Friday, March 29, 2024
Google search engine
Homeಸಾಹಿತ್ಯ ಸಂವಾದಅಂತರಾಳಎಕ್ಕುಂಡಿ ಎಂಬ ’ಕೇವಲ ಮನುಷ್ಯ’ನಿಗೆ ನಮಸ್ಕಾರ.

ಎಕ್ಕುಂಡಿ ಎಂಬ ’ಕೇವಲ ಮನುಷ್ಯ’ನಿಗೆ ನಮಸ್ಕಾರ.

ಜಿ ಎನ್ ಮೋಹನ್


ಕಣ್ಣು ಹಾಯಿಸಿದರೆ ಅನತಿ ದೂರದಲ್ಲಿ ಭೋರ್ಗರೆವ ಕಡಲು. ಗಾಳಿ ಬೀಸುವ ತೆಂಗಿನ ಚಾಮರಗಳು. ಕಾಲ ಕೆಳಗೆ ಅಷ್ಟಗಲಕ್ಕೂ ಹರಡಿಕೊಂಡ ನಗರಿ. ನಾವಿದ್ದದ್ದು ಮಂಗಳೂರ ನೆತ್ತಿಯೇನೋ ಅನ್ನುವ ಬಾವುಟ ಗುಡ್ಡೆಯಲ್ಲಿ.

ಗುರುರಾಜ ಮಾರ್ಪಳ್ಳಿ ದನಿ ತೆಗೆದು ಹಾಡುತ್ತಿದ್ದರು.

“ಮುಗಿಲಿನ ತುಂಬಾ ಮುತ್ತಿನ ಬೀಜ ಬಿತ್ತುವವರೆ ಇಲ್ಲ
ನಂದನವನದಲಿ ರೆಕ್ಕೆಯ ಕುದುರೆಯ ಹತ್ತುವವರೆ ಇಲ್ಲ
ಬೀದಿಗೆ ಬಿಸುಡಿದ ಕೂಸಿನ ಬಾಯಿಗೆ ತಾಯಿಯ ಹಾಲಿಲ್ಲ
ಗೌರಿ ಶಂಕರ ಶಿಖರವನೇರಲು ನಮಗೂ ಕಾಲಿಲ್ಲ
ಶಬರಿಯ ಗುಡಿಸಲ ಹಣ್ಣಿನ ರುಚಿಯನು ಕಂಡವರೇ ಇಲ್ಲ
ಒಲುಮೆಯ ಹಾಲು ತಿಳಿವಿನ ಜೇನು ಉಂಡವರೇ ಇಲ್ಲ
ಕಡಲಿನ ಭಗವದ್ಗೀತೆಗೆ ಭಾಷ್ಯವ ಬರೆದವರೇ ಇಲ್ಲ
ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೆ ಇಲ್ಲ…”

ನಾನು ಅವರ ಮುಂದೆಯೇ ಕುಳಿತಿದ್ದೆ, ’ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೇ ಇಲ್ಲ…’ ಎಂದವರ ಮುಂದೆ.

ಆದರೆ ಅವರು ಮಾತ್ರ ತಮ್ಮ ಹೃದಯದ ಬಾಗಿಲನ್ನು ತೆರೆಯುತ್ತಲೇ ಹೋದರು.

ಅವರ ಹೃದಯ ಒಂದು ‘ತೆರೆದ ಬಾಗಿಲು’ ಮಾತ್ರ ಆಗಿರಲಿಲ್ಲ, ಅದು ತೆರೆದಷ್ಟೂ ಬಾಗಿಲಾಗಿತ್ತು.

ಅವರು ಸು ರಂ ಎಕ್ಕುಂಡಿ. ಸುಬ್ಬಣ್ಣ ರಂಗನಾಥ ಎಕ್ಕುಂಡಿ.

ಪಕ್ಕದಲ್ಲೇ ಕಡಲು ಎನ್ನುವಷ್ಟು ಸನಿಹದಲ್ಲಿತ್ತು ನಮ್ಮ ಮನೆ.

ಹಸಿರು ಮುಕ್ಕಳಿಸುವ ಗದ್ದೆಗಳು, ಜುಳು ಜುಳು ಹರಿಯುವ ತೊರೆ, ಇವುಗಳ ನಡುವಿನ ನಮ್ಮ ಮನೆಯ ಅಂಗಳದಲ್ಲಿ ಕುಳಿತು ಎಕ್ಕುಂಡಿ ಎಲ್ಲವನ್ನೂ ಕಣ್ಣು ತುಂಬಿಕೊಳ್ಳುತ್ತಿದ್ದರು.

ಆಗ ಹಸಿರು ಗದ್ದೆಗೆ ಬಿಳಿಯ ಬಟ್ಟೆ ಹೊದಿಸಿಯೇ ತೀರುತ್ತೇನೆ ಎನ್ನುವಂತೆ ಒಂದು ಹಿಂಡು ಬೆಳ್ಳಕ್ಕಿಗಳು ಸುಯ್ಯಂನೆ ಹಾರಿ ಬಂದು ಗದ್ದೆಯ ಮೇಲೆ ಕಾಲಿಳಿಸಿದವು. ಅಷ್ಟೆ! ಎಕ್ಕುಂಡಿ ಅವರ ಕಣ್ಣು ಅರಳಿತು.

ಒಂದು ಪುಟ್ಟ ಮಗು ಆಗ ತಾನೆ ಒಂದು ಬೆಳ್ಳಕ್ಕಿಯನ್ನು ನೋಡುತ್ತಿದೆಯೇನೋ ಎನ್ನುವಂತೆ ಅವರು ಲಗುಬಗೆಯಿಂದ ಎದ್ದರು. ಅವರ ಬೊಚ್ಚು ಬಾಯಿಯಲ್ಲಿ ನಗು ತುಳುಕುತ್ತಿತ್ತು.

ಬೆಳ್ಳಕ್ಕಿಗಳ ಜೊತೆ ಇನ್ನೊಂದು ಬೆಳ್ಳಕ್ಕಿ ಸೇರಿ ಬಿಟ್ಟಿತ್ತು.

’ಪ್ರತಿಯೊಬ್ಬರ ಎದೆಯಲ್ಲಿ ಒಂದು ಬೆಳ್ಳಕ್ಕಿ ಇರುತ್ತದೆ’ ಎಂದು ಬಲವಾಗಿ ನಂಬಿದ್ದರು ಎಕ್ಕುಂಡಿ.

‘ಬೆಳ್ಳಕ್ಕಿ ಧವಲತೆಗೆ, ಶುದ್ಧತೆಗೆ ಸಂಕೇತವಾದಂತೆ ಸೌಂದರ್ಯದ ಸಂಕೇತ ಕೂಡ. ಈ ಜೀವನಪ್ರೀತಿ ಮನುಷ್ಯನನ್ನು ಸಂಪೂರ್ಣ ಮಾಡುತ್ತದೆ. ಇಲ್ಲದಿದ್ದರೆ ಅವನಿಗೆ ಮಾನವ ಸಂಬಂಧಗಳ ಬಗ್ಗೆ ಅರ್ಥವೇ ಆಗುವುದಿಲ್ಲ’, ಎನ್ನುತ್ತಿದ್ದರು.

ಅವತ್ತು ಹೀಗಾಯ್ತು, ನಾನು ಬೆಂಗಳೂರಿನ ಅವರ ಮನೆಯಲ್ಲಿ ಕುಳಿತಿದ್ದೆ. ಮಾರ್ಕ್ಸ್, ಎಂಗಲ್ಸ್, ದುಡಿವ ಕೈಗಳು, ತಿರುಗುವ ಚಕ್ರಗಳ ಬಗ್ಗೆ ಸಾಲು ಸಾಲಾಗಿ ಎಕ್ಕುಂಡಿ ಕವಿತೆಗಳನ್ನು ಬರೆದಿದ್ದರು.

ಅವು ನೇರ ನಮ್ಮ ಬದುಕಿನೊಳಗೇ ಕೈ ಹಾಕಿ ಒಂದು ಕಥನವನ್ನು ಹೆಕ್ಕಿ ಕೊಟ್ಟಂತಿತ್ತು. ಹಾಗಾಗಿ ಅವರನ್ನು ಭೇಟಿಯಾಗೇ ಸಿದ್ಧ ಎಂದು ನಾನು ಅವರ ಮನೆಯ ಬಾಗಿಲನ್ನು ಬಡಿದಿದ್ದೆ.

ಅವರ ಒಳಗಿನ ಕಥನಕ್ಕೆ ಕಿವಿಯಾಗಿ ಕುಳಿತಿದ್ದೆ. ಅವರೂ ಸಹ ಉತ್ಸಾಹದಿಂದ ತಮ್ಮ ಕವಿತೆಯ ನಡಿಗೆಯನ್ನು ಬಣ್ಣಿಸುತ್ತಾ ಇದ್ದರು.

ಇಬ್ಬರೂ ಮಾತಿನಲ್ಲಿ ಮುಳುಗಿ ಹೋಗಿದ್ದೆವು.

ಆಗ ಇದ್ದಕ್ಕಿದ್ದಂತೆ ಅವರು ದಢಬಡಿಸಿ ಎದ್ದರು. ಮಾತನ್ನು ಅರ್ಧಕ್ಕೇ ತುಂಡರಿಸಿ ಮನೆಯ ಆಚೆ ಹೋಗಿಬಿಟ್ಟರು. ನನಗೋ ಆತಂಕ ಶುರುವಾಯಿತು. ನಾನಾಡಿದ ಯಾವುದಾದರೂ ಮಾತು ಅವರನ್ನು ಘಾಸಿಗೊಳಿಸಿತೆ ಎಂದು ಕಂಗಾಲಾದೆ.

ನಾನೂ ಅವರ ಹಿಂದೆಯೇ ಹೊರನಡೆದೆ. ಆಚೆ ಹೋಗಿ ನೋಡಿದರೆ ಎಕ್ಕುಂಡಿ ಆಕಾಶಕ್ಕೆ ಕಣ್ಣು ನೆಟ್ಟು ನಿಂತಿದ್ದರು.

ಅಲ್ಲೊಂದು ವಿಮಾನ ಹಾರುತ್ತಿತ್ತು. ಆ ವಿಮಾನ ಒಂದು ಚುಕ್ಕೆಯಾಗಿ ಮರೆಯಾಗಿ ಹೋಗುವವರೆಗೂ ಎಕ್ಕುಂಡಿ ತದೇಕ ಚಿತ್ತರಾಗಿ ಅದನ್ನೇ ನೋಡುತ್ತಾ ನಿಂತಿದ್ದರು.

ನನ್ನನ್ನು ನೋಡಿದವರೇ ’ನಗರದಲ್ಲಿ ಹಾರುವ ಈ ವಿಮಾನ ನೋಡಿದರೆ ನನಗೆ ಬೆಳ್ಳಕ್ಕಿಗಳ ನೆನಪಾಗುತ್ತದೆ, ಈ ವಿಮಾನ ನನ್ನನ್ನು ಬಂಕಿಕೊಂಡ್ಲಕ್ಕೆ ಕರೆದೊಯ್ಯುವ ಬೆಳ್ಳಕ್ಕಿಗಳಂತೆ ಕಾಣುತ್ತದೆ’ ಎಂದರು.

ಬಂಕಿಕೊಡ್ಲ ಎಕ್ಕುಂಡಿಯವರ ಎದೆಯನ್ನು ಹಸಿರಾಗಿಸಿದ ಒಂದು ಊರು.

ಗುಲ್ಬರ್ಗದ ಮಣೂರಿನ ಮೂಲದ ಮನೆತನದ ಎಕ್ಕುಂಡಿ ಹುಟ್ಟಿದ್ದು ರಾಣಿಬೆನ್ನೂರಿನಲ್ಲಿ. ಉಂಡಿದ್ದು, ಉಟ್ಟಿದ್ದು ಬಡತನವನ್ನು.

ರಾಣಿಬೆನ್ನೂರು, ಧಾರವಾಡ, ಸಾಂಗ್ಲಿಯಲ್ಲಿ ಓದಿದ ಎಕ್ಕುಂಡಿ ಗೆಳೆಯರ ಜೊತೆ ಒಮ್ಮೆ ಉತ್ತರ ಕನ್ನಡ ಪ್ರವಾಸಕ್ಕೆ ಬಂದರು.

ಎಂದೂ ಕಡಲನ್ನು ಕಾಣದ, ಎಂದೂ ಹಿಂಡು ಹಿಂಡು ಬೆಳ್ಳಕ್ಕಿ ನೋಡದ, ಎಂದೂ ತೆಂಗಿನ ಚಾಮರ ಕಾಣದ ಎಕ್ಕುಂಡಿ ಅಲ್ಲಿಯೇ ನಿಂತುಹೋದರು.

ಸತತ ೩೫ ವರ್ಷಗಳ ಕಾಲ ಕಾಣದ ಹಳ್ಳಿಯಲ್ಲಿ ಪಾಠ ಹೇಳುತ್ತಾ ಹೋದರು… ಬದುಕಿನ ಪಾಠ.

ಒಂದು ದಿನ ಎಕ್ಕುಂಡಿ ಮನೆಯಿಂದ ಶಾಲೆಗೆ ನಡೆದು ಹೋಗುತ್ತಿದ್ದರು.

ಎಳೆ ಹುಡುಗಿಯೊಬ್ಬಳು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ಪನಿಗಾಗಿ ಗಂಜಿ ಮಡಕೆ ಹೊತ್ತು ಹೊರಟಿದ್ದಳು.

ಆಗ ಹಾರಿ ಬಂತು ನೋಡಿ ಅದೇ ಬೆಳ್ಳಕ್ಕಿ ಹಿಂಡು. ಆ ಹುಡುಗಿ ನಡೆಯನ್ನೇ ಮರೆತುಬಿಟ್ಟಳು. ಕಣ್ಣರಳಿಸಿ ಬೆಳ್ಳಕ್ಕಿಗಳ ಹಾರಾಟವನ್ನು ನೋಡುತ್ತಾ ನಿಂತಳು.

ಹಸಿವಿನಿಂದ ತತ್ತರಿಸಿ ಹೋಗಿದ್ದ ರೈತ ಗಂಜಿ ಕಾಣದೆ ಸಿಟ್ಟಿನಿಂದ ’ಮಗೂ ಗಂಜಿ ಎಲ್ಲಿದೆ’ ಎಂದು ಕೂಗಿದ.

ಬೆಚ್ಚಿಬಿದ್ದ ಹುಡುಗಿ ಬೆಳ್ಳಕ್ಕಿಗಳನ್ನು ಬಿಟ್ಟು ಗಂಜಿ ಹೊತ್ತು ಓಡಿದಳು.

ಎಕ್ಕುಂಡಿ ಪೆಚ್ಚಾಗಿದ್ದರು. ಹೌದಲ್ಲಾ ಗಂಜಿಯ ಸಮಸ್ಯೆ ಬೆಳ್ಳಕ್ಕಿಗಳನ್ನು ಕಿತ್ತುಕೊಳ್ಳುತ್ತಾ ಇದೆ ಅನಿಸಿತು

ಅದು ಆಗಿ ಹೋಗಿ ಮೂರು ದಶಕ ಉರುಳಿಹೋಗಿತ್ತು. ಆದರೆ ಅದು ಈಗಿನ್ನೂ ನಡೆದು ಹೋಯಿತೇನೋ ಎನ್ನುವಷ್ಟು ನೋವು ಅವರೊಳಗಿತ್ತು.

‘ಮೋಹನ್, ನಿಸರ್ಗ ಎನ್ನುವುದು ಬೆಳ್ಳಕ್ಕಿಯ ಹಾಗೆ. ಹೊಳೆ, ನೀರು, ಗದ್ದೆ, ಹಸುರು ನೋಡಿ ಖುಷಿಪಡುತ್ತಾ ಇದ್ದಂತೆ ಅವರ ಬೆನ್ನಿನಲ್ಲಿ ಗಂಜಿ ಸಮಸ್ಯೆ ಕಾಡುತ್ತಾ ಇರುತ್ತೆ. ಗಂಜಿಗಾಗಿ ಹೋರಾಟ ಹೆಚ್ಚುತ್ತಾ ಹೋದಂತೆ ನಿಸರ್ಗ ನಮ್ಮಿಂದ ಮರೆಯಾಗುತ್ತಾ ಹೋಗುತ್ತೆ. ಗಂಜಿ ಜೀವನಕ್ಕೆ ಎಷ್ಟು ಅಗತ್ಯವೋ ಅಷ್ಟೇ ಬೆಳ್ಳಕ್ಕಿಗಳೂ ಅವಶ್ಯಕ ಎನ್ನುವ ಒಂದು ಸಮಾಜ ಸೃಷ್ಟಿಯಾಗಬೇಕು’ ಎಂದರು.

ನಾನು ಥೇಟ್ ‘ಕಣಗಲು ಗಿಡದಲ್ಲಿ ಹುಡುಗ’ನಂತಾಗಿ ಹೋಗಿದ್ದೆ.

‘ಬೇಸರದ ಬಿಸಿಲು ಮಧ್ಯಾಹ್ನ ಗೋಪುರದಲ್ಲಿ
ಗಡಿಯಾರ ಬಾರಿಸಿತು ಗಂಟೆಯೊಂದು
ಶಾಲೆ ತಪ್ಪಿಸಿ ಹುಡುಗ, ಗುಡಿಯ ಹಿಂಬದಿಗಿರುವ
ಕಣಗಿಲದ ಗಿಡದಲ್ಲಿ ಕುಳಿತ ಬಂದು
ಇಲ್ಲಿ ಪಾಠಗಳಿಲ್ಲ, ಇಲ್ಲಿ ಸಂಧಿ ಸಮಾಸ
ಇಲ್ಲ ವನಜೂಲಾದ ರೇವು ರೈಲು
ಇಲ್ಲಿ ಸುಳಿಯವು ಕೋನ ತ್ರಿಜ್ಯಗಳ ಹಾವಳಿಯು
ಇಲ್ಲಿ ತೂಕಡಿಕೆಗಳ ದೊಡ್ಡ ಬೈಲು
ಪಾಠಗಳು ನಡೆದಲ್ಲಿ ಮೋಡ ತೇಲುವುದಿಲ್ಲ
ಗಾಳಿ ಬೀಸುವುದಿಲ್ಲ ಎಲೆಗಳಿಲ್ಲ
ಯಾವ ರಾಸಾಯನಿಕ ಕ್ರಿಯೆಗೆ ಒಳಪಡಿಸಿಯೂ
ಮನದಲ್ಲಿ ಸಂತಸದ ಅಲೆಗಲಿಲ್ಲ…

ಎಕ್ಕುಂಡಿಯವರಿಗೆ ಬೆಳ್ಳಕ್ಕಿ ಎನ್ನುವುದು ಅಪಾರ ಮತ್ತು ಅನಂತದ ನಡುವಿನ ಒಂದು ಕೊಂಡಿಯಂತೆ ಕಾಣಿಸುತ್ತಿತ್ತು.

ಕಡಲ ಅಪಾರ, ಆಗಸದ ಅನಂತತೆ ಇವೆರಡನ್ನೂ ಒಂದು ಮಾಡುವಂತೆ ಬೆಳ್ಳಕ್ಕಿ ಜೀಕುತ್ತಿದೆಯೇನೋ ಎಂದು ಸಂಭ್ರಮಪಡುತ್ತಿದ್ದರು.

‘ನನ್ನ ಕಾವ್ಯವೂ ಹಾಗೆ ಅದು ಬೆಳ್ಳಕ್ಕಿಯಂತೆ ಅಪಾರ ಹಾಗೂ ಅನಂತವನ್ನು ಒಂದು ಮಾಡಬೇಕು’ ಎಂದು ಕನಸುತ್ತಿದ್ದರು.

ಎಕ್ಕುಂಡಿ ಎಂದರೆ ಹಾಗೇ ಅವರಿಗೆ ದುಡಿಯುವ ಕೈಗಳಲ್ಲಿ ಅಪಾರ ವಿಶ್ವಾಸವಿತ್ತು. ಸಮಾಜದ ಕಂದರಗಳನ್ನು ಇಲ್ಲವಾಗಿಸುವ ಬಗ್ಗೆಯೂ ಹುಮ್ಮಸ್ಸಿತ್ತು.

ಹಾಗಾಗಿಯೇ ಅವರು ಹೇಳುತ್ತಿದ್ದರು

‘ದೂರದಲ್ಲಿದ್ದವರನ್ನು ಹತ್ತಿರಕೆ ತರಬೇಕು
ಹರಿವ ಹೊಳೆಗೂ ಉಂಟು ಎರಡು
ತೋಳು ನೆಲವನಪ್ಪಿದ ಎರಡು ದಂಡೆ
ಗಳ ಬಾಂಧವ್ಯ ಬೆಸೆಯಬೇಕಲ್ಲವೇ
ನಮ್ಮ ಬಾಳು’

ಎಕ್ಕುಂಡಿಯವರ ಜೊತೆ ನಾನು ಮತ್ತೆ ಮತ್ತೆ ಮಾತನಾಡಿದೆ. ವರ್ಷಗಟ್ಟಲೆ ಸಾಕಷ್ಟು ಕಡೆ ಸುತ್ತಿದೆ.

ಅವರು ಸದಾ ಹೇಳುತ್ತಿದ್ದರು ‘ನನ್ನ ತಾಯಿ ಹಾಡಿದ ಒಂದು ಹಾಡಿನಿಂದ, ನಾನು ಜಗತ್ತನ್ನು ನೋಡುವ ಒಂದು ಕಿಟಕಿಯನ್ನು ರೂಪಿಸಿಕೊಂಡೆ’.

ಜಗತ್ತು ಕಾಣಬೇಕಾದರೆ ಖಂಡಿತಾ ನಮ್ಮೊಳಗೊಂದು ಕಿಟಕಿ ಇರಬೇಕು ಎಂದು ಅವರು ಬಲವಾಗಿ ನಂಬಿದ್ದರು

ಅವರ ‘ಕಿಟಕಿ ಮತ್ತು ಗಾಲಿಗಳು’ ಕವಿತೆಯಲ್ಲಿ ಪರೀಕ್ಷೆಗೆ ತಯಾರಾಗುತ್ತಾ ಕುಳಿತ ಕಾರ್ಲ್ ಮಾರ್ಕ್ಸ್ ಗೆ ಆತನ ಅಮ್ಮ ಕೇಳುತ್ತಾಳೆ-

‘ತಾಯಿ ಅಂದರು: ಮಗೂ, ಚರಿತ್ರೆ ಸುಲಭ
ದೊರೆಗಳ ರಾಣಿಯರ ಹುಟ್ಟು ಸಾವು
ನೆನಪಿಟ್ಟರಾಯಿತು, ಯುದ್ಧಗಳು ಜರುಗಿದ್ದು
ಬರಗಾಲ ಭೂಕಂಪ ತಂದ ನೋವು
ಹುಡುಗ ಕಾರ್ಲ ಅಂದನು: “ಕಂಡಿರುವಿರಲ್ಲವೇ
ಅಲ್ಲಿರುವ ಕೋಟೆ ಕೊತ್ತಳಗಳನ್ನು
ಕಿಟಕಿಯಾಚೆ ಉರುಳಿವೆ ಚರಿತ್ರೆಯ ಗಾಲಿ
ದಾರಿಯಲಿ ಎಸೆದು ಸ್ಮಾರಕಗಳನ್ನು”

ಕಿಟಕಿಯಿರಬೇಕು: ಆಗಲೇ ಕಾಣುವುದು
ಉರುಳುವ ಗಾಲಿಗಳ ಗೂಢ ದೃಶ್ಯ…’

ಎಕ್ಕುಂಡಿಯವರಿಗೆ ಕಿಟಕಿ ಕೇವಲ ಕಿಟಕಿಯಾಗಿರಲಿಲ್ಲ ಅದು ಬದುಕಿನ ಸತ್ಯಗಳನ್ನು ಕಂಡುಕೊಳ್ಳಲು ಇದ್ದ ಕಿಟಕಿಯಾಗಿತ್ತು.

ಆ ಕಿಟಕಿಯ ಮೂಲಕ ಎಕ್ಕುಂಡಿಯವರಿಗೆ ನಂ ೪, ಆಂಡರ್ಸನ್ ಬೀದಿಯಲ್ಲಿ ಮನೆಯ ತೊಟ್ಟಿಲು, ಹಾಸಿಗೆ, ದುಪ್ಪಟಿ, ಲಾಲಿ ಹಾಡುಗಳು ಹರಾಜಾಗುತ್ತಿರುವುದನ್ನು ನೋಡುತ್ತಾ ನಿಂತ ಕಾರ್ಲ್ ಮಾರ್ಕ್ಸ್, ಬಿಕ್ಕುತ್ತಿರುವ ಹೆಂಡತಿ ಹೆಲೆನ್, ‘ಬಂಡವಾಳ’ ಬರೆಯುವುದರಲ್ಲಿ ನಿರತನಾಗಿರುವ ಶ್ರಮಜೀವಿ ಬಂಧುವಿನ ಮನೆಗೆ ಬೆಳಕಾದ ಎಂಗೆಲ್ಸ್..

..ಹೆರಿಗೆ ಆಸ್ಪತ್ರೆಯ ಪೌಡರ್ – ಪಿಯರ್ಸ್ ಪರಿಮಳದ ಹೊದಿಕೆಯಿಂದ ದೂರವಾಗಿ ಎರಡು ಲಾರಿಗಳ ಕೆಳಗೆ ಕಟ್ಟಿರುವ ಸೀರೆ ತುಂಡನ್ನು ಅಪ್ಪಿ ಮಲಗಿರುವ ಚಿನ್ನಮ್ಮನ ಕಂದ, ಎಸೆದ ಬ್ರೆಡ್ಡಿನ ತುಂಡು ಆಯಲು ತೊಟ್ಟಿಯೊಳಗೆ ಇಳಿಯುವ ದುಡಿಯುವ ಕಸುವಿರುವ ಹಸಿದ ಕೈಗಳು..

..ಉಳ್ಳವರ ಎದೆಯಿಂದ ಬಂದಂತಹ ಬೆಣಚುಕಲ್ಲುಗಳ ಮೇಲೆ ಕಾಲಿಟ್ಟು ಗಾಯಗೊಂಡ ಕೂಲಿಕಾರರು, ಕೆಲಸವೇ ಶಿವಧ್ಯಾನವಾದ ದಾಸಿಮಯ್ಯ, ಹಾಲೆಂದೇ ಹಿಟ್ಟು ಕದಡಿದ ನೀರು ಕುಡಿದ ಅಶ್ವತ್ಥಾಮ, ಶ್ರೀಧರ ನಾಮದ ಖಜಾನೆ ತೆರೆಯುವ ಬೀಗದ ಕೈ ಹಿಡಿದು ಹಣದ ಖಜಾನೆಯಿಂದ ಹೊರಬಿದ್ದ ಪುರಂದರದಾಸ…

..ವಿಷದ ಬಟ್ಟಲಿಗೆ ಗುರಿಯಾದ ಸಾಕ್ರೆಟೀಸ್, ಏಸು ಕ್ರಿಸ್ತ, ಜಬಾಲ, ರಂತಿದೇವ, ಪ್ರವಾದಿ, ಡಕಾಯಿತ, ಹಾಗೆಯೇ ಬಕುಲದ ಹೂಗಳನ್ನು ನೋಡಿ ಒಂಡರೆಕ್ಷಣ ನೋವೆಲ್ಲವನ್ನೂ ಮರೆತ ಜೋಡಿ.. ಎಲ್ಲರೂ ಎಕ್ಕುಂಡಿಯವರ ಕಿಟಕಿಯಲ್ಲಿ ಕಂಡವರು…

ಎಕ್ಕುಂಡಿ ತಮಗೆ ಮಾತ್ರ ಕಿಟಕಿಯನ್ನು ರೂಪಿಸಿಕೊಳ್ಳಲಿಲ್ಲ. ತಮ್ಮ ಕವಿತೆಗಳ ಮೂಲಕ ಪ್ರತಿಯೊಬ್ಬರಿಗೂ ಕಿಟಕಿಗಳನ್ನು ರೂಪಿಸಿಕೊಟ್ಟರು.

ಎಕ್ಕುಂಡಿ ಅವರ ಜೊತೆ ಮಾತನಾಡುತ್ತಾ, ಅವರನ್ನು ಓದುತ್ತಾ ಇದ್ದ ನಾನು ಅವರು ಬರೆದ ಬರಹಗಳನ್ನೆಲ್ಲಾ ಸಂಕಲಿಸಿ ಎಕ್ಕುಂಡಿಯವರಿಗೆ ಒಂದು ನಮನ ಸಲ್ಲಿಸಬೇಕೆಂದು ಹೊರಟೆ.

ಆ ಬಗ್ಗೆ ಅವರೊಂದಿಗೆ ಹತ್ತು ಹಲವಾರು ದಿನ ಮಾತನಾಡಿದೆ. ಪುಸ್ತಕ ಅಚ್ಚಿನ ಮನೆಗೂ ಹೋಯಿತು. ಒಳಕ್ಕೆ ಹೋದ ಪುಸ್ತಕ ಹೊರಗೆ ಬರುವುದರೊಳಗಾಗಿ ‘ಎಕ್ಕುಂಡಿ ಇನ್ನಿಲ್ಲ’ ಎಂಬ ಸುದ್ದಿ ಬಂತು.

ಎಕ್ಕುಂಡಿಯವರ ಅಭಿನಂದನಾ ಗ್ರಂಥವಾಗಬೇಕಾಗಿದ್ದ ಕೃತಿ ಅವರ ಸಂತಾಪ ಗ್ರಂಥವಾಗಿ ಹೋಗಿತ್ತು.

ಆಗಲೇ ರಂಜಾನ್ ದರ್ಗಾ ನನಗೆ ರಷ್ಯನ್ ಕವಿ ರಸೂಲ್ ಗಂಚತೋವ್ ಅವರ ಕವಿತೆಯನ್ನು ನೆನಪಿಸಿದ್ದು.

’ಇಲ್ಲಿ ನಮಸ್ಕರಿಸು,
ಇವರು ಮಠಾಧೀಶರಾಗಿರಲಿಲ್ಲ,
ಚಕ್ರವರ್ತಿಯಾಗಿರಲಿಲ್ಲ,
ಕೇವಲ ಮನುಷ್ಯರಾಗಿದ್ದರು’.

ಅಂತಹ ಒಬ್ಬ ’ಕೇವಲ ಮನುಷ್ಯ’ನಿಗೆ ನನ್ನ ನಮಸ್ಕಾರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?