ಭಾನುವಾರದ ಕವಿತೆ

ಭಾನುವಾರದ ಕವಿತೆ: ನೀನು ಕಾಣದೆ ಚೋಟು!

ತುರುವೇಕೆರೆ ಪ್ರಸಾದ್


ಬೇಲಿಯ ಮೇಲೆ ನೋಡಿದೆ ಅಳಿಲಿನ ಒಯ್ಯಾರ ಒನಪು
ಹಿಡಿಯಲು ತಿಪ್ಪರಲಾಗ ಹಾಕಿದ ನಿನ್ನದೇ ನೆನಪು

ಕಾರಿಡಾರಿನ ತಟ್ಟೆ ತುಂಬಾ ಕಾದು ಕೂತಿದೆ ಜೆಲ್ಲಿಮೀನಿನ ತಾಲಿ
ಮನಸ್ಸು ಮಾತ್ರ ನೀನಿಲ್ಲದೆ ಪೂರಾ ಕಾಲಿ ಕಾಲಿ

ದೀಪಗಳು ಪ್ರಜ್ವಲಿಸುತ್ತಾ ಉರಿಯುತಿವೆ ಪ್ರತಿರಾತ್ರಿ
ಹುಡುಕಿ ಕೊಡಲು ಸೋತಿವೆ ನಿನ್ನ ಕಂಗಳ ಪ್ರೀತಿ

ಮಂಚದ ತುದಿಯ ಕಾಲಬುಡದಲ್ಲಿ ನೀನಾಗಿದ್ದೆ ಮೆತ್ತೆ
ನೀನಿಲ್ಲದೆ ಒತ್ತುತಿದೆ ಕಾಲು, ಎಚ್ಚರವಾಗುತಿದೆ ಮತ್ತೆ ಮತ್ತೆ

ರತ್ನಗಂಬಳಿಯ ನೆಲಹಾಸು ಹಾಲಿನಲ್ಲಿ ಸತ್ತು ಬಿದ್ದಿದೆ
ಮೂತಿಯುಜ್ಜಿ ನಿನ್ನದಾಗಿಸಿಕೊಳ್ಳುವ ಸುಖಕೆ ಮನಸು ಕಾದಿದೆ

ಬಾಲ್ಕನಿ, ಪೋರ್ಟಿಕೋ, ಜೋಕಾಲಿಗಳಿಗೆ ನಿನ್ನದೇ ತವಕ
ನೀ ಜೀವ ತುಂಬಿದ್ದ ಎಲ್ಲವೂ ಮತ್ತಾಗಿವೆ ಸ್ಮಾರಕ

ಅರೆನಿದ್ದೆಯ ಕನವರಿಕೆಗೆ ಮೇಳೈಸಿದೆ ನಿನ್ನ ಊಊಊಊ
ಎಚ್ಚರವಾದೀತೆಂದು ಮಿಯಾಂ ಎನ್ನದ ನಿನ್ನ ಗುಟುರು ಮೋಟಾರು

ಸೋಫಾದ ತುಂಬಾ ನೀ ಗಿಬರಿ ಪರಿಚಿದ ಗೀರುಗಳು
ಹೊಸದು ಬಂದಾವು ಎಲ್ಲ, ನೀನಾಗದು ಆ ಸಾವಿರ ಬೆಕ್ಕುಗಳು!

ಆಷಾಢದ ಗಾಳಿಗೆ ತೂರಿ ಹೋಗುತಿದೆ ನೀನಾಡಿದ ಹಕ್ಕಿ ಪುಕ್ಕ
ಬಾ , ಗಪ್ಪನೆ ಹಿಡಿದು ತಂದು ಕೂರು ಬೆಚ್ಚಗೆ ನನ್ನ ಪಕ್ಕ!

ಕಿಟಕಿ ತೆರೆದೇ ಇದೆ, ಒಮ್ಮೆ ಹಾರಿ ಬಂದು ಹಿಡಿ ಕಾಲು
ಇಹದ ಪ್ರಜ್ಞೆ ಬರುವ ತನಕ ಕಚ್ಚಿ, ಗೀರಿ ಗಿಲ್ಲು!

ಬದುಕೆಂದೂ ತೋರಿಕೆಗಷ್ಟೇ ಬಣ್ಣ ಬಣ್ಣದ ಹೊಳಪು
ಚೋಟು ಜೀವ ತೋರಿದೆ ನೀ ಅದೆಂದೂ ನಿನ್ನಂತೇ ಕಪ್ಪು ಬಿಳುಪು!

Comment here