ಕವನ

ಕೊಂಡಿ ಕಳಚುವ ಕಾಲ

ದೇವರಹಳ್ಳಿ ಧನಂಜಯ


ಜಗವ ನಲುಗಿಸಿರುವ
ಕ್ರೂರಿ ಕೊರೋನಾದ,
ಸಾವಿನ ಸರಪಳಿಯ ತುಂಡರಿಸಲು,
ಸುಳ್ಳರ ಚೈನ್ ಲಿಂಕ್ ನಲ್ಲಿ ಹಬ್ಬುತ್ತಿರುವ,
ಧರ್ಮಾಂಧ ವೈರಸ್ ನಿಷ್ಕ್ರಿಯಗೊಳಿಸಲು.
ಅಂತರ ಕಾಯ್ದುಕೊಳ್ಳಬೇಕು.
ಮರೆಯ ಬೇಡಿ ಇದು ಕೊಂಡಿ ಕಳಚುವ ಕಾಲ.

ಸ್ಯಾನಿಟೈಸರ್ ಬಳಸಿ ಕೈ ತೊಳೆಯಿರಿ ಪದೇ ಪದೆ.
ಅಂಟಿದ ಸೋಂಕು ದೇಹ ಸೇರದಿರಲಿ.
ವಿವೇಕ ಬಳಸಿ ಆತ್ಮ ತೊಳೆಯಿರಿ ಮತ್ತೆ ಮತ್ತೆ.
ಜಾತಿ, ಮೇಲುಕೀಳಿನ ಜಾಡ್ಯ
ಆಲೋ ಚನೆಯ ಆಳದಿರಲಿ
ಎಚ್ಚರದಿಂದಿರಿ ವೈರಸ್ ದೇಹ ದೇಶದ
ಶ್ವಾಸಕೋಶ ಸೇರಿದೆ.
ಯೋಚಿಸಿ ಇದು ಕೊಂಡಿ ಕಳಚುವ ಕಾಲ.

ವಿಜ್ಞಾನ ಆತಂಕಕಾರಿ
ಜ್ಞಾನ-ಇತಿಹಾಸ ಪರಂಪರೆಯ
ಮರೆಮಾಚಿರುವ ಮುಸುಕುದಾರಿ.
ವಿದ್ಯೆಯೇ ಅಧ್ವಾನಗಳ ಹೆದ್ದಾರಿ.
ಜ್ಞಾನ-ವಿಜ್ಞಾನ ಸುಜ್ಞಾನ ಎಂಬ ಸವಕಲು ಪದಗಳು
ಕುಸಿದ ಕುದುರೆಯ ಕಾಲಿನ ಸವೆದ ಲಾಳಗಳು.
ಜಾಣರಾಗಿ ಸ್ಟೇಟ್ ಹೋಂ ಸ್ಟೇ ಸೇಫ್.

ಸಿರಿಗರ ಬಡಿದವರ
ನೆಲ-ಜಲ ಸಂಬಂಧಗಳ ಮರೆತವರ
ಬೆವರ ಬೆಲೆ ತಿಳಿಯದವರ ಕೊಡುಗೆ
ಕೊಲ್ಲುತ್ತಿದೆ ಬಡವರ ದುಡಿಯುವವರ .
ಎಚ್ಚರ! ಇದು ದೇವರು ಕೈ ಚೆಲ್ಲಿರುವ ಕಾಲ.
ನಮ್ಮನ್ನು ನಾವೇ ಕಾಪಾಡಿಕೊಳ್ಳುವ ಕಾಲ.
ಭ್ರಮೆಯ ಕೊಂಡಿಯ ಕಳಚುವ ಕಾಲ.

ನಿಮಗೆ ರೋಗ ಇದೆ ಎಂದಲ್ಲ.
ಸೋಂಕಿತರು ಯಾರೆಂಬುದು ತಿಳಿಯುತ್ತಿಲ್ಲ.
ಲಕ್ಷಣಗಳು ಬೇಗ ಕಾಣಿಸಿಕೊಳ್ಳುತ್ತಿಲ್ಲ.
ಶಂಕಿತರು ಶಂಕಿಸುವವರು ಮನುಷ್ಯರಾಗಿಲ್ಲ.
ಯಾವುದಕ್ಕೂ ಇರಲಿ ವಸ್ತಿಲು ದಾಟುವಾಗ
ಮಾಸ್ಕ್ ಧರಿಸಿ ಮುಖಕ್ಕೆ.
ಮನಸ್ಸಿಗೂ ಒಂದು ಭಾವನೆಗಳಿಗೆ ಮತ್ತೊಂದು.

Comment here