ತುಮಕೂರು ಲೈವ್

ಮನೆ ಮುಂದೆಯೇ ಗಾಂಜಾ ಬೆಳೆದಿದ್ದ ದೇವಸ್ಥಾನದ ಪೂಜಾರಿ!

ಬಿಗಿನೇಹಳ್ಳಿ ಪೂಜಾರಿ ಮನೆಯಲ್ಲಿ 7 ಕೆ.ಜಿ. ಗಾಂಜ ಗಿಡ ವಶಪಡಿಸಿಕೊಂಡ ಅಬಕಾರಿ ಪೊಲೀಸರು.

Thuruvekere: ಈತ ಅಂತಿಂತ ಪೂಜಾರಿ ಅಲ್ಲ. ಎಲ್ಲರೂ ಬೆಟ್ಟಗುಡ್ಡಗಳಲ್ಲಿ, ಕಾಡಿನ ಮಧ್ಯೆ, ಯಾರೂ ಸುಳಿಯದ ಕಡೆ ಗಾಂಜಾ ಬೆಳೆದರೆ ಈ ಪೂಜಾರಿ ಮನೆ ಮುಂದೆಯೇ ಗಾಂಜಾ ಬೆಳೆದಿದ್ದ.

ಎಲ್ಲರೂ ತಿರುಗಾಡುವ ಸ್ಥಳದಲ್ಲೇ ಬೆಳೆದರೂ ಈ ವರ್ಷ ಯಾರಿಗೂ ಗೊತ್ತೇ ಆಗಿರಲಿಲ್ಲ. ಬರೋಬರಿ 74 ಸಾವಿರ ರೂಪಾಯಿಗಳ ಮೌಲ್ಯದ 7 ಕೆ.ಜಿಯಷ್ಟು ಗಾಂಜಾ ಗಿಡ ಇದಾಗಿತ್ತು.

ಪಟ್ಟಣದ ಅಬಕಾರಿ ಪೊಲೀಸರು ಮಂಗಳವಾರ ಇದನ್ನು  ವಶಪಡಿಸಿಕೊಂಡಿರುವ ಘಟನೆ ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಬಿಗಿನೇಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಪಟ್ಟಣದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯೊಂದಿಗೆ ಜಿಲ್ಲಾ ಅಬಕಾರಿ ಉಪ ಆಯುಕ್ತ ಹಾಗು ತಾಲ್ಲೂಕಿನ ತಹಶೀಲ್ದಾರ್ ಆರ್.ನಯೀಂಉನ್ನೀಸಾ ಅವರ ಮಾರ್ಗದರ್ಶನದ ಮೇರೆಗೆ ಬಿಗಿನೇಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಸರ್ಪ ಶನೇಶ್ವರ ದೇವಸ್ಥಾನದ ಪೂಜಾರಿ ಸೋಮಶೇಖರ್ ಅವರ ಮನೆಯ ಮೇಲೆ ಅಬಕಾರಿ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದಾಗ ಮನೆಯ ಮುಂದೆ ಅಕ್ರಮವಾಗಿ ಬೆಳೆದಿದ್ದ ಸು.7 ಕೆ.ಜಿ 550 ಗ್ರಾಂ ತೂಕದ ಒಂದು ಗಾಂಜ ಗಿಡ ಪತ್ತೆಯಾಗಿದೆ.

ಇದರ ಜೊತೆಗೆ ಮನೆಯಲ್ಲಿದ್ದ 200 ಗ್ರಾಂ ಒಣ ಗಾಂಜ ಪುಡಿಯೂ ಸಹ ಪತ್ತೆಯಾಗಿದೆ. ಗಾಂಜ ಸಾಗಿಸಲು ಬಳಸುತ್ತಿದ್ದ ಒಂದು ದ್ವಿಚಕ್ರ ವಾಹನವನ್ನೂ ಕೂಡ ಜಪ್ತಿ ಮಾಡಿಕೊಂಡಿದ್ದಾರೆ ವಶಪಡಿಸಿಕೊಂಡ ಒಟ್ಟು ಗಾಂಜ ಮೌಲ್ಯ 74 ಸಾವಿರ ರೂಪಾಯಿಗಳದ್ದಾಗಿದೆಂದು ಅಬಕಾರಿ ಅಧಿಕಾರಿಗಳು ಅಂದಾಜಿಸಿದ್ದು ಆರೋಪಿ ಪೂಜಾರಿ ಸೋಮಶೇಖರ್ ವಿರುದ್ದ ಪಟ್ಟಣದ ಅಬಕಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕರುಗಳಾದ ಬಿ.ಎಲ್.ರವಿಶಂಕರ್, ಕೆ.ಟಿ.ವಿಜಯಕುಮಾರ್,ಎಂ.ಆರ್.ಸೋಮಶೇಖರ್,ಉಪನಿರೀಕ್ಷಕರುಗಳಾದ ಗಂಗರಾಜು, ರಾಚಮ್ಮ, ಸಿಬ್ಬಂದಿಗಳಾದ ರಾಮು, ಕೇಶವ ಅಂಗಡಿ, ರವಿಕುಮಾರ್, ನರಸಿಂಹಮೂರ್ತಿ ಇದ್ದರು.

Comment here