ಸಾಹಿತ್ಯ ಸಂವಾದ

ನಾನು ಬಿದಿರು…

ಸೂರಿ ತೋವಿನಕೆರೆ


ನನ್ನ ಬಗ್ಗೆ ಅಂದರೆ ನನ್ನ ಹೆಸರಿನ ಬಗ್ಗೆ ಸ್ವತಹ ನನಗೆ ಹಲವು ಗೊಂದಲಗಳಿವೆ. ನಾನು ಹುಲ್ಲೆ, ಗಿಡವೆ ಅಥವ ಮರವೆ. ಏಕೆಂದರೆ ನನ್ನ ಬಾಲ್ಯದಿಂದ ಹಿಡಿದು ಇಂದಿನವರಿಗೂ ಈ ಜನರು ನನ್ನನ್ನು ಬಿದಿರು ಅಂತಲೇ ಸಂಭಾಳಿಸುತ್ತಾ ಬಂದಿದ್ದರೆ. ತೆಂಗು ಅಡಿಕೆ ಆಲ ಅರಳಿ ಗೋಣಿ ಹುಣಸೆ ಮತ್ತು ನುಗ್ಗೆ ಈ ಎಲ್ಲಕ್ಕೂ ಅವುಗಳ ವಯಸ್ಸಿನ ಅನುಗುಣವಾಗಿ ಗಿಡ ಮರ ಎಂದು ಕರೆಯುತ್ತಾರೆ ಆದರೆ ನಾನು ಮಾತ್ರ ವಿಚಿತ್ರವಾಗಿ ಮೆಳೆ ಅಥವ ಬಿದಿರು ಮೆಳೆಯಾಗಿದ್ದೇನೆ ಈ ಜನರಿಗೆ.

ಮನುಷ್ಯರು ನನ್ನನ್ನು ಒಂದಲ್ಲ ಎರಡಲ್ಲ ಹಲವು ರೀತಿಯಾಗಿ ನನ್ನ ದೇಹವನ್ನ ಕಡಿದು ಮುರಿದು ಚಚ್ಚಿ ಜಜ್ಜಿ ಸುಲಿದು ಒಂದು ನಿರ್ಜೀವ ವಸ್ತುವನ್ನಾಗಿ ಮಾಡಿಬಿಡುತ್ತಾನೆ ಆದರೂ ಕೊನೆಗೆ ಉಳಿಯುವುದು ಅದೆ ಹೆಸರು ಬಿದಿರುಮೆಳೆ.

ಅಂದು ಆ ಬಟ್ಟಜ್ಜನ ಮಗ ಮದ್ದಯ್ಯ ನನ್ನ ಕುತ್ತಿಗೆ ಮುರಿದು ನನ್ನ ಮೈನೆಲ್ಲಾ ಬೆಂಕಿಯಲ್ಲಿ ಹದವಾಗಿ ಸುಟ್ಟು ನನ್ನ ಎರಡು ಬದಿಯಲ್ಲಿ ನನ್ನಿಂದಲೆ ನನ್ನನ್ನ ಬಂಧಿಸಿ ಆ ಹೊಗೆಯಲ್ಲಿ ಉಸಿರುಗಟ್ಟಿಸಿ, ಕಾದ ಕಬ್ಬಿಣದ ಸಲಾಕೆಯಿಂದ ಒಂದರ ಪಕ್ಕಕ್ಕೆ ಒಂದರಂತೆ ರಂದ್ರಗಳನ್ನ ಕೊರೆದು ಕೊರೆದು ನನ್ನ ದೇಹವನ್ನೆಲ್ಲ ರಂದ್ರದ ಗೂಡು ಮಾಡಿಬಿಟ್ಟ.

ನನ್ನ ಮೈಕೊಡವಿ ಅವನ ಸೊಂಟಕ್ಕೆ ಸಿಕ್ಕಿಸಿ ಕಾಡಿನೊಳಗೆ ಹೊಕ್ಕಿ ಹೆಮ್ಮರದಡಿಯ ಕರಿಕಲ್ಲನೇರಿ ಕುಳಿತು. ಅವನ ಉಸಿರನ್ನೆಲ್ಲ ಒಂದೆಡೆಗೆ ಒಗ್ಗೂಡಿಸಿ ಬೆರಳುಗಳಿಂದ ನನ್ನ ಮೈಸವರುತ್ತಲೇ ಒಮ್ಮೆಯೇ ಒಂದು ಅಮೋಘವಾದ ನಾದವನ್ನೇ ಹೊರಸೂಸಿ ಕರೆದ ಅವನ ಗಂಗೆ ತುಂಗೆ ಕೃಷ್ಣೆಯರನ್ನ. ನಾನು ಅದ್ಭುತವಾದ ಕೊಳಲಾಗಿಬಿಟ್ಟೆ ಮದ್ದಯ್ಯನ ಕೈಯಲ್ಲಿ.

ಮತ್ತೊಂದುದಿನ ಪೂರ್ವದಲ್ಲಿ ಸೂರ್ಯ ಉದಯಿಸಿ ನನ್ನ ನೆತ್ತಿಯ ಸುಡುವ ಹೊತ್ತಿಗೆ ನನ್ನೆದುರು ಕೈಯಲ್ಲಿ ಮಚ್ಚನೀಡಿದು ಮಾರಜ್ಜ ಪ್ರತ್ಯಕ್ಷನಾಗಿಬಿಟ್ಟಿದ್ದ. ನೇರವಾಗಿ ಬಂದವನೆ ನೀಳವಾಗಿರುವ ಬಂಬುಗಳನ್ನ ಪರೀಕ್ಷಿಸಿ ಒಂದೊಂದನ್ನೆ ಒಂದೊಂದನ್ನೆ ಕಡಿದು ದರದರನೆ ಧರೆಗುರುಳಿಸಿದ್ದ.


ನೀವೂ ಬರೆಯಿರಿ: ವಾಟ್ಸಾಪ್ ನಂ. 9844817737


ಮಾರಜ್ಜ ನನ್ನನ್ನ ಮನೆಗೆ ಹೊತ್ತೊಯ್ದು ನನ್ನ ದೇಹವನ್ನ ಮಚ್ಚಿನಿಂದ ಸೀಳಿ ಸುಲಿದು ಒಂದರ ಪಕ್ಕಕ್ಕೆ ಒಂದರಂತೆ ನನ್ನೆಲ್ಲ ಎಲುಬುಗಳನ್ನ ಜೊಡಿಸಿ ಒಂದು ಹೊಸ ರೂಪವನ್ನ ಕೊಟ್ಟ. ಅದೆ ಸ್ವಾಮಿ ನಿಮ್ಮ ಮನೆಯಲ್ಲಿ ಅಕ್ಕಿ ರಾಗಿ ಮಾಡುತ್ತೀರಲ್ಲ ಮೊರ, ನಿಮಗೆ ಭಯಂಕರ ಸೆಕೆಯಾದಾಗ ಬೀಸಣಿಗೆ, ನಿಮ್ಮ ದನಕರುಗಳ ಸಗಣಿಯನ್ನ ಹೊರುವ ಮಂಕರಿಯಾದೆ ಕೊನೆಗೆ ತೋವಿನಕೆರೆಯ ಶುಕ್ರವಾರದ ಸಂತೆಯಲ್ಲಿ ಮೊರ ಬೀಸಣಿಗೆ ಮಂಕರಿ ಎಂದು ಕೂಗಿಕೂಗಿ ಮಾರಿಬಿಟ್ಟ ಮಾರಜ್ಜ.

ತೋವಿನಕೆರೆಯ ಸೋಮಣ್ಣನ ಕುಲುಮೆ ಮನೆಯಿಂದ ನೇರವಾಗಿ ಬಂದ್ದ ಬುಡ್ಡಿರಜ್ಜನ ಮಚ್ಚು ನೋಡ ನೋಡುತ್ತಲೇ ನನ್ನ ಮೈಮೇಲೆ ಎರಗಿ ನನ್ನ ದೇಹದ ಸುತ್ತಲು ಸುತ್ತುವರಿದಿದ್ದ ನನ್ನ ಕೈಕಾಲುಗಳಂತಿದ್ದ ನನ್ನ ರೆಂಬೆ ಕೊಂಬೆಗಳನ್ನ ಕಡಿದು ರಾಶಿ ರಾಶಿ ಮುಳ್ಳುಗಳನ್ನ ಒಂದೆಡೆಗೆ ಸೇರಿಸಿ, ಯಾವ ಕನಿಕರವೂ ಇಲ್ಲದೆ ಆ ಬಿರುಬಿಸಿಲಿನಲ್ಲಿ ದರದರನೆ ಎಳೆದು ತಂದು ಒಂದರ ಮೇಲೊಂದು ಸೈಜ್ ಕಲ್ಲುಗಳನ್ನ ಏರಿ ಉಸಿರುಗಟ್ಟಿಸಿದ ಆ ಬುಡ್ಡಿರಜ್ಜ.

ಒಂದು ವಾರದ ನಂತರ ಬಂದವನು ನನ್ನನ್ನ ಬಲೆಯಂತೆ ಒಂದಕ್ಕೆ ಮತ್ತೊಂದರಂತೆ ಜೊಡಿಸಿ ಹೆಣೆದು ಕಟ್ಟಿ ನಿಲ್ಲಿಸಿ ಬಿಗಿದು ಅವನ ಗದ್ದೆಯ ಸುತ್ತಲು ಸುತ್ತುವರಿದ ಬೇಲಿಯನ್ನಾಗಿಸಿಕೊಂಡ. ಇಷ್ಟೆಲ್ಲ ಮಾಡಿದರು ಇಂದು ಅವನ ಗದ್ದೆಗೆ ಬರುವ ದನಕರುಗಳು ಮತ್ತು ಕಳ್ಳಕಾಕರುಗಳಿಂದ ರಕ್ಷಿಸುವ ಬೇಲಿಯಾಗಿದ್ದೇನೆ.

ಸರಿಸುಮಾರು ಮೂರುಘಂಟೆ ಇರಬಹುದು ಬಪ್ಪರಾಯಿಕದುರಪ್ಪನ ಮೇಕೆಗಳು ನೋಡನೋಡುತ್ತಲೇ ನನ್ನ ಮೈಮೇಲೆ ಅವುಗಳ ಹುಚ್ಚಾಟವನ್ನ ಪ್ರದರ್ಶಿಸಿ ನನ್ನ ಕಣ್ ರೆಪ್ಪೆಯಂತಿದ್ದ ಹಸಿ ಹಸಿಯಾದ ಹಸಿರು ಎಲೆಗಳನ್ನ ತಿಂದು ಸುತ್ತಲೂ ತಿರುಗಿ ನೋಡಿದಾಗ ದಬ್ಬ ಎಂದು ಶಬ್ಬವಾಯಿತು ಅದೇನಂದರೆ ಬಪ್ಪರಾಯಿಕದುರಪ್ಪ ತನ್ನ ಜವಳಿಯ ಕುಡುಗೋಲಿನಿಂದ ನನ್ನ ತೋಳ್ಗಳನ್ನ ಕುಯ್ದು ಕುಯ್ದು ಉರುಳಿಸಿದ್ದ, ಆ ಮೇಕೆಗಳಿಗೆ ನಾನು ಆಹಾರವಾಗಿಬಿಟ್ಟಿದ್ದೆ.

ಸೂರಿ ನಿನ್ನ ಕೊನೆಯದಿನಗಳು ಮುಗಿದು ನಿನ್ನ ಅಂತಿಮ ಯಾತ್ರೆ ಸಾಗುವಾಗ, ಆ ಯಾತ್ರೆಯಲಿ ಬಹುಮುಖ್ಯಪಾಲು ನನ್ನದು, ಅದರಲ್ಲೂ ನಿನ್ನ ಶವದ ಮೆರವಣಿಗೆಯ ಕೇಂದ್ರಬಿಂದುವಾಗುವುದು ನಾನೇ ಹೊರೆತು ನೀನಲ್ಲ, ನನ್ನನ್ನ ನೀ ಮರೆತರು ಸರಿಯೇ ನಿನ್ನ ನಾ ಮರೆಯುವುದಿಲ್ಲ ಕಾರಣ. ನಿನ್ನ ಶವ ಯಾತ್ರೆಯಲ್ಲಿ ಜನರು ನನ್ನನ್ನ ದಸರಾ ಹಬ್ಬದಲ್ಲಿ ಎಸ್ ಆರ್ ಎಸ್ ಬಸ್ಸನ್ನ ಹೇಗೆ ಸಿಂಗರಿಸುವೋರೋ ಅದಕ್ಕಿಂತ ಆ ಬಸ್ಸಿಗಿಂತಲೂ ಸುಂದರವಾಗಿ ಸಿಂಗರಿಸಿ ವಿಜ್ರಮಿಸುತ್ತಾರೆ ನನ್ನನ್ನ ಹೊತ್ತುಸಾಗುತ್ತಾರೆ ನೀ ಬಾರದೂರಿನ ಕಡೆಗೆ.


ತೋವಿನಕೆರೆ ಸೂರಿ ಹೆಸರಿನಲ್ಲಿ ಬರೆಯುವ ತೋವಿನಕೆರೆಯ ಸೂರ್ಯಪ್ರಕಾಶ್ ಅವರು ತುಮಕೂರಿನಲ್ಲಿ ಆಂಗ್ಲ ಉಪನ್ಯಾಸಕರು.‌ಪರಿಸರದ ಬಗ್ಗೆ ಹೆಚ್ಚು ಕುತೂಹಲ ಉಳ್ಳವರು.

Comments (4)

 1. Topic superb 👍 sir

 2. Sir super , you are a great writer . Your writings have deep meanings for life and brings the light of inspiration to our lives.
  Thank you for such a gift to the society .
  Thank you sir
  Akhilesh.m.k
  Student

 3. ಉತ್ತಮವಾದ ಪದಬಂಧ ಜೊತೆಗೆ ನಮ್ಮ ಜೀವನದ ಎಲ್ಲಾ ಹಂತಗಳಲ್ಲೂ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಸೊಗಸಾಗಿ ಮೂಡಿ ಬಂದಿಬಂದಿರುವ ಕವಿತೆಯ ಈ ಪರಿಯ ಸೊಬಗ ವರ್ಣಿಸಲು ಮಾತೆ ನಿಲುಕದು.

 4. Awesome sir
  Sir superb topic👌👌

Comment here