ಕವನ

ಪರಿಸರ ದಿನದ ಪದ್ಯಗಳು*

ದೇವರಿಗೆ…

ದೇವರಿಗೆ
ವರುಷಕ್ಕೊಮ್ಮೆ
ರಥೋತ್ಸವ!
ಪರಿಸರ ಕಾಳಜಿಗೆ
ಒಮ್ಮೆ ವನಮಹೋತ್ಸವ
ಮನುಷ್ಯರಿಗೆ ಮಾತ್ರ
ದಿನಾ ನೂರೆಂಟು ಉತ್ಸವ!

*****

ಇಂದು ಭಾನುವಾರ

ನಮಗೂ ಗೊತ್ತು
ರಕ್ಷಿಸಬೇಕು
ಪರಿಸರ!
ನಾಳೆ ಪ್ರಾರಂಭಿಸುವೆವು
ಇಂದು ರಜಾ
ಭಾನುವಾರ!

*****

ಕಾರಣ ಅಲ್ಲ

ಭೂಮಿಯ

ಬಿಸಿಗೆ
ಬರೀ ಇಂಗಾಲ
ಕಾರಣ ಅಲ್ಲ!
ನಮ್ಮಿಬ್ಬರ
ಬಿಸಿಯುಸಿರೂ ಕಾರಣ
ಗೊತ್ತಾ ನಲ್ಲ?

******

ಮರ‌ತಬ್ಬಿ

ಆಗ ಅವನು
ಮರ ತಬ್ಬಿ
ನಡೆಸಿದ್ದ ಪರಿಸರ
ಚಳುವಳಿ!
ಈಗ ಮಡದಿಯ ತಬ್ಬಿ
ನೀಡಿದ್ದಾನೆ ಚಿನ್ನದಸರ
ಬಳುವಳಿ!

*****

ಕಾರಣ

ಎರಡು ಕಾರಣ
ಪರಿಸರ ನಾಶಕ್ಕೆ
ಒಂದು
ಕೈಗಾರಿಕೆಗಳ
ಹೊರಸೂಸುವಿಕೆ
ಮತ್ತೊಂದು
ಎಲ್ಲಂದರಲ್ಲಿ
ಮನುಷ್ಯರ
ಹೊರ “ಸೂಸು”ವಿಕೆ!


*~ತುರುವೇಕೆರೆ ಪ್ರಸಾದ್

Comment here