ತುಮಕೂರು ಲೈವ್

ನಕಲಿ ವೈದ್ಯರ ಕ್ಲಿನಿಕ್ ಗೆ ಬೀಗಮುದ್ರೆ

ಉಪವಿಭಾಧಿಕಾರಿ ಡಾ.ನಂದಿನಿದೇವಿ ರವರು ವೈ.ಎನ್.ಹೊಸಕೋಟೆ ಗ್ರಾಮದ ನಕಲಿ ವೈದ್ಯರ ಅಂಗಡಿಗಳ ಪರಿಶೀಲನೆ ನಡೆಸಿದರು.Publicstory.in


ವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ಅನಧಿಕೃತವಾಗಿ ಶುಶ್ರೂಷೆ ಮಾಡುತ್ತಿದ್ದ ನಕಲಿ ವೈದ್ಯರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಉಪ ವಿಭಾಗಾಧಿಕಾರಿ ಡಾ.ನಂದಿನಿದೇವಿಯವರು 2 ಅನಧಿಕೃತ ಕ್ಲಿನಿಕ್ ಗಳಿಗೆ ಶುಕ್ರವಾರದಂದು ಬೀಗಮುದ್ರೆ ಹಾಕಿಸಿದರು.ಬುಡ್ಡಾರೆಡ್ಡಿಹಳ್ಳಿಯ ವೆಂಕಟೇಶ್ ಮತ್ತು ಅನಂತಪುರದ ಗೋಪಾಲನಾಯ್ಕ ಎಂಬುವರು ಗ್ರಾಮದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೇಂದ್ರಗಳನ್ನು ತೆರೆದುಕೊಂಡು ರೋಗಿಗಳಿಗೆ ಶೂಶ್ರೂಷೆ ನೀಡುತ್ತಿದ್ದರು.ರಕ್ತ, ಕಫ, ಮೂತ್ರ ಇತ್ಯಾದಿಗಳ ಪರೀಕ್ಷೆಯ ಜೊತೆಗೆ ಅನಧಿಕೃತವಾಗಿ ಚುಚ್ಚುಮದ್ಧು ನೀಡುವ, ಮಾತ್ರೆಗಳನ್ನು ನೀಡುವುದು, ಗ್ಲುಕೋಸ್ ಮತ್ತು ರಕ್ತ ಏರಿಸುವ ಕೆಲಸವನ್ನು ಮಾಡುತ್ತಿದ್ದರು. ಇದಕ್ಕಾಗಿ ರೋಗಿಗಳಿಂದ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದರು.ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಅಂಗಡಿಗಳಿಗೆ ಬೀಗಮುದ್ರೆ ಹಾಕಲಾಗಿದೆ ಮತ್ತು ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ ತಿಳಿಸಿದ್ದಾರೆ.ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪರಿಶೀಲನೆಗಾಗಿ ಆಗಮಿಸಿದ್ದ ಉಪ ವಿಭಾಗಾಧಿಕಾರಿಗಳಿಗೆ ಗ್ರಾಮಪಂಚಾಯಿತಿ ಸದಸ್ಯರು ಸ್ಥಳೀಯ ಪರಿಸ್ಥಿತಿಯನ್ನು ವಿವರಿಸಿದರು.ಈ ವಿಚಾರವಾಗಿ ತಿಳಿಸುತ್ತಾ, ಖಾಸಗಿ ತುರ್ತುವಾಹನಗಳ ಮೂಲಕ ಬೆಂಗಳೂರಿನಿಂದ ಕೆಲವು ಜನ ಗ್ರಾಮಕ್ಕೆ ಆಗಮಿಸಿರುವುದು ಕಂಡುಬಂದಿದೆ.ನ್ಯಾಯಬೆಲೆ ಅಂಗಡಿಯವರು ಗುಂಪುಗೂಡಿಸಿಕೊಂಡು ಪಡಿತರ ವಿತರಿಸುತ್ತಿದ್ದಾರೆ. ಜೊತೆಗೆ ಪ್ರತಿಯೊಬ್ಬರಿಂದ 20-40 ರೂ ವಸೂಲು ಮಾಡುತ್ತಿದ್ದಾರೆ. ಬೆರಳಚ್ಚು ಅಥವಾ ಓಟಿಪಿ ಹೊಂದಾಣಿಕೆಯಾದರೆ ಮಾತ್ರ ಪಡಿತರ ವಿತರಿಸುತ್ತಿದ್ದಾರೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ಕೋಳಿ ಮತ್ತು ಮಾಂಸದ ಅಂಗಡಿಗಳಿದ್ದು, ನಿಷೇದಾಜ್ಞೆಯ ನಡುವೆಯೂ ವ್ಯಾಪಾರ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೋಳಿ ಅಂಗಡಿಗಳನ್ನು ಗ್ರಾಮದ ಹೊರಬಾಗಕ್ಕೆ ಸ್ಥಳಾಂತರಿಸಬೇಕು.ಅಂಧ್ರಪ್ರದೇಶದ ಜನತೆ ಗಡಿಭಾಗದ ಕಳ್ಳದಾರಿಗಳಲ್ಲಿ ಗ್ರಾಮಕ್ಕೆ ಪ್ರವೇಶಿಸುತ್ತಿದ್ದು, ಇವರಿಂದ ವೈರಸ್ ಹರಡುವ ಭೀತಿ ಇದೆ. ಗ್ರಾಮದಲ್ಲಿರುವ ತಂಬಾಕು ಉತ್ಪನ್ನಗಳ ಸಬರಾಜುದಾರರು ಏಕಾಏಕಿ ಬೆಲೆಗಳನ್ನು ದುಪ್ಪಟ್ಟು ಮಾಡಿ ಮಾರುತ್ತಿದ್ದಾರೆ. ಹಾಗೂ ಆಂದ್ರಪ್ರದೇಶಕ್ಕೆ ರಾತ್ರೋರಾತ್ರಿ ಸರಬರಾಜು ಮಾಡುತ್ತಿದ್ದಾರೆ. ಕೆಲವೊಂದು ಹೋಟೆಲ್‌ಗಳು ತೆರೆಯುತ್ತಿವೆ ಎಂದರು.ಈ ಬಗ್ಗೆ ಮಾತನಾಡಿದ ಉಪವಿಭಾಧಿಕಾರಿಗಳು ಈ ಎಲ್ಲಾ ವಿಷಯಗಳನ್ನು ಗಂಭೀರವಾಗಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ ತಿಳಿಸಿದರು.ಲಾಕ್‌ಡೌನ್ ವೇಳೆ ನಿಗಧಿತ ಸಮಯದಲ್ಲಿ ಮಾತ್ರ ದಿನಸಿ, ಹಾಲು ಮತ್ತು ತರಕಾರಿ ಅಂಗಡಿಗಳನ್ನು ತೆರೆಯಬೇಕು. ಇವುಗಳನ್ನು ಹೊರತುಪಡಿಸಿ ಮತ್ತಾವುದೇ ಅಂಗಡಿ ತೆರೆದರೆ ಅವುಗಳಿಗೆ ಬೀಗ್ರಮುದ್ರೆ ಹಾಕುವಂತೆ ಸೂಚಿಸಿದರು.ಗ್ರಾಮಕ್ಕೆ ಹೊಸಬರು ಪ್ರವೇಶಿಸಿದರೆ ತಕ್ಷಣವೇ ಆರೋಗ್ಯ, ಪೋಲೀಸ್ ಮತ್ತು ಪಂಚಾಯಿತಿ ಇಲಾಖೆಗೆ ಮಾಹಿತಿ ಸಿಗಬೇಕು. ಅವರ ಬಗ್ಗೆ ತೀವ್ರ ನಿಗಾ ವಹಿಸಬೇಕು. ಈ ಬಗ್ಗೆ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ತಿಳಿಸಿದರು.ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪೋಲೀಸ್ ಇಲಾಖೆಗೆ ಕಂದಾಯ ಮತ್ತು ಪಂಚಾಯಿತಿ ಇಲಾಖೆಯ ನಾಲ್ಕು ಜನರನ್ನು ಹೆಚ್ಚುವರಿಯಾಗಿ ಜೋಡಿಸಲು ಸಿದ್ದವಿದ್ದು, ರಾತ್ರಿಯ ಗಸ್ತಿಗಾಗಿ ಇಲಾಖೆಯ ಈ ನೌಕರರನ್ನು ಬಳಸಿಕೊಳ್ಳಲು ಸೂಚಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ವರಧರಾಜು, ತಾಲ್ಲೂಕು ವೈಧ್ಯಾಧಿಕಾರಿ ತಿರುಪತಯ್ಯ, ಪಿಡಿಓ ತಿಪ್ಪಣ್ಣ, ಆರಕ್ಷಕ ಉಪನಿರೀಕ್ಷಕ ಬಿ.ರಾಮಯ್ಯ ಮತ್ತು ಗ್ರಾಮಪಂಚಾಯಿತಿ ಹಲವು ಸದಸ್ಯರು ಇದ್ದರು.

Comment here