ಅಂತರಾಳ

ರೇವತಿಯ ‘ಬೊಗಸೆಯಲ್ಲಿ ಮಳೆ’

ಜಿ ಎನ್ ಮೋಹನ್


‘ನನ್ನ ಕೈನಲ್ಲಿ ಡ್ರೈವಿಂಗ್ ಲೈಸೆನ್ಸ್ ಇತ್ತು’ ಎಂದು ಆಕೆ ಹೇಳುವಾಗ ಆ ಮಾತಿನೊಳಗೆ ಇನ್ನಿಲ್ಲದ ಸಂಭ್ರಮ ಮನೆ ಮಾಡಿತ್ತು.

ಜಗತ್ತು ಗೆದ್ದ ಭಾವನೆಯಿತ್ತು. ಆಕಾಶದ ಚಂದ್ರಮನನ್ನು ಕೈಗೆಟುಕಿಸಿಕೊಂಡ ಉಲ್ಲಾಸವಿತ್ತು.

ಆಕೆಯ ಕಣ್ಣುಗಳಲ್ಲಿ ನಾನು ಇಣುಕಿ ನೋಡಿದಾಗ ಇನ್ನೂ ಆ ನಕ್ಷತ್ರಗಳು ಉಳಿದುಕೊಂಡಿದ್ದವು.

ನಾನು ‘ಒಂದು ಡ್ರೈವಿಂಗ್ ಲೈಸೆನ್ಸ್ ಸಿಕ್ಕರೆ ಇಷ್ಟೊಂದು ಸಂಭ್ರಮಾನಾ..?’ ಎಂದು ಅಪ್ಪಿತಪ್ಪಿಯೂ ಕೇಳಲಿಲ್ಲ

ಏಕೆಂದರೆ ನನ್ನ ಎದುರು ನಿಂತಿದ್ದದ್ದು- ರೇವತಿ.

‘ನಾನೇನು ಉಗ್ರವಾದಿಯಾ ಲೈಸೆನ್ಸ್ ಕೊಡದೇ ಇರೋದಿಕ್ಕೆ’ ಅಂತ ಮೇಜನ್ನು ಕುಟ್ಟಿ ಕೇಳಿದ್ದು ಇದೇ ರೇವತಿ ಅಲಿಯಾಸ್ ದೊರೈರಾಜ್

‘ಹೌದು ನಾನು ದೊರೈರಾಜ್ ಆಗಿದ್ದೆ. ಈಗ ರೇವತಿ. ನಾನು ಹೀಗೆ ಕಾನೂನುಬದ್ಧವಾಗಿ ಬದಲಾಗಿದ್ದೇನೆ ಎನ್ನುವುದಕ್ಕೆ ಬೇಕಾದ ಎಲ್ಲಾ ದಾಖಲೆ ನಿಮ್ಮ ಮುಂದಿಟ್ಟಿದ್ದೇನೆ ಆದರೂ ನೀವು ಲೈಸೆನ್ಸ್ ಕೊಡಲ್ಲ ಅಂದರೆ ಏನರ್ಥ. ಹುಷಾರು ನಾನು ಮೀಡಿಯಾ ಬಳಿ ಹೋಗ್ತೀನಿ’ ಎಂದು ರೇವತಿ ದನಿ ಎತ್ತರಿಸಿದಾಗ ನಿಜಕ್ಕೂ ಮದ್ರಾಸಿನ ಆರ್ ಟಿ ಓ ಕಚೇರಿ ದಂಗು ಬಡಿದಿತ್ತು.

‘ಇಂತ ಕೇಸ್ ನಮ್ಮ ಬಳಿ ಬಂದೇ ಇಲ್ಲ’ ಎಂದು ಲೈಸೆನ್ಸ್ ಅಪ್ಲಿಕೇಶನ್ ಅನ್ನು ಮುಖಕ್ಕೆ ಎಸೆದ ಅದೇ ಅಧಿಕಾರಿ ನನ್ನ ಕೈಗೆ ಲೈಸೆನ್ಸ್ ಇಟ್ಟ. ಅಷ್ಟರಮಟ್ಟಿಗೆ ನಾನು ಗೆದ್ದಿದ್ದೆ’ ಎಂದ ರೇವತಿ ‘ಆದರೆ ವಿಷಯ ಗೊತ್ತಾ ಅದರಲ್ಲಿ ರೇವತಿ ಅಂಡ್ ದೊರೈರಾಜ್ ಎಂದು ಬರೆದಿದ್ದರು. ಅಷ್ಟರಮಟ್ಟಿಗೆ ಆತನೂ ಗೆದ್ದ ನಗು ಬೀರಿದ್ದ’ ಎಂದು ವಿಷಾದದ ನಗೆ ಚೆಲ್ಲಿದಳು.

ರೇವತಿ ಹಾಗೂ ನಾನು ನಿಂತದ್ದು ಒಂದು ಬಯಲಿನಲ್ಲಿ. ಬದುಕನ್ನೇ ಬಯಲು ಮಾಡಿದ ಅಥವಾ ಬಯಲಲ್ಲೇ ಬದುಕಬೇಕಾಗಿ ಬಂದ ರೇವತಿ ಅದೀಗ ತಾನೇ ‘ಬದುಕು ಬಯಲು’ ಆತ್ಮಚರಿತ್ರೆ ಬರೆದಿದ್ದರು. ಓದಿದ ಎಲ್ಲಾ ಮನಸ್ಸುಗಳೂ ತಲ್ಲಣಿಸಿಹೋಗಿದ್ದವು. ಅಂತೆಯೇ ನಾನೂ ಇಡೀ ರಾತ್ರಿ ನಿದ್ದೆಗೆಟ್ಟು ರೇವತಿಯ ಎದುರು ನಿಂತಾಗ ಕಣ್ಣುಗಳು ಕೆಂಡದುಂಡೆಗಳಾಗಿದ್ದವು.

ತಮಿಳುನಾಡಿನ ಸೇಲಂ ಬಳಿಯ ಹಳ್ಳಿಯೊಂದರಿಂದ ಹೊರಟ ದೊರೈರಾಜ್ ಎಂಬ ಹುಡುಗ ತಲ್ಲಣದ ಮಳೆಗೆರೆವಲ್ಲಿ ಬದುಕು ದೂಡುತ್ತಾ ನನ್ನೆದುರು ರೇವತಿಯಾಗಿ ನಿಂತಿದ್ದರು.

ಅವರ ಅಂಗೈ ನನ್ನ ಕೈನೊಳಗೆ ಬೆಚ್ಚಗೆ ಕೂತಿತ್ತು.
ಆ ಕಾರಣಕ್ಕೆ ಅವರಿಗೆ ಇನ್ನಿಲ್ಲದ ವಿಶ್ವಾಸ ಬಂತೇನೋ..
ತನ್ನ ಬದುಕಿನ ಯಾವೊಂದು ಹಾಳೆಯನ್ನೂ ಮುಚ್ಚಿಡದೆ ತೆರೆದಿಡುತ್ತಾ ಹೋದರು.

‘ಹೀಗೆ ಕೈ ಹಿಡಿದವರು ಕೆಲವೇ ಮಂದಿ’ ಎಂದೇ ರೇವತಿ ಮಾತು ಶುರು ಮಾಡಿದರು.

‘ನನ್ನ ಅಪ್ಪ ಅಮ್ಮ ಹೀಗೆ ಕೈ ಹಿಡಿದಿದ್ದರೆ ನನ್ನ ಮನಸ್ಸು, ದೇಹದ ಮೇಲಾದ ಲೆಕ್ಕವಿರದಷ್ಟು ಹಲ್ಲೆ ಆಗುತ್ತಲೇ ಇರಲಿಲ್ಲವೇನೋ’ ಎಂದು ನಿಟ್ಟುಸಿರಾದರು.

‘ಆರನೆಯ ವರ್ಷದವರೆಗೆ ನಾನು ಹೆಣ್ಣು ಮಕ್ಕಳ ಜೊತೆ ಆಡುತ್ತ, ಅವರಂತೆ ಬಟ್ಟೆ ಹಾಕುತ್ತಾ ತಿರುಗಿದರೂ ಯಾರಿಗೂ ಏನೂ ಅನಿಸಿರಲಿಲ್ಲ. ಆದರೆ ಆ ನಂತರವೂ ನನ್ನೊಳಗೆ ಯಾವಾಗ ಒಬ್ಬ ಹೆಣ್ಣು ಎದ್ದು ನಿಂತಳೋ ಅಲ್ಲಿಂದ ಶುರುವಾಯಿರು ನೋಡಿ

ಶಾಲೆಯಲ್ಲಿ ಶಿಕ್ಷಕರೇ ಕತ್ತಲ ಕೋಣೆಗೆ ಕರೆದೊಯ್ಯುತ್ತಿದ್ದರು. ನನ್ನ ಗೆಳೆಯರೇ ಚಡ್ಡಿ ಬಿಚ್ಚಿಸಿ ನೋಡಲು ಶುರು ಮಾಡಿದರು.

ಗಂಡಿನ ದೇಹದೊಳಗಿದ್ದ ಈ ಹೆಣ್ಣಿಗೆ ಬೇರೆ ಯಾವ ದಾರಿಯೂ ಇರಲಿಲ್ಲ. ನನ್ನನು ಹೆಣ್ಣು ಎಂದು ಅರ್ಥ ಮಾಡಿಕೊಳ್ಳುವವರನ್ನು ಹುಡುಕುತ್ತಾ ಹೋದೆ.

‘ಅಲ್ಲಿಂದ ಶುರುವಾಯಿತು ನನ್ನ ಯಾತ್ರೆ’ ಎಂದರು.
ತಕ್ಷಣ ನನಗೆ ನೆನಪಾಗಿದ್ದು ‘ಹಿಜ್ರಾ’ ಎನ್ನುವ ಪದ.

ಅದಕ್ಕೆ ಕಾರಣವಿತ್ತು.
ಅವರ ‘ಬದುಕು ಬಯಲು’ ಕೃತಿಯಲ್ಲಿ ಹಿಜ್ರಾ ಎನ್ನುವ ಪದದ ಅರ್ಥವೇ ಯಾತ್ರೆ ಎನ್ನುತ್ತಾರೆ.

‘ಇದು ಉರ್ದು ಪದ. ನಮ್ಮದು ಸದಾ ಯಾತ್ರೆಯೇ ಹಾಗಾಗಿಯೇ ಹಿಜ್ರಾ ಎನ್ನುವ ಹೆಸರು ಅಂಟಿಕೊಂಡಿತು’. ಎಂದು ರೇವತಿ ಗತ ಕಣ್ಣಾದರು.

ಹಿಜ್ರಾ ಜೊತೆಗಿನ ನನ್ನ ನೆನಪುಗಳ ಯಾತ್ರೆಯೂ ಇದೆ.

ನನ್ನ ನೆರೆಮನೆಯಲ್ಲಿ ಗುಜರಾತಿ ಕುಟುಂಬವಿತ್ತು. ಅಲ್ಲಿ ಯಾವುದೇ ಒಳ್ಳೆಯದು ಆದರೂ ಹಿಜ್ರಾಗಳಿಗೆ ಮೊದಲ ಸುದ್ದಿ ಹೋಗುತ್ತಿತ್ತು. ಅವರ ಮನೆಗೆ ಬರುವ ಅತಿಥಿಗಳಲ್ಲಿ ಅಂದು ಬಹು ಮುಖ್ಯ ಸ್ಥಾನ ಇವರಿಗೆ. ಇಡೀ ದಿನ ಅವರ ಜೊತೆ ಹಾಡಿ ಕುಣಿದು ಎಲ್ಲರೂ ಸಂತೋಷದಿಂದಿರುತ್ತಿದ್ದರು. ಆಗ ನನಗೆ ಇನ್ನೂ ಆರೇಳು ವರ್ಷ.

ಈ ಕಾರಣಕ್ಕೇ ಇರಬೇಕು ನನ್ನ ಮನಸ್ಸಿನಲ್ಲಿ ಇಂದಿಗೂ ತೃತೀಯ ಲಿಂಗಿಗಳ ಬಗ್ಗೆ ಯಾವುದೇ ‘ನೋ, ನೋ’ ಮನಸ್ಥಿತಿ ಇಲ್ಲ.

ಅದರ ಜೊತೆಗೆ ಎಚ್ ಎಲ್ ನಾಗೇಗೌಡರ ‘ಜಾನಪದ ಲೋಕ’ದ ಸಹವಾಸಕ್ಕೆ ಬಿದ್ದ ಮೇಲಂತೂ ಮಂಜಮ್ಮ ಜೋಗತಿಯಿಂದ ಹಿಡಿದು ಅನೇಕರ ಜೊತೆ ಗಂಟೆಗಳ ಕಾಲ ಅವರ ನೋವಿನ ಕಥೆಯನ್ನು ಕೇಳಿದ್ದೇನೆ.

ಅವರ ಕಣ್ಣೀರು ನನ್ನೊಳಗೆ ಇನ್ನೂ ಇದೆ.

ಹಾಗಾಗಿಯೇ ಟ್ರಾಫಿಕ್ ಸಿಗ್ನಲ್ ನಲ್ಲಿ ಎದುರಾಗುವ ಎಷ್ಟೋ ಮಂದಿ ಮಾಡುವ ಆಶೀರ್ವಾದಕ್ಕೆ ನಾನು ತನ್ಮಯತೆಯಿಂದ ನನ್ನ ನೆತ್ತಿಯನ್ನು ಅರ್ಪಿಸುತ್ತೇನೆ.

ರೇವತಿ ನಕ್ಕುಬಿಟ್ಟಳು.

‘ಹಾಗೆ ನಾವು ಆಶೀರ್ವಾದ ಮಾಡೋದು, ಅದರಿಂದ ಒಳ್ಳೆಯದಾಗುತ್ತೆ ಅಂತ ಜನ ನಂಬೋದು ಯಾಕೆ ಗೊತ್ತಾ’ ಎಂದು ಕೇಳಿದಳು.

ರಾಮ ವನವಾಸಕ್ಕೆ ಹೊರಟ ಊರವರೆಲ್ಲಾ ದುಃಖದಿಂದ ಅವನನ್ನು ಬೀಳ್ಕೊಡಲು ಕಾಡಿನ ಅಂಚಿನವರೆಗೆ ಬಂದರು.

ರಾಮನೂ ಕಣ್ಣೊರೆಸಿಕೊಂಡವನೇ ‘ಗಂಡಸರೇ ಹೆಂಗಸರೇ ನೀವೆಲ್ಲ ಮನೆಗಳಿಗೆ ಹೋಗಿ. ನಾನು ಸುರಕ್ಷಿತವಾಗಿ ವಾಪಸ್ ಬರುತ್ತೇನೆ’ ಎಂದ.

ಅಂತೆಯೇ ೧೪ ವರ್ಷ ಕಳೆದು ವಾಪಸ್ ಬಂದಾಗ ನೋಡುತ್ತಾನೆ. ಒಂದಷ್ಟು ಜನ ಅಲ್ಲಿಯೇ ಇದ್ದಾರೆ.

ಆಶ್ಚರ್ಯಗೊಂಡ ರಾಮ ಯಾಕೆ ನೀವು ಮನೆಗೆ ಹೋಗದೆ ಇಲ್ಲೇ ಇದ್ದೀರಾ ಎಂದು ಕೇಳುತ್ತಾನೆ.

ಆಗ ಅವರು ನೀವು ಹೆಂಗಸರು, ಗಂಡಸರಿಗೆ ಮನೆಗೆ ಹೋಗಲು ಹೇಳಿದಿರಿ. ಆದರೆ ನಾವು ಅವೆರಡೂ ಅಲ್ಲದವರು. ಹಾಗಾಗಿ ನೀನು ನಮಗೆ ಏನೂ ಹೇಳಲಿಲ್ಲವಲ್ಲ ಇಲ್ಲೇ ಕಾಯುತ್ತ್ತಿದ್ದೇವೆ ಎಂದರಂತೆ.

ಅವರ ಪ್ರೀತಿ ಕಂಡು ದಂಗಾದ ರಾಮ ನಿಮ್ಮ ಆಶೀರ್ವಾದ ಪಡೆದವರಿಗೆ ಸದಾ ಒಳಿತಾಗಲಿ ಎಂದು ಹಾರೈಸಿದನಂತೆ.

ಅಂದಿನಿಂದ ನಮ್ಮ ಆಶೀರ್ವಾದ ಸಿಗುತ್ತಿದೆ.

‘ಆದರೆ ಬದುಕು ನಮ್ಮನ್ನು ಇಂತಹ ಸ್ಥಿತಿಗೆ ದೂಡಿದೆಯೆಂದರೆ ಟ್ರಾಫಿಕ್ ಸಿಗ್ನಲ್ ನಲ್ಲಿ ಬಲವಂತವಾಗಿ ಆಶೀರ್ವಾದ ಮಾಡುವ ಸ್ಥಿತಿಗೆ’ ಎಂದು ವಿಷಾದದ ನಗೆ ಚೆಲ್ಲಿದಳು.

ನನಗೂ ನನ್ನ ಬಾಲ್ಯದಲ್ಲಿ ಗುಜರಾತಿ ಮನೆಗಳಿಗೆ ಇವರು ಬಂದು ಹಾಡಿ ಕುಣಿಯುತ್ತಿದ್ದುದರ ಮಿಸ್ಸಿಂಗ್ ಲಿಂಕ್ ಸಿಕ್ಕಿಹೋಯಿತು.

ರೇವತಿಯನ್ನು ಕೇಳಲು ಸಾಕಷ್ಟು ವಿಷಯವಿತ್ತು. ಸೇಲಂ ನಿಂದ ಮುಂಬೈ, ದೆಹಲಿ.. ಹಿಜಾಬ್, ಚೇಲಾ, ಪ್ರೇಮದಲ್ಲಿ ಬಿದ್ದದ್ದು,, ಗಂಡನಂತೆ ಬದುಕಿದವನು ಇದ್ದಕ್ಕಿದ್ದಂತೆ ಹೊರಗೆ ಹಾಕಿದ್ದು, ೬ನೆಯ ವಯಸ್ಸಿನಲ್ಲಿಯೇ ಸಹಪಾಠಿಗೆ ಪ್ರೇಮ ಪತ್ರ ಬರೆದದ್ದು, ಶಿಶ್ನವನ್ನು ಕತ್ತರಿಸಿ ಎಸೆದಿದ್ದು ಹೀಗೆ.. ಆದರೆ ನನ್ನ ಕಣ್ಣಿದ್ದದ್ದು ಆಕೆಯ ಯಶೋಗಾಥೆಯ ಬಗ್ಗೆ..

‘ನನಗೆ ಪಾಸ್ ಪೋರ್ಟ್ ಸಿಕ್ಕಿತು ಗೊತ್ತಾ’ ಎಂದರು.

ಅದು ನನಗೆ ಗೊತ್ತಿತ್ತು. ಏಕೆಂದರೆ ರೇವತಿ ಎಂದರೆ ಅನೇಕ ವಿದೇಶಿ ವೇದಿಕೆಗಳಲ್ಲಿ ಸಂಚಲನ ಹುಟ್ಟಿಸುವ ಹೆಸರು.

‘ವಿಮೋಚನಾ’ ಬಳಗದ ಭಾಗವಾಗಿದ್ದ ಆಕೆ ಅನೇಕ ಬಾರಿ ವಿದೇಶದಲ್ಲಿ ಉಪನ್ಯಾಸ ನೀಡಿದ್ದಾಳೆ. ತನ್ನ ಕಥೆ ಹೇಳಿಕೊಂಡಿದ್ದಾಳೆ, ಜೊತೆಗಾರರಿಗೆ ಕೌನ್ಸೆಲಿಂಗ್ ಮಾಡಿದ್ದಾಳೆ.

ವಿದೇಶಿ ತೃತೀಯ ಲಿಂಗಿಗಳಿಗೆ ಭಾರತದ ವ್ಯವಸ್ಥೆ ಸದಾ ಕುತೂಹಲಕರ.

ಭಾರತದಲ್ಲಿರುವ ಹಿಜ್ರಾಗಳಿಗೆ ಎರಡು ಕುಟುಂಬ ಪದ್ಧತಿ ಇದೆ. ತಮ್ಮ ಒಡಹುಟ್ಟಿದವರ ಜೊತೆಗಿನದ್ದು ಒಂದಾದರೆ ಹಿಜ್ರಾ ಪದ್ಧತಿಯಲ್ಲಿಯೇ ತಾಯಿ, ಗುರು, ಬಂಧು ಬಳಗ ಇರುವ ಇನ್ನೊಂದು ಕುಟುಂಬ.

ಇದು ಸಾಕಷ್ಟು ಭದ್ರತೆಯ ಭಾವ ನೀಡುತ್ತದೆ. ಇದು ವಿದೇಶದಲ್ಲಿಲ್ಲ.

ಹಾಗಾಗಿಯೇ ಇಲ್ಲಿನ ತೃತೀಯ ಲಿಂಗಿಗಳ ಜೊತೆ ಸದಾ ಸಂವಾದ ನಡೆಸುತ್ತಲೇ ಇರುತ್ತಾರೆ.

‘ರೈತರಿಗೆ ದೇವರಾಜ ಅರಸ್ ಹೇಗೋ ಹಿಜ್ರಾಗಳಿಗೆ ಇಂದಿರಾಗಾಂಧಿ..’ ಎಂದು ರೇವತಿ ತುಂಬು ಕೃತಜ್ಞತೆಯಿಂದ ಮಾತನಾಡಿದಾಗ ನನಗೆ ಆಶ್ಚರ್ಯವಾಯಿತು.

‘ಅದು ಹೇಗೆ’ ಎಂದು ಮುಖ ಮಾಡಿದೆ.

ಇಂದಿರಾ ಗಾಂಧೀ ಹಿಜ್ರಾಗಳಿಗೆ ಮೊತ್ತಮೊದಲ ಬಾರಿಗೆ ಮನೆಗಳನ್ನು ಕೊಟ್ಟರು. ಅಷ್ಟೇ ಆಗಿದ್ದರೆ ಅಂತಹ ದೊಡ್ಡ ಬದಲಾವಣೆ ಆಗುತ್ತಿರಲಿಲ್ಲ.

ಆದರೆ ಆಕೆ ನಮಗೆ ಸಮಾಜದ ಎಲ್ಲರ ನಡುವೆಯೇ ಬದುಕುವ ಅವಕಾಶ ಕಲ್ಪಿಸಿದರು.

ಅದು ಸಣ್ಣ ಪ್ರಯತ್ನ ಆದರೆ ನಮ್ಮ ಬದುಕಲ್ಲಿ ದೊಡ್ಡ ಬದಲಾವಣೆ ತಂದಿತು. ಸಮಾಜ ಹಿಜ್ರಾಗಳನ್ನು ಸ್ವೀಕರಿಸುವಲ್ಲಿ ಇದು ಕ್ರಾಂತಿಕಾರಕ ಹೆಜ್ಜೆ.

ಈಗ ಎಂದೆ. ರೇವತಿಗೆ ಅದುವರೆಗೆ ಇದ್ದ ಆಕ್ರೋಶ ಒದ್ದುಕೊಂಡು ಬಂತು.

‘ನಿಮಗೆ ಗೊತ್ತಿದೆಯಾ ಆಟೋದಲ್ಲಿ ನಾವು ಕುಳಿತರೆ ಸಾಕು ಮೀಟರ್ ಡಬ್ಬಲ್ ಓಡುತ್ತದೆ. ಇದು ಅಘೋಷಿತ ಕಾನೂನು.

ಹಾಗೆಯೇ ನಮಗೆ ಮನೆ ಬಾಡಿಗೆಗೆ ಕೊಡುವಾಗ ಮೂರು ಪಟ್ಟು ಬಾಡಿಗೆ, ಕೊಟ್ಟ ಅಡ್ವಾನ್ಸ್ ವಾಪಸ್ ಇಲ್ಲ,

ಇರುವ ಪ್ರದೇಶದ ರೌಡಿ ಜೊತೆ ಮಲಗಬೇಕು ಎನ್ನುವ ನೂರೆಂಟು ಕಣ್ಣಿಗೆ ಕಾಣದ ಕಾನೂನುಗಳಿವೆ’ ಎಂದಳು.

ರೇವತಿಯೊಳಗೆ ಮಡುಗಟ್ಟಿದ ಆಕ್ರೋಶ ಆಗೀಗ ಹೊರಗೆ ಧುಮ್ಮಿಕ್ಕಿದ್ದರ ಪರಿಣಾಮವೇ ಹಿಜ್ರಾಗಳ ಬದುಕಿನ ಮೇಲೆ ಸಾಕಷ್ಟು ಬೆಳಕು ಬಿದ್ದಿದೆ.

ತಾನಿದ್ದ ಎನ್ ಜಿ ಓ ಲೈಬ್ರರಿಯಲ್ಲಿ ಹಿಜ್ರಾಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳೇ ಇಲ್ಲದ್ದನ್ನು ನೋಡಿದ್ದ ರೇವತಿ ತಾವೇ ಹಿಜ್ರಾಗಳ ಸಂದರ್ಶನ ನಡೆಸಿ ಪುಸ್ತಕವಾಗಿಸಿದರು.

ಇತ್ತೀಚೆಗೆ ‘ಸಿಜಿಕೆ ನೆನಪಿನ ರಾಷ್ಟ್ರೀಯ ನಾಟಕೋತ್ಸವ’ದಲ್ಲಿ ರೇವತಿ ಎಲ್ಲರೊಂದಿಗೆ ನಗುತ್ತಾ ಸಂಭ್ರಮದಿಂದ ಓಡಾಡುತ್ತಿದ್ದರು.

‘ಏನು ಇಲ್ಲಿ..?’ ಎಂದು ನಾನು ಖಂಡಿತಾ ಕೇಳಲಿಲ್ಲ

ಏಕೆಂದರೆ ಆ ವೇಳೆಗೆ ರೇವತಿ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು.

ಇವರ ಆತ್ಮಕಥೆ ‘ಬದುಕು ಬಯಲು’ ನಾಟಕವಾಗಿ ಯಶಸ್ಸು ಕಂಡಿತ್ತು. ಖುದ್ದು ರೇವತಿಯೇ ಬಣ್ಣ ಹಚ್ಚಿ ರಂಗದ ಮೇಲೆ ತಮ್ಮ ಕಥೆ ಹೇಳಿದರು.

‘ತಮಿಳುನಾಡು, ಕರ್ನಾಟಕದ ಹಿಜ್ರಾಗಳ ಬಗ್ಗೆ ಪುಸ್ತಕ ತಂದಿರಿ ಆಮೇಲೇನಾಯ್ತು?’ ಕೇಳಿದೆ.

‘ತುಂಬಾ ತುಂಬಾ ಬದಲಾವಣೆಯಾಯಿತು.

ಈ ಪುಸ್ತಕ ಹೊರ ತಂದ ಮೇಲೆ ಯಾಕೋ ಎಲ್ಲವನ್ನೂ ಅಲ್ಲಿ ಹೇಳಲಾಗಿಲ್ಲ ಎನಿಸಿತು. ಆಗ ನಾನು ನನ್ನದೇ ಕಥೆ ಬರೆಯತೊಡಗಿದೆ. ಆತ್ಮಚರಿತ್ರೆ ಹೊರಬಂತು’ ಎಂದರು.

ಅಮೇಲಿನದ್ದು ನನಗೆ ಗೊತ್ತಿತ್ತು. ಯಾವಾಗ ರೇವತಿ ಈ ಕೃತಿ ಹೊರತಂದರೋ ಆಗ ದೇಶದ ಅನೇಕ ಕಡೆ ಇದು ವ್ಯಾಪಕ ಧೈರ್ಯ ನೀಡಿತು.

‘ನಾನು ಸರವಣನ್ ಅಲ್ಲ’, ‘I am Vidya’ ಮುಂತಾದ ಕೃತಿಗಳು ಬಂದವು.

ಇದೆಲ್ಲಾ ನೆನಪಿಸಿಕೊಳ್ಳುತ್ತಾ ನಿಂತಿರುವಾಗಲೇ ರೇವತಿ ದಿಢೀರನೆ ನನ್ನ ಕೈ ಗಟ್ಟಿಯಾಗಿ ಹಿಡಿದುಕೊಂಡರು.

‘ನನ್ನ ಬದುಕಿನ ಅಷ್ಟೂ ನೋವು ಕರಗಿ ಹೋಗಿದ್ದು ಯಾವಾಗ ಗೊತ್ತಾ?’ ಎಂದು ಕಣ್ಣಲ್ಲಿ ಬೆಳಕು ತುಳುಕಿಸುತ್ತಾ ಕೇಳಿದರು.

‘ಕೇರಳದ ಕಾಲೇಜಿನ ಉಪನ್ಯಾಸಕರ ಮಗಳೊಬ್ಬಳು ನನ್ನದೇ ರೀತಿಯ ದ್ವಂದ್ವದಲ್ಲಿದ್ದಳು. ಅವಳ ದೇಹದೊಳಗೆ ಒಬ್ಬ ಗಂಡಿದ್ದ. ಆ ಉಪನ್ಯಾಸಕಿ ವರ್ಷಾನುಗಟ್ಟಲೆ ಡಿಪ್ರೆಶನ್ ಗೆ ಜಾರಿದ್ದರು. ನನ್ನ ಕೃತಿ ಓದಿದ್ದೇ ಮಗಳನ್ನು ಕರೆದು ಇಂದಿನಿಂದ ನೀನು ನನ್ನ ಮಗನೆ ಎಂದು ತಬ್ಬಿಕೊಂಡರು. ಇಬ್ಬರ ಜೀವ ಉಳಿಯಿತು. ಇಬ್ಬರ ಬದುಕೂ ಸಂಭ್ರಮದೆಡೆಗೆ ಹೊರಳಿಕೊಂಡಿತು’ ಎಂದರು.

‘ಕಾರಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಟ್ರಾಫಿಕ್ ಸಿಗ್ನಲ್ ನಲ್ಲಿದ್ದ ಹಿಜ್ರಾಗಳನ್ನು ನೋಡಿ ಅವರ ಬಳಿ ಹೋಗಿ ಅವರನ್ನು ತಬ್ಬಿಕೊಂಡರು. ನೆರೆದಿದ್ದ ಎಲ್ಲರಿಗೂ ಆಶ್ಚರ್ಯ. ಕಾರಿನ ಚಾಲಕ ಕೂಡ ತಬ್ಬಿಬ್ಬು.

ಅವರನ್ನು ತಬ್ಬಿಕೊಂಡು ಹೇಳಿದರಂತೆ- ನಾನು ರೇವತಿ ಆತ್ಮಚರಿತ್ರೆ ಓದಿದೆ. ಅಲ್ಲಿಯವರೆಗೆ ನೀವೆಲ್ಲಾ ಸಮಾಜಕ್ಕೆ ಶಾಪ ಎಂದುಕೊಂಡಿದ್ದೆ. ಆದರೆ ಎಷ್ಟು ಕಷ್ಟ ಅನುಭವಿಸಿದ್ದೀರಿ ಎಂದು ಕಣ್ಣೀರಾದರಂತೆ

ಅಷ್ಟೇ ಅಲ್ಲ ಅವರಿವರನ್ನು ಸಂಪರ್ಕಿಸಿ ನನ್ನ ಫೋನ್ ನಂಬರ್ ಪಡೆದರು. ನನಗೆ ಫೋನ್ ಮಾಡಿದ್ದಾಗ ಅವರಿಗಿಂತ ಹೆಚ್ಚಾಗಿ ನಾನು ಕಣ್ಣೀರಾಗಿದ್ದೆ’ ಎಂದರು.

‘ಒಂದು ನೆಮ್ಮದಿ ವಿಷಯ ಇದೆ’ ಎಂದರು

ನಾನು ಆ ವೇಳೆಗಾಗಲೇ ಅವರ ಬದುಕಿನ ದೋಣಿಯೇರಿ ಸಾಕಷ್ಟು ದೂರ ಬಂದಿದ್ದೆ.

‘ನನ್ನ ತಂದೆಯನ್ನು ಈಗ ನೋಡಿಕೊಳ್ಳುತ್ತಿರುವುದು ನಾನೇ’ ಎಂದರು.
ಆಗ ನೋಡಬೇಕಿತ್ತು ಅವರೊಳಗೆ ಚಿಮ್ಮಿದ ಆತ್ಮ ವಿಶ್ವಾಸ

ನನ್ನ ಮೆಚ್ಚುಗೆಯ ನೋಟ ಸಿಕ್ಕಿದ್ದೇ ತಡ ಹೇಳತೊಡಗಿದರು.
‘ನನ್ನ ಕುಟುಂಬದ ಆಸ್ತಿ ಪಾಲು ಮಾಡಬೇಕಾಗಿ ಬಂದಾಗ ನನ್ನ ತಂದೆ ಎಲ್ಲಾ ಆಸ್ತಿಯನ್ನು ನನ್ನ ಅಣ್ಣಂದಿರಿಗೆ ಕೊಟ್ಟರು.

ಈಗಲೂ ಅವರಿಗೆ ನನ್ನ ಮೇಲೆ ಅಷ್ಟೇನೂ ಪ್ರೀತಿಯಿಲ್ಲ.
ಆದರೆ ಅವರನ್ನು ನನ್ನ ಜೊತೆ ಇರಿಸಿಕೊಂಡು ಅವರ ಸ್ನಾನ ಮಾಡಿಸುತ್ತ, ಬಟ್ಟೆ ಒಗೆಯುತ್ತಾ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ಮೂರು ಹೊತ್ತು ಅಡುಗೆ ಮಾಡಿ ಹಾಕುತ್ತಾ ಹೊತ್ತು ಹೊತ್ತಿನ ಕಷ್ಟ ಸುಖಕ್ಕೆ ಜೊತೆಯಾಗುತ್ತಾ ಸಾಗಿದ್ದೇನೆ. ಇದಕ್ಕಿಂತ ನೆಮ್ಮದಿ ಇನ್ನೇನು ಬೇಕು’ ಎಂದರು.

‘ಬೊಗಸೆಯಲ್ಲಿ ಮಳೆ’ ಎಂದಿದ್ದರು ಜಯಂತ್ ಕಾಯ್ಕಿಣಿ.

ಆ ಕ್ಷಣ ನನ್ನ ಬೊಗಸೆಯಲ್ಲೂ ಮಳೆ ಇತ್ತು.
ಕಣ್ಣೀರಿನ ಮಳೆ.

ರೇವತಿಗೆ ಒಂದು ಚಂದ ಹಗ್ ಕೊಟ್ಟೆ.

Comment here