Friday, March 29, 2024
Google search engine
Homeಸಾಹಿತ್ಯ ಸಂವಾದಅಂತರಾಳತಂಗಿಗೆ ಕೊಟ್ಟ ಪೆನ್ಸಿಲ್

ತಂಗಿಗೆ ಕೊಟ್ಟ ಪೆನ್ಸಿಲ್

ಜಿ ಎನ್ ಮೋಹನ್


ಬರ್ಥ್ ಡೇ ಬಂತು ಅಂದ್ರೆ ಸಾಕು ನನಗೆ ಬರ್ಥ್ ಡೇ ಮಾಡಿಕೊಳ್ಳುವವರಿಗಿಂತ ಸಂಭ್ರಮ.

ಅವರಿಗೆ ಏನು ಗಿಫ್ಟ್ ಕೊಡಬೇಕು. ಯಾವ ಗಿಫ್ಟ್ ಅವರಿಗೆ ಇಷ್ಟ ಆಗುತ್ತೆ, ಯಾವ ಗಿಫ್ಟ್ ಅವರ ಊಹೆಗೂ ಮೀರಿರುತ್ತೆ ಅಂತ. ಯಾವ ಅಂಗಡೀಲಿ ತಗೋಬೇಕು, ಹೇಗೆ ಅವರಿಗೆ ಆ ದಿನ ಬೆಳ್ಳಂಬೆಳಗ್ಗೇನೇ ಮುಟ್ಟಿಸಬೇಕು, ಹೇಗೆ ಅವರ ಕಣ್ಣು ಬಿಟ್ಟ ತಕ್ಷಣದ ಮೊದಲ ಗಿಫ್ಟ್ ನನ್ನದಾಗಬೇಕು ಅಂತೆಲ್ಲಾ ಯೋಚಿಸ್ತೀನಿ. ಅಷ್ಟೇ ಅಲ್ಲ, ತಲೆ ಮೇಲೆ ತಲೆ ಬೀಳ್ಲಿ ಅದನ್ನ ಮಾಡೇ ಮಾಡ್ತೀನಿ.

ಒಂದು ಮೊಬೈಲ್ ಕೊಟ್ರೆ, ಒಂದು ಐಪಾಡ್ ಕೊಟ್ರೆ ಅದು ತುಂಬಾ ಕಾಸ್ಟ್ಲೀದು ಅನ್ನೋ ಒಂದೇ ಕಾರಣಕ್ಕೆ ಖುಷಿ ಆದ್ರೆ ನನಗೇನೂ ಅದು ಕಿಕ್ ಕೊಡೋಲ್ಲ. ಆದ್ರೆ ಅದು ಅವರಿಗೆ ಬೇಕು ಅನಿಸಿರಬೇಕು. ಅದು ಇದ್ರೆ ಎಷ್ಟು ಚೆನ್ನಾಗಿರುತ್ತೆ ಅನ್ನಿಸಿರಬೇಕು. ಇಲ್ಲಾ ಅಂದ್ರೆ ಇಂಥದ್ದು ಸಿಗುತ್ತೆ ಅಂತ ಗೊತ್ತೇ ಆಗಿರಬಾರದು ಅಂಥಾ ಟೈಮಲ್ಲಿ ಅಂತಹ ಗಿಫ್ಟ್ ಕೊಡಬೇಕು.

ಇತ್ತೀಚೆಗೆ ಒಂದು ಬರ್ಥ್ ಡೇ ಬಂತು. ಸದಾ ಹಾಡು ಅಂದ್ರೆ ಸಾಕು ಮೈಮರೆಯೋಳಿಗೆ ಐಪಾಡ್ ಅಲ್ಲದೆ ಇನ್ನಾವುದು ಬೆಸ್ಟ್ ಗಿಫ್ಟ್? ನನ್ನ ತಿಂಗಳ ಖರ್ಚು ವೆಚ್ಚದ ಲೆಕ್ಕಾಚಾರ ಎಲ್ಲಾ ಮೀರಿ ಸ್ವಲ್ಪ ಕೈ ದೊಡ್ಡದು ಮಾಡಿ ಸಾವಿರಾರು ರೂಪಾಯಿ ಐಪಾಡ್ ಗೆ ಸುರಿದೇಬಿಟ್ಟೆ. ಆದ್ರೆ ಆ ಗಿಫ್ಟ್ ಕೊಟ್ಟಾಗ ಆ ಜೋಡಿ ಕಣ್ಣು ಅರಳ್ತಲ್ಲಾ? ಅದನ್ನ ನೋಡಿಯೇ ಅನುಭವಿಸಬೇಕು. ಓಹ್! ಇಟ್ ಇಸ್ ಗ್ರೇಟ್.

ಈ ಥರಾನೇ ಕಣ್ಣು ಅರಳಿದ ಆ ಘಟನೇನೂ ಇನ್ನೂ ಚೆನ್ನಾಗಿ ನೆನಪಿದೆ. ಏಳನೇ ಕ್ಲಾಸ್ ಮುಗಿಸಿ ಎಂಟಕ್ಕೆ ಕಾಲಿಟ್ಟಿದ್ದೆ. ಏಳನೇ ಕ್ಲಾಸ್ ನವರೆಗೆ ಮನೆ ಹತ್ತಿರಾನೇ ಇರೋ ಸ್ಕೂಲು. ಆಮೇಲೆ ದೂರದ ಸ್ಕೂಲು ಅನ್ನೋದು ನಮ್ಮನೇಲಿ ಜಾರೀಲಿದ್ದ ಅಘೋಷಿತ ಸೂತ್ರ.

ಒಳ್ಳೆ ಸ್ಕೂಲು ಆಗ್ಬೇಕು, ಎಷ್ಟು ದೂರ ಆದ್ರೇನು ಅನ್ನೋದು ನಮ್ಮಪ್ಪನ ಲಾಜಿಕ್. ಇದರ ಜೊತೆಗೆ ಬಸ್ ಹತ್ತಿ ಬಸ್ ಇಳಿದು ಓಡಾಡ್ತಾ ಇದ್ರೆ ತಮ್ಮನ್ನೇ ಸಂಭಾಳಿಸಿಕೊಳ್ಳೋದು ಕಲೀತಾರೆ ಅನ್ನೋದು ಮನಸ್ಸಲ್ಲಿ ಇತ್ತೇನೋ. ಅಂತೂ ನಾನೂ ಸಹ ದೂರದ ಸ್ಕೂಲ್ ಸೇರ್ಕೊಂಡೆ.

ಎರಡು ಬಸ್ ಹಿಡಿದು ಹೋಗಬೇಕಾದ ದೂರ ಅದು. ಬಸ್ ಪಾಸ್ ಮಾಡಿಸ್ಲೇ ಬೇಕಲ್ವಾ? ಎರಡು ಬಸ್ ಗೆ ಪಾಸ್ ಮಾಡ್ಸಿದ್ರು. ಓಡಾಡ್ತಾ ಇದ್ದೆ. ಹೈಸ್ಕೂಲ್ ಅನ್ನೋದು ಇದೆಯೆಲ್ಲಾ, ಅದರಲ್ಲೂ ಬಸ್ಸಲ್ಲಿ ಓಡಾಡೋ ಅಂತ ದೂರದ ಹೈಸ್ಕೂಲ್ ಇರುತ್ತಲ್ಲಾ ಅದು ಬಿಚ್ಚಿಡೋ ಜಗತ್ತೇ ಬೇರೆ.

ಎರಡು ಬಸ್ ಹತ್ತಿ ಹೋಗಿ ಬರೋವಾಗ ಎಷ್ಟೊಂದು ಟೈಮ್ ಇರುತ್ತೆ. ಸಿಕ್ಕಾಪಟ್ಟೆ ಹರಟೆ ಹೊಡೀತೀವಿ, ಕ್ಲಾಸಿಗೆ ಚಕ್ಕರ್ ಹಾಕಿದ್ರೆ ಹೆಂಗೆ ಅಂತ ಹೇಳೋರು ಇರ್ತಾರೆ. ಪಕ್ಕದ ಯಾವುದೋ ಸ್ಕೂಲ್ ಗೆ ಹೋಗೋ ಹುಡುಗೀನ ನೋಡಿದ ತಕ್ಷಣ ಅವರು ಹೆಂಗೆ ಅಂತ ಕೇಳೋರು ಇರ್ತಾರೆ. ಸ್ಕೂಲ್ ನಲ್ಲಿ ಆದ್ರೆ ಅದೇ ಕ್ಲಾಸು ಅದೇ ಹುಡುಗರು.

ಆದ್ರೆ ಬಸ್ ನಲ್ಲಿ ಆದ್ರೆ ಎಷ್ಟೊಂದು ಸ್ಕೂಲು, ಎಷ್ಟೊಂದು ಕ್ಲಾಸು, ಎಷ್ಟೊಂದು ಹುಡುಗರು! ಒಳ್ಳೇವ್ರು, ಕಟ್ಟವರು, ಒಳ್ಳೇವ್ರಾ ಕೆಟ್ಟವ್ರಾ ಗೊತ್ತೂ ಆಗದ ಹಾಗಿರೋರು…

ಹೀಗೆ ಬಸ್ಸಲ್ಲಿ ಹೋಗೋವಾಗ್ಲೇನೇ ಅದು ಕಣ್ಣಿಗೆ ಬಿದ್ದದ್ದು. ದೊಡ್ಡ ನಟರಾಜ ಪೆನ್ಸಿಲ್.

ಪೆನ್ಸಿಲ್ ಅಂದ್ರೆ ಹೆಂಗಿರುತ್ತೆ? ಎಲ್ಲಾ ಒಂದೇ ಥರಾ. ಒಂದೇ ಸೈಜು. ಆದ್ರೆ ಆ ಪೆನ್ಸಿಲ್ ಇತ್ತಲ್ಲ, ನನಗಂತೂ ಆ ಕಾಲಕ್ಕೆ ಅದು ಕುತುಬ್ ಮಿನಾರ್ ಅನಿಸಿಬಿಟ್ಟಿತ್ತು. ಎಷ್ಟು ದಪ್ಪ, ಎಷ್ಟು ಉದ್ದ, ಕೈಯಲ್ಲಿ ಹಿಡಿಯೋಕ್ಕಾದ್ರೂ ಆಗುತ್ತಾ? ಉಹುಂ? ಬಸ್ ನಲ್ಲಿ ಅದನ್ನ ಯಾರ ಹತ್ರಾನೋ ನೋಡಿದ ನನಗೆ ಅದರದೇ ಗುಂಗು ಹತ್ತಿತ್ತು.

ಅದನ್ನ ಹಿಡಕೊಳ್ಳೋದು ಹೆಂಗಪ್ಪಾ? ಅದು ಸರಿ, ಅದನ್ನ ಮೆಂಡ್ ಮಾಡೋದು ಹೇಗೆ? ಆಕಸ್ಮಾತ್ ಸೀಸ ಮುರಿದು ಹೋಯ್ತಪ್ಪಾ ಆಗ ಅದನ್ನ ಮತ್ತೆ ಹೆರೆಯೋದು ಹೇಗೆ? ಹಿಂಗೆ ಮಲಗಿದ್ದಾಗಲೂ ಇದೇ ಯೋಚನೆ.

ಆವಾಗ್ಲೇ ಬಂತು ನೋಡಿ ನನ್ನ ತಂಗಿ ಹುಟ್ಟಿದ ಹಬ್ಬ. ಅವಳೋ ಆರನೇ ಕ್ಲಾಸು. ನಾನು ಎಂಟು ಆದ್ರೂ ನನಗೆ ಬರ್ಥ್ ಡೇ ಗಿಫ್ಟ್ ಕೊಡಬೇಕು ಅನಿಸ್ತು. ಗಿಫ್ಟ್ ಮಾಡಿದ್ರೆ ಆ ನಟರಾಜ ಪೆನ್ಸಿಲ್ಲೇ ಮಾಡ್ಬೇಕು ಅನ್ನಿಸ್ತು.

ಗಿಫ್ಟ್ ಮಾಡೋ ಐಡಿಯಾ ಏನೋ ಸರಿ. ಆದ್ರೆ ಅದಕ್ಕೆ ದುಡ್ಡು ಹೊಂಚೋದು ಎಲ್ಲಿಂದ? ಆವಾಗ ನಮ್ಮ ಕೈಲಿ ದುಡ್ಡು ಅಂತ ಓಡಾಡ್ತಾ ಇದ್ದದ್ದೇ ಸ್ಕೂಲ್ ಆರಂಭ ಆಗಿ ಇನ್ನೂ ಪಾಸ್ ಮಾಡಿಸ್ದೇ ಇದ್ದಾಗ. ಬಸ್ ಚಾರ್ಜ್ ಅಂತ ಕೊಡ್ತಾ ಇದ್ದದ್ದು ಮಾತ್ರ. ಅದೂ ಒಂದೆರಡು ದಿನ. ಏನ್ಮಾಡೋದು ಅನ್ನೋ ಚಿಂತೆಗೆ ಬಿದ್ದೆ. ಗಿಫ್ಟ್ ಕೊಡೋ ಐಡಿಯಾ ಮಾತ್ರ ಮಾಯ ಆಗ್ಲಿಲ್ಲ.

ಆಗಲೇ ನನಗೆ ಸ್ವರ್ಗದ ಬಾಗಿಲು ತೆರೆದಿದ್ದು. ನಾನು ಬಸ್ಸಲ್ಲಿ ಬರ್ತಾ ಇರೋವಾಗ ಮಾರ್ಕೆಟ್ ಬಸ್ ಸ್ಟಾಪ್ ನಲ್ಲಿ ನನ್ನ ಫ್ರೆಂಡ್ ಕ್ಯೂನಲ್ಲಿ ನಿಂತಿದ್ದ. ಯಾಕಪ್ಪಾ ಅನಿಸ್ತು. ನಾವೆಲ್ಲಾ ಸ್ಕೂಲ್ ಮುಂದೇನೇ ಇರೋ ಬಸ್ ಸ್ಟಾಪ್ ನಲ್ಲಿ ನಿಂತ್ರೆ ಇವನು ಇಷ್ಟು ದೂರ ಸ್ಟಾಪ್ ನಲ್ಲಿ ನಿಂತಿದಾನೆ.

ಮಾರನೇ ದಿನಾ ಕ್ಲಾಸಲ್ಲಿ ‘ಯಾಕೋ’ ಅಂತ ಕೇಳಿದೆ. ಸ್ಕೂಲ್ ಹತ್ರ ಹತ್ತಿದ್ರೆ ಎರಡು ಬಸ್ ಹೀಡೀಬೇಕು. ಅದರ ಬದಲು ಬಸ್ ಹತ್ತೋಕೆ ಮುಂಚೆ ಎರಡು ಸ್ಟಾಪ್, ಇಳಿದ ಮೇಲೆ ಎರಡು ಸ್ಟಾಪ್ ನಡೆದ್ರೆ ಒಂದೇ ಬಸ್ ಸಾಕು ಅಂದ.

ಯುರೇಕಾ! ಅಂತ ನಾನು ಕೂಗೋದೊಂದೇ ಬಾಕಿ.

ಒಂದೇ ಬಸ್ ಅಂದ್ರೆ ಬಸ್ ಚಾರ್ಜ್ ಉಳಿಯುತ್ತೆ. ಅಪ್ಪ ಯಾವಾಗ್ಲೂ ಕೊಡೋ ಹಾಗೆ ಬಸ್ ಚಾರ್ಜ್ ಕೊಟ್ರೆ ತಗೊಳ್ಳೋದು. ಒಂದೇ ಬಸ್ ಗೆ ಪಾಸ್ ಮಾಡಿಸೋದು. ಉಳಿದ ದುಡ್ಡು ಕೂಡಿ ಹಾಕಿ ಗಿಫ್ಟ್ ತಗೊಳ್ಳೋದು. ಅಬ್ಬಬ್ಬಾ ಅಂದ್ರೆ ನಡೀಬೇಕಾಗುತ್ತೆ. ನಡೆದರೆ ಆಯ್ತು ಬಿಡು ಅಂತ ನಿರ್ಧಾರ ಮಾಡಿಬಿಟ್ಟೆ.

ವಾಹ್! ಎಲ್ಲಾ ಪ್ಲಾನ್ ಮಾಡಿದ ಹಾಗೇ ಕರೆಕ್ಟ್ ಆಗಿ ಆಯ್ತು. ಗಲ್ಲಿ ಗಲ್ಲಿ ಹುಡುಕಿ ಆ ಫ್ರೆಂಡ್ ಹತ್ರ ವಿಚಾರಿಸಿ ಆ ದೊಡ್ಡ ನಟರಾಜ ಪೆನ್ಸಿಲ್ ತಗೊಂಡೆ. ಅದನ್ನ ತಂದು ನನ್ನ ತಂಗಿಗೆ ಕೊಟ್ಟಾಗ ಆಯ್ತಲ್ಲಾ ಸಂತೋಷ.. ಈಗ್ಲೂ ಮರೆಯಕ್ಕಾಗಲ್ಲ!

ಪಟಾರ್! ಅಂತ ಏಟು ಬಿತ್ತು.

ಏನಾಯ್ತು ಅಂತ ನೋಡೋದ್ರೊಳಗೆ ಬೆನ್ನಿಗೆ ಇನ್ನೊಂದು ಗುದ್ದು ಬಿತ್ತು. ಅಯ್ಯೋ ಅಂತ ಕಿರುಚಿಕೊಂಡು ಎದ್ದೇಳೋ ಅಷ್ಟೊತ್ತಿಗೆ ಕಪಾಳಕ್ಕೆ ಬಿತ್ತು. ಅಪ್ಪ ಮುಖಮೂತಿ ನೋಡದೆ ಗುದೀತಾ ಇದ್ರು. ಎದ್ದರೆ ಒಂದು, ಬಿದ್ದರೆ ಒಂದು ಬೀಳ್ತಾನೇ ಇತ್ತು.

ಎಡವಟ್ಟಾಗಿ ಹೋಗಿತ್ತು. ಹಿಂದಿನ ದಿನ ಬರ್ತಾ ಇರೋವಾಗ ವಾಕಿಂಗ್ ಗೆ ಹೊರಟಿದ್ದ ಅಪ್ಪ ನಾನು ನಡೆದು ಒರ್ತಾ ಇದ್ದಿದ್ದನ್ನ ನೋಡಿಬಿಟ್ಟಿದ್ರು. ಯಾವುದೋ ದಿಕ್ಕಲ್ಲಿ ಬರಬೇಕಾದವನು ಇನ್ನಾವುದೋ ದಿಕ್ಕಲ್ಲಿ ಬರ್ತಾ ಇದಾನಲ್ಲಾ ಅಂತಾ ನಾನು ಮಲಗಿದ ಮೇಲೆ ಬ್ಯಾಗ್ ಜಾಲಾಡಿದ್ರು,

ಜಾಮಿಟ್ರಿ ಬಾಕ್ಸ್ ನಲ್ಲಿ ಇಟ್ಟಿದ್ದ ಪಾಸ್ ಸಿಕ್ಕಿಹಾಕಿಕೊಂಡುಬಿಟ್ಟಿತ್ತು. ಅಪ್ಪ ಕೊಟ್ಟಿದ್ದ ದುಡ್ಡಿಗೂ ಪಾಸ ನಲ್ಲಿದ್ದ ಅಮೌಂಟ್ ಗೂ ತಾಳೇನೇ ಇರಲಿಲ್ಲ.

ಮಾರನೆಯ ದಿನ ಎದ್ದೇಳ್ತಿದ್ದ ಹಾಗೇನೇ ಗುದ್ದು ಬೀಳಲಿಕ್ಕೆ ಶುರುವಾಗಿತ್ತು.

‘ಬೊಗಳು ಏನ್ಮಾಡ್ದೆ? ಉಳಿದ ದುಡ್ಡು ಎಲ್ಲಿ ತಿಂದು ಹಾಕಿದೆ’ ಅಂತಾ ಅಪ್ಪ ಗುದೀತಾನೇ ಇದ್ರು. ಆದ್ರೆ ನಾನಂತೂ ಕಮಕ್ ಕಿಮಕ್ ಅನ್ನಲಿಲ್ಲ. ಗಿಫ್ಟ್ ಕೊಟ್ಟೆ ಅಂದ್ರೆ ಯಾರು ನಂಬ್ತಾರೆ? ಅವರಿಗೂ ಗುದ್ದಿ ಗುದ್ದಿ ಸಾಕಾಗಿ ಹೋಯಿತು.

ಬಗ್ಗೂ ಪಾವನಾ ಅಂದ್ರು. ಅದೋ ನನಗಂತೂ ಯಮಯಾತನೆಯ ಶಿಕ್ಷೆ. ಬಗ್ಗಿಕೊಂಡು ಕಿವಿ ಹಿಡಕೊಳ್ಳೋದು. ಶಾಲೆಗೆ ಹೋಗೋ ಹಾಗಿಲ್ಲ ಎಂದರು. ಊಟ ಹಾಕ್ಬೇಡ ಅಂತ ಅಮ್ಮನಿಗೆ ತಾಕೀತು ಮಾಡಿದ್ರು. ನಾನಂತೂ ಉಸಿರು ಹಿಡಿದು ಎಲ್ಲಾ ಅನುಭವಿಸ್ತಿದ್ದೆ. ಬಾಯಿ ಮಾತ್ರ ಬಿಡ್ಲಿಲ್ಲ.

ಆದ್ರೆ, ಆದ್ರೇನು? ಎಷ್ಟೇ ಏಟು ಬೀಳಲಿ, ಆ ಗಿಫ್ಟ್ ತಂದು ಕೊಟ್ಟಾಗ ತಂಗಿ ಕಣ್ಣು ಹೊಳೀತಲ್ಲ, ಅದರ ಮುಂದೆ ಇದು ಯಾವ ಲೆಕ್ಕಾ?

ಈಗ ಕ್ಯಾಮೆರಾ. ಐಪಾಡ್, ಲಿಯೋ ಟಾಯ್ಸ್ ಏನೇನೋ ತರ್ತೀನಿ. ಆದ್ರೆ ಆ ಎರಡು ಸ್ಟಾಪ್ ನಡೆಯೋಲ್ಲವಲ್ಲ.. ಆ ಪೆನ್ಸಿಲ್ ತರೋಲ್ವಲ್ಲ.. ಇನ್ನೇನಿದೆ ಮಜಾ?

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?