Friday, April 19, 2024
Google search engine
Homeನಮ್ಮೂರುತುಮಕೂರಿನ ಹಾವುಕೊಂಡ ಗೊತ್ತಾ?

ತುಮಕೂರಿನ ಹಾವುಕೊಂಡ ಗೊತ್ತಾ?

ವಿಶೇಷ ವರದಿ; ಕೆ.ಈ.ಸಿದ್ದಯ್ಯ

ಹಾವುಕೊಂಡ, ಜೇನುಗಿರಿ, ಕತ್ತು, ಕರಟಗಿರಿ, ಟುಮುಕಿವಾದ್ಯ, ಗುಬ್ಬಚ್ಚಿ, ಕುಣಿಕಲ್ಲು, ತುರು, ವ್ಯಕ್ತಿ, ತ್ರಿಪಟ್ಟದಕಲ್ಲೂರು ಇಂಥ ಹೆಸರುಗಳನ್ನೇ ಹೊಂದಿರುವ ತುಮಕೂರು ಜಿಲ್ಲೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.ಉತ್ತರ ಭಾಗದಿಂದ ಒಂದೊಂದೇ ತಾಲೂಕುಗಳ ಹೆಸರು ಪರಿಶೀಲಿಸಿಕೊಂಡು ಬಂದರೆ ಹಾವು, ಜೇನು, ತೆಂಗಿನಚಿಪ್ಪು, ವಾದ್ಯ, ಪಕ್ಷಿ, ದನ, ವ್ಯಕ್ತಿ ಹೀಗೆ ಎಲ್ಲವು ಪ್ರಕೃತಿಯೊಂದಿಗೆ ಒಂದಿಲ್ಲ ಒಂದು ಬಗೆಯಲ್ಲಿ ಸಂಬಂಧ ಬೆಸೆದುಕೊಂಡಿವೆ.
ಅಂದರೆ ಬೆಟ್ಟಗುಡ್ಡಗಳಿಂದಲೂ, ಗಿರಿದುರ್ಗಗಳಿಂದಲೂ, ಹಕ್ಕಿಪಕ್ಷಿಗಳಿಂದಲೂ, ತೆಂಗು-ಕಂಗು ಬೆಳೆಯುತ್ತಿದ್ದ ಮತ್ತು ವಿಶೇಷ ವ್ಯಾದ್ಯಗಳಿಗೆ ಹೆಸರುವಾಸಿಯಾಗಿತ್ತೆಂದು ಹೇಳಬಹುದು.170 ಕಿಲೋ ಮೀಟರ್ ಮತ್ತು ಪೂರ್ವ-ಪಶ್ಚಿಮಕ್ಕೆ 130 ಕಿಲೋ ಮೀಟರ್ ವ್ಯಾಪ್ತಿಯ ಜಿಲ್ಲೆ ಇದಾಗಿದೆ. ಅಂಧ್ರಪ್ರದೇಶದ ಅನಂತಪುರ ಜಿಲ್ಲೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ರಾಮನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಗಳ ನಡುವೆ ಇರುವುದೇ ತುಮಕೂರು.ನಿಡುಗಲ್ಲು ದುರ್ಗ, ಕಾಮನದುರ್ಗ, ಪಾವಗಡ ಬೆಟ್ಟ, ಮಿಡಿಗೇಶಿಬೆಟ್ಟ, ಮಧುಗಿರಿ ಏಕಶಿಲಾ ಬೆಟ್ಟ, ಸಿದ್ದರಬೆಟ್ಟ, ಚನ್ನಗಿರಿದುರ್ಗ, ದೇವರಾಯನ ದುರ್ಗ, ಹುಲಿಯೂರು ದುರ್ಗ ಹೀಗೆ ಬೆಟ್ಟಗುಡ್ಡಗಳಿಂದಲೂ, ಸಿರಾ, ಗುಬ್ಬಿ, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕುಗಳು ಬಯಲುಸೀಮೆಯೆಂದು ಪ್ರಸಿದ್ದಿ ಪಡೆದಿವೆ.ತುಮಕೂರು ಜಿಲ್ಲೆಯ ಆರು ತಾಲೂಕುಗಳು ತೆಂಗು, ಅಡಿಕೆ, ಮಾವು ರಾಗಿ, ಜೋಳಕ್ಕೂ, ಇನ್ನುಳಿದ ಉತ್ತರದ ನಾಲ್ಕು ತಾಲೂಕುಗಳು ಕಡಲೆಕಾಯಿ, ಹಿಪ್ಪನೇರಳೆ, ಅಡವಳಸಿನಕಾಯಿ, ಹುಣಸೆ, ಜಾಲಿ, ಬೇವು ಮಾವು ಬೆಳೆಗೂ ಪ್ರಸಿದ್ದವಾಗಿವೆ. ಜಿಲ್ಲೆಯ ಜನರ ಆದಾಯದ ಮೂಲವೇ ಈ ಬೆಳೆಗಳು.
ಜಿಲ್ಲೆಯಲ್ಲಿ ದಲಿತರು ಮೊದಲ ಸ್ಥಾನದಲ್ಲಿದ್ದರೆ(ಪರಿಶಿಷ್ಟ ಪಟ್ಟಿಯಲ್ಲಿ ಬರುವ ಎಲ್ಲಾ ಜಾತಿಗಳು), ಒಕ್ಕಲಿಗರು ಎರಡು ಮತ್ತು ಲಿಂಗಾಯತರು ಮೂರನೇ ಸ್ಥಾನದಲ್ಲಿದ್ದಾರೆ.ಇನ್ನುಳಿದಂತೆ ಮುಸ್ಲೀಮರು, ಕ್ರಿಶ್ಚಿಯನ್ನರು, ಕುರುಬರು, ಕಾಡುಗೊಲ್ಲರು, ಈಡಿಗರು, ಗೊಲ್ಲರು, ತಿಗಳರು, ಉಪ್ಪಾರ, ಜೈನರು, ಬ್ರಾಹ್ಮಣರು, ಶೆಟ್ಟರು, ವಿಶ್ವಕರ್ಮರು, ಕ್ಷೌರಿಕರು, ಮಡಿವಾಳರು, ಬಲಜಿಗರು, ರೆಡ್ಡಿಗಳು, ಬೆಸ್ತರು, ಕುಂಬಾರ, ಕಂಬಾರ ಸಿಖ್, ಮಾರ್ವಾಡಿಗಳು, ಸೇಠ್, ದರ್ಜಿಗರು, ಅಲೆಮಾರಿಗಳು, ಅರೆಅಲೆಮಾರಿಗಳು ಹೀಗೆ ಹತ್ತು ಹಲವೆಂಟು ಜಾತಿಗಳ ಜನರು ಇಲ್ಲಿ ನೆಲೆಸಿರುವುದು ಕಂಡುಬರುತ್ತದೆ.ಈ ಸೀಮೆಯಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರೇ ರಾಜಕೀಯವಾಗಿ ಪ್ರಾಬಲ್ಯ ಹೊಂದಿರುವುದು. ಅದರಲ್ಲೂ ಒಕ್ಕಲಿಗ ಶಾಸಕರೇ ಹೆಚ್ಚಾಗಿ ಆಯ್ಕೆಯಾಗಿರುವುದು ಇದುವರೆಗಿನ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ. ಲಿಂಗಾಯತರು ಎರಡು ಕಡೆ ಆಯ್ಕೆಯಾಗಿದ್ದಾರೆ. ಮೀಸಲಾತಿ ಕಾರಣಕ್ಕೆ ಜಿಲ್ಲೆಯ ಎರಡು ಕಡೆ ದಲಿತರು ರಾಜಕೀಯ ಪ್ರವೇಶ ಮಾಡಲು ಸಾಧ್ಯವಾಗಿದೆ. ಹಿಂದುಳಿದ ಮತ್ತು ಮುಷ್ಲೀಂ ಸಮುದಾಯಕ್ಕೆ ಸೇರಿದ ತಲಾ ಒಬ್ಬೊಬ್ಬರು, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರೊಬ್ಬರು ಶಾಸಕರಾಗಿ ಅಧಿಕಾರ ನಡೆಸಿರುವುದನ್ನು ಚುನಾವಣೆ ಅಂಕಿಅಂಶ ತಿಳಿಸುತ್ತವೆ. ನಾಯಕ ಸಮುದಾಯಕ್ಕೂ ಎರಡು ಅವಕಾಶ ದೊರೆತಿದೆ.ಹುಚ್ಚಮಾಸ್ತಿಗೌಡ, ವೈ.ಕೆ.ರಾಮಯ್ಯ, ಟಿ.ಬಿ.ಜಯಚಂದ್ರ, ಸಿ.ಚನ್ನಿಗಪ್ಪ, ಎಸ್.ಆರ್.ಶ್ರೀನಿವಾಸ್, ಸಾಗರನಹಳ್ಳಿ ರೇವಣ್ಣ, ಸೊಗಡು ಶಿವಣ್ಣ, ಮಾಧುಸ್ವಾಮಿ, ಡಾ.ಜಿ.ಪರಮೇಶ್ವರ್, ವೆಂಕಟರಮಣಪ್ಪ ಸಚಿವರಾಗಿ ತಕ್ಕ ಮಟ್ಟಿಗೆ ಕೆಲಸ ಮಾಡಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಯಾರೊಬ್ಬರೂ ಇದುವರೆಗೆ ಸಚಿವರಾಗಿಲ್ಲ. ಅಂತಹ ಅವಕಾಶಗಳೂ ದೊರೆತಿಲ್ಲ.ತುಮಕೂರು ಕೇಂದ್ರವೂ ಸೇರಿದಂತೆ ದಕ್ಷಿಣ, ಪಶ್ಚಿಮ ತಾಲೂಕುಗಳು ನೀರಾವರಿ ಸೌಲಭ್ಯ ಹೊಂದಿದ್ದು, ತೋಟ-ತುಡಿಕೆ, ಭತ್ತ, ರಾಗಿ ಬೆಳೆಗಳು ಸಮೃದ್ಧವಾಗಿ ಕಂಡುಬರುತ್ತವೆ. ಉತ್ತರದ ನಾಲ್ಕು ತಾಲೂಕುಗಳು ಬರದ ದವಡೆಗೆ ಸಿಲುಕುತ್ತಲೇ ಬರುತ್ತಿವೆ. ಅಲ್ಲಿನ ಜನ ಬರದ ದವಡೆಯಿಂದ ಬಿಡಿಸಿಕೊಳ್ಳಲು ಬಹುತೇಕ ಸಾಧ್ಯವಾಗಿಲ್ಲ. ಆದರೂ ಕೂಡ ಇಡೀ ಜಿಲ್ಲೆಯಲ್ಲಿ ಮಳೆಯಾಧಾರಿತ ಕೃಷಿಯೇ ಹೆಚ್ಚಾಗಿದೆ.ಸುವರ್ಣಮುಖಿ,ಶಿಂಷಾ, ಉತ್ತರಪಿನಾಕಿನಿ, ಗರುಡಾಚಲ, ಜಯಮಂಗಲಿ ಹೀಗೆ ಪಂಚ ನದಿಗಳು ಹರಿಯುತ್ತವೆ. ಇವು ಜೀವಂತ ನದಿಗಳಲ್ಲ ಅತಿಹೆಚ್ಚು ಮಳೆ ಬಂದಾಗ ಮಾತ್ರ ತುಂಬಿ ಹರಿಯುವ ನದಿಗಳು. ಐದು ನದಿಗಳಿದ್ದರೂ ಇವುಗಳಿಗೆ ಜಲಾಶಯಗಳನ್ನು ನಿರ್ಮಿಸಿಲ್ಲ. ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಮತ್ತು ಕೊರಟಗೆರೆ ತೀತಾ ಜಲಾಶಯಗಳು, ಚಿ.ನಾ.ಹಳ್ಳಿಯ ಬೋರನಕಣಿವೆ ಜಲಾಶಯ ಪ್ರಸಿದ್ದಿ ಹೊಂದಿದ್ದರೂ ಅವು ಸಂಪೂರ್ಣ ಭರ್ತಿ ಆಗಿದ್ದು ತುಂಬಾ ಕಡಿಮೆ. ಸಿದ್ದರ ಬೆಟ್ಟ ಮತ್ತು ದೇವರಾಯನದುರ್ಗದಲ್ಲಿ ಹುಟ್ಟುವ ನದಿಗಳು ಇವು. ಪಾವಗಡದ ಪಳವಳ್ಳಿ ಕೆರೆ, ಮಧುಗಿರಿ ಪುರವರ ಕೆರೆ, ಸಿರಾ ಹೇರೂರು ಕೆರೆ, ತುಮಕೂರಿನ ಮೈದಾಳ, ಕುಣಿಗಲ್ ದೊಡ್ಡಕೆರೆ, ತುರುವೇಕೆರೆ ಮಲ್ಲಾಘಟ್ಟ ಕೆರೆ, ತಿಪಟೂರಿನ ಈಚನೂರು ಕೆರೆ, ಚಿಕ್ಕನಾಯಕನಹಳ್ಳಿ ಬೋರನಕಣಿವೆ ಗುಬ್ಬಿ ಗುಬ್ಬಿಯ ಕಡಬಾ ಅತ್ಯಂತ ದೊಡ್ಡಕೆರೆಗಳು.ಪಾವಗಡದ ಶನೈಶ್ಚರ, ಮಧುಗಿರಿ ದಂಡಿನ ಮಾರಮ್ಮ, ಸಿರಾದ ಮಾಗೋಡು ರಂಗನಾಧ, ಕೊರಟಗೆರೆಯ ಗೊರವನಹಳ್ಳಿ ಲಕ್ಷ್ಮಿ, ತುಮಕೂರಿನ ಸಿದ್ದಗಂಗಾ ಮಠ, ಕೈದಾಳ, ಕುಣಿಗಲ್‍ನ ಎಡೆಯೂರು, ಚಿಕ್ಕನಾಯಕನಹಳ್ಳಿ ದರ್ಗಾ, ಸಿರಾದ ಕೋಟೆ, ಗುಬ್ಬಿಯ ಚನ್ನಬಸವೇಶ್ವರ ದೇವಾಲಯಗಳಿಗೆ ಅತಿ ಹೆಚ್ಚು ಮಂದಿ ಭಕ್ತರು ಭೇಟಿ ನೀಡುವ ಸ್ಥಳಗಳು. ಹೀಗೆ ತುಮಕೂರು ಪ್ರವಾಸಿ ತಾಣಗಳು, ದೇವಾಲಯಗಳು, ಸೌಹಾರ್ದ ನೆಲೆಯ ಕೇಂದ್ರಗಳಿಗೂ ಹೆಸರಾಗಿದೆ.

RELATED ARTICLES

3 COMMENTS

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?