ತುಮಕೂರು ಲೈವ್

ತುಮಕೂರಿನಲ್ಲಿ ಜನರ ಬಾಗಿಲಿಗೆ ದೇವಸ್ಥಾನ ಬಂದಾಗ…

Publicstory.in


ತುಮಕೂರು: ಲಾಕ್ ಡೌನ್ ಆದ ಬಳಿಕ ಎಲ್ಲ ದೇವಸ್ಥಾನಗಳು, ಮಂದಿರಗಳು, ಚರ್ಚ್ ಗಳು ಬಾಗಿಲು ಹಾಕಲಾಗಿದೆ. ಆದರೆ ತುಮಕೂರಿನಲ್ಲೊಂದು ದೇವಸ್ಥಾನ ಲಾಕ್ ಡೌನ್ ಆದ ಬಳಿಕ ಜನರ ಬಳಿಗೆ ನಡೆದುಹೋಗುತ್ತಿದೆ.

ತುಮಕೂರಿನ ಬಟವಾಡಿಯಲ್ಲಿರುವ ವೆಂಟೇಶ್ವರ ದೇವಸ್ಥಾನವೇ ಜನರ ಬಾಗಿಲಿಗೆ ನಡೆದು ಹೋಗುತ್ತಿರುವ ದೇವಸ್ಥಾನ.

ಶಾಸಕ ಜ್ಯೋತಿಗಣೇಶ ಆಹಾರ ಧಾನ್ಯ ಹಂಚಿದರು.‌ ದೇವಸ್ಥಾನದ ಟ್ರಸ್ಟಿ ಡಿ.ಎಸ್.ಕುಮಾರ್, ಉದ್ಯಮಿ ಅರ್ಜುನ್ ಇದ್ದಾರೆ.

ದಶಕಗಳ ಹಿಂದಿನ ಮಾತು. ದಕ್ಷಿಣ ಕನ್ನಡ ಜಿಲ್ಲೆಯ ಇಡ್ಕಿದು ಗ್ರಾಮಕ್ಕೆ ಭೇಟಿ ನೀಡಿದ್ದೆ. ಅಲ್ಲೊಂದು ಈಶ್ವರ ದೇವಸ್ಥಾನವಿದೆ.

ಊರಿನವರು ಕುಡಿಯುವ ನೀರಿಗೆ ಸಮಸ್ಯೆ ಎಂದಾಗ ದೇವಸ್ಥಾನವೇ ಮುಂದೆ ಬಂದು 50 ಮನೆಗಳಿಗೆ ಪೈಪ್ ಲೈನ್ ಮೂಲಕ ಉಚಿತವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುತ್ತಿದೆ. ಇದಕ್ಕಾಗಿ ದೇವಸ್ಥಾನ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಮಾಡಿಕೊಂಡಿದೆ.

ಜನರು ಕಷ್ಟದಲ್ಲಿದ್ದಾಗ ದೇವಸ್ಥಾನಗಳೇ ಜನರ ಬಳಿಗೆ ಹೋಗಬೇಕು. ಜೀವನ ಪೂರಾ ಜನರೇ ದೇವಸ್ಥಾನಗಳಿಗೆ ಬರುವಾಗ ದೇವಸ್ಥಾನಗಳು ಸಹ ಜನರ ಬಳಿಗೆ ನಡೆದುಹೋಗಬೇಕು.

ಬಡಜನರ ಸೇವೆಯೇ ನಿಜವಾದ ಈಶಸೇವೆ ಎನ್ನುವ ಮಾತಿದೆ.ಈ ಮಾತನ್ನು ಬಟವಾಡಿಯ ವೆಂಕಟೇಶ್ವರ ದೇವಸ್ಥಾನ ನಿಜ ಮಾಡಿದೆ.

ದೇವಸ್ಥಾನದ ಟ್ರಸ್ಟಿಗಳಾದ ಡಿ.ಎಸ್,ಕುಮಾರ್ ಅವರು ದೇವಸ್ಥಾನ ಮೂಲಕ ಲಾಕ್ ಡೌನ್ ಕಾಲದಲ್ಲಿ ಹಸಿದವರಿಗೆ ಅನ್ನ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಗುಡಿಸಲು ವಾಸಿಗಳು, ಬೇರೆ ಬೇರೆ ರಾಜ್ಯಗಳಿಂದ ಬಂದು ಬಿಡಾರ ಹೂಡಿರುವ ದಿನಗೂಲಿ ಕಾರ್ಮಿಕರ ಟೆಂಟ್ ಗಳಿಗೆ ತೆರಳಿ ಊಟ, ದವಸ, ಧಾನ್ಯ ನೀಡಲಾಗುತ್ತಿದೆ.

ಬಡ ಜನರಿಗೆ ಮಾತ್ರವಲ್ಲ ಕರೊನಾ ಸೇನಾನಿಗಳಿಗೂ ನೆರವಿನ ಹಸ್ತಚಾಚಿದೆ. ಈಚೆಗೆ ಪೊಲೀಸರಿಗೆ 500 ಮಾಸ್ಕ್ ಗಳನ್ನು ವಿತರಿಸಲಾಗಿದೆ.

ತಿರುಪತಿವರೆಗೂ ಹೋಗಿ ವೆಂಕಟೇಶ್ವರನನ್ನು ನೋಡಲು ಸಾಧ್ಯವಾಗದವರಿಗೂ ತುಮಕೂರಿನಲ್ಲೇ ಆ ಸ್ವಾಮಿ ಕೃಪೆಗೆ ಪಾತ್ರರಾಗಬೇಕು ಎಂಬ ಕಾರಣದಿಂದ ದಶಕಗಳ ಕಾಲದಿಂದಲೂ ವೆಂಟಕೇಶ್ವರ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಈಗ ತುಮಕೂರಿನ ಪ್ರವಾಸಿ ಕ್ಷೇತ್ರಗಳ ಸಾಲಿಗೆ ವೆಂಟೇಶ್ವರ ದೇವಸ್ಥಾನವೂ ಸೇರಿಕೊಂಡಿದೆ.ಜನರ ಸಂಕಷ್ಟಕ್ಕೆ ದೇವಸ್ಥಾನ ಮಿಡಿಯುತ್ತಿರುವುದನ್ನು ಕಂಡು ದೇವಸ್ಥಾನದ ಭಕ್ತರಿಗೂ ಖುಷಿಯಾಗಿದೆ.

ದೇವರು ಮೆಚ್ಚುವ ಕೆಲಸ ಎಂಬ ಮಾತುಗಳು ಆಡುತ್ತಿದ್ದಾರೆ.ಲಾಕ್ ಡೌನ್ ಮುಗಿಯುವವರೆಗೂ ಸೇವೆ ಮುಂದುವರೆಯಲಿದೆ. ವಾಸ್ತವದಲ್ಲಿ ಜನರು ಒಂದು ತುತ್ತಿನ ಊಟಕ್ಕೂ ಕಷ್ಟದಲ್ಲಿದ್ದಾರೆ. ಗುಡಿಸಲಿನ ಮುಂದೆ ಹೋಗಿ ಸಹಾಯ ನೀಡಿದಾಗ ದೇವರೆ ಬಂದಂತೆ ಅವರು ಖುಷಿ ಪಡುತ್ತಾರೆ. ದೇವಸ್ಥಾನದ ಪ್ರಸಾದವಾದ ಕಾರಣ ಅವರ ಕಣ್ಣಲ್ಲಿ ಕಾಣುವ ಅಮಿತಾನಂದ ವಿವರಿಸಲು ಸಾಧ್ಯವಿಲ್ಲ. ನಿಜವಾದ ದೇವರ ಸೇವೆ ಅದೇ ಅಲ್ಲವೇ ಎನ್ನುತ್ತಾರೆ ಉದ್ಯಮಿ ಅರ್ಜುನ್.

Comment here