ಸಾಹಿತ್ಯ ಸಂವಾದ

ತತ್ವಜ್ಞಾನ ಪ್ರದಾಯ

ದೇವರಹಳ್ಳಿ ಧನಂಜಯ


ನಾನು ಚಂದ ಸ್ವಚ್ಛಂದ.
ಸವಾಲುಗಳೆಂದರೆ ಆನಂದ.
ಕುತೂಹಲಕ್ಕೆ ಕಂದ.
ನಂಬಿದವರಿಗಾಗಿ ಪ್ರಾಣ;
ಪಣಕ್ಕೆ ಇಡಲು ಸದಾ ಸಿದ್ಧ.
ಅಘಾದ ಶಕ್ತಿಯನು ಕೆಡುಕಿಗೆ ಬಳಸದ;
ಛಾಯಾದೇವಿಯ ಕಂದ

ನನ್ನ ರಾಮ ಆರಾಮ
ಧರ್ಮದ ಹತ್ಯಾರು
ಝಳಪಿಸುವುದಿಲ್ಲ
ಉದ್ದುದ್ದ ನಾಮ ಹಾಕುವುದಿಲ್ಲ
ಒಳ್ಳೆಯದು ಮಾಡಹೋದಾಗ
ಕೈ ಮೀರಿದ ಕೆಡುಕಿಗೆ
ತಲೆ ಕೆಡಿಸಕೊಳ್ಳುವುದಿಲ್ಲ.


ಇಲ್ಲಿಗೆ ನಿಮ್ಮ ಬರಹ, ಸುದ್ದಿ ವಾಟ್ಸಾಪ್ ಮಾಡಿ; 9844817737


ಒಳಿತ ಒಕ್ಕುಳ ಬಳ್ಳಿ,
ಮರ ಮರವ ತಬ್ಬಿ;
ನೂರೆಂಟು ಕುಲ ಚರಿತೆಯಲ್ಲಿ,
ಕಾಡು ನಾಡೆಲ್ಲಾ ಹಬ್ಬಿ,
ರಾಮ ದಂಡಕಾರಣ್ಯ ಚರಿತ.
ಮುಗಿಲಗಲ ಬೆಳೆದಾಗಲೂ,
ನೆಲ ನೇಗಿಲಿಗೆ ಒಲಿದ ದಶರಥ ಸುತ.

ರಾಮ ಅಂತಃ ಶಕ್ತಿಗೆ ಹಿಡಿದ ಕನ್ನಡಿ.
ಒಳಿತಿನ ಎಚ್ಚರದ ಮುನ್ನುಡಿ.
ಸಮ ಚಿತ್ತದ ಚಿತ್ರಕೂಟ ಸಮಾಶ್ರಯ.
ನಾನಂತೂ ವಾನರ.
ವನಕೆ ವಾರಸುದಾರ.
ಇಬ್ಬರಿಗೂ ಹಸಿರೇ ಉಸಿರು
ಮೆತ್ತಬೇಡಿ ನಮಗೆ, ದ್ವೇಷ ಕಲಹದ ಕೇಸರಿ ಕೆಸರು.

ನಿಮ್ಮ ಭಗವದ್ ಉದ್ಘೋಷ,
ಮಂತ್ರ ತಂತ್ರ ಗುಡಿಗೋಪೂರ ಬೇಕಿಲ್ಲ.
ಹನುಮ ಊರ ಹೊರಗೆ, ರಾಮ ಹನುಮನ ಜತೆಗೆ.
ಬಿಟ್ಟುಬಿಡಿ ನಮ್ಮನ್ನು ನಮ್ಮ ಪಾಡಿಗೆ,ಕಾಡಿಗೆ.
ನಗು ನಂಜಾಗದಿರಲಿ, ಭರವಸೆ ಹುಸಿಯಾಗದಿರಲಿ,
ಕಾಣಿರಿ ಪರ ಗೌರವದಿ ರಾಮನ.
ಸ್ವ ಶಕ್ತಿ,ಮುಗ್ಧ ನಂಬಿಕೆಯಲಿ ಹನುಮನ.


ಆಂಜನೇಯನಿಗೆ ಪುರಾಣದಲ್ಲಿ 108 ಹೆಸರುಗಳಿವೆ. ಮಹಾವೀರಾಯ, ಹನುಮತೇ, ಮಾರುತಾತ್ಮಜಾಯ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಅದರಲ್ಲಿ ನನ್ನನ್ನು ಬಹಳವಾಗಿ ಕಾಡಿದ್ದು ‘ತತ್ವಜ್ಞಾನ ಪ್ರದಾಯ’ ಎಂಬುವ ಹನುಮನ ಹೆಸರು. ಹಾಗೆ ನೋಡಿದರೆ ಆಂಜನೇಯನ ಬದುಕು ಮತ್ತು ರಾಮನ ಜೊತೆಗಿನ ಹನುಮನ ಬಂಧ ಬದುಕಿನ ಸಹಜ ತತ್ವಜ್ಞಾನವನ್ನು ಹೇಳುತ್ತದೆ. ಹನುಮ ಜಯಂತಿಯ ಹಿನ್ನೆಲೆಯಲ್ಲಿ ಹನುಮಾನ್ ಹಾಗೂ ರಾಮನ ನಡುವಿನ ನಿಜ ತತ್ವವನ್ನು ಹಿಡಿಯುವ ಪ್ರಯತ್ನವನ್ನು ಈ ಕವಿತೆಯಲ್ಲಿ ಮಾಡಲಾಗಿದೆ.

Comment here