ತುಮಕೂರು ಲೈವ್

ತುಮಕೂರು ನದಿಗಳ ಪುನರುಜ್ಜೀವನದ ಬಗ್ಗೆ ಮೌನ ಏಕೆ?

Publicstory


Tumkuru: ತುಮಕೂರು ಜಿಲ್ಲೆಯಲ್ಲಿ ಹರಿಯುವ ಸುವರ್ಣಮುಖಿ, ಶಿಂಷಾ, ಜಯ ಮಂಗಲಿ, ಗರುಡಾಚಲ, ನಾಗಿನಿ ನದಿಗಳ ಬಗ್ಗೆ ಜಿಲ್ಲೆಯ ರಾಜಕಾರಣಿಗಳು ಚಕಾರ ಎತ್ತುತ್ತಿಲ್ಲ ಏಕೆ ಎಂದು ವಕೀಲ, ಹಿರಿಯ ಪತ್ರಕರ್ತರಾದ ಸಿ.ಕೆ.ಮಹೇಂದ್ರ ಪ್ರಶ್ನಿಸಿದರು.

ಗುರುವಾರ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಜಿಲ್ಲಾ ಜಲ ಸಂವಾದದಲ್ಲಿ ಜಿಲ್ಲೆಯ ನದಿಗಳ ಪುನರುಜ್ಜೀವನ ಕುರಿತು ಮಾತನಾಡಿದ ಅವರು, ಭದ್ರಾ, ಹೇಮಾವತಿ, ಎತ್ತಿನಹೊಳೆ ಯೋಜನೆಗಳ ಬಗ್ಗೆ ಮಾತನಾಡಿದಷ್ಟು ನಮ್ಮ‌‌ ಜಿಲ್ಲೆಯಲ್ಲೇ ಹರಿಯುವ ನದಿಗಳ ಬಗ್ಗೆ ಮಾತನಾಡದೇ ಇರುವ ಹಿಂದೆ ರಾಜಕಾರಣ ಇದೆ. ಜಿಲ್ಲೆಯ ಜನ,‌ಜಲನಾಡಿಗಳ ಬಗ್ಗೆ ಎದೆಯಲ್ಲಿ ಕಾಳಜಿ ಇಲ್ಲದ ರಾಜಕಾರಣಿಗಳೆ ಹೆಚ್ಚಿದ್ದಾರೆ ಎಂದರು.

ತುಮಕೂರು ಜಿಲ್ಲೆ ಸಮೃದ್ಧ ನಾಡಾಗಿತ್ತು. ಹುಲಿ, ಆನೆಗಳಿದ್ದವು. ನದಿಗಳು ಬೋರ್ಗರೆತ ಇತ್ತು. ಜಲಪಾತಗಳಿದ್ದವು. ಇಂತ ಜಿಲ್ಲೆಯನ್ನು ಬರದ ಜಿಲ್ಲೆಯಾಗಲು ಏನು ಕಾರಣ ಎಂಬುದನ್ನು ಚಿಂತಿಸಬೇಕು ಎಂದರು.

ಕೇರಳ, ರಾಜಸ್ಥಾನಗಳಲ್ಲಿ ಅನೇಕ ನದಿಗಳನ್ನು ಜೀವಂತಗೊಳಿಸಿದ ಉದಾಹರಣೆಗಳು ನಮ್ಮ ಕಣ್ಮುಂದಿವೆ. ದೂರದ ಗಂಗಾ ನದಿ ಪುನರುಜ್ಜೀವನಗೊಳಿಸುವ ಬಗ್ಗೆ ಮಾತನಾಡುವ ನಾವು ನಮ್ಮ ಸುವರ್ಣಮುಖಿ ನದಿ ಬಗ್ಗೆ ಏಕೆ ಮಾತನಾಡುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಬಡ ರೈತರು ನೀರಾವರಿ ಹೋರಾಟದಲ್ಲಿದ್ದಾರೆ. ಆದರೆ ರೈತರು ಹೋರಾಟ ಮಾಡಿ ತಂದ ನೀರನ್ನು ಕೈಗಾರಿಕೆಗಳಿಗೆ ನೀಡಲಾಗುತ್ತಿದೆ. ನೀರಾವರಿ ಹೋರಾಟಕ್ಕೆ ಜಿಲ್ಲೆಯ ಉದ್ಯಮಿಗಳ ಪಾತ್ರ ಏನಿದೆ. ನದಿ ನೀರನ್ನು ಕೃಷಿಗೆ ಮಾತ್ರ ನೀಡಬೇಕು. ಕೊಳಚೆ ಸಂಸ್ಕರಿಸಿದ ನೀರನ್ನು ಕೈಗಾರಿಕೆಗಳಿಗೆ ನೀಡಬೇಕು ಎಂದರು.

ಲೇಖಕ ಸಿದ್ದಲಿಂಗಪ್ಪ ಹೊಳತಾಳ್ ಮಾತನಾಡಿ, ಗಂಗಾನದಿಗಿಂತ ನಮ್ಮ ಸುವರ್ಣಮುಖಿ ನದಿಯೇ ನಮಗೆ ಶ್ರೇಷ್ಠ. ನಮ್ಮ ನದಿಗಳನ್ನು ನಾವು ಉಳಿಸುವ ಬಗ್ಗೆ ಮಾತನಾಡಬೇಕು ಎಂದರು.

ಸಿಪಿಎಂ ನ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, , ಕಾಂಗ್ರೆಸ್ ಮುಖಂಡರಾದ ಮುರುಳೀಧರ ಹಾಲಪ್ಪ, ಪಾವಗಡದ ನಾಗಭೂಷಣ ರೆಡ್ಡಿ, ಕಾಂಗ್ರೆಸ್ ನ ನಿರಂಜನ್ ಟಿ.ಆರ್. , ರೈತ ಸಂಘದ ಚಂದ್ರಕಲಾ ಇತರರು ಇದ್ದರು.

Comments (1)

  1. ಒಳ್ಳೆಯ ವಿಚಾರಗಳನ್ನು ತಿಳಿಸಿದ ತಮಗೆ ಧನ್ಯವಾದಗಳು ಅಲ್ಲಿ ಕಾಣಿಸಿದ ರಾಜಕೀಯ. ಸೇನಾನಿಗಳಿಗೆ ತಾವು ಅಧಿಕೃತ ಮುಖಗವಸು ಹಾಕಿರುವ ಹೆಾಗೆ ಮಾತನಾಡಿದ್ದೀರಿ

Comment here