Thursday, April 25, 2024
Google search engine
Homeಸಾಹಿತ್ಯ ಸಂವಾದಅಂತರಾಳಐ ಪಿ ಎಲ್ ಭಾರತ v/s ಬಿ ಪಿ ಎಲ್ ಭಾರತ

ಐ ಪಿ ಎಲ್ ಭಾರತ v/s ಬಿ ಪಿ ಎಲ್ ಭಾರತ

ಜಿ ಎನ್ ಮೋಹನ್


ನೀವು ಕೊನೆಯ ಬಾರಿಗೆ ರೈತರ ಜೊತೆ ಮಾತನಾಡಿದ್ದು ಯಾವಾಗ?’ ಎಂದು ಪ್ರಶ್ನಿಸಿದವರು ಪಿ ಸಾಯಿನಾಥ್.ರೈತರ ಸಮಸ್ಯೆಯನ್ನು ಆಲಿಸುವುದಕ್ಕಾಗಿಯೇ ವಿಶೇಷ ಸಂಸತ್ ಅಧಿವೇಶನವನ್ನು ಕರೆಯಬೇಕು ಎಂದು ಒತ್ತಾಯಿಸಲು ರೈತರ ಬೃಹತ್ ಜಾತಾ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಜನಾಭಿಪ್ರಾಯ ರೂಪಿಸಲು ಸಾಯಿನಾಥ್ ದೇಶದ ಎಲ್ಲೆಡೆ ಸುತ್ತುತ್ತಿದ್ದರು.ಇದರ ಅಂಗವಾಗಿಯೇ ಅವರು ಬೆಂಗಳೂರಿಗೆ ಬಂದಾಗ ಕೇಳಿದ ಪ್ರಶ್ನೆ ಇದು.ಸಭಾಂಗಣದಲ್ಲಿ ಒಂದು ನಿಮಿಷ ಗಾಢ ಮೌನ. ಆ ಪ್ರಶ್ನೆ ಎಬ್ಬಿಸಿದ ಅಲೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.ಆದರೆ ಸ್ಪಷ್ಟವಾಗಿ ಗೊತ್ತಾಗದೇ ಹೋಗಿದ್ದು ನನ್ನೊಳಗಿನ ತೊಳಲಾಟ. ಅಥವಾ ಮಾಧ್ಯಮವನ್ನು ಪ್ರತಿನಿಧಿಸುತ್ತಿರುವ ನನ್ನಂತ ಹಲವರ ತೊಳಲಾಟ.ಮಾಧ್ಯಮ ಉದ್ಯಮದ ಎಲ್ಲಾ ಪಟ್ಟುಗಳನ್ನೂ ಕರಗತಮಾಡಿಕೊಂಡದ್ದಕ್ಕೂ ನಾವು ರೈತನ ಜೊತೆ ಮಾತನಾಡದೆ ಹಿಂದೆ ಸರಿದಿರುವುದಕ್ಕೂ ಸ್ಪಷ್ಟ ಕೊಂಡಿಗಳಿವೆ. ಭಾರತದಲ್ಲಿ ಮಾಧ್ಯಮವೂ ಸಹಾ ಈ ಗ ಒಂದು ಉದ್ಯಮ ಮಾತ್ರ.‘ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ’ ಎಂದು ಎಲ್ಲರೂ ಭರವಸೆಯಿಂದ ನೋಡುತ್ತಿದ್ದ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಂಟನ್ನು ತಾನೇ ಕೈಯಾರ ಕಳಚಿಕೊಳ್ಳತೊಡಗಿದೆ.ಕೊಂಡುಕೊಳ್ಳಲು ಶಕ್ತಿ ಇರುವವನಿಗೆ ಕೊಂಡುಕೊಳ್ಳಲಾಗದವರ ಬದುಕನ್ನು ಬಿಡಿಸಿಡುತ್ತಿದ್ದ ದಿನಗಳಿದ್ದವು.ಆದರೆ ಯಾವಾಗ ಜಾಗತೀಕರಣಕ್ಕೆ ಹೆದ್ದಾರಿ ನಿರ್ಮಿಸಲು ಸರ್ಕಾರ ಮುಂದಾಯಿತೋ ಮಾಧ್ಯಮದ ಬಣ್ಣವೂ ಬದಲಾಗತೊಡಗಿತು.ಮಾಧ್ಯಮ ರಂಗ ಕ್ರಮೇಣ ಲಾಭದ ಮೇಲೆ ಕಣ್ಣಿಟ್ಟ ಇನ್ನೊಂದು ಉದ್ಯಮವಾಗತೊಡಗಿತು.ಈ ಕಾರಣಕ್ಕಾಗಿಯೇ ಲಾಭ ತಂದುಕೊಡುವುದಕ್ಕೆ ಮಾತ್ರ ಪ್ರಾಧಾನ್ಯತೆ ದೊರೆಯಲು ಆರಂಭಿಸಿತು. ಲಾಭ ಕೊಡುವವರು ಮಾತ್ರ ಸುದ್ದಿಯಾಗತೊಡಗಿದರು.ಅಲ್ಲಿಯವರೆಗೆ ಕೊಂಡುಕೊಳ್ಳಲಾಗದವನ ದುಸ್ತರ ಬದುಕಿನ ಬಗ್ಗೆಯೂ ಕಾಳಜಿ ವಹಿಸುತ್ತಿದ್ದ ಮಾಧ್ಯಮಗಳು ಕೊಂಡುಕೊಳ್ಳುವ ಶಕ್ತಿ ಇರುವವರಿಗೆ ಕೊಂಡುಕೊಳ್ಳುವವನ ಕಥೆಗಳನ್ನೇ ಮಾರಾಟ ಮಾಡತೊಡಗಿದವು.ಮಾಧ್ಯಮ ಎಂಬುದು ಒಂದು ಸೇತುವೆ. ಸಮಾಜ ಹಾಗೂ ಸರ್ಕಾರದ ನಡುವೆ ಇರುವ ಅತಿ ಮುಖ್ಯವಾದ ಸೇತುವೆ ಎನ್ನುವುದನ್ನು ವಿಶ್ವಸಂಸ್ಥೆಯೇ ಘೋಷಿಸಿತ್ತು.ಜಗತ್ತಿನಾದ್ಯಂತ ಸಂಚರಿಸಿದ ವಿಶ್ವಸಂಸ್ಥೆಯ ತಂಡ ಮಾಧ್ಯಮದ ಅಧ್ಯಯನ ಮಾಡಿ ಅಭಿವೃದ್ಧಿ ಹೊಂದಿರುವ ದೇಶಗಳಿಗೆ ಮಾಧ್ಯಮ ಇನ್ನೊಂದು ಸರಕು ಅಷ್ಟೇ. ಏಕೆಂದರೆ ಅಲ್ಲಿ ಅಭಿವೃದ್ಧಿಯನ್ನು ಒಂದು ಮಟ್ಟಕ್ಕೆ ಸಾಧಿಸಲಾಗಿರುತ್ತದೆ.ಆದರೆ ಭಾರತದಂತಹ ಇನ್ನೂ ಅಭಿವೃದ್ಧಿಯ ಎತ್ತರವನ್ನು ಕಾಣದ ರಾಷ್ಟ್ರಕ್ಕೆ ಮಾಧ್ಯಮ ಎನ್ನುವುದು ಒಂದು ಊರುಗೋಲು ಎಂದು ಅಭಿಪ್ರಾಯಪಟ್ಟಿತ್ತು.ನಮ್ಮ ದೇಶದ ಮಾಧ್ಯಮ ಅರಳಿದ್ದು ಸ್ವಾತಂತ್ರ್ಯ ಚಳವಳಿಯಲ್ಲಿ. ವಸಾಹತುಶಾಹಿಯಿಂದ ಬಿಡುಗಡೆಗೊಳ್ಳಬೇಕೆಂಬ ತಹತಹಕ್ಕೆ ಮಾಧ್ಯಮಗಳು ಕೀಲೆಣ್ಣೆಯಾಗಿದ್ದವು.ಸ್ವಾತಂತ್ರ್ಯಾನಂತರದಲ್ಲಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದ ಮಾಧ್ಯಮ ಆ ಗುರಿಯನ್ನು ತಲುಪುವ ಮುನ್ನವೇ ಬಂದೆರಗಿದ್ದು ಜಾಗತೀಕರಣ.ಜಾಗತೀಕರಣ ದೇಶಗಳ ನಡುವಣ ಗಡಿ ಗೋಡೆಯನ್ನು ತೊಡೆದು ಹಾಕಿ ವಿಶ್ವವನ್ನು ಒಂದು ಹಳ್ಳಿಯಾಗಿ ಬದಲಾಯಿಸುತ್ತದೆ ಎನ್ನುವಾಗ ಅದರ ಬದಲಿಗೆ ಜಾಗತೀಕರಣಗೊಂಡದ್ದು ಉದ್ಯಮಿಗಳ ದಾಹ.ದೇಶಗಳ ಗಡಿ ಗೋಡೆ ಇಲ್ಲ ಎಂದಾಕ್ಷಣ ಭಾರತ ಹಲವು ಉದ್ಯಮಗಳಲ್ಲಿ ಹೆಜ್ಜೆ ಹಾಕಿ ತಲ್ಲಣಗಳನ್ನು ಉಂಟುಮಾಡಿದ ಬಹುರಾಷ್ಟ್ರೀಯ ಕಂಪನಿಗಳು ಮಾಧ್ಯಮವನ್ನೂ ಬಿಡಲಿಲ್ಲ.ಆ ವೇಳೆಗಾಗಲೇ ಭಾರತದೊಳಗಿದ್ದ ಬೃಹತ್ ಉದ್ಯಮಿಗಳಿಗೂ ಬೇಕಾಗಿದ್ದದ್ದು ಇದೇ.ಅವರು ಆ ವೇಳೆಗೆ ಮಾಧ್ಯಮದ ಶಕ್ತಿಯನ್ನು ಮನಗಂಡಿದ್ದರು. ಆಲೋಚನೆಗಳನ್ನು ತಮ್ಮ ಕನ್ನಡಕದ ಮೂಲಕ ಕಾಣಿಸಿಬಿಡುವ ಶಾರ್ಟ್ ಕಟ್ ಅವರಿಗೆ ಪ್ರಿಯವಾಗಿತ್ತು.ದೇಶದ ಆಲೋಚನೆಯನ್ನು ರೂಪಿಸುವ, ಇದ್ದ ಆಲೋಚನೆಯನ್ನೂ ತಮಗೆ ಬೇಕಾದಂತೆ ತಿದ್ದುಬಿಡಬಹುದಾದ ಸುಲಭ ದಾರಿ ಸಿಕ್ಕಿದ್ದು ಅವರಿಗೆ ಸಂತೋಷವನ್ನೇ ತಂದುಕೊಟ್ಟಿತು.‘ಉದಯವಾಣಿ’ ಪ್ರಯೋಗಾರ್ಥವಾಗಿ ನಡೆಸಿದ ಕುಗ್ರಾಮ ಗುರುತಿಸಿ ಸ್ಪರ್ಧೆಯನ್ನು ನಾನು ಸನಿಹದಿಂದ ಕಂಡಿದ್ದೇನೆ.ಮಾಧ್ಯಮಕ್ಕೆ ಇರುವ ಶಕ್ತಿ ನನಗೆ ಸರಿಯಾಗಿ ಅರ್ಥವಾಗಿದ್ದು ಸಹಾ ಈ ಪ್ರಯೋಗವನ್ನು ಅಷ್ಟು ಹತ್ತಿರದಿಂದ ನೋಡಲು ಸಾಧ್ಯವಾದ ಕಾರಣಕ್ಕಾಗಿಯೇ.ಅದು ಕುಗ್ರಾಮ ಗುರುತಿಸಿ ಸ್ಪರ್ಧೆ.ಆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಗ್ರಾಮಗಳನ್ನು ಗುರುತಿಸಿ ಅದರ ಹೆಸರನ್ನು ಕಳಿಸಿಕೊಡುವಂತೆ ಪತ್ರಿಕೆ ಕೇಳಿತ್ತು. ಹಾಗೆ ಬಂದದ್ದು ನೂರಾರು ಹೆಸರುಗಳು. ಅದರಲ್ಲಿ ಕೆಲವನ್ನು ಆಯ್ಕೆಮಾಡಿಕೊಂಡ ಪತ್ರಿಕೆ ಆ ಕುಗ್ರಾಮಗಳ ಪರಿಸ್ಥಿತಿಯ ಬಗ್ಗೆ ಮೇಲಿಂದ ಮೇಲೆ ಒಂದಷ್ಟು ವರದಿಗಳನ್ನು ಪ್ರಕಟಿಸಿತು.ಅಂತಹ ಕುಗ್ರಾಮದಲ್ಲಿ ಪಶ್ಚಿಮ ಘಟ್ಟದಲ್ಲಿರುವ ದಿಡುಪೆಯೂ ಒಂದು.ಇಲ್ಲಿ ರಸ್ತೆ ಇರಲಿಲ್ಲ, ದೀಪವಿರಲಿಲ್ಲ, ಹಾಗಾಗಿ ಮಕ್ಕಳು ಶಾಲೆಗೇ ಹೋಗುವುದು ದುಸ್ತರವಾಗಿತ್ತು. ಮನೆಗಳಲ್ಲಿ ಬೆಳಕಿರಲಿಲ್ಲ, ಅನಾರೋಗ್ಯ ತಾಂಡವವಾಡುತ್ತಿತ್ತು.ಆದರೆ ಯಾವಾಗ ಉದಯವಾಣಿ ಮೇಲಿಂದ ಮೇಲೆ ಕೆಲವು ವಿಶೇಷ ವರದಿಗಳನ್ನು ಪ್ರಕಟಿಸಿತೋ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಯುವಕ ಸಂಘಗಳು ಆ ಕುಗ್ರಾಮಕ್ಕೆ ತೆರಳಿ ಶ್ರಮದಾನ ಮಾಡಿದವು.ಪರಿಣಾಮ ಅಲ್ಲಿಗೆ ಒಂದು ಕಚ್ಚಾ ರಸ್ತೆ ನಿರ್ಮಾಣವಾಯಿತು. ಪ್ರಯತ್ನ ಪುಟ್ಟದು, ಆದರೆ ಪರಿಣಾಮ ದೊಡ್ಡದು.ಆ ಕಚ್ಚಾ ರಸ್ತೆ ಬಂದ ಕಾರಣದಿಂದಾಗಿ ಆ ಊರಿಗೆ ಸೀಮೆ ಎಣ್ಣೆ ಬಂತು. ಸೀಮೆ ಎಣ್ಣೆ ಕಾರಣದಿಂದಾಗಿ ಊರಿಗೆ ಬೆಳಕು ಬಂತು. ಆ ರಸ್ತೆಯ ಪರಿಣಾಮದಿಂದಾಗಿ ಆ ಊರಿಗೆ ವಾರಕ್ಕೊಮ್ಮೆ ವೈದ್ಯರು ಬಂದು ಹೋಗಲು ಆರಂಭಿಸಿದರು.ಪರಿಣಾಮ ಕುಗ್ರಾಮದ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತು. ಯಾವ ಗ್ರಾಮ ಅನಕ್ಷರಸ್ಥ ಗ್ರಾಮವಾಗಿತ್ತೋ ಅಲ್ಲಿನ ಮಕ್ಕಳು ಈಗ ಇದೇ ರಸ್ತೆ ಕಾರಣದಿಂದಾಗಿ ಶಾಲೆಯ ಮುಖ ನೋಡಲು ಆರಂಭಿಸಿದರು.ಒಂದು ಮಾಧ್ಯಮ ಸಮಾಜದ ಮೇಲೆ ಮಾಡುವ ಪರಿಣಾಮಕ್ಕೆ ಇದು ಒಂದು ಪುಟ್ಟ ಉದಾಹರಣೆ ಅಷ್ಟೇ.ಇದು ಸಾಧ್ಯವಾದದ್ದು ಮಾಧ್ಯಮ ಅಲ್ಲಿಯವರೆಗೂ ಸಮಾಜದ ಅಭಿವೃದ್ಧಿಯನ್ನು ತನ್ನ ಕರ್ತವ್ಯ ಎಂದು ಭಾವಿಸಿದ್ದರಿಂದ.ಆದರೆ ಜಾಗತೀಕರಣ ಕಾಲಿಟ್ಟು, ಅದರ ಬೆನ್ನು ಹತ್ತಿ ದೇಶ ವಿದೇಶದ ಬಹುರಾಷ್ಟ್ರೀಯ ಕಂಪನಿಗಳು ಬಂದಿಳಿದು, ಮಾಧ್ಯಮಗಳನ್ನು ತನ್ನ ಉದ್ಧೇಶದಿಂದ ಬೇರ್ಪಡಿಸಿ ಲಾಭ ಮಾಡಲು ನಿಂತಾಗ..ಮಾಧ್ಯಮದ ಪ್ರಭಾವವನ್ನು ಯಥೇಚ್ಛವಾಗಿ ಬಳಸಲು ಆರಂಭಿಸಿದಾಗ..ಈ ಕಾರಣಕ್ಕಾಗಿಯೇ ಮಾಧ್ಯಮದೊಳಗೆ ರೈತ ಕಾಣೆಯಾದದ್ದು ಹಾಗೂ ಮಾಧ್ಯಮದೊಳಗಿದ್ದವರೂ ರೈತನ ಜೊತೆಗಿನ ನಂಟನ್ನು ಕಡಿದುಕೊಳ್ಳಬೇಕಾಗಿ ಬಂದದ್ದು.ಈ ಪ್ರಶ್ನೆಯನ್ನು ಕೇಳಿದ ಪಿ ಸಾಯಿನಾಥ್ ಮಾತನ್ನು ಮುಂದುವರೆಸಿ ಇನ್ನೂ ಒಂದು ವಿಷಯದತ್ತ ನಮ್ಮ ಗಮನ ಸೆಳೆದರು.ಭಾರತ ಇಂದು ಎರಡಾಗಿ ವಿಭಜನೆಯಾಗಿ ಹೋಗಿದೆ. ಒಂದು ಐ ಪಿ ಎಲ್ ಭಾರತ ಇನ್ನೊಂದು ಬಿಪಿಎಲ್ ಭಾರತ ಎಂದರು.ಐ ಪಿ ಎಲ್ ಕ್ರಿಕೆಟ್ ಮ್ಯಾಚ್ ಗಳನ್ನೂ ನೋಡುತ್ತಾ ಐ ಟಿ, ಬಿ ಟಿ ಉದ್ಯೋಗ ಅರಸುತ್ತಾ ವೀಸಾ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ ನೆಮ್ಮದಿಯಾಗಿದ್ದುಬಿಡುವ ಐ ಪಿ ಎಲ್ ಭಾರತ ಒಂದೆಡೆ.ಮತ್ತೊಂದು ಕಡೆ ಒಂದು ಹೊತ್ತಿನ ಊಟಕ್ಕೂ ತತ್ತರಗೊಳ್ಳುವ, ಹಸುವಿನ ಸಗಣಿಯಲ್ಲಿ ಕಾಳು ಹುಡುಕಿ ಅದನ್ನು ರೊಟ್ಟಿಯಾಗಿಸಿಕೊಳ್ಳಬೇಕಾದ, ಸಾಲು ಸಾಲು ಆತ್ಮಹತ್ಯೆ ಕಾಣುತ್ತಿರುವ, ಬಿಪಿಎಲ್ ಭಾರತ.ರೈತನ ಕೈಕುಲುಕದ ಮಾಧ್ಯಮ ಹಾಗಾದರೆ ಯಾವ ಭಾರತದ್ದು ಐಪಿಎಲ್ ನದ್ದೋ ಬಿಪಿಎಲ್ ನದ್ದೋ?ಮಾಧ್ಯಮಗಳು ಲಾಭ ಮಾಡಿಕೊಳ್ಳುವ, ಕೋಟಿಗಟ್ಟಲೆ ಹಣ ಬಾಚಿಕೊಳ್ಳುವ ಅದಕ್ಕಾಗಿಯೇ ಸೃಷ್ಟಿಯಾದ ಐ ಪಿ ಎಲ್ ಗಳ ಜನಕರೇ ಇವರಾಗಿರುವಾಗ ಬಿಪಿಎಲ್ ಜಗತ್ತಿಗೆ ಇವರು ಕೊಡುವ ಪ್ರಾಧಾನ್ಯತೆ ಏನು ಎನ್ನುವುದು ನಿಚ್ಚಳ.ಇಲ್ಲಿನ ಅಪಾಯಗಳು ಇನ್ನೂ ಹಲವು ಸ್ಥರದ್ದು. ಒಂದೆಡೆ ಮಾಧ್ಯಮಗಳು ಉದ್ಯಮವಾಗುವತ್ತ ತಿರುಗಿದ್ದರೆ ಇನ್ನೊಂದೆಡೆ ಉದ್ಯಮವೇ ರಾಜಾರೋಷವಾಗಿ ಮಾಧ್ಯಮಗಳನ್ನು ಸಾರಾಸಗಟಾಗಿ ತನ್ನ ಬಗಲಿಗೆ ಹಾಕಿಕೊಳ್ಳುತ್ತಾ ಹೋದದ್ದು.ಜಗತ್ತನ್ನು ನಿಯಂತ್ರಿಸುತ್ತಿರುವ ಮಾಧ್ಯಮ ಸಂಸ್ಥೆಗಳು ನಾಲ್ಕಕ್ಕಿಂತಲೂ ಹೆಚ್ಚಿಲ್ಲ. ಅಂದರೆ ಮಾಧ್ಯಮಗಳ ಮಾಲೀಕತ್ವ ಕೇವಲ ನಾಲ್ಕು ಜನರ ಮಧ್ಯೆ ಇದೆ.ಜಗತ್ತಿನ ಬಹುತೇಕ ಎಲ್ಲಾ ದೇಶಗಳಳ್ಳಿ ಮಾಧ್ಯಮಗಳನ್ನೂ ಕೈಗೆಟುಕಿಸಿಕೊಳ್ಳುತ್ತಿರುವವರು ಒಂದಲ್ಲಾ ಒಂದು ರೀತಿಯಿಂದ ಈ ನಾಲ್ಕು ಜನರ /ಸಂಸ್ಥೆಗಳ ಹಿತಾಸಕ್ತಿಯನ್ನು ಮಾತ್ರವೇ ಕೈಗೆಟುಕಿಸಿಕೊಳ್ಳುವಂತಾಗಿದೆ.ಒಟ್ಟಿನಲ್ಲಿ ಮಾಧ್ಯಮ ಎಂಬ ಉದ್ಯಮಕ್ಕೆ ಓದುಗರನ್ನು ಓದುಗರನ್ನಾಗಿರಲು ಬಿಟ್ಟಿಲ್ಲ, ನೋಡುಗರನ್ನು ನೋಡುಗರನ್ನಾಗಿರಲು ಬಿಟ್ಟಿಲ್ಲ, ಕೇಳುಗರನ್ನು ಕೇಳುಗರನ್ನಾಗಿರಲು ಬಿಟ್ಟಿಲ್ಲ.ಬದಲಾಗಿ ಅವರನ್ನು ಗ್ರಾಹಕರನ್ನಾಗಿ ಬದಲು ಮಾಡಿ ಹಾಕುತ್ತಿದೆ.ತಾವು ಉದ್ಯಮವೆಂದೂ, ತಾವು ನೀಡುತ್ತಿರುವುದು ಉತ್ಪನ್ನವೆಂದೂ, ಅದನ್ನು ಬಳಸುತ್ತಿರುವವರು ಗ್ರಾಹಕರೆಂದೂ ಮುಲಾಜಿಲ್ಲದೆ ಸಾರಿವೆ.ಈ ಕಾರಣದಿಂದಾಗಿಯೇ ಸಮಾಜದ ಕಾಳಜಿ ಕ್ರಮೇಣ ಹಿನ್ನೆಲೆಗೆ ಸರಿಯುತ್ತಿದೆ. ವಿಶ್ವಸಂಸ್ಥೆ ಹೇಳಿದ್ದ ಸೇತುವೆಗಳು, ಊರುಗೋಲು ಕಾಣೆಯಾಗುತ್ತಿದೆ.ಈಗ ಯಾವುದೇ ಪತ್ರಿಕೆ ಓದುತ್ತಿದ್ದರೆ, ಯಾವುದೇ ಟಿ ವಿ ಚಾನಲ್ ನೋಡುತ್ತಿದ್ದರೆ, ರೇಡಿಯೋ ಸ್ಟೇಷನ್ ನ ಗುಂಡಿ ತಿರುಗಿಸಿದ್ದರೆ, ಯಾವುದೇ ವೆಬ್ ಪುಟಕ್ಕೆ ಪ್ರವೇಶಿಸಿದ್ದರೆ ಅದರ ಮಾಲೀಕರಾರು ಎಂದು ನೋಡಿ. ತಕ್ಷಣ ನಿಮಗೆ ಸಿಗುವ ಸುದ್ದಿ ಎಂತಹದ್ದು ಎಂದು ಗೊತ್ತಾಗಿಬಿಡುತ್ತದೆ.ಭಾರತದೊಳಗೂ ಮಾಧ್ಯಮದ ಏಕಚಕ್ರಾಧಿಪತ್ಯ ಹೊಂದಲು ಸಾಕಷ್ಟು ಮುಸುಕಿನ ಗುದ್ದಾಟಗಳು ನಡೆದಿವೆ. ರಾಜಾರೋಷವಾಗಿ ದೊಡ್ಡ ಮೀನು ಸಣ್ಣ ಮೀನನ್ನು ನುಂಗಿ ಹಾಕುವಂತೆ ದೊಡ್ಡ ಉದ್ದಿಮೆದಾರರು ಮುಲಾಜಿಲ್ಲದೆ ಮಾಧ್ಯಮ ರಂಗವನ್ನು ನುಂಗಿಹಾಕುತ್ತಿದ್ದಾರೆ.ಟೆಲಿವಿಷನ್ ಚಾನಲ್ ಗಳು, ರೇಡಿಯೋ ಸ್ಟೇಷನ್ ಗಳು, ವೆಬ್ ಸೈಟ್ ಗಳು, ಮಾತ್ರವೇ ಅಲ್ಲದೆ ಮೊಬೈಲ್ ಸೆಟ್, ಮೊಬೈಲ್ ಒಳಗಣ ಸಿಮ್, ಅಂತರ್ಜಾಲ, ಡಿ ಟಿ ಎಚ್, ಕೇಬಲ್ ಜಾಲ ಎಲ್ಲವನ್ನೂ ಕೈಗೆತ್ತಿಕೊಳ್ಳುತ್ತಾ ಸಾಗಿರುವ ರಿಲಯನ್ಸ್ ಸಂಸ್ಥೆ ನಾಳೆ ತನ್ನ ಏಕಚಕ್ರಾಧಿಪತ್ಯಕ್ಕೆ ಎಲ್ಲರನ್ನೂ ತೆಗೆದುಕೊಳ್ಳಲಿದೆ.ಹೀಗೆ ಮಾತು ಮುಂದುವರೆಸುತ್ತಲೇ ಪಿ ಸಾಯಿನಾಥ್ ಇನ್ನೂ ಒಂದು ಮಾತನಾಡಿದರು.ನಾಳೆ ದೇಶದ ಎಲ್ಲಾ ಪತ್ರಕರ್ತರು ಮುಖೇಶ್ ಅಂಬಾನಿಯ ಅಡಿ ರಿಲೆಯನ್ಸ್ ಸಂಸ್ಥೆಯ ಅಡಿ ಇರಬೇಕಾದ ದಿನಗಳು ದೂರ ಇಲ್ಲ.ಅದು ಹಾಗಲ್ಲ ಎನ್ನುವಂತೆಯೇ ಇಲ್ಲ. ಅಂಬಾನಿ ಅಶ್ವಮೇಧದ ಕುದುರೆಯಂತೆ ಹೆಜ್ಜೆ ಹಾಕುತ್ತ ನಡೆದಿದ್ದಾರೆ.
—–ಇಂದು ಕನ್ನಡ ಪತ್ರಿಕೋದ್ಯಮ ದಿನ.
ಬಿಟ್ಟೂಬಿಡದೆ ಕಾಡುತ್ತಿರುವ ಆಲೋಚನೆಗಳು ನಿಮ್ಮ ಮುಂದೆ…

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?