ಜನಮನ

ನೆನಪಿನ ಅಂಗಳದಿ ಕಾಡುವ ನೆನಪು ನನ್ನ ಅಜ್ಜಿ

ಶಿಲ್ಪ ಟಿ.ಎಂ


ಈಗಲೂ ದೊಡ್ದಮನೆಯ ಗುಡಿಸಿ ಸಾರಿಸಿರುವಳೇ ನನ್ನಜ್ಜಿ‌ ಎಂದು ನೋಡಲು ಕೂತಹಲ ನನಗೆ.

ಅಜ್ಜಿ‌ ಇನ್ನಿಲ್ಲವಾದರೂ ದೊಡ್ಡಮನೆಯನ್ನು ಅವಳು ಗುಡಿಸಿ, ‌ಸಾರಿಸುತ್ತಿರಬಹುದು ಎಂದು‌ ಇಣುಕಿ ನೋಡುವ ದಿನಗಳೆಷ್ಟೋ ನನಗೆ ಗೊತ್ತಿಲ್ಲ.

ಎಮ್ಮೆಯ ಹಾಲು ಕರೆಯುತ್ತಿದ್ಧ ನನ್ನಜ್ಜಿಯ ಹಿಂದೆ ಚೆಂಬು ಹಿಡಿದು ಹಾಲಿಗೆ ಕಾದು ಅವಳನ್ನೊಮ್ಮೆ ನೋಡುವ ಆಸೆ ,ಹಸಿಮಟ್ಟೆ ಹೊಲೆಗೆ ಇಟ್ಟು ಹಾಲು ಕೆಂಪಗೆ ಕಾಯಿಸಿ ಗಟ್ಟಿ ಮೊಸರಿನ ರುಚಿಯ ತೋರಿಸಿವಳೆ ಮತ್ತೊಮ್ಮೆ ?

ತೊಗರಿ ಬೇಳೆಯ ವಡೆಯನ್ನು ಹೆಂಚ ಮೇಲೆ ಬೇಯಿಸಿ ಸ್ವಲ್ಪ ದೂರದಲ್ಲಿದ್ದ ಮನೆಗೆ ತಲುಪಿಸಿ ವಡೆ ಮಾಡಿದಿನಿ ತಿನ್ನಿ ಎಂದಾಗ ಓದಲು ಕೂತ್ತಿದ್ದ ನಾವು ಓಡಿ ಬಂದು ತಿಂದು ಚಪ್ಪರಿಸುವಾಗ ಅವಳ ಆತ್ಮೀಯ ನಗು, ಇಂದು ಏನೇ ತಿಂದರು ಚಪ್ಪರಿಸುವಂತಿಲ್ಲ .!!ಎಮ್ಮೆ ಹಿಡಿದು, ಕಡ್ಡಿ ಸಿಗಿಯಲು ಚಾಕು ಸೊಂಟಕ್ಕೆ ಸಿಗಿಸಿ ತಾತನ ಜೊತೆ ತೊಟಕ್ಕೆ ಹೊರಟರೆ ವಾಪಸ್ಸು ಆಗುವಾಗ ಅವಳ ಸೆರಗೊಳಗೆ ಅಣಬೆ ಇರಬಹುದಾ, ಬಾರೆ ಹಣ್ಣು ಇರಬಹುದಾ ಎಂದು ಪ್ರಶ್ನೆ ಮೂಡಿ ಅವಳ ಹಿಂದೆಯೆ ಕಾಲು ಓಡುತ್ತಿದ್ದವು.

ಹಣಬೆ ಸಾರಿಗೆ ರಾತ್ರಿ ನೀನು ನನ್ನ ಕರೆಯಬೇಕು, ಊಟ ಮಾಡಲ್ಲ ಎಂದು ಹೇಳಿ ಓದಲು ಕುಳಿತರೆ ಅಣಬೆ ಸಾರಿನ ಘಮದ ಮೇಲೆ ನನ್ನ ಗಮನವಿರುತ್ತಿತ್ತು ……ಬಟ್ಟೆ ತೊಳೆಯಲು ಕೆರೆಗೆ ಹೋದರೆ ಅಜ್ಜಿ ಅಲ್ಲಿಯ ಸೀಬಿ ಗೆಡ್ಡೆ ಕಿತ್ತು ತಂದು ಪಲ್ಲ್ಯ ಮಾಡಿ ನಮಗೆ ತಪ್ಪದೆ ತಲುಪಿಸುತಿದ್ದಳು.

ಹೆಚ್ಚು ನೆನಪಾಗುವುದು ತಲೆಗೆ ಹರಳೆಣ್ಣೆ ಊಟಕ್ಕೆ ಹಪ್ಪಳ ಚಿನಕುರಳಿ ಕೊಳ್ಳುವಾಗ ,ಅವಳು ಅದೆಲ್ಲವ ಮಾಡಿ ಮಡಿಕೆ ಸಾಲಿನಲ್ಲಿ ಜೊೀಪಾನ ಮಾಡಿದ್ಧಳು ಕೊಳ್ಳುವಾಗಿಲ್ಲ …!!!

ಅವಳ ನೆನಪಾಗುವುದು ಸಣ್ಣಗೆ ಇಡುವ ನಮ್ಮ ಹಣೆಯ ಬೊಟ್ಟು ಕಾಣದಾದಗ, ಹಣೆಯ ಅಷ್ಟಗಲ ಕುಂಕುಮ ,ತಲೆಯ ಚೆಂಡು ಹೂ …. ಸಕ್ಕರೆ ಖಾಯಿಲೆಯಿಂದ ಕಾಲು ಕಳೆದುಕೊಂಡಿದ್ಧ ತಾತನನ್ನು ಒಬ್ಬಳೆ ನಿಭಾಯಿಸಿದಳು. ಇನ್ನೆರಡೆ ವರ್ಷಕ್ಕೆ ಸಾವಿನ ಹೆಜ್ಜೆ ಇಟ್ಟು ಕಟ್ಟೆಯ ಕಡೆ ನೆಡೆದ ಅವಳ ಹೆಜ್ಜೆ ಗುರುತುಗಳು ಪ್ರಶ್ನೆ ಮಾಡುತ್ತಿವೆ ?

ಅವಳನ್ನು ಅಪ್ಪಿದ ಕಟ್ಟೆ ಇಂದು ತುಂಬಿಲ್ಲವೇಕೆಂದು ….. ಹಾಲು ಕರೆಯುವ ಎಮ್ಮೆ ಇಲ್ಲ , ಕ್ವಾಡೊಲೆಯಲ್ಲಿ ಕಾದ ಹಾಲಿಲ್ಲ, ಮಜ್ಜಿಗೆ ಮಂತಿನ ಶಬ್ದವಿಲ್ಲ, ಹಣಬೆ ಸಾರಿನ ಘಮವಿಲ್ಲ ……. !!!

Comment here