ತುಮಕೂರ್ ಲೈವ್

ದೇವರಾಜ ಅರಸು ಕೊಡುಗೆ ಅಪಾರ: ಕುಲಪತಿ ಸಿದ್ದೇಗೌಡ

Publicstory


Tumkuru: ರಾಜ್ಯದ ಅಭಿವೃದ್ಧಿಗೆ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಕೊಡುಗೆ ಅಪಾರ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಹಿಂದುಳಿದ ವರ್ಗಗಳ ಕೋಶ ಹಾಗೂ ಡಿ. ದೇವರಾಜ ಅರಸು ಅಧ್ಯಯನ ಪೀಠ ಗುರುವಾರ ಆನ್ಲೈನ್ ಮೂಲಕ ಹಮ್ಮಿಕೊಂಡಿದ್ದ ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿದರು.

ಅರಸು ಹಿಂದುಳಿದ ವರ್ಗಗಳ ದನಿಯಾಗಿದ್ದರು. ಸಾಮಾಜಿಕ ನ್ಯಾಯ, ಭೂಸುಧಾರಣೆಗಳಂತಹ ಕ್ರಾಂತಿಕಾರಿ ಕ್ರಮ ಕೈಗೊಂಡರು. ಅಂಥವರನ್ನು ಸ್ಮರಿಸಬೇಕು ಎಂದರು.

ಸಂವಿಧಾನದ ಸವಲತ್ತುಗಳು ಎಲ್ಲರಿಗೂ ದೊರಕುವಂತೆ ಆಗಬೇಕೆಂಬುದು ಅರಸು ಅವರ ಏಕೈಕ ಕನಸಾಗಿತ್ತು. ಅವರ ಯೋಜನೆಗಳ ಸಮರ್ಪಕ ಅನುಷ್ಠಾನ ಇಂದಿನ ಅಗತ್ಯವಾಗಿದೆ ಎಂದರು.

ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಂ. ಜಿ. ಆರ್. ಅರಸ್ ಮಾತನಾಡಿ, ಮಲಹೊರುವ ಪದ್ಧತಿ, ಜೀತಪದ್ಧತಿಗಳಂತಹ ಅನಿಷ್ಟಗಳನ್ನು ಹೋಗಲಾಡಿಸಿ ಉಳುವವನೇ ಹೊಲದೊಡೆಯ ಕಾನೂನನ್ನು ಜಾರಿಗೆ ತಂದು ಭೂಸುಧಾರಣೆಗೆ ಕಾರಣರಾದ ದೇವರಾಜ ಅರಸು ಸಮಾನತೆಗಾಗಿ ಅವಿರತವಾಗಿ ಶ್ರಮಿಸಿದರು ಎಂದರು.

ಕುಲಸಚಿವ ಪ್ರೊ. ಕೆ. ಎನ್. ಗಂಗಾನಾಯಕ್, ಡಿ. ದೇವರಾಜ ಅರಸು ಅಧ್ಯಯನ ಪೀಠದ ನಿರ್ದೇಶಕ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಸ್ವಾಗತಿಸಿದರು. ಹಿಂದುಳಿದ ವರ್ಗಗಳ ಕೋಶದ ಸಂಯೋಜಕ ವೆಂಕಟರೆಡ್ಡಿ ರಾಮರೆಡ್ಡಿ ವಂದಿಸಿದರು.

Comment here