ಅಂತರಾಳ

ರಂಗಭೂಮಿಯ ಮಹಾನ್ ‘ಕಳ್ಳ’ ಬಿ ಜಯಶ್ರೀ

ಜಿ.ಎನ್.ಮೋಹನ್


ನನ್ನೆದುರು ಕುಳಿತಿದ್ದ ಬಿ ಜಯಶ್ರೀ ಒಂದು ಕ್ಷಣ ಮಾತು ನಿಲ್ಲಿಸಿದರು.
ಕನ್ನಡಕ ತೆಗೆದರು
ಸೀರೆಯಂಚು ಕಣ್ಣಿನ ಬಳಿ ಬಂತು.

ನಾನು ಗಾಬರಿಯಾಗಿ ಅವರತ್ತ ನೋಡಿದೆ.
ಅವರು ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು.
ಇನ್ನಿಲ್ಲದಂತೆ ಉಕ್ಕುತ್ತಿದ್ದ ಕಣ್ಣೇರು ಅವರ ಸೀರೆಯಂಚನ್ನು ಇನ್ನಷ್ಟು ಮತ್ತಷ್ಟು ಒದ್ದೆ ಮಾಡುತ್ತಲೇ ಇತ್ತು.

ನಾನು ದಿಗ್ಭ್ರಾಂತನಾಗಿದ್ದೆ.
ಯಾಕೆಂದರೆ ನಾನು ನನ್ನ ಹೈ ಸ್ಕೂಲ್ ದಿನಗಳಿಂದಲೂ ಜಯಶ್ರೀಯವರನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ.
ಜಯಶ್ರೀ ನನಗೆ ರಂಗದ ಮೇಲೆ ಹೆಜ್ಜೆ ಹಾಕುವುದನ್ನು ಹೇಳಿಕೊಟ್ಟಿದ್ದಾರೆ
ನಗಿಸುವುದು, ಅಳಿಸುವುದು ಎರಡೂ ಹೇಳಿಕೊಟ್ಟಿದ್ದಾರೆ.
ಆದರೆ ಅವರು ಅಳುವುದನ್ನು ಹೇಳಿಕೊಟ್ಟಿರಲಿಲ್ಲ, ಅತ್ತೂ ಇರಲಿಲ್ಲ.

ಬಿ ಜಯಶ್ರೀ ಎಂದರೆ ಸಾಕು ಒಂದು ದೊಡ್ಡ ಆತ್ಮವಿಶ್ವಾಸದ ಪ್ರತೀಕ
ಅಂತಹ ಬಿ ಜಯಶ್ರೀ ಅಂದು ನನ್ನೆದುರು ಕಣ್ಣೀರಾಗಿ ಹೋಗಿದ್ದರು.

ಕಲಾಕ್ಷೇತ್ರದ ಬದಿಯ ಪಾರ್ಕ್ ನಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದಾಗ ನಾನು ‘ನಿಮ್ಮ ಹೆಸರಿನಲ್ಲೇ ಜಯ ಇದೆ.
ಯಶಸ್ಸು ನಿಮ್ಮ ಬೆನ್ನ ಹಿಂದೆಯೇ ಇತ್ತು ಅಲ್ಲವಾ’ ಎಂದೆ.

ಅಷ್ಟೇ ಸಾಕಾಗಿ ಹೋಗಿತ್ತು.
ಜಯಶ್ರೀ ಮೌನಕ್ಕೆ ಶರಣಾದರು.

ಸ್ವಲ್ಪ ಹೊತ್ತು ಅಷ್ಟೇ
ಬೆದರಿದ ಕುರಿಮರಿಯಂತಾಗಿ ಹೋಗಿದ್ದ ನನ್ನತ್ತ ನೋಡಿ ನಕ್ಕು ತಮ್ಮ ಇಂದಿನ ಐಕಾನಿಕ್ ಸ್ಮೈಲ್ ಕೊಟ್ಟವರೇ
‘ಎದ್ದೇಳು’ ಎಂದರು.

ನಾನು ಇದೇನಪ್ಪಾ ಎಂದುಕೊಂಡೆ.
ತಕ್ಷಣ ಅವರು ‘ಬಿದ್ದಮೇಲೆ ಎದ್ದೇಳಲೇಬೇಕಲ್ಲಪ್ಪ, ಹಾಗೆ ಬಿದ್ದು ಎದ್ದಿದ್ದೇನೆ
ಬದುಕು ಗೆದ್ದಿದ್ದೇನಾ ಗೊತ್ತಿಲ್ಲ’ ಎಂದರು.

‘ನಾನು ಉಟ್ಟ ಬಟ್ಟೆಯಲ್ಲಿ ಮಗುವನ್ನೆತ್ತಿಕೊಂಡು ಮನೆಯಿಂದ ಹೊರಬಂದೆ. ಚಿಕ್ಕ ಮಗು. ಅದಕ್ಕೆ ಹಾಲಿಗಾದರೂ ಹಣ ಬೇಕಲ್ಲ, ವೈರ್ ಬುಟ್ಟಿಗಳನ್ನು ಹೆಣೆದು ಬಂದ ಹಣದಲ್ಲಿ ಮಗುವಿಗೆ ಅಮುಲ್ ತರುತ್ತಿದ್ದೆ. ಗೊತ್ತಿಲ್ಲ ಅದಕ್ಕೆ ಏನೋ ಅವಳನ್ನು ನಾನು ಅಮ್ಮು ಅಂತಲೇ ಕರೆಯುತ್ತಿದ್ದೆ’ ಎಂದವರೇ ‘ನಾನೇ ಇಷ್ಟಪಟ್ಟು ಮದುವೆ ಮಾಡಿಕೊಂಡ ಗಂಡ ಆತ. ಎಲ್ಲ ಗಂಡಿನ ಒಳಗೂ ಹ್ಯಾಮ್ಲೆಟ್ ನಾಟಕದ ಇಯಾಗೋ ಥರಾ ಒಬ್ಬ ಇರುತ್ತಾನೆ. ಸಂಶಯದ ಮೇಲೆ ಕೂತವ. ಅವನೂ ಅಷ್ಟೇ’.

‘ನನ್ನ ಮದುವೆಗೆ ಬರಲಿಕ್ಕಾಗಲಿಲ್ಲ ಎಂದು ಮುಂದೊಂದು ದಿನ ಓಂ ಪುರಿ ಇಬ್ಬರಿಗೂ ವಿಶ್ ಮಾಡಲು ಬೆಂಗಳೂರಿನ ನನ್ನ ಮನೆಗೆ ಬಂದ. ನನ್ನ ಗಂಡ ಇಡೀ ದಿನ ಮನೆಗೆ ಬರಲಿಲ್ಲ. ಕಾದೂ ಕಾದೂ ಓಂ ಪುರಿ ಗಿಫ್ಟ್ ಕೊಟ್ಟು, ಊಟ ಮಾಡಿ ಹೋದ. ರಾತ್ರಿ ಮನೆಗೆ ಬಂದ ಗಂಡನಲ್ಲಿ ಸಂಶಯ ತಲೆ ಎತ್ತಿ ಬುಸುಗುಡುತ್ತಿತ್ತು. ನಾನಿಲ್ಲದಾಗ ಇನ್ನೊಬ್ಬ ಗಂಡಸು ಮನೆಗೆ ಬರುವುದು ಎಂದರೆ ಏನು ಎಂದು ಕೂಗಾಡಲು ಆರಂಭಿಸಿದ. ಅದು ನನ್ನ ಅದುವರೆಗಿನ ನೋವುಗಳ ಕ್ಲೈಮಾಕ್ಸ್. ಮಾರನೆಯ ದಿನ ಬೆಳ್ಳಂಬೆಳಗ್ಗೆ ಉಟ್ಟ ಬಟ್ಟೆಯಲ್ಲಿ ಮನೆಯಿಂದ ಹೊರಬಿದ್ದೆ’ ಎಂದರು.

‘ಅಲ್ಲಿಂದ ನಾನು ಬದುಕನ್ನು ಎದುರಿಸಲು ಕಲಿತದ್ದು ಇದೇ ಇದೇ ಕಲಾಕ್ಷೇತ್ರದಿಂದ. ನನಗೆ ಇಬ್ಬರು ತಾಯಂದಿರು. ಒಂದು ಅಮ್ಮ ಮಾಲತಮ್ಮ, ಇನ್ನೊಂದು ಈ ರಂಗಭೂಮಿ’ ಎಂದರು.

ಜಯಶ್ರೀ ಹೆಸರಲ್ಲಿ ಒಂದು ರೆಕಾರ್ಡ್ ಇದೆ. ಅದು ರಂಗಭೂಮಿ ಕ್ಷೇತ್ರದಲ್ಲಿ ಒಂದೇ ಮನೆಗೆ ಎರಡು ‘ಪದ್ಮಶ್ರೀ’ ಬಂದ ರೆಕಾರ್ಡ್. ಒಂದು ತಾತ ಗುಬ್ಬಿ ವೀರಣ್ಣನವರಿಗೆ, ಇನ್ನೊಂದು ಮೊಮ್ಮಗಳು ಬಿ ಜಯಶ್ರೀಗೆ. ನೋವಿಗೂ ಕಣ್ಣೀರು ಬರುತ್ತೆ ಎಂದು ಕಂಡಿದ್ದ ಜಯಶ್ರೀ ಸಂತೋಷಕ್ಕೂ ಕಣ್ಣೀರಿಡುವ ಅನೇಕ ಪ್ರಸಂಗಗಳನ್ನು ರಂಗಭೂಮಿ ಅವರಿಗೆ ಸೃಷ್ಟಿ ಮಾಡಿಕೊಟ್ಟಿತು.

‘ನಾನು ಎನ್ ಎಸ್ ಡಿ ಮೆಟ್ಟಿಲು ಹತ್ತಲು ಶ್ರೀರಂಗರೇ ಕಾರಣ. ಇದೇ ಕಲಾಕ್ಷೇತ್ರದಲ್ಲಿ ಶ್ರೀರಂಗರು ನಾಟಕದ ಕಾರ್ಯಾಗಾರ ನಡೆಸಿದ್ದರು. ಅದರಲ್ಲಿ ನಾನಿದ್ದೆ. ಅದೇನನಿಸಿತೋ, ಈ ಹುಡುಗಿಯನ್ನು ಎನ್ ಎಸ್ ಡಿ ಗೆ ಕಳಿಸಿ ಎಂದರು. ಕಾರ್ಪೊರೇಷನ್ ಸ್ಕೂಲ್ ನ ಅತಿ ಶಿಸ್ತಿನಲ್ಲಿ ಬೆಳೆದು. ಕಾಲೇಜಿನ ನಿರ್ಭಿಡೆಯ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ, ಕನ್ನಡದಲ್ಲಿ ಡುಮ್ಕಿ ಹೊಡೆದಿದ್ದ ಹುಡುಗಿ ಅಂತೂ ಎನ್ ಎಸ್ ಡಿ ಮೆಟ್ಟಿಲು ಹತ್ತಿದಳು’ ಎಂದು ನಕ್ಕರು.

ಜಯಶ್ರೀ ಎಂದರೆ ನನಗೆ ಎದೆಯಲ್ಲಿ ಸದಾ ಡವ ಡವವೇ. ಏಕೆಂದರೆ ಹಾಗೆ ಎನ್ ಎಸ್ ಡಿ ಪದವಿ ಮುಗಿಸಿ ಬಂದ ಹೊಸದರಲ್ಲೇ ಅವರು ಬಾಲಭವನದಲ್ಲಿ ಮಕ್ಕಳಿಗೆ ರಂಗ ಶಿಕ್ಷಕರೂ ಆಗಿದ್ದರು. ಅಲ್ಲಿ ನಾನು ನಾಟಕದ ಸ್ಟೂಡೆಂಟ್. ಸಿಕ್ಕಾಪಟ್ಟೆ ಗಲಾಟೆ ಮಾಡುವವರ ಹೆಸರಲ್ಲಿ ನನ್ನದೇ ಮೊದಲ ಹೆಸರು. ಆಗ ಎಲ್ಲರೂ ನನ್ನನ್ನು ಅಟ್ಟುತ್ತಿದ್ದುದು ಜಯಶ್ರೀ ಎಂಬ ರಿಮ್ಯಾನ್ಡ್ ಹೋಮ್ ಗೆ. ಜಯಶ್ರೀ ಮುಖ ಗಂಭೀರ ಮಾಡಿಕೊಂಡು ದೊಡ್ಡದಾಗಿ ಕಣ್ಣು ಬಿಟ್ಟರೆಂದರೆ ನಮ್ಮ ಕಥೆ ಅಲ್ಲಿಗೆ ಮುಗಿದುಹೋಗುತ್ತಿತ್ತು. ಹಾಗಾಗಿ ನಾವು ಆಮೇಲೆ ಎಷ್ಟೇ ಆತ್ಮೀಯರಾದರೂ ‘ಎದೆಯೊಳಗೆ ತಮ ತಮ ತಮಟೆ’ ಭಯದಿಂದ ಬಡಿದುಕೊಳ್ಳುತ್ತಲೇ ಇರುತ್ತದೆ.

‘ಹಾಂ, ಎನ್ ಎಸ್ ಡಿಯಿಂದ ಬಂದವಳೇ ‘ಜಸ್ಮಾ ಓಡನ್’ ಅಂತ ನಾಟಕ ಮಾಡಿದಿದೆ.. ಜಸ್ಮಾ ಎನ್ನುವ ಒಡ್ಡಿಯ ಕಥೆ ಅದು. ಓಹ್ ಅದು ನನಗೆ ಕೊಟ್ಟ ತೃಪ್ತಿ ಇದೆಯಲ್ಲಾ..’ ಎಂದು ಜಯಶ್ರೀ ನನ್ನೆಡೆಗೆ ತಿರುಗಿದಾಗ
ನಾನು ಅವರ ಆ ಅದೇ ಕಣ್ಣುಗಳನ್ನು ನೋಡುತ್ತಿದೆ.

ಕೆಲವೇ ನಿಮಿಷದ ಹಿಂದೆ ಕಣ್ಣೀರು ಸುರಿಸಿದ್ದ ಆ ಅದೇ ಕಣ್ಣುಗಳಲ್ಲಿ ಈಗ ಆತ್ಮವಿಶ್ವಾಸ ತುಳುಕುತ್ತಿತ್ತು.

ಜಯಶ್ರೀ ಎಂದರೆ ಹಾಗೆ.. ನೆಲಕ್ಕೊದ್ದು ಮುಗಿಲಿಗೆ ಜಿಗಿಯುವ ಹುಮ್ಮಸ್ಸಿನವರು.

‘ಜಸ್ಮಾ ಓಡನ್’ ಅವರಿಗೆ ಎರಡು ಕಾರಣಕ್ಕಾಗಿ ನೆನಪಿನಲ್ಲಿ ಉಳಿಯುವ ನಾಟಕ. ಒಂದು ಅದು ಜಯಶ್ರೀಗೆ ರಂಗಭೂಮಿ ಎನ್ನುವ ಸಂಗಾತಿಯನ್ನು ಕೊಟ್ಟಿತು ಮತ್ತು ನಿಜಕ್ಕೂ ಒಬ್ಬ ಸಂಗಾತಿಯನ್ನು ಕೊಟ್ಟಿತು. ಅವರು ಆನಂದರಾಜು. ‘ನನ್ನನ್ನು ನೆರಳಿನಂತೆ ನೋಡಿಕೊಳ್ಳುತ್ತಾರೆ. ಇದೇ ಮೆಟ್ಟಿಲ ಮೇಲೆ ಸಿಕ್ಕರು. ನನ್ನ ಜೊತೆ ನಡೆಯುತ್ತಾ ಬಂದರು’ ಎಂದು ನಗು ತುಳುಕಿಸಿದರು.

ನಾನು ಅವರ ಕೆನ್ನೆ ನೋಡುತ್ತಿದ್ದೆ. ಒಂದಿಷ್ಟು ಕೆಂಪಾಗಿತ್ತು.

ನೆನಪಿರಲಿ ನೀವು ಬಾಲ ನಟಿ ಕೇಳಿರುತ್ತೀರಿ ಆದರೆ ಬಿ ಜಯಶ್ರೀ ಅದಕ್ಕೂ ಮೀರಿದವರು- ಗರ್ಭ ನಟಿ.

ಜಯಶ್ರೀಯನ್ನು ಹೊಟ್ಟೆಯಲ್ಲಿ ಹೊತ್ತೇ ಅವರ ತಾಯಿ ಗುಬ್ಬಿ ಕಂಪನಿಯ ಹಲವು ನಾಟಕಗಳಲ್ಲಿ ಸೈ ಅನಿಸಿಕೊಂಡಿದ್ದರು.

‘ಹೌದಲ್ವಾ’ ಎಂದು ನಾನು ಕೇಳಿದಾಗ ಮತ್ತೆ ಜಯಶ್ರೀ ನಿಟ್ಟುಸಿರಿಟ್ಟರು.
ನೆನಪಿನ ಸುರುಳಿಯೊಂದು ಬಿಚ್ಚಿಕೊಂಡಿತು.

ಗುಬ್ಬಿ ಕಂಪನಿ ಎಂದರೆ ಸಾಕು ಜನ ಎಲ್ಲೆಲ್ಲಿಂದಲೋ ಹುಚ್ಛೆದ್ದು ಬರುತ್ತಿದ್ದರು. ಅಂತಹದೇ ಒಂದು ಷೋ. ‘ಅಕ್ಕಮಹಾದೇವಿ’ ನಾಟಕ. ಅಕ್ಕಮಹಾದೇವಿ ಆಗಿ ನಟಿಸಬೇಕಿದ್ದ ಸ್ವರ್ಣಮ್ಮನವರಿಗೆ ಸಿಡುಬು ಕಾಣಿಸಿಕೊಂಡಿತು.. ತಾತ ಗುಬ್ಬಿ ವೀರಣ್ಣ ಷೋ ಕ್ಯಾನ್ಸಲ್ ಮಾಡಲು ಮುಂದಾದರು. ಆಗ ನನ್ನ ಅಮ್ಮ ಬೇಡ ಎಲ್ಲೆಲ್ಲಿಂದಲೋ ಜನ ಬಂದಿದ್ದಾರೆ ತೊಂದರೆ ಆಗುತ್ತೆ. ಆ ಪಾತ್ರ ನಾನೇ ನಿಭಾಯಿಸುತ್ತೇನೆ ಎಂದರಂತೆ.

ಪಾತ್ರಕ್ಕೆ ಮೇಕ್ ಅಪ್ ಮಾಡಿ ಇನ್ನೇನು ರಂಗದ ಮೇಲೆ ಹೋಗಲು ಸಜ್ಜಾಗಿದ್ದಾರೆ. ಆಗ ನನ್ನ ಅಪ್ಪ ಅಲ್ಲಿಗೆ ಬಂದವರೇ ನಾಟಕ ಮಾಡಿದರೆ ಸುಟ್ಟು ಹಾಕಿಬಿಡ್ತೀನಿ ಎಂದು ಅಡ್ಡ ನಿಂತಿದ್ದಾರೆ. ಅಮ್ಮ ಎದೆಗೆಡಲಿಲ್ಲ. ‘ಅಪ್ಪನ ಮರ್ಯಾದೆ ಉಳಿಸುತ್ತಿದ್ದೇನೆ. ಸುಡುವುದಾದರೆ ಸುಡಿ, ರಂಗಭೂಮಿಯ ಮೇಲೆಯೇ ಸಾಯುವ ಯೋಗ ಎಲ್ಲರಿಗೂ ಬರುವುದಿಲ್ಲ’ ಎಂದು ನಾಟಕ ಮಾಡಿದರು.

ಅಂದು ರಾತ್ರಿ ಬಿಟ್ಟು ಹೋದ ಅಪ್ಪನನ್ನ ಮತ್ತೆ ನಾನು ನೋಡಿದ್ದು 15 ವರ್ಷಗಳ ನಂತರ. ಅದೂ ಗುಬ್ಬಿ ಕಂಪನಿಯಲ್ಲೇ. ‘ದಶಾವತಾರ’ ನಾಟಕಕ್ಕೆ ನಾವು ರೆಡಿ ಆಗ್ತಿದ್ದಾಗ. ಆ ವೇಳೆಗೆ ನನ್ನೊಳಗೆ ಅಪ್ಪ ಎನ್ನುವವನು ಸತ್ತು ಹೋಗಿ ಸಾಕಷ್ಟು ಕಾಲವಾಗಿತ್ತು.

ನಾನು ಚಕ್ರವ್ಯೂಹವನ್ನು ಹೊಕ್ಕಿದ್ದೇನೆ ಹಾಗೆಯೇ ಅದರಿಂದ ಹೊರಗೂ ಬಂದಿದ್ದೇನೆ ಎನ್ನುವಾಗ ಜಯಶ್ರೀ ಅವರ ಮುಖದಲ್ಲಿ ಇಣುಕಿದ ಆ ಕಾನ್ಫಿಡೆನ್ಸ್ ನನಗೆ ಇಂದಿಗೂ ಮರೆಯಲು ಸಾಧ್ಯವಿಲ್ಲ.

ಜಸ್ಮಾ ಓಡನ್, ಘಾಶೀರಾಮ್ ಕೊತ್ವಾಲ್ ಮೂಲಕ ಬಿ ಜಯಶ್ರೀ ಜರ್ನಿ ಇನ್ನಿಲ್ಲದಂತೆ ಸಾಗಿತು. ಪದ್ಮಶ್ರೀ, ರಾಜ್ಯಸಭಾ ಸದಸ್ಯತ್ವ ಜಯಶ್ರೀಗೆ ಕಾನ್ಫಿಡೆನ್ಸ್ ಹೆಚ್ಚಿಸಿದ ಇನ್ನೆರಡು ಅಂಶಗಳಷ್ಟೇ..

ಹೀಗೆಲ್ಲಾ ಮಾತನಾಡಿಕೊಳ್ಳುವಾಗಲೇ ನಾನು ಅವರ ದೃಷ್ಟಿ ನಿವಾಳಿಸಿದೆ.
ಜಯಶ್ರೀ ಜೋರಾಗಿ ನಕ್ಕುಬಿಟ್ಟರು.

‘ಈಗ ನೀನೊಬ್ಬ ಸಿಕ್ಕಿದೆಯಪ್ಪಾ ದೃಷ್ಟಿ ತೆಗೆಯೋಕೆ..’ ಎಂದವರೇ ‘ನನ್ನ ಅಮ್ಮ ಪ್ರತೀ ಷೋ ಮುಗಿಸಿ ಬಂದಾಗಲೂ ನನ್ನ ದೃಷ್ಟಿ ತೆಗೆಯುತ್ತಿದ್ದರು. ಈಗ ಆನಂದರಾಜು ಅದನ್ನ ಮಾಡ್ತಾನೆ’ ಅಂತ ನಕ್ಕರು.

ನನಗೆ ಜಯಶ್ರೀಯವರನ್ನು ಇನ್ನಷ್ಟು ಚುಡಾಯಿಸುವ ಮನಸ್ಸಾಯಿತು.
‘ಛೀ ಕಳ್ಳಿ’ ಎಂದೆ
ತಕ್ಷಣ ಜಯಶ್ರೀ ಗಹಗಹಿಸಿ ನಕ್ಕರು.

‘ಯಸ್, ಅರುಂಧತಿಯಿಂದಾಗಿಯೇ ನಾನು ಕಳ್ಳಿ ಆದದ್ದು’ ಎಂದು ಕಣ್ಣು ಮಿಟುಕಿಸಿದರು.
‘ರಂಗಶಂಕರ’ಕ್ಕಾಗಿ ಒಂದು ವೃತ್ತಿ ನಾಟಕ ಮಾಡು ಎಂದರು ಅರುಂಧತಿ ನಾಗ್. ‘ಸದಾರಮೆ’ಯೇ ಆಗಲಿ ಎನ್ನುವ ಆಸೆ ಅವರಲ್ಲಿತ್ತು.
ಆದರೆ ಕಳ್ಳನ ಪಾತ್ರ ಮಾಡೋರು ಯಾರು ಎಂದೆ. ಯಾಕೆಂದರೆ ಅದು ನನ್ನ ತಾತನ ಕಲ್ಟ್ ರೋಲ್.
ಇನ್ಯಾರು ನೀನೇ ಅಂದರು. ‘ನಾನು ಕಳ್ಳಿ ಅಲ್ಲಲ್ಲ.. ಕಳ್ಳ ಆಗೋದೇ’ ಎಂದರು.

ಆ ವೇಳೆಗೆ ನಾವು ನಮಗೆ ಗೊತ್ತಿಲ್ಲದ ಹಾಗೆ ಸಂಸ ಕಲಾಕ್ಷೇತ್ರದ ರಂಗವೇರಿದ್ದೆವು.

ರಂಗಭೂಮಿಯ ಮಹಾನ್ ಕಳ್ಳನಿಗೆ ಅಲಿಯಾಸ್ ಕಳ್ಳಿಗೆ ಮನದುಂಬಿ ಒಂದು ಸಲಾಂ ಕೊಟ್ಟೆ

ಮನಸ್ಸು ಮಾತ್ರ ‘ಸದಾರಮೆ’ಯ
‘ಒಳ್ಳೆ ಸಮಯ ಒಳ್ಳೆ ಸಮಯ ಒಳ್ಳೆ ಸಮಯವೂ..
ಕಳ್ಳತನವ ಮಾಡಲಿಕ್ಕೆ ಒಳ್ಳೆ ಸಮಯವೂ…’
ಹಾಡನ್ನು ಗುನುಗುತ್ತಿತ್ತು.

Comment here