ಜಸ್ಟ್ ನ್ಯೂಸ್

ಬಡವರ ಬಳಕೆ ವಸ್ತುಗೆ ಬರೆ ಎಳೆದ ಬಿಜೆಪಿ:ಎಎಪಿ

Publicstory


ತುಮಕೂರು: ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಏರಿಕೆ ಮಾಡಿ ಬಡವರನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ಹುನ್ನಾರ ದೇಶದಲ್ಲಿ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ಹೇಳಿದೆ.
ಬಡವರೇ ಹೆಚ್ಚಾಗಿ ಬಳಸುವ ಮಂಡಕ್ಕಿ,ಮೊಸರು, ಮಜ್ಜಿಗೆ, ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಏರಿಕೆ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಬಡವರನ್ನು ಮತ್ತಷ್ಟು ಬಡವರನ್ನಾಗಿಸುವ ವ್ಯವಸ್ಥಿತ ಹುನ್ನಾರ ನಡೆಸಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಎಲ್.ವಿಶ್ವನಾಥ್ ತಿಳಿಸಿದ್ದಾರೆ.
ಇದೇ ವೇಳೆ ರೈತ ಮತ್ತು ಶಿಕ್ಷಣ ವಿರೋಧಿ ಧೋರಣೆ ಅನುಸರಿಸುವ ಬಿಜೆಪಿ ಸರ್ಕಾರ, ರೈತರು ಬಳಸುವ ಸಬ್ ಮರ್ಸಿಬಲ್ ಪಂಪು-ಮೋಟಾರುಗಳ ಮೇಲೆ ಇದ್ದ ಜಿಎಸ್ಟಿ ಯನ್ನು ಶೇ.12ರಿಂದ18ಕ್ಕೆ ಏರಿಕೆ ಮಾಡಿದೆ. ಮಕ್ಕಳು ಶಿಕ್ಷಣಕ್ಕಾಗಿ ಬಳಸುವ ಭೂಪಟಗಳು, ಗ್ಲೋಬುಗಳ ಮೇಲೆ ಈವರೆಗೆ ಜಿಎಸ್ಟಿ ಇರಲಿಲ್ಲ. ಇದೀಗ ಅವುಗಳಿಗೂ ಶೇ. 12ರಷ್ಟು ಜಿಎಸ್ಟಿ ವಿಧಿಸಿದೆ ಎಂದು ದೂರಿದ್ದಾರೆ.
ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಏರಿಕೆ ಆಗಿರುವುದಕ್ಕೆ ಬಿಜೆಪಿಯ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿರುವುದನ್ನು ಗಮನಿಸಿದರೆ ಆ ಪಕ್ಷಕ್ಕೆ ಮುಂದಿನ ಚುನಾವಣೆಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಅಗತ್ಯ ವಸ್ತುಗಳ ಮೇಲೆ ಏರಿಕೆಯಾಗಿರುವ ಜಿಎಸ್ಟಿ ವಾಪಸ್ ಪಡೆಯದಿದ್ದರೆ ಎಎಪಿ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಾ. ವಿಶ್ವನಾಥ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comment here