ತುಮಕೂರು ಲೈವ್

ಮಧುಗಿರಿಯಲ್ಲಿ ಕೊರೊನಾ ವಾರಿಯರ್ಸ್ ಗೆ ಸನ್ಮಾನ: ರಾಜೇಂದ್ರ

ಮಧುಗಿರಿ: ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಕೊರೊನಾ ವಾರಿಯರ್ಸ್ ಗೆ ಮೇ 10 ರಂದು ಸಂಜೆ 4 ಗಂಟೆಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ ಆರ್.ರಾಜೇಂದ್ರ ತಿಳಿಸಿದರು.

ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಮಾರಿ ಕೊರೊನಾ ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಇದರ ವಿರುದ್ಧ ಕಳೆದ ಸುಮಾರು 45 ದಿನಗಳಿಂದ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ತಾಲ್ಲೂಕಿನ ವೈದ್ಯಕೀಯ, ಪೋಲಿಸ್, ಪೌರಕಾರ್ಮಿಕರು, ಕಂದಾಯ ಇಲಾಖೆ, ಆಶಾ ಕಾರ್ಯಕರ್ತೆಯರು, ಮಾಧ್ಯಮದವರು, ಅಗ್ನಿಶಾಮಕ ದಳ ಹಾಗೂ ಇನ್ನಿತರೆ ಸಿಬ್ಬಂದಿಗಳ ಸೇವೆ ಶ್ಲಾಘನೀಯ. ಇಂತಹ ಸಮಯದಲ್ಲಿ ಅಂತಹವರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವುದರಿಂದ ಅವರಲ್ಲಿ ಇನ್ನಷ್ಟು ಚೈತನ್ಯ ತುಂಬಿ ಇನ್ನೂ ಹೆಚ್ಚಿನ ಕಾರ್ಯನಿರ್ವಹಿಸಲು ಶಕ್ತಿ ತುಂಬಿದಂತಾಗುತ್ತದೆ ಎಂದರು.

ಪಟ್ಟಣದ ದಂಡೂರ ಬಾಗಿಲ ಮುಂಭಾಗದಿಂದ ಟಿವಿವಿ ಪೆಟ್ರೋಲ್ ಬಂಕ್ ವರೆಗೂ ಮೆರೆವಣಿಗೆ ಹಮ್ಮಿಕೊಂಡಿದ್ದು, ಈ ಸಂಧರ್ಭದಲ್ಲಿ ಪುಷ್ಪವೃಷ್ಠಿ ಮಾಡಿ ಅಭಿನಂದಿಸಲಾಗುವುದು ಎಂದ ಅವರು, ಮುಂಜಾಗೃತ ಕ್ರಮವಾಗಿ ಮೆರವಣಿಗೆ ಬರುವ ರಸ್ತೆಗೆ ಔಷದಿ ಸಿಂಪಡಿಸಲಾಗುವುದು ಎಂದರು.

ಮಧುಗಿರಿ ತಾಲ್ಲೂಕಿನಲ್ಲಿ ಒಂದೂ ಕೇಸ್ ಪತ್ತೆಯಾಗದಂತೆ ಅಧಿಕಾರಿಗಳು ಹೆಚ್ಚಿನ ಶ್ರಮವಹಿಸಿದ್ದು, ಅವರೆಲ್ಲರ ಕಾರ್ಯ ಶ್ಲಾಘನೀಯ. ಈ ರೋಗ ನಿಯಂತ್ರಣಕ್ಕೆ ಬರುವವರೆಗೂ ಇವರ ಸೇವೆ ಹೀಗೆ ಮುಂದುವರೆಯಲಿ ಎಂದರು.

ಕಾರ್ಯಕ್ರಮಕ್ಕೆ ಸಂಸದರು, ಶಾಸಕರು ಹಾಗೂ ಪಕ್ಷಾತೀತವಾಗಿ ಎಲ್ಲಾ ಜನಪ್ರತಿನಿಧಿಗಳನ್ನು ಮಾಧ್ಯಮದ ಮುಖೇನ ಅಹ್ವಾನಿಸಲಾಗಿದ್ದು, ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.

ಸಹಕಾರ ಮಹಾಮಂಡಳ ಅಧ್ಯಕ್ಷ ಎನ್.ಗಂಗಣ್ಣ, ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಲಾಲಾ ಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ಪ್ರಸಾದ್, ಮಾರ್ವಾಡಿ ಸಂಘದ ಅಧ್ಯಕ್ಷ ಮೋಹನ್ ಲಾಲ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್.ಶ್ರೀನಿವಾಸ ಮೂರ್ತಿ, ವಾಸವಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎ.ರಮೇಶ್, ಮುಖಂಡರಾದ ಎಂ.ವಿ.ಮಂಜುನಾಥ, ಎಸ್‍ಬಿಟಿ ರಾಮು, ಉಮೇಶ್, ಆನಂದ್, ಗಂಗರಾಜು ಹಾಗೂ ಇನ್ನಿತರರು ಇದ್ದರು.

Comment here