗಿತ್ತು.

ಹಿಂದಲ ಮನೆ ಎಂದರೆ ಹೆಂಗಸರ ಕೋಣೆ ಎಂದೇ ಅರ್ಥ. ಅಲ್ಲಿ ಹೆಂಗಸರ ತಿಂಡಿ ತಿನುಸುಗಳದೇ ಸಾಮ್ರಾಜ್ಯ. ಆದರೆ ಈ ಹಿಂದಲಕೋಣೆಗೆ ಮಾತ್ರ ಎಲ್ಲ ಹೆಂಗಸರಿಗೂ ಪ್ರವೇಶ ಇರಲಿಲ್ಲ. ಕಿರಿದಾಗಿ ಇಟ್ಟಿದ್ದ ನಾಲ್ಕೈದು ಕಿಟಕಿಗಳಲ್ಲಿ ಬರುವ ಸಣ್ಣಬೆಳಕು ಬಿಟ್ಟರೆ ಸ್ವಲ್ಪ ಮಬ್ಬುಗತ್ತಲೆಯ ಸಾಮ್ರಾಜ್ಯ ಅದು. ಸಣ್ಣ ಕೂಸುಗಳು, ಮಕ್ಕಳು ಅತ್ತರೇ ಹಿಂದಲ ಮನೆಯ ದೆವ್ವ ಕರೆತ್ತೀವಿ ಎಂದು ಹೆದರಿಸಿ, ಹೆದರಿಸಿ ಸ್ವಲ್ಪ ದೊಡ್ಡವರು ಕೂಡ ಒಬ್ಬೊಬ್ಬರೇ ಆ ಮನೆಗೆ ಹೋಗಲು ಎದುರುತ್ತಿದ್ದರು.

ಕರಣಿಕರ ಅಮ್ಮ ಬಿಟ್ಟರೆ ಆ ಹಿಂದಲ ಕೋಣೆಗೆ ಒಬ್ಬೊಬ್ಬರೇ ಹೆಂಗಸರು ಹೋಗಿದ್ದನ್ನು ಯಾರೂ ಕಂಡಿರಲಿಲ್ಲ. ಇಬ್ಬಿಬ್ಬರು ಹೆಂಗಸರು ಜೋರಾಗಿ ಮಾತನಾಡಿಕೊಂಡು ಹೋಗಿ ಕರಣಿಕರ ಅಮ್ಮ ಹೇಳಿದ ವಸ್ತುವನ್ನು ಅಲ್ಲಿಂದ ತೆಗೆದುಕೊಂಡು ಬರುತ್ತಿದ್ದು ವಾಡಿಕೆಯಾಗಿಯೇ ಹೋಗಿಬಿಟ್ಟಿತ್ತು.

ಗುಂಡಿ ತೋಡಿದ ಕರಣಿಕರು ಮತ್ತೊಮ್ಮೆ ಪರಿಶೀಲಿಸಿಕೊಂಡು ಎಲ್ಲೂ ಕೂಡ ಅನುಮಾನ ಬಾರದಂತೆ ನೋಡಿಕೊಂಡು ಮನದಲ್ಲೇ ಮೀಸೆ ತಿರುವಿಕೊಂಡರು.

ಆ ಪಾಳೇಗಾರ ನಾಯಕನಿಗೆ ಬುದ್ಧಿ ಕಲಿಸಿಯೇ ತೀರಬೇಕು ಯಾರಿಗೂ ಅನುಮಾನ ಬರುವುದಿಲ್ಲ ಎಂದು ಮನದಲ್ಲೇ ಮಾತನಾಡಿಕೊಂಡು ಒಬ್ಬರೇ ಪಾಳೇಗಾರ ನಾಯಕನ ಅರಮನೆಯ ಕಡೆಗೆ ಹೊರಟರು.

ಪಾಳೇಗಾರ ಎಂದರೆ ರಾಜ, ಮಹಾರಾಜರ ಭವ್ಯತೆಯೇನು ಇರಲಿಲ್ಲ. ಎರಡೂರಿನ ಪಾಳೇಗಾರ. ಸೀದಾ ಮನೆಯೊಳಗೆ ಹೋದವರಿಗೆ ಪಾಳೇಗಾರ ಬಾಗಿಲಲ್ಲೇ ಸಿಗಬೇಕೇ? ನಸುನಕ್ಕುಕೊಂಡೇ ಪಾಳೇಗಾರ ಕರಣಿಕರನ್ನು ಮಾತನಾಡಿಸಿದ.

(ಮುಂದುವರೆಯುವುದು)

Comment here