ತುಮಕೂರ್ ಲೈವ್

ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಸಿದ್ದತೆ

ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಡಿಸೆಂಬರ್ 30 ಮತ್ತು 31 ರಂದು ಸಿದ್ದಗಂಗಾ ಮಠದ ಆವರಣದಲ್ಲಿ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಕಾರ್ಯಕ್ರಮವಾಗಿರುವುದರಿಂದ ಅಗತ್ಯ ವೇದಿಕೆ ವ್ಯವಸ್ಥಿತವಾಗಿ ಸಿದ್ದಪಡಿಸಿಕೊಳ್ಳಬೇಕು. ಹಾಗೆಯೇ ಜಿಲ್ಲಾಡಳಿತದ ವತಿಯಿಂದ ಆಗಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು. ಆರಕ್ಷಕ, ಅಗ್ನಿಶಾಮಕ, ಆರೋಗ್ಯ ಇಲಾಖೆಗಳಿಗೂ ಸಹಕರಿಸುವಂತೆ ಸೂಚನೆ ನೀಡಲಾಗುವುದು ಎಂದರು.ವಸ್ತು ಪ್ರದರ್ಶನದಲ್ಲಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಯಿಂದ 646 ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದು, ಪಾರದರ್ಶಕವಾಗಿ ಸ್ಪರ್ಧೆ ಏರ್ಪಡಿಸಿ ತೀರ್ಪು ನೀಡಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮಕ್ಕೆ ಆಗಮಿಸುವ ಮಕ್ಕಳಿಗೆ ಸಿದ್ದಗಂಗಾ ಮಠದಲ್ಲಿ ಊಟ ಹಾಗೂ ವಸತಿಯ ವ್ಯವಸ್ಥೆ ಮಾಡಿರುವ ಬಗ್ಗೆ ಮಠದ ಆಡಳಿತಾಧಿಕಾರಿಗಳಿಂದ ಖಾತ್ರಿ ಪಡಿಸಿಕೊಂಡರು. ನಂತರ ಈ ಕಾರ್ಯಕ್ರಮಕ್ಕಾಗಿ ರಚನೆ ಮಾಡಿರುವ ವಿವಿಧ ಸಮಿತಿಯ ಸದಸ್ಯರು ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.ಸಭೆಯಲ್ಲಿ ತುಮಕೂರು ಡಯಟ್ ಪ್ರಾಂಶುಪಾಲ ಬಸವರಾಜು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ರಾಮಕೃಷ್ಣಯ್ಯ, ಹಿರಿಯ ಉಪನ್ಯಾಸಕ ಮಹೇಶ, ಶಿಕ್ಷಣಾಧಿಕಾರಿ ಅಶ್ವಥನಾರಾಯಣ, ಶಿಕ್ಷಣಾಧಿಕಾರಿ ಪ್ರಭುಸ್ವಾಮಿ, ಡಿವೈಎಸ್‍ಪಿ ಸೂರ್ಯ ನಾರಾಯಣ, ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥ್, ವಿಜ್ಞಾನ ಕೇಂದ್ರದ ಅಧ್ಯಕ್ಷ ಮರುಳಯ್ಯ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಬಿಇಒ, ಮಧುಗಿರಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಸ್.ಆರ್. ವೃಷಭೇಂದ್ರಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಸೇರಿದಂತೆ ಮತ್ತಿತರ ಶಿಕ್ಷಕರ ಸಂಘದ ಅಧ್ಯಕ್ಷರು, ಅಧಿಕಾರಿಗಳು ಉಪಸ್ಥಿತರಿದ್ದರು.

Comment here