ತುಮಕೂರು ಲೈವ್

ತುರುವೇಕೆರೆ: ಇತಿಹಾಸ ಸೃಷ್ಟಿಸಿದ ಬಿಜೆಪಿ

ತುರುವೇಕೆರೆ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಅಂಜನ್ಕುಮಾರ್, ಉಪಾಧ್ಯಕ್ಷರಾಗಿ ಕೆ.ಭಾಗ್ಯಮಹೇಶ್ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣ ಪಂಚಾಯಿತಿ ನೂತನ ಸದಸ್ಯರ ಆಯ್ಕೆಗೆ 2019 ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್5, ಬಿಜೆಪಿ6, ಕಾಂಗ್ರೆಸ್2 ಒಂದು ಪಕ್ಷೇತರರು ಸೇರಿದಂತೆ ಒಟ್ಟು 14 ಸದಸ್ಯರು ಗೆಲುವು ಸಾದಿಸಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆರಡೂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು 8 ಸದಸ್ಯರ ಬಲವನ್ನು ಬಿಜೆಪಿ ಹೊಂದಿತ್ತು.

ಪ.ಪಂ ಚುನಾವಣೆಯ ನಿಗಧಿಯಂತೆ ಗುರುವಾರ ಅಧ್ಯಕ್ಷ ಗಾದಿಗೆ 7ನೇ ವಾರ್ಡ್ನ ಅಂಜನ್ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ 3ನೇ ವಾರ್ಡ್ನ ಕೆ.ಭಾಗ್ಯಮಹೇಶ್ ಇಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ತಹಶೀಲ್ದಾರ್ ಆರ್.ನಯಿಂಉನ್ನೀಸಾ ಇಬ್ಬರನ್ನೂ ಅವಿರೋಧ ಆಯ್ಕೆ ಎಂದು ಘೋಷಿಸಿದರು. 3 ಪಕ್ಷಗಳ ಎಲ್ಲ ಸದಸ್ಯರುಗಳೂ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸಂಸದ ಜಿ.ಎಸ್.ಬಸವರಾಜು ಉಪಸ್ಥಿತರಿದ್ದರು. ಮೊದಲಸಂಭ್ರಮ: ಶಾಸಕ ಮಸಾಲ ಜಯರಾಂ ನೇತೃತ್ವದ ಬಿಜೆಪಿ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳೆರಡನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡುಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಅಧ್ಯಕ್ಷರ ಆಯ್ಕೆಯ ಹೆಸರು ಘೋಷಣೆಯಾಗುತ್ತಿದ್ದಂತೆ ಪಟಾಕಿಸಿ ಸಿಡಿಸಿದರು.

ಪಟ್ಟಣ ಪಂಚಾಯಿತಿ ಕಚೇರಿ ಆವರಣದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಜಮಾಯಿಸಿದ್ದು ಎಲ್ಲರಿಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಕಾರ್ಯಕರ್ತರು, ಸಂಸದ ಹಾಗು ಶಾಸಕರ ಪರ ಘೋಷಣೆಗಳನ್ನು ಕೂಗಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷ ಮತ್ತು ಸಂಸದರಿಗೆ ಹೂಮಾಲೆ ಹಾಕಲು ಕೋವಿಡ್ನ ಸಾಮಾಜಿಕ ಅಂತರ ಮರೆತು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ನೂಕಲುನೂಕಲು ಉಂಟಾದ್ದರಿಂದ ಸಂಸದ ಜಿ.ಎಸ್.ಬಸವರಾಜು ಕಾರ್ಯಕರ್ತರಿಂದ ಬಿಡಿಸಿಕೊಂಡು ಹೊರಹೋಗಲು ಹೆಣಗಾಡಿ ಕೊನೆಗೆ ಮುಖಂಡರೊಬ್ಬರ ಸಹಾಯ ಪಡೆದು ತಮ್ಮ ಕಾರಿನಲ್ಲಿ ಕುಳಿತು ಮೆರೆವಣಿಗೆಯಲ್ಲಿ ಸಾಗಿದರು.

ಇದಾದ ಮೇಲೆ ತೆರದ ವಾಹನದಲ್ಲಿ ಶಾಸಕ ಮಸಾಲಜಯರಾಂ, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ವಾದ್ಯಗೋಷ್ಠಿಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಬಾರೀ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದೇ ವೇಳೆ ವಿವಿಧ ಪಕ್ಷಗಳ ಕೆಲ ಮುಖಂಡರು, ಸಂಘ ಸಂಸ್ಥೆಗಳ ಸದಸ್ಯರುಗಳು ಹೂಮಾಲೆ ಹಾಕಿಸಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರುಗಳಾದ ಆಶಾರಾಣಿ, ಚಿದಾನಂದ್, ಕೆ.ರವಿ, ಪ್ರಭಾಕರ್, ಮೇಘನಸುನಿಲ್, ಚುನಾವಣಾ ಸಿಬ್ಬಂದಿ ಪಿ.ಕಾಂತರಾಜು ಮುಖಂಡರುಗಳಾದ ಕೊಂಡಜ್ಜಿವಿಶ್ವನಾಥ್, ವಿ.ಟಿ.ವೆಂಕಟರಾಂ, ಪ.ಪಂ ಮುಖ್ಯಾಧಿಕಾರಿ ಮಂಜುಳಾದೇವಿ, ನರೇಂದ್ರ, ಮತ್ತು ಇನ್ನಿತರರು ಇದ್ದರು.

Comment here