ಜನಮನ

ಗ್ರಾ.ಪಂ. ಕಣ: ಇಲ್ಲೊಬ್ಬರಿದ್ದಾರೆ ವಿಶೇಷ ವ್ಯಕ್ತಿ…

Publicstory.in


ತುಮಕೂರು: ಜಿಲ್ಲೆಯ ವಿವಿಧೆಡೆ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ, ದುಡ್ಡಿಗೆ ಹರಾಜು, ಅಯ್ಯೋ ಮತದಾರರನ್ನು ಸಾಕಲು ಆಗುತ್ತಿಲ್ಲ ಎಂದು ಅಲವತ್ತುಕೊಳ್ಳುತ್ತಿರುವ ಅಭ್ಯರ್ಥಿಗಳ ನಡುವೆ ಇಲ್ಲೊಬ್ಬ ವ್ಯಕ್ತಿ ಗಮನ ಸೆಳೆಯುತ್ತಿದ್ದಾರೆ.

ಹೌದು. ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದವರು ತಾನು ಮಾಡಿದ ಕೆಲಸಗಳ ಲೆಕ್ಕ ಹಿಡಿದು ಮತ‌ ಕೇಳುವುದನ್ನು ಎಲ್ಲಾದರೂ ನೋಡಿದ್ದೀರಾ?

, ಹೆಂಡ,‌ ನೆಂಟಸ್ತನ, ಜಾತಿ ಹೀಗೆ ನಾನಾ ಲೆಕ್ಕದಲ್ಲಿ ಚುನಾವಣೆ ನಡೆಸಿ , ಗೆದ್ದ ಬಳಿಕ ದುಂಡಗಾಗುವವರ ನಡುವೆ ಈ ವ್ಯಕ್ತಿ ತಾನು ಗೆದ್ದ ವಾರ್ಡ್ ಗಳಲ್ಲಿ ಮಾಡಿರುವ ಕೆಲಸಗಳನ್ನೆ ತನ್ನ ಪ್ರಚಾರಕ್ಕೆ ಬಳಸಿಕೊಂಡು ಮತ ಕೇಳುತ್ತಿದ್ದಾರೆ.

ಇವರು ಯಾರು ಹಾಗಾದರೆ; ತುಮಕೂರು ನಗರಕ್ಕೆ ಅಂಟಿಕೊಂಡಂತೆ ಇರುವ ಬೆಳಗುಂಬ ಗ್ರಾಮ ಪಂಚಾಯತಿ ಯಲ್ಲಿ ಈಗಾಗಲೇ ಎರಡು ಸಲ ಗೆಲವು ಸಾಧಿಸಿ ಮೂರನೇ ಸಲ ಹೊಸ ವಾರ್ಡ್ ನಿಂದ ಚುನಾವಣೆ ಬಯಸಿರುವ ಬೆಳಗುಂಬ ವೆಂಕಟೇಶ್ ಅವರೇ ಇವರು.

ಜೆಡಿಎಸ್ ತುಮಕೂರು ತಾಲ್ಲೂಕು ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರೂ ಆಗಿರುವ ವೆಂಕಟೇಶ್ ಅವರದು ತಾಲ್ಲೂಕಿನ ಎಲ್ಲ ಜನರು, ಅಧಿಕಾರಿಗಳ ನಡುವಿನ ಚಿರಪರಿಚಿತ ಹೆಸರು.

ಅಂದಹಾಗೆ, ಕಮ್ಯೂನಿಸ್ಟ್‌ ಹಿನ್ನೆಲೆಯ ವೆಂಕಟೇಶ್ ಜನಾನುರಾಗಿ. ಕಷ್ಟಕಾಲದಲ್ಲಿ ಎಲ್ಲರಿಗೂ ಮಿಡಿಯುವ ಗೆಳೆಯ. ಹೀಗಾಗಿಯೇ ಅವರು ಅಚ್ಚುಮೆಚ್ಚು.

ಎಲ್ಲರನ್ನು ಅಣ್ಣಾ ಎಂದೇ ಮಾತನಾಡಿಸುವ ವೆಂಕಟೇಶ್, ಶಾಸಕ‌ ಗೌರಿಶಂಕರ್ ಅವರ ಬಳಗದಲ್ಲಿದ್ದಾರೆ. ಕೆಲ್ಸ ನೋಡಿ ಓಟ್ ಕೊಡಬೇಕು ಅಂತಾರೆ ಅವರು.

ಕಳೆದ‌ ಎರಡು ಅವಧಿಯಲ್ಲಿ ಮಾಡಿರುವ ಕೆಲಸಗಳು, ಮೊದಲು ಬಡಾವಣೆ ಹೇಗಿತ್ತು, ಇವರು ಗೆದ್ದ ನಂತರ ಹೇಗಾಯಿತು ಎಂಬ ಚಿತ್ರಗಳ ಸಮೇತ ಕರಪತ್ರಗಳನ್ನು ಮುದ್ರಿಸಿ ಮತ ಕೇಳುತ್ತಿದ್ದಾರೆ.

ಸಾಹಿತಿಗಳು, ಚಿತ್ರನಟರು, ಪತ್ರಕರ್ತರು, ಹೋರಾಟಗಾರರ ನಡುವಿನ ಒಡನಾಟದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮನಸ್ಥಿತಿ, ಚಿಂತನೆಗಳನ್ನು ಮತದಾರರಿಗೆ ತಿಳಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ವೆಂಕಟೇಶ್ ಗೆಲುವಿಗೆ ಶಾಸಕ ಗೌರಿಶಂಕರ್ ಪಣ ತೊಟ್ಟಿದ್ದಾರೆ. ಹುಡಗರ ಪ್ರಚಾರ ಸಹ ಎಲ್ಲೆ ಮೀರಿದೆ.

ಇಂತವರು ನಮ್ಮ ವಾರ್ಡ್ ನಲ್ಲಿ ಸ್ಪರ್ಧಿಸಿರುವುದೇ ಖುಷಿ ತಂದಿದೆ. ಅವರು ಹೇಗೆ ಎಂಬುದನ್ನು ಅವರು ಕೊಟ್ಟಿರುವ ಅಭಿವೃದ್ಧಿ ಲೆಕ್ಕವೇ ಹೇಳುತ್ತದೆ ಎನ್ನುತ್ತಾರೆ ಇಲ್ಲಿನ ಹಲವರು.

ನಾವು ಜನಸೇವೆ ಮಾಡಬೇಕೇ ಹೊರತು ಹಣವಲ್ಲ, ನಾನು ಈವರೆಗೂ ಏನ್ನೆಲ್ಲ ಮಾಡಿದ್ದೇನೋ ಅದೆಲ್ಲವನ್ನು ಜನರಿಗಾಗಿಯೇ ಮಾಡಿದ್ದೇನೆ. ಚುನಾವಣೆ ಫ್ಯಾಷನ್ ಆಗಬಾರದು, ಬದಲಾವಣೆಯ ಮೈಲು ಗಲ್ಲು ಆಗಬೇಕು. ನಮ್ಮ ಶಾಸಕರು ಸಹ ಇದನ್ನೇ ಹೇಳುತ್ತಿರುತ್ತಾರೆ ಎಂದು ಬೆಳಗುಂಬ ವೆಂಕಟೇಶ್ Publicstory.in ಗೆ ತಿಳಿಸಿದರು.

ವಾರ್ಡ್ ನ ಅಭಿವೃದ್ಧಿ ಗೆ ನನ್ನದೇ ಆದ ಗುರಿಗಳಿವೆ. ಈ ಹಿಂದಿನ ವಾರ್ಡ್ ಗಳಲ್ಲಿ ಮಾಡಿರುವ ಕೆಲಸ ನೋಡಿ ಜನರು ನನಗೆ ಮತಹಾಕಬೇಕು. ಹಳ್ಳಿಯಂತೆ ಇದ್ದ ನನ್ನ ಹಳೆಯ ವಾರ್ಡ್ ಈಗ ತುಮಕೂರು ನಗರದ ಬಡಾವಣೆಗಳನ್ನು ನಾಚಿಸುವಂತಿದೆ ಎಂದು ಹೇಳಿ ಮಾತುಮುಗಿಸಿದರು ವೆಂಕಟೇಶ್.


ನಿಮ್ಮೂರಿನ ಸುದ್ದಿಗಳನ್ನು ವಾಟ್ಸ್ ಆಪ್ ಮಾಡಿ:9844817737

ಬದಲಾವಣೆಯ ಸುಧಾರಕರು ಎಲ್ಲಿಂದಲೋ ಇಳಿದು ಬರುವುದಿಲ್ಲ, ಅವರು ನಮ್ಮ, ನಿಮ್ಮ ನಡುವೆಯೇ ಇರುತ್ತಾರೆ ಎಂಬ ಮಾತು ವೆಂಕಟೇಶ್ ಅವರ ಮಾತು ಕೇಳಿದ ಬಳಿಕ ಎಂಥವರಿಗಾದರೂ ಅನಿಸದೇ ಇರಲಾರದು.

Comment here