ತುಮಕೂರ್ ಲೈವ್

ಕೊರಟಗೆರೆಯಲ್ಲಿ ಲಂಗೂರ್ ಕೋತಿ ಅಪರೂಪದ ಅತಿಥಿ

ತುಮಕೂರು:
ಕೊರಟಗೆರೆ ಪಟ್ಟಣದಲ್ಲಿ ಶುಕ್ರವಾರ ಸಂಜೆ ಲಂಗೂರ್ ಕೋತಿ ದಿಢೀರ್ ಪ್ರತ್ಯಕ್ಷವಾಯಿತು. ಅಪರೂಪದ ಅತಿಥಿಯನ್ನು ನೋಡಲು ಜನ ಮುಗಿಬಿದ್ದರು.
ಪಟ್ಟಣದಲ್ಲಿ ಇದುವರೆಗೂ ಮಾಮೂಲಿ ಕೋತಿಯನ್ನು ನೋಡಿದ್ದ ಜನ ಲಂಗೂರ್ ಕೋತಿ ಇದ್ದಕ್ಕಿದ್ದಹಾಗೆ ಪತ್ಯಕ್ಷವಾಗಿದ್ದನ್ನು ನೋಡಿ ಆಶ್ಚರ್ಯಚಕಿತರಾದರು. ಲಂಗೂರ್ ಕೋತಿ ಪಟ್ಟಣದ ಬಸ್ ನಿಲ್ದಾಣದಲ್ಲಿನ ತಳ್ಳುವ ಗಾಡಿಯಲ್ಲಿದ್ದ ಹಣ್ಣಿನ ಅಂಗಡಿಗಳಿಗೆ ಭೇಟಿ ನೀಡಿದ್ದೆಯೇನೋ ಎಂಬಂತೆ ಪ್ರತೀ ಹಣ್ಣಿನ ಗಾಡಿ ಮೇಲು ಕುಳಿತು ಹಣ್ಣನ್ನು ತಿನ್ನುತ್ತಿತ್ತು. ಕೋತಿಗಳು ಹಣ್ಣಿನಂಗಡಿಗೆ ಮುತ್ತಿಗೆ ಹಾಕಿದಾಗ ಸಹಜವಾಗಿಯೇ ವ್ಯಾಪಾರಿಗಳು ಕೋಲು ಹಿಡಿದು ಓಡಿಸುತ್ತಿದ್ದರು.  ಆದರೆ ಅಪರೂಪದ ಲಂಗೂರ್ ಕೋತಿ ಹಣ್ಣಿನಂಗಡಿಗೆ ಮುತ್ತಿಗೆ ಹಾಕಿ ತನಗೆ ಬೇಕಾದ ಹಣ್ಣು ತೆಗೆದುಕೊಂಡು ತಿಂದರೂ ಕೂಡ `ತಿನ್ನಲಿ ಬಿಡು’ ಎಂದು ದಾರಾಳತನದಲ್ಲಿ ಅಂಗಡಿ ಮಾಲೀಕರು ನಿಂತಿದ್ದರು. ಕೋತಿಯನ್ನು ನೋಡಲು ಮುಗಿಬಿದ್ದಿದ್ದ ಜನರನ್ನು ನೋಡಿ ಕೆಲವೊಮ್ಮೆ ಕೊಂಚ ಗಾಬರಿಯಾದಂತೆ ಕಂಡ ಲಂಗೂರ್ ಆನಂತರ ಜನರೊಂದಿಗೆ ಸಹಜವಾಗಿಯೇ ಒಗ್ಗಿಕೊಂಡಿತು. ಜನರು ಪ್ರೀತಿಯಿಂದ ಹಣ್ಣು ಇತರೆ ತಿನಿಸು ಕೊಟ್ಟರೆ ಅದನ್ನು ಭೀತಿಯಿಲ್ಲದೆ ಇಸುಕೊಂಡು ತಿನ್ನುತ್ತಿತ್ತು.  ಅಪರೂಪದ ಪ್ರಾಣಿ ಪಟ್ಟಣದಲ್ಲಿ ಕಂಡ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು ತಮ್ಮ ಸ್ನೇಹಿತರಿಗೆ ಶೇರ್ ಮಾಡುತ್ತಿದ್ದರು. ಲಂಗೂರ್ ಬಸ್ ನಿಲ್ದಾಣದಲ್ಲಿದೆ ಎಂದು ತಿಳಿದ ಪಟ್ಟಣದ ವಿವಿಧ ಭಾಗದಲ್ಲಿದ್ದ ಕೆಲವರು ಅದನ್ನು ನೋಡಬೇಕೆಂಬ ಉತ್ಸುಕತೆಯಲ್ಲಿ ಓಡೋಡಿ ಬಂದು ಆಶ್ಚರ್ಯದಿಂದ ನೋಡುತ್ತಿದ್ದರು. ಪೋಟೋ, ಸೆಲ್ಫಿ, ವಿಡಿಯೋ ತೆಗೆದು ಖುಷಿ ಪಟ್ಟರು.  ನೋಡುಗರ ಗುಂಪು ಹೆಚ್ಚಾಗುತ್ತಿದ್ದಂತೆ ಲಂಗೂರ್ ಕೋತಿ ಜನರ ಗುಂಪಿನ ಮಧ್ಯದಲ್ಲಿ ಇದ್ದಕ್ಕಿದ್ದಹಾಗೆ ಮಾಯವಾಯಿತು. ಸಹಜವಾಗಿ ಲಂಗೂರ್ ಕೋತಿ ದಟ್ಟ ಅರಣ್ಯ ಪ್ರದೇಶ ಸೇರಿದಂತೆ ಶೀತವಲಯದಲ್ಲಿ ಕಂಡು ಬರುತ್ತವೆ.

ಕೊರಟಗೆರೆಯಲ್ಲಿ ಶುಕ್ರವಾರ ಸಂಜೆ ಇದ್ದಕ್ಕಿದಹಾಗೆ ಪತ್ರಕ್ಷವಾದ ಲಂಗೂರ್ ಕೋತಿ.

Comment here