ಜಸ್ಟ್ ನ್ಯೂಸ್

ವೈಜ್ಞಾನಿಕ ಮನೋಭಾವದಿಂದ ಮೌಢ್ಯ ದೂರ

ಪಬ್ಲಿಕ್ ಸ್ಟೋರಿ

  ವೈ.ಎನ್.ಹೊಸಕೋಟೆ : ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿನ ಮೌಢ್ಯತೆಯನ್ನು ದೂರ ಮಾಡಲು ಸಾಧ್ಯ ಎಂದು ಮಧುಗಿರಿ ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.

ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಬುಧವಾರದಂದು ನಡೆದ ಮಕ್ಕಳ ವಿಜ್ಞಾನ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಕ್ತಿಯಲ್ಲಿನ ಕುತೂಹಲ ಅತನನ್ನು ವಿಜ್ಞಾನಿಯನ್ನಾಗಿ ಅಥವಾ ಸಂಶೋದಕನನ್ನಾಗಿ ಮಾಡುತ್ತದೆ. ಸಮಾಜದಲ್ಲಿನ ಕಂದಾಚಾರ, ಮೌಡ್ಯದ ಆಚರಣೆಗಳ ಸತ್ಯಾಸತ್ಯತೆಗಳನ್ನು ತಿಳಿಯಲು ವಿಜ್ಞಾನದ ಅರಿವು ಅತ್ಯಗತ್ಯ. ಸಾಮಾನ್ಯ ವಿದ್ಯಾರ್ಥಿಗಳಾಗಿದ್ದ ನ್ಯೂಟನ್ನಂತಹ ಅನೇಕರು ಕುತೂಹಲ ಮತ್ತು ನಿರಂತರ ಪರಿಶ್ರಮದಿಂದ ವಿಜ್ಞಾನಿಗಳಾಗಿದ್ದಾರೆ. ವಿದ್ಯಾರ್ಥಿಗಳು ಪ್ರತಿಯೊಂದು ವಿಷಯವನ್ನು ಕುತೂಹಲವಾಗಿ ಕಾಣಬೇಕು. ಕಾರ್ಯಕಾರಿಣಿ ಸಂಬಂಧವನ್ನು ಹುಡುಕುತ್ತಾ ಬೆಳೆಯಬೇಕು. ಆಗ ಸೀಮಿತ ದೃಷ್ಟಿಕೋನ ಬದಲಾಗಿ ಪ್ರಗತಿದಾಯಕ ಬೆಳವಣಿಗೆ ಕಂಡುಬರುತ್ತದೆ. ಈ ದಿಸೆಯಲ್ಲಿ ವಿಜ್ಞಾನ ಹಬ್ಬಗಳು ಪೂರಕವಾಗಿವೆ ಎಂದು ತಿಳಿಸಿದರು.

ಸಮಾಜದಲ್ಲಿ ಅರ್ಥವಿಲ್ಲದ ಗೊಡ್ಡು ಸಂಪ್ರದಾಯಗಳಿಗೆ ಜನತೆ ಬಹುಬೇಗ ಸ್ಪಂದಿಸುತ್ತಾರೆ. ವೈಜ್ಞಾನಿಕ ತಿಳುವಳಿಕೆಯಿಂದ ಇಂತಹ ಮೂಡನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯ.ವಿಜ್ಞಾನವು ವಾಸ್ಥವಿಕತೆಯ ಸತ್ಯತೆಯನ್ನು ತೆರೆದಿಡುತ್ತದೆ ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಶಂಕರಪ್ಪ ತಿಳಿಸಿದರು.

ವ್ಯಕ್ತಿಯು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡರೆ ಧರ್ಮ, ಸಂಪ್ರದಾಯ ಮತ್ತು ನಂಬಿಕೆಗಳ ವಿಚಾರದಲ್ಲಿ ಮೋಸ ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಬಸವರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸಾವಿತ್ರಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ವಿಶಾಲಮ್ಮ, ಸ್ಥಳೀಯ ಮುಖ್ಯಶಿಕ್ಷಕ ಐ.ಎ.ನಾರಾಯಣಪ್ಪ, ಮುಖಂಡ ಎನ್.ಅರ್.ಅಶ್ವಥ್ ಕುಮಾರ್, ಶಿಕ್ಷಕ ಚನ್ನಮಲ್ಲಿಕಾರ್ಜುನ ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗ್ರಾಮದ ಪುರಬೀದಿಗಳಲ್ಲಿ ವಿಜ್ಞಾನ ಜಾಥಾ ನಡೆಸಿದರು. ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವೀರಗಾಸೆ, ಲಂಬಾಣಿ ನೃತ್ಯ, ಲೆಜೀಮ್ ಮತ್ತು ಡಂಬಲ್ಸ್ ನೃತ್ಯಗಳನ್ನು ಪ್ರದರ್ಶಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಮ್ಮ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಮ್.ಮಹಬೂಬ್ ಸಾಬ್, ಶಾಲಾಸಮಿತಿಯ ಅಧ್ಯಕ್ಷ ಬಾಲಾಜಿ, ಸಂಪನ್ಮೂಲ ಶಿಕ್ಷಕರಾದ ಲತ, ಕರಿಯಾಲಪ್ಪ, ಶ್ರೀದೇವಮ್ಮ, ಹರ್ಷ, ಹನುಮಂತರಾಯಪ್ಪ, ಶಿಕ್ಷಕರಾದ ಫಕೃದ್ಧೀನ್, ಬಿ.ಆರ್.ಶ್ರೀನಿವಾಸ, ಹೆಚ್.ಕೆ.ಅಶ್ವಥನಾರಾಯಣ, ಮಾಲತಿ, ಬಿ.ಹೆಚ್.ಗೌಡ,  ಜಿ.ಅರ್.ಶ್ರೀನಿವಾಸ, ರಾಮಾಂಜಿನೇಯ, ರಾಮಲಿಂಗಪ್ಪ ಇದ್ದರು.

Comment here