ಭಾನುವಾರದ ಕವಿತೆ

ಭಾನುವಾರದ ಕವಿತೆ : ತಾಯಂದಿರ ದಿನ

ಇಂದು‌ ವಿಶ್ವತಾಯಂದಿರ ದಿನದ‌ ಪ್ರಯುಕ್ತ ಭಾನುವಾರದ ಕವಿತೆ ವಿಭಾಗದಲ್ಲಿ ತಾಯಿಯಂದಿರ ಮನೋತಳಮಳ, ಕರೋನಾ ಸಂಕಷ್ಟದ ಸಮಯದಲ್ಲಿ ಅವಳ ಮನದಾಳವನ್ನು ತೆರೆದಿಟ್ಟಿರುವ ಕವಿತೆ ನಿಮಗಾಗಿ.

ವಿಶ್ವತಾಯಂದಿರ ದಿನದ ಪ್ರಯುಕ್ತ ತಾಯಿಯನ್ನು ಕುರಿತು ನೀವು ಪಬ್ಲಿಕ್ ಸ್ಟೋರಿಗೆ ಲೇಖನ ಅಥವಾ ಕವನವನ್ನು ಬರೆದು ವಾಟ್ಸಪ್ ನಂಬರ್ ಗೆ ಕಳುಹಿಸಿ.

ಎಲ್ಲರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.

ಡಾಕ್ಟರ್ ರಜನಿ ಎಂ

ನಾನು ಗರ್ಭಿಣಿ
ಕೋವಿಡ್ ವ್ಯಾಕ್ಸಿನ್ ತಗೋಬಹುದಾ?

ನಾನು ಕೋವಿಡ್ ಪಾಸಿಟಿವ್
ಹಾಲು ಕುಡಿಸಬಹುದಾ?

ಅಪ್ಪಾ ತಗೋ ಶುಂಠಿ ಕಷಾಯ
ಪಾಪೂ ಸರಿಯಾಗಿ ಕೈ ತೊಳಿ..

ಸತ್ತ ಮಗುವ ಬಿಡದ ತಾಯಿ
ತಾಯಿಯ ಚಿತೆಗೆ ಬೆಂಕಿ ಹಚ್ಚುವ ಮಗ

ತಾಯಿಯ ಹೆಣ ಬಿಟ್ಟು ಹೋದ ಮಗ
ಅಪ್ಪನಿಗೆ ಕೊನೆಗಾಲದಲ್ಲಿ ನೀರು ಕುಡಿಸುವ ಮಗಳು

ಹೆಗಲ ಮೇಲೆ, ಸೂಟ್ ಕೇಸ್ ಮೇಲೆ
ಸೊಂಟದ ಮೇಲೆ ,ಮಗುವ ಎತ್ತಿಕೊಂಡು ಊರು ಬಿಡುವ ಜನ

ಏದುಸಿರ ಮಗುವ ಎತ್ತಿ ಓಡೋಡಿ ಬಂದು
ಆಸ್ಪತ್ರೆ ಬಾಗಿಲಲಿ ಕುಸಿದ ತಾಯಿ

ವ್ಯಾನಿಟಿ ಬ್ಯಾಗಲ್ಲಿ ಸ್ಯಾನಿ ಟೈಸರ್
ಮಿಕಿ ಮೌಸ್ ಮಾಸ್ಕ್
ಮಂಕಿ ಟೋಪಿಯೇ ಮಾಸ್ಕ್

ನಾನು ಪಾಸಿಟಿವ್
ಮಕ್ಕಳಿಗೆ ಅಡುಗೆ ಮಾಡಬಹುದಾ?

ಸತ್ತ ತಾಯಿಯ ಏಳಿಸುವ ಮಗು
ನಮ್ಮಪ್ಪ ಹುಲಿ ಇದ್ದ ಹಾಗೆ ಇದ್ದ….

ನನ್ನಣ್ಣ ನನಗೆ ಅಪ್ಪ ಇದ್ದಾಗೆ ಇದ್ದ…
ನನ್ನ ಚಿನ್ನು ಬೇಕು…..
ಅಮ್ಮಣ್ಣಿ ಎಲ್ಲಿದ್ದಿ? ಎಂದು ಕರೆದ

ಜಿಪ್ ಒಳಗೆ ಮುಖ ಕಾಣಲಿಲ್ಲ
ಯಾರ ಹೆಣ ಯಾರಿಗೋ‌‌..
ಯಾರ ಮಣ್ಣು ಯಾರೋ ಮಾಡಿ

ಸಾವಿಗೆಂತ ಜಾತಿ?
ಅಂತಸ್ತು ?

ನಿರಾಶೆಯಾಗಬೇಡಿ
————————😘

ಬಂದೇ ಬರುವುದು
ಮಗುವ ಮುದ್ದಾಡುವ ದಿನ

ಮುಟ್ಟಿ ಮಾತಾಡುವ ದಿನ
ಬಗ್ಗಿ ಪಿಸುಗುಡುವ ದಿನ

ಮುಖವಾಡ ಕಳಚಿ
ಬೆತ್ತಲಾಗುವ ದಿನ

ಸಾಕ್ಷಿ ?😃

ಆನ್ ಲೈನ್ ನಲ್ಲಿ ಪಾಠ ಕಲಿಯುವ ಮಕ್ಕಳು!
ಲಾಕ್ ಡೌನ್ ವರ್ಚುವಲ್ ಮದುವೆ
ಭರಣಿ ಮಳೆಗೆ ಬಲಿತ ಮಾವು
ಮಾಸ್ಕ್ ತೆಗೆದು ಕದ್ದ ಪ್ರೇಮಿಯ ಮುತ್ತು…
ಸ್ಯಾನಿಟೈಸರ್ ಹಾಕಿದ ನಂತರ ಹಿಡಿದ ಆಕೆಯ ಅಂಗೈ
ಅಜ್ಜಿಯ ತಿಂಗಳ ಬಿಪಿ ಮಾತ್ರೆ ದಾಸ್ತಾನು
ಲಾಟಿ ನೋಡಿ ಓಡುವ ಕೈನೆಟಿಕ್
ಲಿಪ್ ಸ್ಟಿಕ್ ವಿತರಕ

ಎಲ್ಲದಕಿಂತ ….

ಅಕ್ಟೋಬರ್ ಕಳೆಯಲ ಡಾಕ್ಟರ್?
ಆಮೇಲೆ ಗರ್ಭಿಣಿ ಆಗಬಹುದಾ ?

ಎನ್ನುವ ಮುದ್ದು ಕರಿ ಬಳೆ ಹುಡುಗಿ.

Comment here