ಜಸ್ಟ್ ನ್ಯೂಸ್

ಹಣಕ್ಕಾಗಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಪಹರಣ

ಕೋಲಾರ : ಕೆಲವು ನುರಿತ ಅಪಹರಣಕಾರರಿಂದ ಹಣಕ್ಕಾಗಿ ಕಳೆದ ತಿಂಗಳ 25 ರಂದು ನನ್ನ ಅಪಹರಣವಾಗಿದೆಯೇ ಹೊರತು ಈ ವಿಚಾರದಲ್ಲಿ ರಾಜಕಾರಣದ ವಿಷಯವಾಗಲಿ, ದ್ವೇಷವಾಗಲೀ ಇಲ್ಲ ಎಂದು ಮಾಜಿ ಸಚಿವ ವರ್ತೂರ್ ಆರ್.ಪ್ರಕಾಶ್ ಸ್ಪಷ್ಟಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು ಈಗಾಗಲೇ ಅಪಹರಣದ ಬಗ್ಗೆ ದೂರು ದಾಖಲಿಸಿದ್ದು, ನನಗೆ ರಾಜ್ಯ ಸರ್ಕಾರ ಹಾಗೂ ಪೋಲಿಸ್ ಇಲಾಖೆ ಮೇಲೆ ಸಂಪೂರ್ಣ ನಂಬಿಕೆಯಿದ್ದು, ಇನ್ನು ಒಂದು ವಾರದ ಒಳಗೆ ಅಪಹರಣಕಾರರ ಬಂಧನವಾಗ ಲಿದ್ದು, ಎಲ್ಲಾ ವಿಚಾರ ಸಂಪೂರ್ಣ ಬಹಿರಂಗವಾಗಲಿದೆ ಎಂದರು.

ಅಪಹರಣಾಕಾರದಿಂದ ನಾನು ಬಿಡುಗಡೆಯಾದ ದಿನವೇ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಸಂಪೂರ್ಣವಾಗಿ ಘಟನೆ ಬಗ್ಗೆ ತಿಳಿಸಿದ್ದು, ಈ ಕೃತ್ಯದಿಂದ ಜರ್ಜರಿತನಾಗಿ ಸುಧಾರಿಸಿಕೊಂಡ ನಂತರ ಗೃಹ ಸಚಿವರ ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳ ನೀಡಿದ ಧೈರ್ಯದ ಮೇರೆಗೆ ತಡವಾಗಿ ಮಂಗಳವಾರ ಸಂಜೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ಚುರುಕಾಗಿ ನಡೆಯುತ್ತಿದ್ದು, ಆದಷ್ಟು ಬೇಗ ಅಪರಾಧಿಗಳ ಬಂಧನವಾಗುವ ವಿಶ್ವಾಸ ವ್ಯಕ್ತಪಡಿಸಿದರು.

ಅಪಹರಣಕಾರರು ಕನ್ನಡ ಭಾಷೆ ಮಾತನಾಡುತ್ತಿದ್ದು, ನನ್ನ ವಿವೇಚನೆ ಪ್ರಕಾರ ಅವರ್ಯಾರೂ ಹೊರರಾಜ್ಯದವರಲ್ಲ, ಅಪ್ಪಟ ಬೆಂಗಳೂರು ಕಡೆಯವರೆಂದು ಅವರ ವರ್ತನೆಯಿಂದ ತಿಳಿದುಬರುತ್ತದೆ, ಈ ರೀತಿ ಅಪಹರಣಕಾರರ ಹಲವಾರು ಗ್ಯಾಂಗ್ ಗಳು ಬೆಂಗಳೂರಿನಲ್ಲಿ ಈಗಲೂ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಸರ್ಕಾರ ಇಂತಹ ಗ್ಯಾಂಗ್ ಗಳನ್ನು ಪತ್ತೆ ಹಚ್ಚಿ ಮಟ್ಟ ಹಾಕಲು ಸರ್ಕಾರವನ್ನು ಆಗ್ರಹಿಸಿದರು.

ಈ ಒಂದು ಘಟನೆಯಿಂದ ನನ್ನ ಹಿಂಬಾಲಕರು ಹಾಗೂ ಅಭಿಮಾನಿಗಳು ಯಾರು ಆತಂಕ ಯಪಡುವ ಅಗತ್ಯವಿಲ್ಲ, ತಾಲ್ಲೂಕಿನ ಎಲ್ಲಾ 23 ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ನನ್ನ ಬೆಂಬಲಿಗರು ಸ್ಪರ್ಧಿಸಲಿದ್ದು,ಚುನಾವಣಾ ಹಿನ್ನಲೆಯಲ್ಲಿ ಮುಂದಿನ ಶನಿವಾರ ಮತ್ತು ಭಾನುವಾರ ತಮ್ಮ ಫಾರಂ ಹೌಸ್ ನಲ್ಲಿ ಸಭೆ ಕರೆದಿದ್ದು,ಚುನಾವಣಾ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು,ಇಂದಿಗೂ ನನಗೆ ಎಲ್ಲಾ ಹಳ್ಳಿಗಳಲ್ಲೂ ಬೆಂಬಲ ಹಿಂದಿನಂತೆ ಇದ್ದು, ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನನ್ನ ಬೆಂಬಲಿಗರು ಗೆಲ್ಲಲಿದ್ದಾರೆಂದು ಅವರು ಹೇಳಿದರಲ್ಲದೆ, 2023ರ ಚುನಾವಣೆಯಲ್ಲಿ ಮತ್ತೆ ಶಾಸಕನಾಗಿ ಆರಿಸಿ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕುರುಬ ಜನಾಂಗದ ತಂಬಿಹಳ್ಳಿ ಮುನಿಯಪ್ಪ, ಮಧುಸೂದನ ಕುಮಾರ್, ಜಿ ಪಂ ಸದಸ್ಯ ಅರುಣ್ ಪ್ರಸಾದ್, ಸೋಮಶೇಖರ್, ಮುನಿಸ್ವಾಮಿ‌, ವರಲಕ್ಷ್ಮಿ, ಹಾಗೂ ಕುರುಬ ಸಮುದಾಯದ ಮುಖಂಡರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

Comment here