ನಮ್ಮೂರು

ತುಮಕೂರು ಜಿಲ್ಲೆಗೆ ಕೊನೆಗೂ ಬಂದವು ಆನೆಗಳು.

K.E.ಸಿದ್ದಯ್ಯ


ತುಮಕೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ತಡವಾಗಿ ಕಾಡಾನೆಗಳು ಬಂದಿವೆ. ಆಹಾರ ಹುಡುಕಿಕೊಂಡು ತುಮಕೂರು ಜಿಲ್ಲೆಯ ಕೆಲವು ಪ್ರದೇಶಗಳಿಗೆ ಬಂದು ಜಲಕ್ರೀಡೆಯಾಡಿ ಹೊಟ್ಟೆತುಂಬ ಮೇಯ್ದು ಹೋಗುವುದು ಮಾಮೂಲಿ.

ಪ್ರತಿ ಬಾರಿಯೂ ಜನವರಿ ಮೊದಲ ವಾರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಆನೆಗಳುಸಾಕಷ್ಟು ಹಾನಿ ಮಾಡಿ ಹೋಗು್ತ್ತಿದ್ದವು. ಬತ್ತದ ಗದ್ದೆ, ಬಾಳೆ ತೋಟ, ಅಡಿಕೆ ಮತ್ತು ತೆಂಗಿನ ಮರಗಳು ಆನೆಗಳಿಗೆ ಆಹಾರವಾಗುತ್ತಿದ್ದವು. ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದರು. ಪರಿಹಾರ ಮಾತ್ರ ಕಡಿಮೆ.

ಈ ಬಾರಿ ಫೆಬ್ರವರಿಯ ಕೊನೆಯ ವಾರದಲ್ಲಿ ಬಂದಿವೆ. ಗುಬ್ಬಿ ತಾಲೂಕಿನ ಡಿ.ರಾಮಪುರದ ತೋಟಗಳಿಗೆ ನುಗ್ಗಿ ಬೆಳೆ ಹಾಳುಮಾಡತೊಡಗಿವೆ. ಈ ಬಾರಿ ಸಾಕಷ್ಟು ಮಳೆ ಬಂದರೂ ಕೆರೆಗಳಲ್ಲಿ ನೀರು ನಿಂತಿಲ್ಲ. ಹೀಗಾಗಿ ಆನೆಗಳು ಸಾಕಷ್ಟು ಹಾನಿಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಆನೆಗಳ ಹಿಂಡು ಬೆಳೆದ ಹೊಲಗಳಿಗೆ ನುಗ್ಗಿದರೆ ಇಡೀ ಬೆಳೆಯನ್ನೇ ನಾಶಪಡಿಸುತ್ತವೆ. ಕಾಲಿಗೆ ಸಿಕ್ಕ ಮರಗಿಡ-ಬೆಳೆಯನ್ನು ನಾಸಪಡಿಸುತ್ತ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಗಳಿಗೆ ಸಂಚರಿಸುವುದು ಅವುಗಳ ಗುಣ.

ಅರಣ್ಯ ಇಲಾಖೆ ಸಿಬ್ಬಂದಿಗೆ ತುಮಕೂರು ಜಿಲ್ಲೆಗೆ ಆನೆಗಳ ಹಿಂಡು ಬಂದಿತೆಂದರೆ ನಿದ್ದೆಯೂ ಇಲ್ಲವಾಗುತ್ತದೆ. ಜನರನ್ನು ನಿಯಂತ್ರಿಸಬೇಕು. ಪಟಾಕಿ ಹೊಡೆಯದಂತೆ ನೋಡಿಕೊಳ್ಳಬೇಕು. ಆನೆಗಳ ಯಾವ ದಿಕ್ಕಿನತ್ತ ಹೋಗುತ್ತವೆ ಎಂಬ ಬಗ್ಗೆ ನಿಗಾವಹಿಸಬೇಕು. ಗ್ರಾಮಗಳ ಜನರನ್ನು ರಕ್ಷಿಸಬೇಕು – ಹೀಗೆ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರೂ ಆನೆಗಳ ದಾಳಿ ಮಾತ್ರ ನಿಲ್ಲುವುದಿಲ್ಲ.

ಆನೆಗಳ ದಾಳಿಗೆ ಇದುವರೆಗೆ ಐದಾರು ಮಂದಿ ಸಾವನ್ನಪ್ಪಿದ್ದಾರೆ. ರಾತ್ರಿ ತೋಟತುಡಿಕೆಗಳಿಗೆ, ಗದ್ದೆಗೆ ನೀರು ಹರಿಸುವ ಸಂದರ್ಭದಲ್ಲಿ ಒಬ್ಬೊಬ್ಬರೇ ಇರುತ್ತಾರೆ. ಕತ್ತಲಲ್ಲಿ ಆನೆಗಳು ಬರುವುದು ಕೂಡ ಕಾಣವುದಿಲ್ಲ. ಹೀಗಾಗಿ ರೈತರು ಆನೆಗಳ ದಾಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ.

ಬನ್ನೇರುಘಟ್ಟ ಮತ್ತು ಸಾವನದುರ್ಗದ ಅರಣ್ಯದಿಂದ ಪ್ರತಿವರ್ಷ ವಾಕ್ ದಿ ಡೆಸ್ಟ್ರಾಯ್ ಮಾಡಿಕೊಂಡು ಜಾಲಿ ರೈಡ್ ಮಾಡುವ ಆನೆಗಳು ನೀರು ಇರುವ ಕೆರೆಗಳನ್ನು ಹುಡುಕಿ ಬಿಸಿಲಲ್ಲಿ ಹಲವು ಗಂಟೆಗಳ ಕಾಲ ಜಲಕ್ರೀಡೆಯಲ್ಲಿ ಮುಳುಗಿರುತ್ತವೆ. ಅವುಗಳನ್ನು ಕೆರೆಯ ನೀರಿನಿಂದ ಹೊರಗೆ ಹೊರಡಿಸಬೇಕೆಂದರೆ ಅತ್ಯಂತ ಪ್ರಯಾಸದ ಕೆಲಸ. ಅರಣ್ಯ ಇಲಾಖೆ ಸಿಬ್ಬಂದಿ ಕೆರೆಯ ಸುತ್ತಲೂ ಎಚ್ಚರದಿಂದ ಇರಬೇಕು.

ಆನೆಗಳನ್ನು ನೋಡಲು ಸುತ್ತಮುತ್ತಲ ಗ್ರಾಮದ ಜನರು ನುಗ್ಗಿ ಬರುತ್ತಾರೆ. ಆನೆಗಳನ್ನು ಕಂಡು ಶಿಳ್ಳೆ ಹೊಡಯುತ್ತಾರೆ. ಕೇಕೆ ಹಾಕುತ್ತಾರೆ. ಪಟಾಕಿ ಸಿಡಿಸುತ್ತಾರೆ. ಆನೆಗಳಿರುವತ್ತ ಕಲ್ಲು ತೂರುತ್ತಾರೆ. ಆನೆಗಳನ್ನು ಹತ್ತಿರದಿಂದ ನೋಡಬೇಕೆಂಬ ಧಾವಂತಕ್ಕಾಗಿ ಅವುಗಳಿರುವ ಬಳಿಗೇ ಹೋಗುತ್ತಾರೆ. ಜನರನ್ನು ನಿಯಂತ್ರಿಸುವುದು ಕಷ್ಟದ ಕೆಲಸ.

ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಮನವಿ ಮಾಡಿದರು ಇದು ನಿಲ್ಲುವುದಿಲ್ಲ. ಅವರ ಮಾತನ್ನು ಕೇಳುವವರೇ ಇಲ್ಲ. ಬಿಳಿಯ ಬಟ್ಟೆಯನ್ನು ಕಂಡರೆ ಆನೆಗಳು ಕೆರಳುತ್ತವೆ. ಇಂಥವರಿಗೂ ಮನವರಿಕೆ ಮಾಡಿಕೊಡಬೇಕು ಅರಣ್ಯ ಇಲಾಖೆ ಸಿಬ್ಬಂದಿ.

ಕಿವಿಗೊಡುವವರು ಯಾರು?


ಆನೆಗಳ ಕಾರಿಡಾರ್ ನಲ್ಲಿ ವರ್ಷದ ಮೂರು ತಿಂಗಳು ಆನೆಗಳು ಸಂಚರಿಸುತ್ತವೆ. ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಪಟಾಕಿ ಖರೀದಿ ಇತರೆ ವಸ್ತುಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುವ ಲೆಕ್ಕ ತೋರಿಸುತ್ತದೆ. ಆದರೆ ಶಾಶ್ವತವಾಗಿ ಆನೆಗಳು ಬೆಳೆ ಹಾಳು ಮಾಡದಂತೆ ನಿಯಂತ್ರಿಸಲು ಸಾಧ್ಯವಾಗಿಲ್ಲ.

Comment here