Friday, March 29, 2024
Google search engine
Homeತುಮಕೂರು ಲೈವ್ತುಮಕೂರಿಗೆ PM: ಕಟ್ಟೆಚ್ಚರ

ತುಮಕೂರಿಗೆ PM: ಕಟ್ಟೆಚ್ಚರ

ತುಮಕೂರು: ಹೊಸ ವರ್ಷದ 2ನೇ ದಿನವೇ ಪ್ರಧಾನಿ ನರೇಂದ್ರ ಮೋದಿ ತುಮಕೂರು ನಗರಕ್ಕೆ ಭೇಟಿ ನೀಡುತ್ತಿದ್ದು ವ್ಯಾಪಕ ಬಂದೋಬಸ್ತ್ ಹಾಕಲಾಗಿದೆ. ನಗರದ ಎಲ್ಲ ಕಡೆ ಪೊಲೀಸರು ಕಂಡುಬರುತ್ತಿದ್ದಾರೆ.

ಸಿದ್ದಗಂಗಾ ಮಠಕ್ಕೆ ಪ್ರಧಾನಿ ಮೊದಲು ಆಗಮಿಸಿ ಅಲ್ಲಿಯೇ ಸ್ವಲ್ಪಕಾಲ ವಿದ್ಯಾರ್ಥಿಗಳಿಗೆ ಭಾಷಣ ಮಾಡಲಿರುವ ಹಿನ್ನೆಲೆಯಲ್ಲಿ ಸಿದ್ದಗಂಗಾ ಬೆಟ್ಟದ ಮೇಲೆ ವಿಶೇಷ ರಕ್ಷಣ ಪಡೆ (ಎಸ್.ಪಿ.ಜಿ)ಯ ಯೋಧರು ಕಾವಲು ಕಾಯುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈಗಾಗಲೇ ಇಡೀ ನಗರ ಎಸ್.ಪಿ.ಜಿ ಕಮಾಂಡೋಗಳ ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಅಶೋಕ ರಸ್ತೆ, ಕುಣಿಗಲ್ ರಸ್ತೆ, ಸೋಮೇಶ್ವರಂ ಮುಖ್ಯರಸ್ತೆ, ಬಟವಾಡಿ, ಕ್ಯಾತ್ಸಂದ್ರ, ರಿಂಗ್ ರಸ್ತೆ, ಕೋತಿ ತೋಪು, ತುಮಕೂರು ವಿವಿ ಆವರಣ ಹೀಗೆ ಎಲ್ಲ ಕಡೆ ಪೊಲೀಸರು ಗಸ್ತು ತಿರುಗುತಿದ್ದಾರೆ. ಕಾವಲು ಕಾಯುತ್ತಿದ್ದಾರೆ. ಪ್ರತಿಯೊಬ್ಬರ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ.

ಡ್ರೋಣ್ ಬಳಕೆಗೆ ನಿರ್ಬಂಧ


ಭದ್ರತೆಯ ದೃಷ್ಟಿಯಿಂದಾಗಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾರೊಬ್ಬರೂ ಡ್ರೋಣ್ ಬಳಸಿ ಚಿತ್ರೀಕರಣ ಮಾಡುವುದನ್ನು ಜಿಲ್ಲಾಧಿಕಾರಿಗಳು ನಿಷೇಧಿಸಿದ್ದಾರೆ. ಕಳೆದ ಮೂರು ದಿನಗಳಿಂದ ಹೆಲಿಕಾಪ್ಟರ್ ಗಳಲ್ಲಿ ಭದ್ರತೆಯ ಪರಿಶೀಲನೆ ನಡೆಸಲಾಗುತ್ತಿದೆ. ದಿನಕ್ಕೆ ಎರಡು ಮೂರು ಬಾರಿ ತುಮಕೂರು ನಗರದ ಮೇಲೆ ಸೇನಾ ಹೆಲಿಕಾಪ್ಟರ್ ಗಳು ಹಾರಾಡುತ್ತಿವೆ. ಜನರು ಕುತೂಹಲದಿಂದ ಇವುಗಳನ್ನು ನೋಡುತ್ತಿದ್ದಾರೆ.

ರಾಜ್ಯಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳು ತುಮಕೂರು ನಗರದಲ್ಲೇ ಮೊಕ್ಕಾಂ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋಶಿ ವಂಸಿಕೃಷ್ಣ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ, ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ. ಪೊಲೀಸ್ ವಾಹನಗಳ ಮೂಲಕ ನಗರದಲ್ಲೆಡೆ ಸಂಚರಿಸಿ ಭದ್ರತೆಯನ್ನು ಪರಿಶೀಲಿಸುತ್ತಿದ್ದಾರೆ.

ಮಠದ ತುಂಬೆಲ್ಲ ರಕ್ಷಣಾ ಪಡೆ


ವಿಶೇಷವಾಗಿ ಸಿದ್ದಗಂಗಾ ಮಠ ಮತ್ತು ರೈತರ ಸಮಾವೇಶ ನಡೆಯುವ ಸ್ಥಳದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಸಮಾವೇಶದಲ್ಲಿ ಯಾವುದೇ ಲೋಪಗಳು ಜರುಗದಂತೆ ತಡೆಯುವ ಹಿನ್ನೆಲೆಯಲ್ಲಿ ಟೌನ್ ಹಾಲ್ ನಿಂದ ಕ್ಯಾತ್ಸಂದ್ರದವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಕಾರ್ಯಕ್ರಮ ನಡೆಯಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದ ಸುತ್ತಮುತ್ತ ವಾಹನ ನಿಲುಗಡೆಗೂ ಒಂದು ದಿನದ ಮಟ್ಟಿಗೆ ನಿಷೇಧ ಹೇರಿದೆ. ಬಿ.ಎಚ್.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಜನರಲ್ ಕಾರಿಯಪ್ಪ ರಸ್ತೆ, ರಾಧಾಕೃಷ್ಣ ರಸ್ತೆ, ಎಸ್.ಎಸ್.ಪುರಂ, ಎಸ್.ಐಟಿ. ಮುಖ್ಯರಸ್ತೆ ರೈಲ್ವೆ ಸ್ಟೇಷನ್ ರಸ್ತೆ ಹೀಗೆ ಎಲ್ಲಿಯೂ ಕೂಡ ವಾಹನಗಳನ್ನು ನಿಲ್ಲಿಸುವಂತಿಲ್ಲ. ಹೀಗಾಗಿ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ.

ಮದ್ಯ ಮಾರಾಟ ನಿಷೇಧ


ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ 2ರ ಬೆಳಗ್ಗೆ 6 ಗಂಟೆಯಿಂದ ಜನವರಿ 3ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯದ ಅಂಗಡಿಗಳನ್ನು ತೆರೆಯದಂತೆ ಆದೇಶಿಸಲಾಗಿದೆ.

ರೈತ ಸಂಘಟನೆಗಳು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳಕ್ಕೆ ಪ್ರತಿಭಟನಾಕಾರರು ಬರದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎಸ್.ಪಿ.ಜಿ ಕಮಾಂಡೋಗಳು ಮತ್ತು ಸಾವಿರಾರು ಮಂದಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಜನವರಿ 2ರಂದು ತುಮಕೂರು ನಗರದಲ್ಲಿ ವ್ಯಾಪಾರ ವಹಿವಾಟು ನಡೆಯುವುದು ಮತ್ತು ಜನರು ಒಂದು ಸ್ಥಳದಿಂದ ಮತ್ತೊಂದು ಪ್ರದೇಶಕ್ಕೆ ವಾಹನಗಳ ಮೂಲಕ ಸಂಚಾರ ಮಾಡುವುದು ಕಷ್ಟವಾಗುವ ಸಾಧ್ಯತೆ ಇದೆ.

ನಗರದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿರುವುದರಿಂದ ಹೊರಭಾಗಗಳಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ತೊಂದರೆ ಅನುಭವಿಸಲಿದ್ದಾರೆ. ಬೆಂಗಳೂರು, ಸಿರಾ, ಕುಣಿಗಲ್, ಗುಬ್ಬಿ ಕಡೆ ತೆರಳಿರುವ ಬಸ್ ಗಳು ಸುತ್ತಿಬಳಸಿ ಹೋಗಬೇಕಾಗುತ್ತದೆ. ಆಟೊಗಳು ಕೂಡ ಬೇರೆ ಬೇರೆ ಮಾರ್ಗಗಳ ಮೂಲಕ ತೆರಳಬೇಕಾಗುವ ಸಾಧ್ಯತೆ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?