ಕವನ

ಯಾರನ್ನು ದೂರುವುದು?

ಟಿ ಸತೀಶ್ ಜವರೇಗೌಡ


ಆರಿ‌ಹೋಗುವ ಗಳಿಗೆಗೆ
ಭೀತಿಗೊಂಡು ಬಿಕ್ಕಳಿಸುತ್ತ
ಮರಣ ಶಯ್ಯೆಯಲ್ಲಿ
ತಣ್ಣಗೆ ಮಲಗಿದೆ
ಬೆಳಕಿನ ಕಣ್ಣಾಗಿದ್ದ
ಮಣ್ಣಿನ ಹಣತೆ
ಯಾರನ್ನು ದೂರುವುದು?

ಬತ್ತಿ ತುಂಡವಿದೆ
ಹತ್ತಿ ಬೆಳೆಯುವ
ಹೊಲಗಳು ಬೀಳುಬಿದ್ದಿವೆ
ಎಣ್ಣೆ ತೀರಿದೆ
ಗಾಣಗಳು ಮೌನವಾಗಿವೆ
ರೈತರು ಶಹರಗಳಿಗೆ
ಗುಳೇ ಹೋಗಿದ್ದಾರೆ
ಯಾರನ್ನು ದೂರುವುದು?

ಇಂದೇಕೋ‌
ಕಾರ್ಮೋಡವು ದಟ್ಟೈಸಿದೆ
ಗಾಳಿ ಜೋರು ಬೀಸಿದೆ
ಬೆಳಕು ನಂದದಂತೆ
ಎಚ್ಚರಿಕೆಯಿಂದ ಕಾಯಬೇಕಿದೆ
ಕಣ್ಣೆವೆ ಮುಚ್ಚದೆ
ಯಾವುದಕ್ಕೂ ಬೆಚ್ಚದೆ
ದುಃಖವ ನುಂಗಲೇಬೇಕಿದೆ
ಯಾರನ್ನು ದೂರುವುದು?

ಕ್ಷಣ ಕ್ಷಣವೂ ತಿಣುಕಾಡುತ್ತ
ಉರಿಯುತ್ತಿರುವ ಹಣತೆ
ಕಂಪಿಸುವ ಕೈಗಳಿಂದ ಜಾರಿ
ಚೂರು ಚೂರಾದರೆ?
ಮತ್ತೊಂದು ತರುವುದು ಎಲ್ಲಿಂದ?
ತಿರುಗಣಿ ಮುರಿದಿದೆ
ವಯಸ್ಸಾದ ಪಾದಗಳು
ಅದಾಗಲೇ ಹಾಸಿಗೆ ಹಿಡಿದಿವೆ
ಯಾರನ್ನು ದೂರುವುದು?

ನಿದ್ರಾಹೀನ ವಯ್ಯಾರದ
ಭಾರೀ ಕರಿಹೆದ್ದಾರಿಗಳ
ಗಗನಚುಂಬಿ ಮಹಾನಗರಗಳ
ಶೃಂಗಾರದ ಖಯ್ಯಾಲಿಗೆ
ಖಾಲಿಯಾಗುತ್ತಿದೆ
ಹಸಿರೊದ್ದು ಲಕಲಕಿಸುತ್ತಿದ್ದ
ನೆಲದೊಡಲಿನ ಮೆದುಮಣ್ಣು
ಯಾರನ್ನು ದೂರುವುದು?

ಕತ್ತಲು‌ ಕವಿಯುತ್ತಿದೆ
ಆತಂಕ ಹಾಯುತ್ತಿದೆ
ಸಾಗುವ ದಾರಿ
ಬಲು ದೂರವಿದೆ
ಭಯಗ್ರಸ್ತ‌ ಮನಸ್ಸು
ಬೆಳಕನ್ನು ಧ್ಯಾನಿಸಿದೆ
ಏನು ಮಾಡುವುದು?
ಯಾರನ್ನು ದೂರುವುದು?


ಸತೀಶ್ ಜವರೇಗೌಡ ಅವರು ಮಂಡ್ಯ ಜಿಲ್ಲೆಯವರು. ಯುವ ಬರಹಗಾರರ ವೇದಿಕೆಯ ಮೂಲಕ ಸದಾ ಸಕ್ರಿಯರು. ಅಧ್ಯಾಪನ ಜೊತೆ ಜೊತೆಗೆ ಬರವಣೆಗೆಯಲ್ಲೂ ತೊಡಗಿದ್ದಾರೆ. ಸಮಾಜಮುಖಿ ಚಿಂತನೆಯ ಕವಿ.

ಕರ್ನಾಟಕ ವಿಚಾಕ ವೇದಿಕೆ ನೀಡುವ ರಾಜ್ಯೋತ್ಸವ ಸನ್ಮಾನ, ಡಾ ಕೆ ಕರೀಂಖಾನ್ ಸಾಹಿತ್ಯ ಪ್ರಶಸ್ತಿ, ಸದ್ಭಾವನ ಪ್ರಶಸ್ತಿ, ಬೆಳಕು ಮಾಣಿಕ್ಯ ಪ್ರಶಸ್ತಿ ಹೀಗೆ ಅನೇಕ ಗೌರವಗಳಿಗೆ ಪಾತ್ರರು.

ಮಂಡ್ಯ ಜಿಲ್ಲೆಯ ಕವಿಕಾವ್ಯಸಮ್ಮೇಳನದ ಅಧ್ಯಕ್ಷತೆ, ದಸರಾ ಯುವ ಕವಿ ಗೋಷ್ಠಿಯ ನಿರ್ವಹಣೆಯ ಮೂಲಕ ಜನಮನ ಗೆದ್ದಿದ್ದಾರೆ.

ಸ್ಪಂದನ ಸಾಹಿತ್ಯಿಕ ಪರಿಷತ್ತಿನ ಅಧ್ಯಕ್ಷರಾಗಿ ಸಾಹಿತ್ಯ ಸಂಘಟಕರಾಗಿ ಮುಂಚೂಣಿಯಲ್ಲಿದ್ದಾರೆ.

Comment here