Thursday, March 28, 2024
Google search engine
Homeಜನಮನಪ್ರೀತಿ ಬರೀ ಬೊಗಳೆ!

ಪ್ರೀತಿ ಬರೀ ಬೊಗಳೆ!

ದೇವರಹಳ್ಳಿ ಧನಂಜಯ


ರಾತ್ರಿ ನಾನು ಕುಡಿದು ಮನೆಗೆ ಬಂದೆ.ಬಾಗಿಲು ತೆಗೆದ ಮಡದಿ ಊಟ ಆಯ್ತಾ ಎಂದರು.ಇಲ್ಲ ಎಂದೆ.ಕುಡಿಯಲು ಕೊಡಿಸುವವರು ಊಟ ಕೊಡಿಸುವುದಿಲ್ಲವೆ ಎಂದು ಕೇಳಿದರು.

ಮಾತನಾಡದೆ ನಾನೇ ಕೋಣೆಗೆ ಹೋಗಿ ಬಡಿಸಿಕೊಂಡು ಊಟಕ್ಕೆ ಕುಳಿತೆ.ಮೊದಲ ತುತ್ತು ಗಂಟಲಿನಲ್ಲಿ ಇಳಿಯುತ್ತಿದ್ದಾಗ ಹೆಂಡತಿ ಬಿಕ್ಕುವ ಸದ್ದು ಕೇಳಿಸಿತು.ಕಣ್ಣಂಚಿನಲ್ಲಿ ಕಂಬನಿ ತೊಟ್ಟಿಕ್ಕುತ್ತಿತ್ತು.

ನನ್ನ ಗಂಟಲಿನಲ್ಲಿ ತುತ್ತು ಇಳಿಯದಾಯಿತು. ಊಟ ನಿಲ್ಲಿಸಿ ಕೈ ತೊಳೆದು ಮೇಲೆದ್ದೆ.ನೀರು ಕುಡಿದು ಮಲಗಲು ಸಿದ್ಧನಾದೆ.ನಾನೂ ಊಟ ಮಾಡಿಲ್ಲ.ಪಾಪುಗೆ ಊಟ ಮಾಡಿಸಿ ಮಲಗಿಸಿದೆ.ನಿನ್ನ ಜತೆಯಲ್ಲೇ ಊಟ ಮಾಡಲು ಕಾದಿದ್ದೆ ಎಂದು ಕಣ್ಣೀರು ಒರಸಿಕೊಂಡರು.

ಶ್ರೀಮತಿ ಬಿಕ್ಕುತ್ತಲೇ ಹೇಳಿದರು.ನಾನು ನಿನ್ನ ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ.ಮಗ ಮತ್ತು ಸಂಸಾರದ ಮೇಲಿನ ಪ್ರೀತಿ ಬರೀ ಬೊಗಳೆ.ನನಗೆ ಕೊಡುವುದೆಲ್ಲವುದನ್ನು ಕೊಟ್ಟು ಡೈವರ್ಸ್ ಮಾಡಿಬಿಡು.ಮಗನನ್ನಾದರೂ ಚನ್ನಾಗಿ ಬೆಳೆಸುತ್ತೀನಿ ಎಂದರು.

ಮನೆಯಿಂದ ಹೊರಗೆ ಹೋಗುವಾಗ ತಾಯಿ ಕಳೆದುಕೊಂಡ ಗೆಳೆಯರೊಬ್ಬರು ದುಃಖದಲ್ಲಿದ್ದಾರೆ.ಮಾತನಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದೆ.ಪ್ರತೀ ಬಾರಿಯೂ ಇಂಥದ್ದೇ ಕಾರಣ ಕೊಟ್ಟು ಕಾ ಲ್ತೆಗೆಯುತ್ತೇನೆ.ಕುಡಿದುಕೊಂಡು ಮನೆಗೆ ಬರುತ್ತೇನೆ.ಇಂದೂ ಹಾಗೇ ಮಾಡಿದೆ.

ನಾನೇನೂ ವೃತ್ತಿಪರ ಕುಡುಕನಲ್ಲ.ಸಂದರ್ಭ ಸಿಕ್ಕಾಗ ಗೆಳೆಯರ ಜತೆ ಸೇರಿ ಖುಷಿಗೆ ಅಥವಾ ದುಃಖಕ್ಕೆ ಕುಡಿಯುತ್ತೇನೆ.ಬಹುತೇಕ ಸಂದರ್ಭಗಳಲ್ಲಿ ಬೇರೆಯವರ ಕಂಪನಿಗೆಂದೇ ಕುಡೀಯುತ್ತೇನೆ.

ಕುಡಿತ ಚಟವಾಗಬಾರದು.ಖುಷಿಗಾಗಿ ಕುಡಿಯುವುದು ತಪ್ಪಲ್ಲ.ಪ್ರತೀ ಬಾರಿ ಕುಡಿಯುವ ಸಂದರ್ಭ ಬಂದಾಗೆಲ್ಲ ಈ ಮಾತುಗಳನ್ನು ನನಗೆ ನಾನೇ ಹೇಳಿಕೊಂಡು ನನ್ನ ಕುಡಿತವನ್ನು ಸಮರ್ಥಿಸಿಕೊಳ್ಳುತ್ತೇನೆ.

ಕಳೆದ ಎರಡು ದಿನಗಳಿಂದ ಎರಡೂವರೆ ವರ್ಷದ ಮಗ ಬಿಡದೆ ಕಾಡುತ್ತಿದ್ದ.ಮಲಗಿ ರೆಪ್ಪೆ ಮುಚ್ಚಿದಾಗೆಲ್ಲ ಅವನ ಮುದ್ದು ಮುಖ ಕಣ್ಣ ಮುಂದೆ ಬಂದು ನಿದ್ರೆ ಹಾರಿ ಹೋಗುತ್ತಿತ್ತು.ಮಗನ ಜತೆ ಖುಷಿಯಿಂದ ಕಾಲ ಕಳೆದು ಹತ್ತು ದಿನ ಕಳೆದಿದ್ದವು.

ಊರಿನಲ್ಲಿ ಹಾಸಿಗೆ ಹಿಡಿದಿದ್ದ ಅಪ್ಪನನ್ನು ನೋಡಿಕೊಳ್ಳುವ ಸಲುವಾಗಿ ಮಗನ ಜತೆಗಿನ ಖುಷಿಯ ಕ್ಷಣಗಳನ್ನು ಕಳೆದುಕೊಂಡಿದ್ದೆ.ನಾನೀಗ ಅಪ್ಪನಿಗೆ ಅಪ್ಪ.ಅಪ್ಪ ನನ್ನ ಮಗ.ಕಾಡುವ ಮಗ!

ಅಕ್ಕನ ಮಗ ಊರಿಗೆ ಬಂದ ಕಾರಣ ಒಂದು ರಾತ್ರಿ ಮಟ್ಟಿಗೆ ಅಪ್ಪನನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಅವನ ಹೆಗಲಿಗೆ ಹಾಕಿ ಮಗನನ್ನು ನೋಡಲು ಬಂದಿದ್ದೆ.

ಮಗನ ಜತೆ ಆಟವಾಡುತ್ತಿದ್ದವನು ಗೆಳೆಯನ ಫೋನ್ ಕರೆ ಬಂದ ತಕ್ಷಣ ಮಡದಿಗೆ ಸಬೂಬು ಹೇಳಿ, ಗೆಳೆಯ ಕರೆಯದಿದ್ದರು ಈಗ ಬಂದೆ ಎಂದು ಹೇಳಿ ಏಕೆ ಹೋದೆ?

ನಾನು ಕುಡಿತದಲ್ಲಿ ವೃತ್ತಿಪರನಲ್ಲ. ಈ ಮಾತನ್ನು ಮತ್ತೆ ಮತ್ತೆ ನನಗೇ ಎಂಬಂತೆ ಹೇಳಿಕೊಳ್ಳುತ್ತೇನೆ.ನನಗಾಗಿ ನಾನು ಕುಡಿಯುವುದಿಲ್ಲ.ಗೆಳೆಯನ ದುಃಖ,ಕೆಲಸದ ಒತ್ತಡ,ಅಪರೂಪದ ಸ್ನೇಹಿತ ಜತೆಯಾಗಿದ್ದಾನೆ,ನನ್ನದೇ ಕಷ್ಟ,ಅತ್ತಿರದವರ ಮದುವೆ,ಅಪರೂಪಕ್ಕೆ ಸೇರಿದ್ದೇವೆ,ಹುಟ್ಟುಹಬ್ಬ,ಯಾರಿಗೂ ಪ್ರಮೋಷನ್ ಆಯ್ತು, ಬಾನ,ಬೀಗರ ಊಟ,ಹೊಸವರ್ಷ ಹೀಗೆ ಕುಡಿಯಲು ನನಗೆ ಕಾರಣ ಬೇಕು.ಸುಮ್ಮಸುಮ್ಮನೆ ಕುಡಿಯುವುದಿಲ್ಲ.ಮನಸ್ಸು ಕುಡಿಯುವ ಕಾರಣಗಳನ್ನು ಹುಡುಕುತ್ತಿರುತ್ತದೆ.

ಕುಡಿಯಲು ಕಾರಣ ಹುಡುಕುವ ಮನಸಿಗೆ ಜೊತೆಯಲ್ಲಿ ಊಟ ಮಾಡಲು ಕಾದು ಕುಳಿತ ಹೆಂಡತಿ, ಹೆಜ್ಜೆ ಸಪ್ಪಳಕ್ಕೆ ಚುರುಕಾಗುವ ಮಗನ ಕಿವಿಗಳು,ಅವನ ತುಂಟ ನಗು,ಹಾಸಿಗೆ ಹಿಡಿದಿರುವ ಅಪ್ಪನ ನರಳಾಟ,ಅವ್ವನ ಸಂಕಟ ಯಾಕೆ ಕಾಣುತ್ತಿಲ್ಲ?

ಕುಡಿದ ಪ್ರತೀ ರಾತ್ರಿಯೂ ನನ್ನ ಮೇಲೆ ನನಗೆ ಅಸಹ್ಯ ಮೂಡುತ್ತದೆ. ಇನ್ನು ಮುಂದೆ ಕುಡಿಯಬಾರದು ಎಂದು ಸರಿರಾತ್ರಿಯಲಿ ಶಪಥ ಮಾಡುತ್ತೇನೆ. ಮತ್ತೆ ಅದೇ ತಪ್ಪು ಅದೇ ಶಪಥ ಪ್ರೀತಿಪಾತ್ರರ ಮುಂದೆ ಸಣ್ಣವನಾಗುತ್ತಿದ್ದೇನೆ.

ಈ ರಾತ್ರಿಯೂ ನನ್ನ ಮೇಲೆ ನನಗೆ ಅಸಹ್ಯ ಮೂಡಿದೆ.ಹೌದು ಸುತ್ತಲಿನ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ ಅದರಲ್ಲಿ ಅವರ ಬೆಚ್ಚಗಿನ ಬದುಕು ಇದೆ ಆ ಬೆಚ್ಚನೆಯ ಬದುಕಿನಲ್ಲಿ ನಾನು ಹೋಗಿದ್ದೀನಿ.ನನಗೆ ಏನಾದರು ಆದರೆ ಅವರ ಬದುಕಿನ ಹಳಿ ತಪ್ಪುತ್ತದೆ ಎಂಬ ಕಕ್ಕುಲಾತಿಯನ್ನು ಸ್ವಾರ್ಥ ಎನ್ನಲಾಗದು. ಈ ಬಾರಿ ಶಪಥ ಮಾಡುವುದಿಲ್ಲ.ಮತ್ತೊಮ್ಮೆ ಶಪಥ ಮುರಿಯುವ ಮನಸ್ಸು ನನಗಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?