Thursday, March 28, 2024
Google search engine
Homeಜಸ್ಟ್ ನ್ಯೂಸ್ಆತ್ಮನಿರೀಕ್ಷೆಯೇ ಇಲ್ಲದ ಕಾಲ ಇದು: ಬರಗೂರು ರಾಮಚಂದ್ರಪ್ಪ ವಿಷಾದ 

ಆತ್ಮನಿರೀಕ್ಷೆಯೇ ಇಲ್ಲದ ಕಾಲ ಇದು: ಬರಗೂರು ರಾಮಚಂದ್ರಪ್ಪ ವಿಷಾದ 

ಕೃಪೆ ಅವಧಿ

ಒಂದು ಪ್ರಜಾಸತ್ತೆ ಉಳಿಯಲು ಆತ್ಮನಿರೀಕ್ಷೆ ಮುಖ್ಯ. ಆದರೆ ನಾವು ಇಂದು ಆತ್ಮನಿರೀಕ್ಷೆಯ ಅಭಾವದಲ್ಲಿ ನರಳುತ್ತಿದ್ದೇವೆ ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ವಿಷಾದಿಸಿದರು.

‘ಅವಧಿ’ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ ಬರಗೂರು ರಾಮಚಂದ್ರಪ್ಪನವರ ‘ಕಸ್ತೂರ್ ಬಾ vs ಗಾಂಧಿ’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಒಂದು ಪ್ರಜಾಪ್ರಭುತ್ವದ ಉಳಿವಿಗೆ ಬೇಕಿರುವುದು ಕಣ್ಣು ಮತ್ತು ಕಿವಿ. ಇವೆರಡೂ ಸರಿಯಾಗಿದ್ದರೆ ಪ್ರಜಾಸತ್ತಾತ್ಮಕ ಮೌಲ್ಯಗಳು ಹೆಚ್ಚು ಗಟ್ಟಿಯಾಗುತ್ತವೆ. ಆತ್ಮ ನಿರೀಕ್ಷೆ ಬರುತ್ತದೆ. ಈ ಆತ್ಮನಿರೀಕ್ಷೆಯ ಅಭಾವ ಪ್ರಜಾಪ್ರಭುತ್ವಕ್ಕೆ ಕೊಡಲಿಯೇಟು ನೀಡುತ್ತದೆ. ಇವತ್ತು ಕಣ್ಣು ಕಿವಿಗಳ ಬದಲು ಹರಿತ ನಾಲಿಗೆಗಳೇ ಕಾಣುತ್ತಿವೆ ಎಂದು ಟೀಕಿಸಿದರು.

ಗಾಂಧಿ ಮತ್ತು ಕಸ್ತೂರ್ ಬಾ ಇಬ್ಬರಲ್ಲೂ ಈ ಆತ್ಮ ನಿರೀಕ್ಷೆ ಇತ್ತು ಎನ್ನುವ ಕಾರಣಕ್ಕೆ ಅವರು ನನಗೆ ಮುಖ್ಯವಾದರು . ಇದು ಅವರಿಬ್ಬರ ಆತ್ಮ ನಿರೀಕ್ಷೆ ಮಾತ್ರವಲ್ಲ, ಸಮಾಜದ, ಪ್ರಜಾಪ್ರಭುತ್ವದ ಆತ್ಮ ನಿರೀಕ್ಷೆಯಾಗಿತ್ತು ಎಂದರು.

ಕೃತಿ ಬಿಡುಗಡೆ ಮಾಡಿದ ನಾಡೋಜ ಕಮಲಾ ಹಂಪನಾ ಅವರು ಇದು ಕಸ್ತೂರ್ ಬಾ ಅವರ ಒಳಗಣ್ಣಿನಿಂದ ಗಾಂಧಿಯನ್ನು ನೋಡುವ ಕೃತಿ. ಕಸ್ತೂರ್ ಬಾ ಅವರ ಮೂಲಕ ಗಾಂಧಿಯನ್ನು ನೋಡಿದಾಗ ಗಾಂಧಿಯವರ ನಿಜ ಅಂತರಂಗ, ಭಾವ, ಚಿಂತನೆ ನೋಡಲು ಸಾಧ್ಯವಾಗುತ್ತದೆ ಎಂದರು.

ಬರಗೂರು ಅವರ ಈ ಕೃತಿ ಚಂಪೂ ಕಾವ್ಯದಂತೆ. ಇದು ಗದ್ಯ ಹಾಗೂ ಪದ್ಯ ಎರಡೂ ಹೌದು. ಗ್ರೀಕ್ ನಾಟಕಗಳಂತೆ ಹೊಸ ರೀತಿಯ ತಂತ್ರವನ್ನು ಅಳವಡಿಸಿರುವ ಕೃತಿ ಇದು ಎಂದು ಕಮಲಾ ಹಂಪನಾ ಮೆಚ್ಚುಗೆ ವ್ಯಕ್ತಪಡಿಸಿದರು.

ಕೃತಿ ಕುರಿತು ಮಾತನಾಡಿದ ಹಿರಿಯ ವಿಮರ್ಶಕರಾದ ಪ್ರೊ ಬಸವರಾಜ ಕಲ್ಗುಡಿ ಅವರು ಒಂದು ನೆರಳಿನಲ್ಲಿದ್ದು ಅದರಿಂದ ಆಚೆ ಬಂದು ತಮ್ಮದೇ ಪರಿಪೂರ್ಣ ವ್ಯಕ್ತಿತ್ವ ಕಟ್ಟಿಕೊಂಡ ಕಸ್ತೂರ್ ಬಾ ಕುರಿತ ಅಪರೂಪದ ಕಾದಂಬರಿ ಇದು. ಕನ್ನಡದಲ್ಲಿ ಇಂತಹ ಬರವಣಿಗೆ ಕಡಿಮೆ. ಸಂಬಂಧದ ಸೂಕ್ಷ್ಮ, ಹೋರಾಟದ ವಿನ್ಯಾಸ ಎರಡನ್ನೂ ಸಮರ್ಪಕವಾಗಿ ಈ ಕೃತಿ ಕಟ್ಟಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಬರಹಗಾರ ರಂಗಾರೆಡ್ಡಿ ಕೋಡಿರಾಂಪುರ ಹಾಗೂ ಪ್ರಕಾಶಕ ಅಭಿರುಚಿ ಗಣೇಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?