ಪೊಲಿಟಿಕಲ್

ಬೆಂಗಳೂರಿನಲ್ಲಿರುವ ಶಿರಾ ಮತದಾರರಿಗೆ ಡಿಸಿಎಂ ಹೇಳಿದ್ದೇನು ಗೊತ್ತಾ?

Publicstory. in


ಬೆಂಗಳೂರು: ಇಷ್ಟು ದಿನ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ನಾಯಕರಿಗೆ ಸಮಸ್ಯೆಗಳ ಅರಿವೇ ಇರಲಿಲ್ಲ. ಇನ್ನು ಅವರು ಆ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುವುದು ಎಲ್ಲಿಂದ ಬಂತು. ಹೀಗಾಗಿ ರಾಜ್ಯ ಸಾಕಷ್ಟು ಬೆಲೆ ತೆತ್ತಿತು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಟೀಕಾಪ್ರಹಾರ ನಡೆಸಿದರು.ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ನೆಲೆಸಿರುವ ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಯಲ್ಲಿ ಅವರು‌ ಮಾತನಾಡಿದರು. ಸಚಿವ ಕೆ.ಗೋಪಾಲಯ್ಯ ಆಯೋಜಿಸಿದ್ದರು.ಅಭಿವೃದ್ಧಿ, ಜನರ ಕೌಶಲ್ಯ, ಶಿಕ್ಷಣ ಇತ್ಯಾದಿಗಳ ಮಹತ್ವ ಗೊತ್ತಿಲ್ಲದ ನಾಯಕರು ಜನರನ್ನು ಸದಾ ಕತ್ತಲೆಯಲ್ಲೇ ಇಟ್ಟರು. ಸಮಸ್ಯೆಗಳನ್ನು ಯಾವಾಗಲೂ ಜೀವಂತವಾಗಿಟ್ಟುಕೊಂಡು ಜನರ ಕಣ್ಣೀರಿನ ಮೇಲೆ ರಾಜಕೀಯ ಮಾಡುವುದೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚಾಳಿ ಎಂದರು.ಕೆಲ ನಾಯಕರು ಮತ್ತು ಪಕ್ಷಗಳಿಗೆ ಚುನಾವಣೆ ಎಂದರೆ ಭಾವನಾತ್ಮಕ ವಿಷಯಗಳನ್ನು ಕೆದಕುವುದು ಹಾಗೂ ಜಾತಿಯಂತಹ ಸೂಕ್ಷ್ಮ ವಿಚಾರಗಳನ್ನು ಮುನ್ನೆಲೆಗೆ ತಂದು ಬೇಳೆ ಬೇಯಿಸಿಕೊಳ್ಳುವುದು ಅಭ್ಯಾಸವಾಗಿದೆ. ಈ ಚುನಾವಣೆಯಲ್ಲೂ ಅದೇ ಪುನರಾವರ್ತನೆ ಆಗುತ್ತಿದೆ. ಇದು ನಿಜಕ್ಕೂ ಅಸಹ್ಯದ ಪರಮಾವಧಿ. ಪ್ರಗತಿಯ ವಿಷಯ ಬಿಟ್ಟು ಭಾವನಾತ್ಮಕ ವಿಷಯಗಳ ಮೂಲಕ ರಾಜಕೀಯ ಮಾಡುವ ಶಕ್ತಿಗಳಿಗೆ ಪಾಠ ಕಲಿಸಬೇಕು ಎಂದು ಅವರು ಹೇಳಿದರು.ಜನರ ಮುಂದೆ ಬಂದಾಗ ಪ್ರಗತಿಯ ಬಗ್ಗೆ ಮಾತನಾಡಬೇಕು. ನಮಗೆ ಹಾಗೆ ಮಾತನಾಡಲು ಧೈರ್ಯವಿದೆ. ಕೈಗಾರಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕವಾದ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಸುಧಾರಣೆ ತಿದ್ದುಪಡಿ ಕಾಯ್ದೆ ಇತ್ಯಾದಿಗಳನ್ನು ಜಾರಿಗೆ ತಂದಿದ್ದೇವೆ. ಕೃಷಿಕರ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷಗಳ ನಾಯಕರು ರೈತರಿಗಾಗಿ ಏನು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು.ಕೆಲವರಿಗೆ ರಾಜಕೀಯ ಎಂದರೆ ತಾವು, ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಬೆಳೆಸಿಕೊಳ್ಳುವುದೇ ಆಗಿದೆ. ನಿರಂತರವಾಗಿ ಜಾತಿ ಹೆಸರು ಹೇಳಿಕೊಂಡೇ ತಮ್ಮ ಕುಟುಂಬಗಳನ್ನು ಬೆಳೆಸಿಕೊಂಡರು, ಮನೆಯಲ್ಲಿ ಇದ್ದವರೆಲ್ಲರನ್ನೂ ನಾಯಕರನ್ನಾಗಿ ಬೆಳೆಸಿಕೊಂಡರು. ಅವರನ್ನು ನಂಬಿದ ಕಾರ್ಯಕರ್ತರು ಬೀದಿ ಪಾಲಾದರು. ಆ ಮಹಾನ್‌ ನಾಯಕರಿಗೆ ಮತ ಹಾಕಿದರು ಕೂಡ ಅತಂತ್ರರಾಗುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದರು. ಇಂತಹ ನಾಯಕರು ಹಾಗೂ ಅವರು ಪ್ರತಿನಿಧಿಸುವ ರಾಜಕೀಯ ಪಕ್ಷಗಳು ನಮಗೆ ಬೇಕೆ ಎಂಬುದನ್ನು ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಡಿಸಿಎಂ ಟೀಕಾಪ್ರಹಾರ ನಡೆಸಿದರು.ಶಿರಾದಲ್ಲಿ ಅಭಿವೃದ್ಧಿ ಶೂನ್ಯಇತ್ತೀಚೆಗೆ ನಮ್ಮ ಅಭ್ಯರ್ಥಿ ನಾಮಪತ್ರ ಸಲ್ಲಿಸಬೇಕಾದರೆ ನಾನು ಕೂಡ ಶಿರಾಗೆ ಹೋಗಿಬಂದೆ. ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆಯೂ ನನ್ನಲ್ಲಿ ಮಾಹಿತಿ ಇದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಈ ಕ್ಷೇತ್ರದಿಂದ ಗೆಲ್ಲಿಸಲಾಗಿದೆ. ಆದರೆ, ನಿರಂತರವಾಗಿ ಅಲ್ಲಿ ರಾಜಕೀಯ ನಡೆದಿದೆಯೇ ಹೊರತು ಕಿಂಚಿತ್ತೂ ಅಭಿವೃದ್ಧಿಯಾಗಿಲ್ಲ. ಹೆದ್ದಾರಿಗೆ ಹೊಂದಿಕೊಂಡಿರುವ ಆ ಪಟ್ಟಣದಲ್ಲಿ ಒಂದು ಕೈಗಾರಿಕೆ ಇಲ್ಲ. ಕೃಷಿಕರಂತೂ ಕಷ್ಟದ ಜೀವನ ನಡೆಸುತ್ತಿದ್ದಾರೆಂದು ಡಾ.ಅಶ್ವತ್ಥನಾರಾಯಣ ದೂರಿದರು.ಸಭೆಯಲ್ಲಿ ಸಚಿವ ಗೋಪಾಲಯ್ಯ, ಮಾಜಿ ಸಂಸದ ಹಾಗೂ ರಾಜೇಶಗೌಡ ಅವರ ತಂದೆ ಮೂಡಲಗಿರಿಯಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಪಾಲ್ಗೊಂಡಿದ್ದರು.

Comment here