ಜಸ್ಟ್ ನ್ಯೂಸ್

ಚುಂಚಾದ್ರಿ ರೈತ ಸಂತೆಗೆ ಶಿಲಾನ್ಯಾಸ

ತುರುವೇಕೆರೆ: ಸಮೀಪದ ಮಾಯಸಂದ್ರದ ಶ್ರೀ ಕಲ್ಪತರು ಆಶ್ರಮದಲ್ಲಿ ಶ್ರೀ ಚುಂಚನಗಿರಿ ಸಂಸ್ಥಾನದ ವತಿಯಿಂದ ನಿರ್ಮಿಸಲುದ್ದೇಶಿಸಿರುವ ಚುಂಚಾದ್ರಿ ರೈತ ಸಂತೆಯ ಕಟ್ಟಡದ ಶಂಕುಸ್ಥಾಪನೆಯನ್ನು ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸಾಮೀಜಿ ನೆರವೇರಿಸಿದರು.

ಶಂಕುಸ್ಥಾಪನೆಯ ನಂತರ ಸರಳ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ರೈತರು ಸದಾಕಾಲ ಸರ್ಕಾರದ ಹಂಗಿನಲ್ಲೇ ಬದುಕುವಂತಾಗಿದೆ. ಎಷ್ಟೇ ಶ್ರಮಪಟ್ಟರೂ ರೈತರ ಉತ್ಪನ್ನಗಳಿಗೆ ನ್ಯಾಯವಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಸ್ತಕ್ಷೇಪದಿಂದ ರೈತರು ವಂಚನೆಗೊಳಗಾಗುತ್ತಿದ್ದಾರೆ ಎಂದರು.

ರೈತರು ತಮ್ಮ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆ ಮಾಡುವ ಕೌಶಲ ಕಲಿಯಬೇಕು. ಜೊತೆಗೆ ರೈತರು ತಮ್ಮ ಉತ್ಪನ್ನಗಳಿಗೆ ಸರ್ಕಾರ ಇಲ್ಲವೇ ದಳ್ಳಾಳಿಗಳ ಮಧ್ಯಸ್ಥಿಕೆ ಇಲ್ಲದೆ ತಾವೇ ಬೆಲೆ ಕಟ್ಟುವಂತಾಗಬೇಕು.ಕೃಷಿ ಉತ್ಪನ್ನಗಳು ರೈತರಿಂದ ನೇರವಾಗಿ ಗ್ರಾಹಕರಿಗೆ ಯಾವುದೇ ಕಲಬೆರಕೆ ಇಲ್ಲದೆ ಹಸನಾದ ರೂಪದಲ್ಲೇ ದೊರೆಯುವಂತಾಗಬೇಕು ಎಂಬ ಪರಿಕಲ್ಪನೆಯಿಂದ ರೈತ ಸಂತೆಗೆ ಚಾಲನೆ ನೀಡುತ್ತಿದ್ದು ಅದಕ್ಕಾಗಿಯೇ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು‌ ಹೇಳಿದರು.

ಈ ಭಾಗದ ರೈತರು ಚುಂಚಾದ್ರಿ ರೈತ ಸಂತೆಯ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಲ್ಪತರು ಆಶ್ರಮದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ, ಬೆಂಗಳೂರು ಟಿಸಿಎಸ್ ಕಂಪನಿಯ ಉಪಾಧ್ಯಕ್ಷ ಚಕ್ರವರ್ತಿ, ತುರುವೇಕೆಯ ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಆಢಳಿತಾಧಿಕಾರಿಗಳಾದ ಕೆ. ಪುಟ್ಟರಂಗಪ್ಪ ಇತರರು ಭಾಗವಹಿಸಿದ್ದರು.

Comment here