Thursday, March 28, 2024
Google search engine
Homeಜನಮನಪ್ರಧಾನಿಯವರ ಆತ್ಮನಿರ್ಭರದ ಮಾತು ಡಾ.ನಿತ್ಯಾನಂದ ಶೆಟ್ಟಿ ಅವರ ಕಣ್ಣಿನಲ್ಲಿ....

ಪ್ರಧಾನಿಯವರ ಆತ್ಮನಿರ್ಭರದ ಮಾತು ಡಾ.ನಿತ್ಯಾನಂದ ಶೆಟ್ಟಿ ಅವರ ಕಣ್ಣಿನಲ್ಲಿ….

ಒಂದು ದಿನ‘ಆತ್ಮನಿರ್ಭರ ಭಾರತ’ಎಂದು ಕರೆಕೊಟ್ಟು ಇನ್ನೊಂದು ದಿನ‘ಕೋವಿಡೋತ್ತರ ದಿನಗಳು ಭಾರತದಲ್ಲಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸುತ್ತವೆ,ಕೋಟ್ಯಾಂತರ ಬಂಡವಾಳತೊಡಗಿಸಿ’ ಎಂಬ ಆಹ್ವಾನ ನೀಡಲಾಗುತ್ತಿದೆ. ಆದರೆ ಇವೆರಡೂ ಪರಸ್ಪರ ವಿರೋಧಾಭಾಸದ ಮತ್ತು ಮಹಾ ಸಾಂಕ್ರಾಮಿಕದಿಂದ ಯಾವ ಪಾಠವನ್ನೂ ಕಲಿಯದ ಮಾತುಗಳು.

ಮೊದಲಿಗೆ ವಸ್ತುಸ್ಥಿತಿ ಹೇಗಿದೆ ಎಂಬುದನ್ನು ನೋಡೋಣ. ಸ್ಥಳೀಯ ನಿದರ್ಶನವೊಂದರ ಮೂಲಕವೇ ಇದನ್ನು ಆರಂಭಿಸೋಣ.

ಲಾಕ್‌ಡೌನ್ ಕಾಲದಲ್ಲಿ ನಡೆದ ಒಂದು ಸಣ್ಣ ಘಟನೆ ಇದು. ತುಮಕೂರು ಪೇಟೆಯ ಹೊರವಲಯದ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ನನ್ನ ಪಕ್ಕದ ಮನೆಯಲ್ಲಿ ಇರುವವನು ಮಂಜಣ್ಣ. ಆತ ಓರ್ವ ಪೂರ್ಣಪ್ರಮಾಣದ ಕೃಷಿಕ. ಜಾತಿಯಲ್ಲಿ ತಿಗಳ ಸಮುದಾಯಕ್ಕೆ ಸೇರಿದ ಮಂಜಣ್ಣ ಅತ್ಯಂತ ವ್ಯವಸ್ಥಿತ ತರಕಾರಿ ಬೆಳೆಗಾರ. ಆತ ತನ್ನ ಹೊಲದಲ್ಲಿ ಬೆಳೆದಿರುವ ಯಾವುದೇ ಬೆಳೆ ನೋಡಿದರೂ ಅದು ರಂಗೋಲಿ ಇಟ್ಟಷ್ಟು ಚಂದ. ನಮ್ಮ ಮನೆಯದೇನಾದರೂ ಸಣ್ಣ-ಪುಟ್ಟ ಕೆಲಸ ಇದ್ದರೆ ಅದನ್ನು ಚೊಕ್ಕವಾಗಿ ಮುಗಿಸಿ ಅದಕ್ಕೆ ಪ್ರತಿಫಲವಾಗಿ ಏನನ್ನೂ ಸ್ವೀಕರಿಸದ ನಿಷ್ಕಾಮ ನೇಗಿಲ ಯೋಗಿ.

ಕೊರೊನಾ ರೋಗ ಭಾರತಕ್ಕೂ ಪ್ರವೇಶಿಸಿದ ಹಿಂಚು-ಮುಂಚಿನ ದಿನಗಳಲ್ಲಿ ತನ್ನ ಒಂದು ಹೊಲದಲ್ಲಿ ಹೂಕೋಸು ಬೆಳೆದಿದ್ದ ಮಂಜಣ್ಣ. ಬೆಳೆ ಚೆನ್ನಾಗಿ ಬಂದಿತ್ತು. ಮಾರ್ಚ್ 22, 2020ರ ಸಂಜೆ ಸುಮಾರು ಒಂದು ಕ್ವಿಂಟಾಲ್‌ನಷ್ಟು ಹೂಕೋಸು ಕುಯ್ದ ಮಂಜಣ್ಣ. ಆ ದಿನ ರಾತ್ರಿ (ಎಲ್ಲ ನ್ಯೂಸ್ ಚಾನೆಲ್‌ಗಳು ಮನೆಯ ಸೂರು ಕಿತ್ತು ಹೋಗುವಂತೆ ಆರ್ಭಟಿಸುವ ಹೊತ್ತಿನಲ್ಲಿ) 9 ಗಂಟೆಗೆ ಸರಿಯಾಗಿ ಪ್ರೈಮ್ ಟೈಮ್‌ನಲ್ಲಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ನಮ್ಮ ಪ್ರೈಮ್ ಮಿನಿಸ್ಟರ್‌ರವರು “ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ 21 ದಿನಗಳ ಲಾಕ್‌ಡೌನ್” ಎಂದು ಘೋಷಿಸಿದರು.

ನಮ್ಮ ಮಂಜಣ್ಣನಿಗೆ ಕರ್ಫ್ಯೂ ಗೊತ್ತಿತ್ತು. ಆದರೆ ಈ ಲಾಕ್‌ಡೌನ್ ಗೊತ್ತಿರಲಿಲ್ಲ. ಕುಯ್ದು ಇಟ್ಟಿರುವ ಕೋಸು. ನಾಳೆ ಮಾರ್ಕೆಟ್‌ಗೆ ಹಾಕದಿದ್ದರೆ ಕೊಳೆಯುತ್ತದೆ ಎಂದು ಅಂಜುತ್ತ-ಅಳುಕುತ್ತ ಮಂಜಣ್ಣ ತನ್ನ ಟಿವಿಎಸ್‌ನಲ್ಲಿ ಅಷ್ಟೂ ಹೂಕೋಸು ಹೇರಿಕೊಂಡು ತುಮಕೂರು ಅಂತರಸನಹಳ್ಳಿಯಲ್ಲಿರುವ ತರಕಾರಿ ಮಾರ್ಕೆಟ್‌ಗೆ ಹೋದ. ಚೀಲ ಇಳಿಸಿದ ಮಂಜಣ್ಣ ನೋಡ್ತಾನೆ. ಇವನಂತೆಯೇ ತರಕಾರಿ ಮಾರಲು ಬಂದಿದ್ದ ರೈತರ ಬೆನ್ನ ಮೇಲೆ, ಕುಂಡಿ ಮೇಲೆ ಪೊಲೀಸರ ಲಾಠಿಗಳು ಶ್ಯಾನೆ ಬಿರುಸಾಗಿ ಓಡಾಡ್ತಾ ಇದ್ದವು. ಭಯಗ್ರಸ್ತನಾದ ಮಂಜಣ್ಣ ಅಲ್ಲೇ ಒಂದು ಅಂಗಡಿಯ ಹಿಂಭಾಗದಲ್ಲಿ ಅಡಗಿ ಕುಳಿತು ಪೊಲೀಸ್ ವ್ಯಾನು ಹೋದ ಬಳಿಕ ಹೊರ ಬಂದರೆ ಒಂದು ನರಪಿಳ್ಳೆಯೂ ಮಾರ್ಕೆಟ್‌ನಲ್ಲಿ ಇಲ್ಲ. ತಾನು ತಂದ ಅಷ್ಟೂ ಕೋಸನ್ನು ಅಲ್ಲೇ ರಸ್ತೆ ಮೇಲೆ ಸುರಿದು ಮನೆಗೆ ಬಂದ ಮಂಜಣ್ಣ, ಟಿಲ್ಲರ್ ತಗೊಂಡು ಕೋಸು ತುಂಬಿದ ಇಡೀ ಹೊಲದ ಉದ್ದಕ್ಕೂ ಟಿಲ್ಲರ್ ಓಡಾಡಿಸಿ ತನಗೆ ಬಂದ ರೋಷವನ್ನು ಇಳಿಸಿದ ಬಳಿಕವೇ ಕೂಲಾದ.

ಸಂಜೆ ನಮ್ಮ ಮನೆ ಮುಂದೆ ಬಂದು ಇದನ್ನೆಲ್ಲ ವರ್ಣಿಸಿದ ಮಂಜಣ್ಣನನ್ನು ನಾನು ಮೆತ್ತಗೆ ಕೇಳಿದೆ. “ಇಷ್ಟೊಂದು ಕೋಪ ಯಾಕ್ ಮಂಜಣ್ಣ?”.

“ಇನ್ನೇನು ಸಾ. ಕಷ್ಟ ಪಟ್ಟು ಬೆಳೆ ಬೆಳೆದು ಮಾರ್ಕೆಟ್‌ಗೆ ಹೋದರೆ ನಮಗೆ ಕಳ್ಳರಿಗೆ ಹೊಡ್ದಂಗೆ ಹೊಡೀತಾರಲ್ಲ ಸಾ. ಇದು ನ್ಯಾಯನಾ? ನೋಡ್ತೀರಿ ಸಾ. ಲಾಕ್‌ಡೌನ್ ಇಪ್ಪತ್ತೊಂದು ದಿನ ಅಲ್ಲ. ಇಪ್ಪತ್ತೊಂದು ತಿಂಗಳು ಮಾಡಲಿ. ಹೆದರೋ ಮಗಾ ಅಲ್ಲ ನಾ. ಇನ್ನೂ ನಾಲ್ಕು ವರ್ಷಕ್ಕಾಗೋವಷ್ಟು ರಾಗಿ ಹಂಗೇ ಮಡಗಿದ್ದೀನಿ. ಮನೆಗೆ ಎಷ್ಟು ಬೇಕೋ ಅಷ್ಟು ತರಕಾರಿ ಬೆಳ್ಕೊಂಡು ಆರಾಮ ಇರ್ತೀನಿ. ಯಾರೇನು ಮಾಡ್ತಾರೆ ಸಾ ನನ್ನನ್ನು? ಇಮಾನದಾಗೆ ಓಡಾಡೋರಿಂದ ಬಸ್ಸಲ್ಲಿ ಓಡಾಡುವವರವರೆಗೆ ಹೆದರ್ಬೇಕು. ನಾ ಯಾಕೆ ಹೆದರ್ಲಿ?÷ನಮ್ಮ ಇಡೀ ಮನೆಮಂದಿ ಉಪ್ಪೊಂದನ್ನು ಬುಟ್‌ಬುಟ್ಟು ಇನ್ಯಾವುದಕ್ಕೂ ಹೊರಗಿನ ಪ್ರಪಂಚಕ್ಕೆ ಕ್ಯಾರೇ ಅನ್ನಲ್ಲ ಸಾ. ಈ ಶನಿ ಊರಾಚೆ ತೊಲಗುವವರೆಗೆ ನಾ ಪೇಟೆ ಮುಖ ನೋಡೋ ಮಗನೇ ಅಲ್ಲ” ಅಂದುಬಿಟ್ಟ.

ಆತನ ಆತ್ಮಾಭಿಮಾನ, ಧೈರ್ಯ ಮತ್ತು ದಿಟದ ನುಡಿಗಳಿಗೆ ನಾನು ನಿರುತ್ತರನಾಗಿದ್ದೆ.

ಮಂಜಣ್ಣ ನಮ್ಮ ಪ್ರಧಾನಿಯವರು ಹೇಳುವುದಕ್ಕೂ ಮೊದಲೇ ‘ಆತ್ಮನಿರ್ಭರ’ನಾಗಿಯೇ ಬದುಕಿದ್ದ. ಪ್ರಾಯಃ ಮುಂದೆಯೂ ಬದುಕುತ್ತಾನೆ. ಪೊಲೀಸರ ಪೆಟ್ಟು ನೋಡಿದ ಆತನಿಗೆ ತನ್ನಂತಹ ರಟ್ಟೆ ಮುರಿದು ದುಡಿದು ಬದುಕುವ ರೈತರ ವ್ಯಕ್ತಿತ್ವದ ಘನತೆಗೆ ಬಂದ ಅಪಾಯದ ಬಗ್ಗೆ ಖೇದವುಂಟಾಗಿತ್ತು. ಕೋಪವೂ ಬಂದಿತ್ತು. ನನ್ನ ಅನ್ನ ನನ್ನ ಕೈಯಲ್ಲಿರುವ ತನಕ ನಾನು ಯಾರಿಗೂ ತಲೆಬಾಗಲಾರೆ ಎಂಬ ನಿಲುವನ್ನು ಹೊಂದಿದ್ದ ಆತನಿಗೆ ನಾನು ಮನಸಲ್ಲೇ ತಲೆಬಾಗಿದೆ.

ವಿಷ್ಣು ಪುರಾಣದಲ್ಲಿ ಬರುವ ಒಂದು ಕಥೆ ಇಲ್ಲಿ ನೆನಪಾಗುತ್ತಿದೆ. ಎಲ್ಲರಿಗೂ ಗೊತ್ತಿರುವ ಕಥೆ ಅದು. ದೇವ-ದಾನವರು ಹಾಲಿನ ಸಮುದ್ರವನ್ನು ಕಡೆಯುವುದರಲ್ಲಿ ಮಗ್ನವಾಗಿದ್ದಾಗ ಮಂದರ ಪರ್ವತ ಮುಳುಗಿ ಹೋಗುತ್ತಿತ್ತು. ವಿಷ್ಣು ಕೂರ್ಮಾವತಾರವನ್ನು ತಾಳಿ ಪರ್ವತವನ್ನು ತನ್ನ ಬೆನ್ನ ಮೇಲಿನ ಚಿಪ್ಪಿನಿಂದ ಹೊತ್ತು ಮುಳುಗುವುದನ್ನು ತಡೆದ ಎನ್ನುವುದು ಆ ದೊಡ್ಡ ಕಥೆಯ ಒಂದು ಪ್ರಮುಖ ಭಾಗ. ಆ ಕಥೆಯನ್ನು, ಕೊರೊನಾದ ಕಾಲದಲ್ಲಿ ನಮ್ಮಲ್ಲಿ ನಡೆಯುತ್ತಿರುವ ಈ ಆಧುನಿಕ ಸಮುದ್ರ ಮಥನದ ಜೊತೆಗಿಟ್ಟೂ ನೋಡಬಹುದಾಗಿದೆ.

ಈ ಮಥನದಲ್ಲಿ ಕುಸಿಯುತ್ತಿರುವುದು ನಾವು ಕಟ್ಟಿಕೊಂಡ ಜಾಗತೀಕರಣ ಕೃಪಾಪೋಷಿತ ಆರ್ಥಿಕತೆ ಎಂಬ ಮಂದರ ಪರ್ವತ. ಅದನ್ನು ಬೆನ್ನಮೇಲೆ ಹೊರಬೇಕಾದ ಆಮೆಗಳು ನಮ್ಮ ರೈತರೇ. ಸೂರ್ಯಸ್ಪಷ್ಟವಾಗಿ ಕಾಣುವಂತಹ ಇಂತಹ ಒಂದು ಸತ್ಯ ನಮ್ಮ ನೀತಿ-ನಿರೂಪಕರಿಗೆ, ನಮ್ಮನ್ನು ಆಳುವವರಿಗೆ ಯಾಕೆ ಕಾಣುತ್ತಿಲ್ಲ ಎಂಬುದೇ ನಿಜಕ್ಕೂ ಸೋಜಿಗ.

ಈ ಸತ್ಯವನ್ನು ಕಾಣುವ ಬದಲಿಗೆ ಇದರ ತಲೆಯ ಮೇಲೆ ಹೊಡೆಯುವಂತಹ ಎರಡು ಘಟನೆಗಳು ನಮ್ಮ ರಾಜ್ಯದಲ್ಲೇ ನಡೆದವು. ಅವೇನೆಂದರೆ ಸಾಂಕ್ರಾಮಿಕ ಖಾಯಿಲೆ ನಮ್ಮಲ್ಲಿ ಸಂಕಟಗಳ ಮತ್ತು ಸಾವು-ನೋವುಗಳ ಸರಮಾಲೆಯನ್ನು ಸೃಷ್ಟಿಸುತ್ತಿರುವ ಕಾಲದಲ್ಲೇ ನಮ್ಮ ರಾಜ್ಯ ಸರಕಾರ ತರಾತುರಿಯಲ್ಲಿ ರೈತವಿರೋಧಿಯಾದ ಮತ್ತು ದೂರಗಾಮಿ ಪರಿಣಾಮದಲ್ಲಿ ತೀವ್ರಬಗೆಯ ಅ-ಸಮಾನತೆಗಳನ್ನು ಮತ್ತು ಅ-ಸಮಂಜಸತೆಗಳನ್ನು ಸೃಷ್ಟಿಸಬಲ್ಲ ಎರಡು ತಿದ್ದುಪಡಿಗಳನ್ನು ಕಾನೂನು ಪ್ರಕಾರವಾಗಿಯೇ ಜಾರಿಗೊಳಿಸಿತು.

ಮೊದಲನೆಯದು, ಎಪಿಎಂಸಿ ಕಾಯಿದೆಗೆ ತಿದ್ದುಪಡಿ. ಇನ್ನೊಂದು, ಕೃಷಿ ಜಮೀನಿನ ಮಾರಾಟಕ್ಕೆ ಇದ್ದ ‘ಅಡ್ಡಿ-ಆತಂಕ’ ಅಥವಾ ಕಾನೂನಾತ್ಮಕ ‘ತೊಡಕು’ಗಳ ನಿವಾರಣೆ. ಈ ಎರಡೂ ನಿರ್ಧಾರಗಳಿಂದ, ನಮ್ಮೆಲ್ಲರನ್ನು ನಿನ್ನೆ-ಇಂದು-ನಾಳೆಯ ದಿನಗಳಲ್ಲಿ ಪೊರೆದ-ಪೊರೆಯುತ್ತಿದ್ದ-ಪೊರೆಯಲಿದ್ದ ರೈತನೆಂಬ ಆಮೆಯ ಬೆನ್ನ ಮೇಲಣ ಚಿಪ್ಪನ್ನು ಇಕ್ಕುಳ ಹಾಕಿ ಕಿತ್ತಂತೆಯೇ ಆಗಿದೆ. ಈ ಅವಳಿ ನಿರ್ಧಾರಗಳ ಹಿಂದೆ ನಿಸ್ಸಂಶಯವಾಗಿಯೂ ನಮ್ಮನ್ನು ಆಳುವ ಸರಕಾರಗಳ ಕಾರ್ಪೊರೇಟ್ ಪರವಾದ ಹಿತಾಸಕ್ತಿ ಇದೆಯೇ ಹೊರತು ‘ಆತ್ಮನಿರ್ಭರ ಭಾರತ’ ವಂತೂ ಇಲ್ಲ.

ಭಾರತದಂತಹ ಬಹುರೂಪಿ ಮತ್ತು ಸಂಕೀರ್ಣ ಸಾಮಾಜಿಕ ಸಂರಚನೆಯನ್ನು ಹೊಂದಿರುವ ದೇಶದಲ್ಲಿ ನಮ್ಮನ್ನು ಆಳುವ ಜನನಾಯಕರು ತಮ್ಮ ಸಾಮಾಜಿಕ-ಆರ್ಥಿಕ ನೀತಿಗಳಲ್ಲಿ ಪ್ರಮುಖವಾಗಿ ನಾಲ್ಕು ಅಂಶಗಳಿಗೆ ಗಮನ ಕೊಡಬೇಕಾಗಿದೆ. ಮೊದಲನೆಯದು, ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು. ಎರಡನೆಯದು, ಆಹಾರ ವಿತರಣೆಯನ್ನು ಕೇಂದ್ರೀಕೃತ ವ್ಯವಸ್ಥೆಯಿಂದ ಗ್ರಾಮ ಪಂಚಾಯತ್ ಮಟ್ಟಕ್ಕೆ ವಿಕೇಂದ್ರೀಕರಣಗೊಳಿಸುವುದು. ಮೂರನೆಯದು, ಸುಸ್ಥಿರ ಆರೋಗ್ಯವಂತ ಶರೀರವನ್ನು ಹೊಂದುವುದನ್ನು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿ ಪರಿವರ್ತನೆಗೊಳಿಸುವುದು. ಕೊನೆಯದಾಗಿ ಹೇಳುವುದಿದ್ದರೂ ಕೊನೆಯದ್ದಲ್ಲದ್ದು ಸಾಮಾಜಿಕ ಮತ್ತು ಧಾರ್ಮಿಕ ಸಾಮರಸ್ಯವನ್ನು ಜನಸಮುದಾಯದ ನಡುವೆ ಸ್ಥಾಪಿಸುವುದು.

ಯಾವುದೇ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ, ಅಥವಾ ಜಾಗತಿಕ ಮಹಾಯುದ್ಧಗಳ ಸಮಯದಲ್ಲಿ ಅಥವಾ ಬಲುದೊಡ್ಡ ಆರ್ಥಿಕ ಹಿಂಜರಿತದ ಸನ್ನಿವೇಶದಲ್ಲಿ ಜನಸಮುದಾಯಗಳು ತೀವ್ರತರವಾದ ಕಷ್ಟ-ಕಾರ್ಪಣ್ಯಗಳನ್ನು ಎದುರಿಸುವುದು ಆಹಾರದ ಕೊರತೆಯಿಂದ. ಹಾಗಿರುವಾಗ ಆಹಾರದ ಉತ್ಪಾದನೆಯ ಬಗ್ಗೆ ಮತ್ತು ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತರ ಬಗ್ಗೆ ನಮ್ಮ ಸರಕಾರಗಳು ಬಹಳ ಕಾಳಜಿಯಿಂದ ನಡೆದುಕೊಳ್ಳಬೇಕಾಗುತ್ತದೆ. ಮಂಜಣ್ಣನಂಥವರ ದೃಢತೆ ಮತ್ತು ಆತ್ಮಗೌರವದ ಮಾತುಗಳಿಂದ ನಮ್ಮ ಅರ್ಥಶಾಸ್ತ್ರಜ್ಞರು, ನಮ್ಮ ನಾಯಕರು ಮತ್ತು ಸಾಮಾಜಿಕ ನೀತಿ-ನಿರೂಪಕರು ಅತ್ಯವಶ್ಯವಾಗಿ ಕಲಿಯಬೇಕಾದ ಒಂದು ಪಾಠ ಇದೆ. ಅದು ನಿಸ್ಸಂಶಯವಾಗಿ ಆಹಾರ ಉತ್ಪಾದನೆಗೆ ಸಂಬಂಧಿಸಿದ್ದು.

ಜಗತ್ತಿಗೆ ಯಾವ ಗಂಡಾAತರ ಬಂದು ಎರಗಿದರೂ ಮನುಷ್ಯ ಕನಿಷ್ಠ ಪಕ್ಷ ಎರಡು ಹೊತ್ತು ಆದರೂ ಹೊಟ್ಟೆಗೆ ಅನ್ನ ತಿನ್ನಬೇಕಾಗುತ್ತದೆ. ಜಗತ್ತಿಗೆ ಜಗತ್ತೇ ಬಾಗಿಲು ಹಾಕಿಕೊಂಡು ಲಾಕ್‌ಡೌನ್ ಆಗಿದ್ದರೂ ಅಡುಗೆ ಮನೆಯ ಬಾಗಿಲುಗಳನ್ನು ಮಾತ್ರ ಯಾವತ್ತೂ ತೆರೆದಿಡಬೇಕಾಗುತ್ತದೆ. ಆದರೆ ಈ ಪಾಠವನ್ನು ಕಲಿಯುವುದಕ್ಕೆ ನಮ್ಮ ಸರಕಾರಗಳೊಳಗಿನ ನೀತಿ-ನಿರೂಪಕರು ನಿರಾಕರಿಸುವಂತಿದೆ.

ಕೊರೊನಾದ ಕಾಲದಲ್ಲಿ ನಮ್ಮೆಲ್ಲರನ್ನು ತೀವ್ರವಾಗಿ ಬಾಧಿಸಿದ್ದು ಆಹಾರದ ಪ್ರಶ್ನೆ. ನಾವು ಇಲ್ಲಿ ಇರಲಾರೆವು ಎಂದು ಮಹಾನಗರಗಳಿಂದ ಹೊರಟ ಸುಮಾರು 13 ಕೋಟಿ ವಲಸಿಗರು ಎದುರಿಸಿದ್ದೂ ಆಹಾರದ ಸಮಸ್ಯೆಯನ್ನೇ. ಅವರು ದಾರಿ ಮಧ್ಯೆ ದಾರುಣವಾಗಿ ನಿಧನಗೊಂಡದ್ದು ಆಹಾರದ ಕೊರತೆಯಿಂದಲೇ. ಇಂದು ನಮ್ಮ ದೇಶದಲ್ಲಿ ಕೊರೊನಾದ ಕಾರಣದಿಂದ ಸಾಯುತ್ತಿರುವವರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಅತ್ಯಂತ ಶಿಸ್ತುಬದ್ಧವಾದ ವ್ಯವಸ್ಥೆ ಇದೆ. ಆದರೆ ಹಸಿವಿನಿಂದ ಸಾಯುತ್ತಿರುವವರ ಪಟ್ಟಿಯನ್ನು ಕಡೆಗಣ್ಣಿನಿಂದ ನೋಡಲು ನಿರಾಕರಿಸುವವರೂ ನಮ್ಮ ವ್ಯವಸ್ಥೆಯಲ್ಲಿದ್ದಾರೆ.

ಆಹಾರ ಪೂರೈಕೆ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿ ಯಾವುದೇ ಸ್ಪಷ್ಟ ನೀತಿ ಇಲ್ಲದ ಸರಕಾರವೊಂದು ಕೇವಲ ತನ್ನ ಜನಮರುಳು ‘ಚೇಷ್ಟೆ’ಗಳಿಂದ ಬಹಳ ದಿನಗಳವರೆಗೆ ಸಾರ್ವಜನಿಕ ವಿಶ್ವಾಸವನ್ನು ಗಳಿಸಲಾರದು. ಅದರ ಸಂಕೇತಗಳನ್ನು ನಾವು ಈಗ ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ.

ಆಹಾರ ಪೂರೈಕೆ ಮತ್ತು ಆಹಾರ ಭದ್ರತೆಯ ಕುರಿತು ಹೆಸರಾಂತ ಅರ್ಥಶಾಸ್ತ್ರಜ್ಞರಾಗಿರುವ ಮಧುರಾ ಸ್ವಾಮಿನಾಥನ್ ಅವರು ಹೇಳುವ ಮಾತುಗಳನ್ನು ಗಮನಿಸಿ:

“1940ರಲ್ಲಿ ಯುದ್ಧ ನಡೆದಾಗ ಇಂಗ್ಲೆAಡಿನಲ್ಲಿ ತೀವ್ರವಾದ ಆಹಾರದ ಕೊರತೆ ಉಂಟಾಗಿತ್ತು. ಅದನ್ನು ನಿರ್ವಹಿಸಲು ಇಂಗ್ಲೆಂಡ್ “ಫೇರ್ ಶರ‍್ಸ್” ಎಂಬ ಪಡಿತರ ಪದ್ಧತಿಯನ್ನು ಜಾರಿಗೆ ತಂದಿತು. ಇಂಗ್ಲೆAಡ್ 1939ರಿಂದಲೇ ಪ್ರತಿಯೊಬ್ಬ ವ್ಯಕ್ತಿಗೂ ಪಡಿತರ ಪುಸ್ತಕವೊಂದನ್ನು ನೀಡುವುದಕ್ಕೆ ಪ್ರಾರಂಭಿಸಿತ್ತು. ಜನ ಪುಸ್ತಕವನ್ನು ತೋರಿಸಿ ವಾರಕ್ಕಾಗುವಷ್ಟು ಪಡಿತರವನ್ನು ಸ್ಥಳೀಯ ಪಡಿತರ ಅಂಗಡಿಯಿAದ ಪಡೆದುಕೊಳ್ಳಬಹುದಿತ್ತು. ಪ್ರಾರಂಭದಲ್ಲಿ ಬೆಣ್ಣೆ, ಬೇಕನ್, ಸಕ್ಕರೆ, ಮುಂತಾದ ಪದಾರ್ಥಗಳು ಪಡಿತರದಲ್ಲಿ ಸಿಗುತ್ತಿದ್ದವು. ಅನಂತರದಲ್ಲಿ ಅದಕ್ಕೆ ಮೊಟ್ಟೆ, ಬಿಸ್ಕತ್ತುಗಳು, ಸಂರಕ್ಷಿಸಿದ ಆಹಾರ, ಮಾಂಸ ಮತ್ತು ದವಸ ಧಾನ್ಯಗಳೂ ಸೇರಿಕೊಂಡವು. ಯುದ್ಧ ಕಾಲದಲ್ಲಿ ಕೈಗೊಂಡ ಈ ಪ್ರಯೋಗದ ಪರಿಣಾಮ ಮಾತ್ರ ಅದ್ಭುತವಾಗಿತ್ತು. ಅಮರ್ತ್ಯಸೇನ್ ಹೇಳುವಂತೆ ಇದರಿಂದ ಜನರ ಪ್ರಮುಖ ಸೂಚಿಗಳಲ್ಲಿ ಬಹುದೊಡ್ಡ ಸುಧಾರಣೆ ಆಯಿತು. ಜನರ ಆಯಸ್ಸು ಗಣನೀಯವಾಗಿ ಹೆಚ್ಚಿತು. ಮರಣ ಪ್ರಮಾಣವೂ ಕಡಿಮೆಯಾಯಿತು. ಯುದ್ಧದಿಂದಾಗಿ ಸಾವುನೋವು ಭೀಕರವಾಗಿತ್ತು. ಜನರು ಹಣ ಖರ್ಚು ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅವರ ಜೀವಿತಾವಧಿ ಹೆಚ್ಚಾಗಿತ್ತು. ಇಪ್ಪತ್ತನೆಯ ಶತಮಾನದ ಮೊದಲ ಆರು ದಶಕಗಳಲ್ಲಿ ಅದರಲ್ಲೂ 1941ರಿಂದ 1950ರ ಆವಧಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಜೀವಿತಾವಧಿಯ ಪ್ರಮಾಣ ಗಣನೀಯವಾಗಿ ಏರಿತು.

1942ರಲ್ಲಿ ಬ್ರಿಟಿಷರು ಕೈಗಾರಿಕಾ ಕಾರ್ಮಿಕರಿಗೆ ಸಾಕಷ್ಟು ಆಹಾರವನ್ನು ಒದಗಿಸುವ ಉದ್ದೇಶದಿಂದ ಭಾರತದ ಆರು ನಗರಗಳಲ್ಲಿ ಪಡಿತರ ಪದ್ಧತಿಯನ್ನು ಪ್ರಾರಂಭಿಸಿದರು. 1943ರಲ್ಲಿ ಪ್ರಬಲವಾಗಿದ್ದ ರಾಜ¬ಕೀಯ ಚಳವಳಿಯ ಒತ್ತಾಯದಿಂದ ಮಲಬಾರಿನಲ್ಲಿ ಪಡಿತರ ಪದ್ಧತಿ ಜಾರಿಗೆ ಬಂತು. ಮಲಬಾರ್ ಪಡಿತರ ಪದ್ಧತಿ ಪ್ರಾರಂಭವಾದ ಮೊಟ್ಟಮೊದಲ ಗ್ರಾಮೀಣ ಪ್ರದೇಶ. 1960ರ ಮಧ್ಯಭಾಗದ ವೇಳೆಗೆ ಸಾರ್ವಜನಿಕ ಪಡಿತರ ಪದ್ಧತಿ, ರಾಷ್ಟ್ರೀಯ ಸಾರ್ವತ್ರಿಕ ಯೋಜನೆಯ ಭಾಗವಾಯಿತು. 1991ರವರೆಗೂ ಇದು ವಿಸ್ತಾರಗೊಳ್ಳುತ್ತಾ ಹೋಯಿತು. 1990ರಲ್ಲಿ ಉದಾರೀಕರಣದ ಫಲವಾಗಿ ಸಾರ್ವತ್ರಿಕ ಪಡಿತರ ವ್ಯವಸ್ಥೆ ಸ್ಥಗಿತಗೊಂಡಿತು. ಒಂದು ಸಣ್ಣ ನಿರ್ದಿಷ್ಟ ಜನರ ಗುಂಪಿಗೆ ಮಾತ್ರ ಪಡಿತರವನ್ನು ವಿತರಿಸುವ ಕ್ರಮ ಪ್ರಾರಂಭವಾಯಿತು. ಬಿಪಿಎಲ್ (ಬಡನತನದ ರೇಖೆಯ ಕೆಳಗಿರುವವರು) ಮತ್ತು ಎಪಿಲ್ (ಬಡತನದ ರೇಖೆಯ ಮೇಲಿರುವವರು) ಕುಟುಂಬಗಳು ಎಂಬ ವಿಂಗಡಣೆಯಾಯಿತು. ಅದಕ್ಕೆ ತಕ್ಕಂತೆ ಅವರಿಗೆ ಕೊಡುವ ಪಡಿತರದ ಪ್ರಮಾಣದಲ್ಲೂ ವ್ಯತ್ಯಾಸ ಶುರುವಾಯಿತು.

2013ರಲ್ಲಿ ಪ್ರಮುಖ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಜಾರಿಗೆ ಬಂತು. ಇದೊಂದು ಪ್ರಮುಖ ಹೆಜ್ಚೆ. ರೇಷನ್ ಮತ್ತು ಇತರ ಆಹಾರ ಆಧಾರಿತ ಯೋಜನೆಗಳನ್ನು (ಉದಾಹರಣೆಗೆ ಶಾಲೆಗಳಲ್ಲಿ ಮಧ್ಯಾಹ್ನದ ಊಟದಂತಹ ಯೋಜನೆಗಳು) ಒದಗಿಸುವುದು ಕಾನೂನಿನ ಪ್ರಕಾರ ಅವಶ್ಯಕ ಅಂತ ಆಯಿತು. ಶೇಕಡ 75ರಷ್ಟು ಗ್ರಾಮೀಣ ಕುಟುಂಬಗಳು, ಶೇಕಡ 50ರಷ್ಟು ನಗರದ ಕುಟುಂಬಗಳು ಅಂದರೆ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟು ಕುಟುಂಬಗಳು ಈ ಯೋಜನೆಯ ಲಾಭ ಪಡೆದವು.” (ಅರ್ಥ-03, ಏಪ್ರಿಲ್ 2020. ಅನುವಾದ ಮತ್ತು ಸಂಪಾದನೆ: ಟಿ ಎಸ್ ವೇಣುಗೋಪಾಲ್).

ಕೊರೊನಾದ ಈ ಸಂಕಷ್ಟದ ಕಾಲದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಆಹಾರ ವಿತರಣೆಯ ಕಾರ್ಯಕ್ರಮವನ್ನು ಈ ವರ್ಷದ ನವೆಂಬರ್ ತಿಂಗಳವರೆಗೂ ವಿಸ್ತರಿಸಿದ್ದಾರೆ. ಇದು ಸಂತೋಷದ ವಿಷಯವೇ. ಆದರೆ ಇದಿಷ್ಟೇ ಸಾಕಾಗುವುದಿಲ್ಲ. ಈ ತೀರ್ಮಾನ ಸದ್ಯದ ಸಂಕಟವನ್ನು ಬಗೆಹರಿಸುವುದಕ್ಕೆ ಆಯಿತು. ನಾಯಕನಾದವನಿಗೆ ಭವಿಷ್ಯದ ಒಂದು ಮುನ್ನೋಟ ಇರಬೇಕಾಗುತ್ತದೆ.

ನಮ್ಮ ದೇಶಕ್ಕೆ ಖಾಯಿಲೆಯನ್ನು ತಂದವರು ವಿದೇಶೀ ನೆಲಸಿಗರು. ಖಾಯಿಲೆಯಿಂದ ಅಪಾರ ಪ್ರಮಾಣದ ಪರಿತಾಪವನ್ನು ಪಟ್ಟವರು ದೇಶೀ ವಲಸಿಗರು. ಆದರೆ ಈ ಖಾಯಿಲೆಯಿಂದ ಇಂದಿಗೂ ನರಳದೆ, ತನ್ನ ದೈನಂದಿನ ಬದುಕಿನ ಲಯವನ್ನೂ ಕಳೆದುಕೊಳ್ಳದೆ ಸಮಾಧಾನದಿಂದ ಇದ್ದಿರುವುದು ಈ ನಮ್ಮ ದೇಶದ ಗ್ರಾಮಭಾರತದ ಜನರು. ವಾರಾನುಗಟ್ಟಲೆಯ ಲಾಕ್‌ಡೌನ್ ಕಾಲದಲ್ಲಿ ಕಾಲಸ್ತಂಭನಗೊAಡAತೆ ದಿಙ್ಮೂಢರಾದವರು ಪೇಟೆ-ಪಟ್ಟಣಗಳ ಜನರು. ಹಳ್ಳಿಯಲ್ಲೇ ವಾಸಿಸುವ ನನ್ನ ಅನುಭವದಿಂದ ಹೇಳುವುದಾದರೆ ಈ ಲಾಕ್‌ಡೌನ್ ಕಾಲದಲ್ಲಿ ಹಳ್ಳಿಯ ಜನರು ಏನೂ ಸಂಭವಿಸಿಯೇ ಇಲ್ಲವೇನೋ ಎನ್ನುವಷ್ಟು ನಿರಾಳವಾಗಿದ್ದರು.

ಸೈಕಲ್‌ನಲ್ಲಿ ಹೋಗುವ ಗಂಡಸರು ಹೆಗಲ ಮೇಲಿನ ಟವೆಲ್‌ನಿಂದ ಮುಖ ಮರೆಮಾಡಿದ್ದರೆ, ಹೆಂಗಸರು ತಮ್ಮ ಸೆರಗಿನ ಒಂದು ತುದಿಯಿಂದ ಮುಖ-ಮೂಗು ಮುಚ್ಚಿ ಇನ್ನೊಂದು ತುದಿಯನ್ನು ಕುಪ್ಪಸಕ್ಕೆ ಸಿಕ್ಕಿಸಿಕೊಂಡಿದ್ದರು. ಮಾತ್ರವಲ್ಲ ತಮ್ಮತಮ್ಮ ಹೊಲ-ಗದ್ದೆ-ತೋಟದ ಕೆಲಸಗಳಲ್ಲಿ ವ್ಯಸ್ತರಾಗಿದ್ದರು. ಜಗತ್ತನ್ನು ನಡುಗಿಸಿದ ಸಾಂಕ್ರಾಮಿಕ ರೋಗಕ್ಕೆ ನಗರ ಭಾರತ ಮತ್ತು ಗ್ರಾಮ ಭಾರತದ ಈ ಬಗೆಯ ಆಂಗಿಕ ಪ್ರತಿಕ್ರಿಯೆಗಳು ನಮಗೆ ಯಾವ ಅರ್ಥವನ್ನು ದಾಟಿಸುತ್ತಿವೆ? ಗ್ರಾಮ ಭಾರತವನ್ನು ನಾನು ರೊಮಾಂಟಿಸೈಸ್ ಮಾಡುತ್ತಿಲ್ಲ. ಇಲ್ಲಿಯ ಕಷ್ಟಗಳು ಬೇರೆ ಸ್ವರೂಪದ್ದು ಹೌದು. ಆದರೆ ಕೋವಿಡ್-19ಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ನೋಡುವುದಿದ್ದಲ್ಲಿ ನಮ್ಮ ನೀತಿ-ನಿರೂಪಕರು ಮತ್ತು ನಮ್ಮನ್ನು ಆಳುತ್ತಿರುವ ನಾಯಕರು ಗ್ರಾಮಭಾರತದಿಂದ ಕಲಿಯುವುದು ಬಹಳಷ್ಟಿದೆ.

ಒಂದು ದಿನ ‘ಆತ್ಮನಿರ್ಭರ ಭಾರತ’ ಎಂದೂ ಇನ್ನೊಂದು ದಿನ ‘ಕೋವಿಡೋತ್ತರದ ಈ ದಿನಗಳು ಭಾರತದಲ್ಲಿ ಹೂಡಿಕೆಯ ಅವಕಾಶವನ್ನು ಹೆಚ್ಚಿಸಿವೆ, ಬನ್ನಿ ಕೋಟ್ಯಾಂತರ ಬಂಡವಾಳದೊAದಿಗೆ ಭಾರತದಲ್ಲಿ ನಿಮ್ಮನ್ನು ನೀವು ತೊಡಗಿಸಿ’ ಎಂಬ ಎರಡು ಮಾತುಗಳು ಪರಸ್ಪರ ವಿರೋಧಾಭಾಸದ ಮಾತುಗಳು ಮತ್ತು ಮಹಾ ಸಾಂಕ್ರಾಮಿಕದಿAದ ಯಾವ ಪಾಠವನ್ನೂ ಕಲಿಯದ ಮಾತುಗಳು.

ಯಾವ ದೇಶದಲ್ಲಿ ಜನರು ಅತ್ಯಂತ ಕ್ಷಿಪ್ರವಾಗಿ ಚಲಿಸುತ್ತಿರುತ್ತಾರೋ ಆ ದೇಶದ ಅರ್ಥವ್ಯವಸ್ಥೆಯೂ ಹಾಗೆಯೇ ಚಂಚಲವಾಗಿರುತ್ತದೆ. ಯಾವ ಸಮಾಜಗಳ ಜನರು ಚಲಿಸಲು ನಿರಾಕರಿಸುವ ಮನೋಭಾವವನ್ನು ಹೊಂದಿರುತ್ತಾರೋ ಅಲ್ಲಿಯ ಆರ್ಥಿಕ ಬೆಳವಣಿಗೆಯ ದರ ನಿಧಾನವಾಗಿದ್ದರೂ ಸ್ಥಿರವಾಗಿರುತ್ತದೆ. ನಗರಗಳ ಅವ್ಯಾಹತ ಬೆಳವಣಿಗೆ, ವಿಪರೀತ ಕೈಗಾರಿಕೀಕರಣ ನಮ್ಮ ಜಗತ್ತಿನ ಜನರನ್ನು ನಿಂತಲ್ಲಿ ನಿಲ್ಲದಂತೆ ಮಾಡಿದೆ. ಈ ಬಗೆಯ ಅತಿ ಚಲನೆಯನ್ನೇ ಸಾಂಕ್ರಾಮಿಕ ಬಾಧಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಗ್ರಾಮಭಾರತದ ರೈತಾಪಿ ಜನರು ಸಾಮಾನ್ಯವಾಗಿ ಚಲನೆಯನ್ನು ನಿರಾಕರಿಸಿ ತಾವು ಇದ್ದಲ್ಲೇ ತಮ್ಮ ಬದುಕನ್ನು ಹಸನು ಮಾಡಿಕೊಳ್ಳುತ್ತಿರುವವರು. ಅವರನ್ನು ರೋಗ ಅಷ್ಟಾಗಿ ತಟ್ಟಿಲ್ಲ ಎಂಬುದನ್ನೂ ಇಲ್ಲಿ ಗಮನದಲ್ಲಿರಿಸಿಕೊಳ್ಳಬೇಕು.

ಇವೆಲ್ಲವುಗಳ ಜೊತೆಜೊತೆಗೆ, ಯಾವ ದೇಶದ ಸಾಮಾಜಿಕ ಮತ್ತು ಧಾರ್ಮಿಕ ವಲಯಗಳಲ್ಲಿ ಶಾಂತಿ-ಸಾಮರಸ್ಯದ ಬೆಳಕು ಇರುತ್ತದೋ ಆ ದೇಶಗಳ ಆರ್ಥಿಕ ಅಭಿವೃದ್ಧಿಯ ದರವೂ ಮೇಲ್ಮುಖವಾಗಿರುತ್ತದೆ ಎಂಬ ಅಂಶವನ್ನು ಇಲ್ಲಿ ಅವಶ್ಯವಾಗಿ ಪ್ರಸ್ತಾವಿಸಬೇಕು. ಇದು ಸಾಮಾನ್ಯ ವಿವೇಕದ ಮಾತೂ ಹೌದು. ಅಂತೆಯೇ ಅಧ್ಯಯನದ ಮೂಲಕ ಕಂಡುಕೊಂಡ ವಾಸ್ತವವೂ ಹೌದು.

ಪ್ರಸಿದ್ಧ ಅರ್ಥಶಾಸ್ತ್ರಜ್ಞರಾದ ಕೌಶಿಕ್ ಬಸು ಮತ್ತು ನಿರ್ವಿಕಾರ್ ಸಿಂಗ್ ಅವರು ‘ಭಾರತ ಎಂಬ ಕಲ್ಪನೆಯನ್ನು (ದಿ ಐಡಿಯಾ ಆಫ್ ಇಂಡಿಯಾ) ರಕ್ಷಿಸೋಣ’ ಎಂಬ ತಮ್ಮ ಲೇಖನದಲ್ಲಿ ಯಾನ್ ಅಲ್ಗಾನ್ (Yann Algan) ಮತ್ತು ಪಿಯರಿ ಕಾಹುಕ್ (Pierre Cahuc) ಎಂಬ ಇಬ್ಬರು ಫ್ರೆಂಚ್ ಅರ್ಥನೀತಿ ತಜ್ಞರು ಹೇಳುವ ‘ವಿಶ್ವಾಸ ಹೆಚ್ಚಾದಂತೆ ರಾಷ್ಟ್ರೀಯ ವರಮಾನವೂ ಅತ್ಯಂತ ತ್ವರಿತವಾಗಿ ಹೆಚ್ಚುತ್ತದೆ’ ಎಂಬ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಗಳನ್ನು ಬಳಸಿಕೊಂಡು ತೋರಿಸಿದ ವಾಸ್ತವವನ್ನು ಉದ್ಧರಿಸಿದ್ದಾರೆ.

ಜಾಗತೀಕರಣ ಜನರ ಚಲನೆಯನ್ನು ತೀವ್ರಗೊಳಿಸುತ್ತದೆ, ಜನರ ಬಯಕೆಯನ್ನು ಅನಂತವಾಗಿಸುತ್ತದೆ ಮತ್ತು ಜನರ ನೆಮ್ಮದಿಯನ್ನು ಎಂದೆಂದಿಗೂ ಕನ್ನಡಿಯೊಳಗಿನ ಗಂಟು ಆಗಿ ರೂಪಿಸಿರುತ್ತದೆ. ಅದಕ್ಕೆ ಪರ್ಯಾಯವಾಗಿರುವ ಸ್ವಾವಲಂಬನೆ ಅಥವಾ ಮಹಾತ್ಮಾ ಗಾಂಧಿಯವರು ಮತ್ತೆಮತ್ತೆ ಪ್ರತಿಪಾದಿಸುತ್ತಿದ್ದ ‘ಗ್ರಾಮ ಸ್ವರಾಜ್’ ಜನರನ್ನು ತಾವಿರುವ ಎಡೆಯಲ್ಲೇ ಸುಸ್ಥಿರಗೊಳಿಸುತ್ತದೆ ಮತ್ತು ಜನರ ನೆಮ್ಮದಿಯನ್ನು ಸ್ಥಳೀಯವಾಗಿ ಸಂತೃಪ್ತಿಗೊಳಿಸುವ ಹೊಸ ಕಾಲುದಾರಿಗಳ ಅನ್ವೇಷಣೆ ಮಾಡುತ್ತದೆ.

ಮನೆಯ ಗೃಹಸ್ಥ ಅಥವಾ ಗೃಹಿಣಿ ಇಡುವ ಒಂದು ತಪ್ಪು ಹೆಜ್ಜೆ ಒಂದು ಮನೆಯನ್ನು ಅಪಾಯಕ್ಕೆ ತಳ್ಳಬಲ್ಲದು. ಆದರೆ ಒಂದು ದೇಶದ ನಾಯಕತ್ವದ ಚುಕ್ಕಾಣಿ ಹಿಡಿದವರು ಇಡುವ ಒಂದು ತಪ್ಪು ಹೆಜ್ಜೆ ಇಡಿಯ ದೇಶವನ್ನು ಶತ-ಶತಮಾನಗಳವರೆಗೆ ಕತ್ತಲೆಗೆ ನೂಕಬಲ್ಲದು. ಈ ಸತ್ಯವನ್ನು ಕಂಡುಕೊಳ್ಳುವ ಮತ್ತು ಭವಿಷ್ಯದ ಮುನ್ನೋಟವನ್ನೂ ಹೊಂದಿರಬೇಕಾದ ಜಗತ್ತಿನ ನಾಯಕರು ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗುತ್ತದೆ.

ಚೀನಾ ದೇಶ ಇನ್ನು ಮುಂದಿನ ದಿನಗಳಲ್ಲಿ ಜಾಗತಿಕ ಹೂಡಿಕೆಯನ್ನು ಆಕರ್ಷಿಸಲಾರದು ಎಂದು ಈಗಲೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿರುವ ನಮ್ಮಲ್ಲಿನ ಬಂಡವಾಳಶಾಹೀ ಪರವಾದ ಆರ್ಥಿಕ ತಜ್ಞರು ಕೋವಿಡ್-19 ಎಂಬ ವೈರಾಣುವನ್ನು ಮಹಾಪೂರವೊಂದು ನಿನ್ನೆ ಬಂದು ನಾಳೆ ಹೋಗುತ್ತದೆ ಎಂಬಷ್ಟು ಸಲೀಸಾಗಿ ಭಾವಿಸಿದಂತಿದೆ. ಆದರೆ ಅವರು, ನಮ್ಮ ಜೀವವಿಜ್ಞಾನಿಗಳು ‘ಕೋವಿಡ್-19 ಮನುಷ್ಯನ ಈ ಭೋಗಲಾಲಸೆಯ ಭೀಕರ ಪರಿಣಾಮಗಳ ಒಂದು ಟ್ರೈಲರ್ ಅಷ್ಟೇ. ಪಿಚ್ಚರ್ ಅಭಿ ಬಾಕಿ ಹೈ.’ ಎಂದಿರುವುದನ್ನು ಕೇಳಿಸಿಕೊಂಡಿಲ್ಲದಂತಿದೆ.

ಈ ವಿಷಮ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ಮತ್ತು ಇದರಿಂದ ಪಾರಾಗುವುದು ಹೇಗೆ ಎಂಬ ಎರಡು ಮುಖ್ಯ ಪ್ರಶ್ನೆಗಳೊಂದಿಗೆ, ಇನ್ನು ಮುಂದೆ ಇಂತಹ ವಿಷಮ ರೋಗಗಳು ಬಾರದಂತೆ ಜಗತ್ತಿನ ಪುರ‍್ರಚನೆಯನ್ನು ಮಾಡುವುದು ಹೇಗೆ ಎಂಬ ಪ್ರಶ್ನೆಯನ್ನೂ ನಾವು ಅಗತ್ಯವಾಗಿ ಉತ್ತರಿಸಬೇಕಾಗಿದೆ.

ಜಾಗತೀಕರಣಕ್ಕಿರುವ ಒಂದು ಒಳ್ಳೆಯ ಅರ್ಥ ಇಡಿಯ ಜಗತ್ತೇ ಒಂದು ಕುಟುಂಬ. ಈ ಅರ್ಥದ ನೆಲೆಯಿಂದ ನಾವು ಜಾಗತೀಕರಣವನ್ನು ಕಾಣುವುದಾದರೆ ವಿಶ್ವದ ಎಲ್ಲ ರಾಜಕೀಯ ಮುಖಂಡರು ಮತ್ತು ಬುದ್ಧಿಜೀವಿಗಳು ಜಗತ್ತನ್ನು ಚೀನಾ-ಅಮೇರಿಕ-ಭಾರತ ಎಂದು ಪ್ರತ್ಯ-ಪ್ರತ್ಯೇಕ ದ್ವೀಪಗಳಾಗಿ ಕಾಣದೆ ಎಲ್ಲವನ್ನೂ ಅಖಂಡವಾಗಿ ಭಾವಿಸಿ ಜಗತ್ತಿನ ಹಿತಚಿಂತನೆಯನ್ನು ಬಯಸುವುದು ಮತ್ತು ಪೊರೆಯುವುದೇ ನಿಜವಾದ ರಾಜನೀತಿಯೂ ಹೌದು. ಅರ್ಥನೀತಿಯೂ ಹೌದು.



ಲೇಖಕರು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?