Tuesday, April 16, 2024
Google search engine
HomeUncategorizedವಿದೇಶದ‌‌ ನೆಲದಲ್ಲೂ ಕಲ್ಪತರು ನಾಡಿನ ಹಸಿರು ಶಾಲು ಬೀಸಿದ್ದ ಚಳವಳಿಯ ಅನುವುಗಾರ...

ವಿದೇಶದ‌‌ ನೆಲದಲ್ಲೂ ಕಲ್ಪತರು ನಾಡಿನ ಹಸಿರು ಶಾಲು ಬೀಸಿದ್ದ ಚಳವಳಿಯ ಅನುವುಗಾರ…

ಉಜ್ಜಜ್ಜಿ ರಾಜಣ್ಣ


ಹೋರಾಟದ ಹಸಿರು ರುಮಾಲು
ಕರ್ನಾಟಕದ ತಿಪಟೂರು ತಾಲೂಕಿನ ಹೊಲಮಾಳಗಳಿಂದ, ಯುರೋಪಿನ ಹಳ್ಳಿಗಳ ಹೊಲ್ದಬಾರೆಗಳವರೆವಿಗೂ, ಕುಲಾಂತರಿ ಬೀಜ ಬಿತ್ತನೆಯನ್ನು ವಿರೋಧಿಸಿ; ರೈತ ಚಳವಳಿಯಲ್ಲಿ ಭಾಗವಹಿಸಿದವರು ಬೆನ್ನಾಯ್ಕನಹಳ್ಳಿ ದೇವರಾಜ್.

ಭಾರತೀಯ ರೈತ ಚಳುವಳಿಗಳು ಜಾಗತಿಕ ರೈತ ಚಳುವಳಿಗಳ ಭಾಗವಾಗಿಯೂ ಕೆಲಸ ಮಾಡಿವೆ.

ಕರ್ನಾಟಕದ ರೈತ ಚಳವಳಿಗಾರರನ್ನು ವಿದೇಶಗಳಲ್ಲಿ ನಡೆಯುವ ರೈತ ಚಳುವಳಿಗಳಲ್ಲಿ ತೊಡಗಿಸಲು ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರು ದಣಿವರಿಯದೆ ದುಡಿಯುತ್ತಿದ್ದ ಕಾಲದ ರೈತ ಚಳುವಳಿ ಸಂಗಾತಿಗಳಲ್ಲಿ ಬೆನ್ನಾಯ್ಕನಹಳ್ಳಿ ದೇವರಾಜ್ ಸಹ ಪ್ರಮುಖರು.

ಪ್ರೊಫೆಸರ್ ಎಂ.ಡಿ.ಎನ್ ಅವರ ಹೋರಾಟದ ಹಸಿವು, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹೋರಾಟವನ್ನು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ವಿಸ್ತರಿಸುವಂತೆ ಮಾಡಿತ್ತು.

1999 June 15 ರಿಂದ ಒಂದೂವರೆ ತಿಂಗಳು, ಯೂರೋಪ್ ರಾಷ್ಟ್ರದ ಹಳ್ಳಿಗಳಲ್ಲಿ ಎಂ.ಡಿ.ಎನ್. ನೇತೃತ್ವದಲ್ಲಿ ನಡೆದ ರೈತ ಚಳುವಳಿಯಲ್ಲಿ ಬೆನ್ನಾಯ್ಕನಹಳ್ಳಿ ದೇವರಾಜ್ ತಿಪಟೂರು ತಾಲೂಕಿನಿಂದ ಭಾಗವಹಿಸಿದವರು.

ಯುರೋಪಿಯನ್ನರೂ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸುತ್ತಿದ್ದ ಕಾಲವದು. ಕೃಷಿಯನ್ನು ಬಹುರಾಷ್ಟ್ರೀಯ ಕಂಪನಿಗಳು ಹಿಡಿತಕ್ಕೆ ತೆಗೆದುಕೊಳ್ಳಲು ಹೊರಟಿವೆ ಎಂಬುದನ್ನು ಯುರೋಪಿಯನ್ ರೈತರೂ ಆಗಲೇ ಅರ್ಥಮಾಡಿಕೊಂಡದ್ದರು. ಅಲ್ಲಿಯ ರೈತರ ಕಳವಳವನ್ನು ಹೋರಾಟದಲ್ಲಿ ಭಾಗವಹಿಸಿದ್ದ ನಾವೆಲ್ಲರೂ ಚರ್ಚಿಸುತ್ತಿದ್ದೆವೆಂದು ದೇವರಾಜ್ ಹೇಳುತ್ತಿದ್ದರು.

ಭಾರತದಿಂದ ಸುಮಾರು 650 ರೈತ ಹೋರಾಟಗಾರರನ್ನು ಪ್ರೊಫೆಸರ್ ನಂಜುಂಡಸ್ವಾಮಿಯವರು ಯುರೋಪಿಯನ್ ಹಳ್ಳಿಗಳಿಗೆ ಕರೆದುಕೊಂಡು ಹೋಗಿದ್ದರು.

ಕರ್ನಾಟಕದವರೇ 400 ಜನ ಹೋರಾಟಗಾರರು. ದೇಶದ ವಿವಿಧ ಭಾಗಗಳಿಂದ 250 ಜನ ಹೋರಾಟದಲ್ಲಿದ್ದರು. ಅದೊಂದು ಬೃಹತ್ ಹೋರಾಟದ ಯಾನ.

ಕುಲಾಂತರಿ ಬೀಜಗಳನ್ನು ಬಿತ್ತಿದ್ದ ಹೊಲಗಳಲ್ಲಿ ಬೆಳೆ ನಾಶಮಾಡುವುದು ಯುರೋಪಿಯನಲ್ಲಿ ಕೈಗೊಂಡ ಚಳುವಳಿಯ ಉದ್ಧೇಶವಾಗಿತ್ತು. ರಾತ್ರಿ ಅಲ್ಲಿಯ ರೈತರ ಮನೆಯಲ್ಲಿ ಉಳಿದು ಮುಂದಿನ ದಿನದ ಕಾರ್ಯಸೂಚಿ ಚರ್ಚಿಸುವುದು.

ಮಾರ್ಗಸೂಚಿಯಂತೆ ಬಸ್ ಗಳಲ್ಲಿ ರೈತರ ಹೊಲಗಳಿಗೆ ಹೋಗುವುದು ಕುಲಾಂತರಿ ಬೀಜ ಬಿತ್ತನೆ ಹೊಲಗಳಲ್ಲಿ ದಾಳಿ ನಡೆಸಿ ನಿಗದಿಯಾದ ಕುಟುಂಬದಲ್ಲಿ ವಾಸ್ತವ್ಯಕ್ಕಾಗಿ ಹಿಂತಿರುಗುವುದು.

ಹೋರಾಟಗಾರರು ಯಾವ ಹಳ್ಳಿಯಲ್ಲಿ ಉಳಿಯಬೇಕೆಂಬುದು ಮೊದಲೇ ನಿಗದಿಯಾಗಿರುತ್ತಿತ್ತು.

ಯುರೋಪಿನ ಹಳ್ಳಿಗಳ ಚಳುವಳಿಯಲ್ಲಿ ದೇವರಾಜ್ ಮತ್ತು ಸಂಗಡಿಗರು ಭಾಗವಹಿಸಿದ್ದಾಗ ಆಗಿನ್ನೂ, ದೇವರಾಜ್ ಹಾಗು ಸಂಗಡಿಗರು ಯುವ ಚಳುವಳಿಗಾರರು. ಉತ್ಸಾಹಿ ತರುಣರು ಹೋರಾಟದ ಉರುಪು ಅವರ ಮೈಯೊಳಗೆ ತೊನೆಯುತ್ತಿದ್ದ ಹರೆಯ. ಮಾರ್ಗ ಸೂಚಿಯಂತೆ ಕೆಲಸ ಮುಗಿಸಿ ವಿಶ್ರಾಂತಿಯ ದಿನದಂದು ಪ್ಯಾರಿಸ್ನಲ್ಲಿ ಐ.ಪಿ.ಎಲ್ ಟವರ್ ನೋಡಲು ಒಮ್ಮೆ ಗೆಳೆಯರೊಡಗೂಡಿ ಹೋಗಿರುತ್ತಾರೆ.

ಮಂಡ್ಯ ಶಿವರಾಂ, ಗುಬ್ಬಿ ಗೋವಿಂದ ರಾಜ್, ಕೃಷ್ಣಮೂರ್ತಿ ಇತರೆಯವರೂ ಜೊತೆಯಲ್ಲಿ. ಐ.ಪಿ.ಎಲ್ ಟವರ್ ನೋಡಿ ಅವರವರ ವಾಸ್ತವ್ಯಗಳಿಗೆ ಹಿಂತಿರುಗಿದಾಗ ಪ್ರೊಫೆಸರ್ಗೆ ಗೊತ್ತಾಗಿ, “ಯಾತಕ್ಕೆ ಕಬ್ಬಿಣ ನೋಡಲು ಹೋಗಿದ್ದಿರಿ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರಂತೆ.

ಚಳುವಳಿಯ ಉದ್ಧೇಶದಲ್ಲಿ ಉಂಟಾದ ಬದಲಾವಣೆಯನ್ನು ಎಂ.ಡಿ.ಎನ್ ಕೂಡಲೇ ಮನವರಿಕೆ ಮಾಡಿಕೊಂಡು, ಇದು “ಹ್ಯಾಪಿ ಟೂರ್”ಲ್ಲ. ಭಾರತೀಯ ರೈತ ಚಳುವಳಿಗಾರರ ಉದ್ಧೇಶಗಳನ್ನು ವಿದೇಶಿ ನೆಲದಲ್ಲಿ ಬಿತ್ತಬೇಕಾದುದು ತೀರಾ ಅತ್ಯವಶ್ಯಕ. ಚಳುವಳಿಯ ಕಾರ್ಯಸೂಚಿಗಳು ಹಿಂದುಮುಂದಾಗಬಾರದು. ವಿಶ್ರಾಂತಿಯ ದಿನ ವಿಶ್ರಾಂತಿಗಾಗಿಯೇ ಉಪಯೋಗವಾದರೆ ಹೋರಾಟ ಯಶಸ್ವಿಯಾಗಲು ಸಹಕಾರಿಯಾಗುವುದೆಂದು ಪ್ಯಾರಿಸ್ ನಗರಕ್ಕೆ ಐ.ಪಿ.ಎಲ್ ಟವರ್ ನೋಡಲು ಹೋಗಿ ಬಂದವರಿಗೆಲಾ ನಂಜುಂಡಸ್ವಾಮಿ ಮಾಡಿದ ಚಳುವಳಿ ಪಾಠವನ್ನು ದೇವರಾಜ್ ಚಳುವಳಿಗಾರರ ಗಮನಕ್ಕೆ ಆಗಾಗ ಹಾಕುತಿದ್ದರು.

ಚಳುವಳಿಯ ಎಚ್ಚರವನ್ನು ಸದಾ ಕಾಪಿಟ್ಟುಕೊಂಡಿರುತ್ತಿದ್ದ ಅವರು ನಮ್ಮ ನಡುವೆ ಹೋರಾಟದ ಮಾರ್ಗದರ್ಶಕರಾಗಿದ್ದರು.

ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ಯುರೋಪಿನ ಹಳ್ಳಿಗಳಲ್ಲಿ ಚಳವಳಿ ಹೂಡಿರುವಾಗ, ಜರ್ಮನಿಯಲ್ಲಿ ಜಿ- 8 ಶೃಂಗ ಸಭೆ ನಡೆಯುತ್ತಿರುತ್ತದೆ. ಅದೇ ಸಂದರ್ಭದಲ್ಲಿ ಮಾಸ್ಸಾಂಟೊ, ಕಾರ್ಗಿಲ್, ಕ್ಯಾಡ್ಬರಿ ಇವೇ ಮೊದಲಾದ ಎಂ.ಎನ್.ಸಿ.ಗಳ ವಿರುದ್ಧ ಇವರ ಹೋರಾಟ ಯುರೋಪಿಯನ್ ನೆಲದಲ್ಲಿ ಮುಂದುವರಿದಿರುತ್ತದೆ. ಭಾರತದ ಕಪ್ಪು ಹಣವನ್ನು ಹಿಂದಿರುಗಿಸಲು, “ನಮ್ಮ ಹಣ ನಮಗೆ ಹಿಂದಿರುಗಿಸಿ” ಎಂದು ಆಗ್ರಹಿಸಿ ಸ್ವಿಸ್ ಬ್ಯಾಂಕ್ ವಿರುದ್ಧ ಘೋಷಣೆ ಕೂಗಿ ಚಳುವಳಿಯ ಸಂಗಾತಿಗಳು ಪ್ರತಿಭಟನೆ ನಡೆಸುವರು.

ಯುರೋಪಿನ ನೆಲದಲ್ಲೂ ಭಾರತೀಯ ಚಳುವಳಿಗಾರರು ಎಂದಿನಂತೆ ಟಿಕೆಟ್ ರಹಿತ ರೈಲು ಸಂಚಾರವನ್ನೇ ಕೈಗೊಳ್ಳುವರು. ಯುರೋಪಿನ ಸರ್ಕಾರ ಅವಕಾಶ ನೀಡುವುದಿಲ್ಲ. ಕಾನೂನಿನ ನಿರ್ಬಂಧ ವಿದಿಸುತ್ತದೆ.

ಪ್ರೊಫೆಸರ್ ನೇತೃತ್ವದಲ್ಲಿ ದೇವರಾಜ್ ಮತ್ತು ಸಂಗಡಿಗರು ಬಂದನಕ್ಕೊಳಗಾಗುವರು. ಪಟ್ಟು ಸಡಿಲಸದ ಯುರೋಪಿಯನ್ ಸರ್ಕಾರ, ವಿಧಿಸಲಾಗಿರುವ ದಂಡ ಪಾವತಿಸದೆ, ಬಿಡುಗಡೆ ಮಾಡುವುದಿಲ್ಲ.

ಟಿಕೆಟ್ ರಹಿತ ಪ್ರಯಾಣ ಮಾಡಿದುದರಿಂದ ದಂಡ ಪಾವತಿಸಬೇಕು ಅಥವಾ ಜೈಲುಶಿಕ್ಷೆಗೆ ಒಳಗಾಗಬೇಕೆಂದು ಕಡ್ಡಾಯಗೊಳಿಸುತ್ತದೆ. ಪ್ರತಿಭಟನಾ ನಿರತ ಭಾರತೀಯ ಚಳುವಳಿಗಾರರ ಜೊತೆಯಲ್ಲಿ ಯುರೋಪಿಯನ್ ಸ್ಥಳೀಯ ರೈತ ಹೋರಾಟಗಾರರೂ ಜೊತೆಯಾಗುತ್ತಾರೆ. ರೈತರ ನಿರಶನ ಮುಂದುವರಿಯತ್ತದೆ. ಟಿಕೆಟ್ ರಹಿತ ರೈಲು ಪ್ರಯಾಣಕ್ಕೆ ದಂಡ ಕಟ್ಟಲು ಚಳವಳಿಗಾರರು ಒಪ್ಪುದಿಲ್ಲ. ಆಗ, ರೈತರ ಹೋರಾಟಕ್ಕೆ ಮಣಿದ ಯುರೋಪಿಯನ್ ಅಧಿಕಾರಿಗಳು ಬಂದಿತ ರೈತರನ್ನು ಬಿಡುಗಡೆಗೊಳಿಸುತ್ತಾರೆ.

ಯುರೋಪನಲ್ಲೂ ನಿರುದ್ಯೋಗಿಗಳು ಮತ್ತು ಕಾರ್ಮಿಕರಿಗೆ ವಸತಿ ಸಮಸ್ಯೆ ಇರುವುದನ್ನು ಪ್ರೊಫೆಸರ್ ಆಗಲೇ ಮನಗಂಡಿದ್ದರು.

ಅಲ್ಲಿಯ ಸರ್ಕಾರಿ ಕಟ್ಟಡಗಳು ಖಾಲಿ ಇರುವುದು ಅಲ್ಲಲ್ಲಿ ಕಂಡು ಬಂದಿತು. ಅಲ್ಲಿಯ ವಸತಿ ರಹಿತರಿಗೆ ಸರ್ಕಾರಿ ಖಾಲಿ ಕಟ್ಟಡಗಳನ್ನು ಬಳಸಿಕೊಳ್ಳುವಂತೆ ಎಂ.ಡಿ.ಎನ್ ಕರೆ ನೀಡುತ್ತಾರೆ.

ಯುರೋಪಿನಾದ್ಯಂತ ಸುದ್ದಿಯಾಗುತ್ತದೆ. ಪ್ರೊಫೆಸರ್ ಕೊಟ್ಟ ಕರೆ ಚಳುವಳಿಯ ಯಶಸ್ವಿ ಹಾದಿ ಹಿಡಿಯಿತು. ಗೃಹೋಪಯೋಗಿ ಮತ್ತು ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಬಳಕೆದಾರರಾದ ಯುರೋಪಿನ ರೈತರಿಗೆ ಕರೆಂಟ್ ಲೈನ್ ಗಳಿಗೆ ಕೊಕ್ಕೆ ಹಾಕಿಕೊಳ್ಳುವುದನ್ನು ಪ್ರೊಫೆಸರ್ ಹೇಳಿಕೊಟ್ಟರಂತೆ.

ಯುರೋಪಿನಲ್ಲಿ ರೈತರು ಚಳುವಳಿ ಪ್ರಾರಂಭಿಸಿದರೆ ಪೊಲೀಸರು ಮತ್ತು ಅಧಿಕಾರಿಗಳಿಗೆ ಟೊಮೆಟೊ ಹಾಗೂ ಕೋಳಿ ಮೊಟ್ಟೆ ಎಸೆಯುವುದು ವಾಡಿಕೆ. ಹಾಗೆಯೇ ಅವರಿಗೆ ಚಳುವಳಿ ಆರಂಭಿಸಿ ಗೊತ್ತು.

ಆ ದೇಶದ ರೈತರೆಲ್ಲ ಇದನ್ನೇ ಚಳುವಳಿ ಎಂದು ತಿಳಿದಿದ್ದರು. ಹೋರಾಟದ ಇತರೆ ಪಾಠಗಳನ್ನು ಪ್ರೊಫೆಸರ್ ನೀಡುತ್ತಿದ್ದ ಉಪನ್ಯಾಸಗಳಿಂದ ಅವರೆಲ್ಲ ಕಲಿತರು ಎಂದು ವಿದೇಶಿ ನೆಲದ ರೈತರಿಗೆ ಪ್ರೊಫೆಸರ್‌ ಹೇಳಿಕೊಟ್ಟ ಚಳುವಳಿಯ ಪಾಠಗಳನ್ನು ದೇವರಾಜ್‌ ಆಗಾಗ ನೆನೆಯುತ್ತಿದ್ದರು.

ಪ್ರತಿಭಟನಾ ನಿರತರಾದ ಭಾರತೀಯ ರೈತರ ಜೊತೆಯಲ್ಲಿ ಭಾಷಾನುವಾದಕರನ್ನೂ ಕರೆದುಕೊಂಡು ಹೋಗುತ್ತಿದ್ದೆವು. ಜೊತೆಯಲ್ಲಿರುತ್ತಿದ್ದ ಅನುವಾದಕರು ನಮ್ಮ ಅಭಿಪ್ರಾಯಗಳನ್ನು ಅನುವಾದಿಸಿ ಅಲ್ಲಿಯ ರೈತರಿಗೆ ಹೇಳುತ್ತಿದ್ದರು. ಜರ್ಮನ್, ಹಿಂದಿ, ಇಂಗ್ಲಿಷ್ ಬಲ್ಲವರು ನಾವು ಹೋದ ಕಡೆ ರೈತರ ಜೊತೆ ಬರುತ್ತಿದ್ದರು.

ಯುರೋಪಿಯನ್ ರೈತರ ಜೊತೆ ನಾವು ಸಂವಾದಿಸಲು ಅನುವಾದಕರಿಂದ ಬಹಳ ಅನುಕೂಲವಾಯಿತು ಎನ್ನುತ್ತಿದ್ದರು.
ದಿನಬೆಳಗಾದರೆ ಕಾಲೇಜು ಮತ್ತು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಸಭೆ ನಡೆಸುತ್ತಿದ್ದೆವು.

ಅವರೆಲ್ಲರೂ ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಮಾತನಾಡುತ್ತಿದ್ದರು. ರೈತರ ಭವಿಷ್ಯದ ಬಗ್ಗೆ ಎಂ.ಎನ್.ಸಿಗಳು ಯೋಚಿಸುವುದಿಲ್ಲ ಎಂಬುದು ಅವರಿಗಾಗಲೇ ಅರಿವಾಗಿತ್ತು. ಮನಿ ಮನಿ ಅಂತಾರೆ.

ಹಣ ಮಾಡುವುದೇ ಕಂಪನಿಗಳ ಉದ್ದೇಶ. ಹಣ ಹೊರತಾಗಿ ಕಂಪನಿಗಳು ತುಟಿ ಎರಡು ಮಾಡುವುದಿಲ್ಲ. ಕಂಪನಿ ಮಾಲೀಕರಿಗೆ ಬೇಕಾಗಿರುವುದು ಹಣ ಎಂದೆಲ್ಲಾ ಅಲ್ಲಿಯ ರೈತರು ಮಾತನಾಡುತ್ತಿದ್ದರು ಎಂಬುದನ್ನು ಭಾರತೀಯ ನೆಲದಿಂದ ಹೋದ

ಚಳುವಳಿಗಾರರೂ ಆಗಲೇ ಗಮನಿಸಿದ್ದರಂತೆ.
ಪ್ರೊಫೆಸರ್ ರೈತ ಚಳುವಳಿಯ ಮಾರ್ಗಸೂಚಿಗಳನ್ನು ಕುರಿತಂತೆ ತುಂಬಾ ನಿಷ್ಠುರವಾಗಿದ್ದವರು. ಹೋರಾಟಗಾರರ ಊಟ-ವಸತಿಗಳೆಲ್ಲ ಸ್ಥಳೀಯ ರೈತರ ಮನೆಗಳಲ್ಲಿ ಆಯೋಜನೆ ಗೊಳ್ಳುತ್ತಿದ್ದವು. ಅದು ಸಂತೋಷಕ್ಕಾಗಿ ಕೈಗೊಂಡ ಪ್ರವಾಸವಾಗಿರಲಿಲ್ಲ.

ಪ್ರವಾಸದಲ್ಲಿರುವವರನ್ನು ಲಾಡ್ಜ್ ಮಾಡಿ ಮಲಗಿ ಸುತ್ತಿರಲಿಲ್ಲ. ರೈತರ ಮನೆಯಲ್ಲೇ ಉಳಿಸಿತ್ತಿದ್ದರು. ಇದು ನಮಗೆಲ್ಲಾ ಅನುಕೂಲವಾಗುತ್ತಿತ್ತು. ಅಲ್ಲಿಯ ಬೇಸಾಯಗಾರರ ಜೊತೆ ಮಾತನಾಡುತ್ತಿದ್ದೆವು. ಗೊತ್ತಿಲ್ಲದ ಇಂಗ್ಲಿಷ್ ಬಳಸಿ

ಮಾತನಾಡುತ್ತಿದ್ದುದು ನಮಗೆಲ್ಲ ವಿಶೇಷವಾದ ಖುಷಿಯಾಗುತ್ತಿತೆಂದು ದೇವರಾಜ್‌ ಹೇಳುತ್ತಿದ್ದರು.
ಒಂದು ದಿನ ಒಬ್ಬ ರೈತನ ಮನೆಯಲ್ಲಿ ಉಳಿದಿದ್ದೆವು. ಊಟವಾಯಿತು. ನಾವೆಲ್ಲಾ ಆತನ ಮನೆಗೆ ಉಳಿದುಕೊಳ್ಳಲು ಹೋಗಿದ್ದಕ್ಕಾಗಿ ಅವನು ತುಂಬಾ ಖುಷಿಯಾಗಿದ್ದ. ಏನೋ ತರುವ ಸಂತೋಷದಿಂದ ಹೊರಗೆ ಹೋದ. ಆತ ಏನು ತರಬಹುದೆಂದು ನಾವೆಲ್ಲಾ ಕುತೂಹಲಗೊಂಡು ಕಾದು ಕುಳಿತೆವು. ಹೆಗಲ ಮೇಲೆʼ “ ನೊಗ” ವೊಂದನ್ನು ತಂದನು. ಹೊತ್ತು ತಂದು ತೋರಿಸಿದ ನೊಗ ಅವನಿಗೆ ಪುರಾತನ ವಸ್ತು. ಆತನ ತಾತಮುತ್ತಾತರು ದನ ಕಟ್ಟಿಕೊಂಡು ತಲೆಮಾರುಗಳ ಹಿಂದೆ ಕೃಷಿ ಮಾಡುತ್ತಿದ್ದರಂತೆ. ಪೂರ್ವಜರ ನೆನಪಾಗಿ ಅವನು ನೊಗ ಇಟ್ಟುಕೊಂಡಿರುವುದಾಗಿ ಸಂತೋಷದಿಂದ ತಿಳಿಸಿದ.

ಹೈನುಗಾರಿಕೆಯಲ್ಲಿ ಮುಂದಿದ್ದೇವೆ. ಆದರೂ ಸುಖವಾಗಿಲ್ಲವೆಂದು ಅವನು ನೊಂದು ಹೇಳಿಕೊಂಡ. ಶಾಲೆಗೆ ಬಿಡಲು ಮಕ್ಕಳ ಜೊತೆ ಅಮ್ಮ ಹೊರಡುವಾಗ ಹಾಲಿನ ಕ್ಯಾನ್ ಗಳ ಜೊತೆ ಹೋಗಿ ಸಂಸ್ಕರಣಾ ಘಟಕಕ್ಕೆ ಮಹಿಳೆ ಹಾಲು ಮಾರುವವಳು. ಗಂಡಸರು ಹಸುಗಳ

ನಿಗಾ ಮಾಡುವುದು ಯುರೋಪಿಯನ್ ಕೃಷಿಕರ ದೈನಂದಿನ ಕೆಲಸವಾಗಿತ್ತಂತೆ.
ಯುರೋಪಿಯನ್ನರು ನಾನ್ ವೆಜಿಟೇರಿಯನ್. ಬೆಳಿಗ್ಗೆ ತಿಂಡಿ ಇಲ್ಲ. ತಿಂಡಿ ಬೇಯಿಸುತ್ತಾ ಕೂರುವವರಲ್ಲ ಅವರು. ರೆಡಿಮೇಡ್ ತಿಂಡಿ. ಅವರು ತಿಂಡಿಗಾಗಿ ಕಾಯುವುದಿಲ್ಲ. ಬ್ರೆಡ್ ಹಾಲು ಇತರೆ ಗಳನ್ನು ನಮಗೆ ಊಟಕ್ಕಾಗಿ ನೀಡುತ್ತಿದ್ದರು. ಭಾರತ ಸರ್ಕಾರದ ಹಾಗೆಯೇ ಯುರೋಪ್ ಸರ್ಕಾರವೂ ಸಹ ಬಹುರಾಷ್ಟ್ರೀಯ ಕಂಪನಿಗಳಿಗೆ ಸಹಕಾರಿ. ಭಾರತ ಗ್ಯಾಟ್ ಒಪ್ಪಂದ ಮಾಡಿಕೊಂಡ ಎಂಟು ವರ್ಷಗಳ ನಂತರ ಯುರೋಪ್ ರಾಷ್ಟ್ರ ಗ್ಯಾಟ್ ಗೆ ಸಹಿ ಹಾಕಿತು.
ಲಾಫಿಂಗ್ ಟೆರರಿಸ್ಟ್!

ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಸರ್ಕಾರದ ವಿರುದ್ಧ” ಲಾಫಿಂಗ್ ಚಳುವಳಿʼ ಮಾಡಿತ್ತು. ಬಜೆಟ್ ಅಧಿವೇಶನಕ್ಕೆ ಮೊದಲೇ ಬಜೆಟ್ ಪ್ರತಿಗಳ ಹಿಡಿದು ವಿಧಾನಸೌಧದ ಆವರಣದಲ್ಲಿ ಪ್ರೊಫೆಸರ್ ” ನಗುವ ಚಳುವಳಿ” ಹಮ್ಮಿಕೊಂಡು ಯಶಸ್ವಿಯಾಗಿದ್ದರು.

ಚಳುವಳಿ ವಿದೇಶಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ವಿದೇಶಿ ಪತ್ರಿಕೆಗಳು ಚಳುವಳಿಗಾರರನ್ನು ಕುರಿತುʼ ಲಾಫಿಂಗ್ ಟೆರರಿಸ್ಟ್ ʼಎಂದು ಬಣ್ಣಿಸಿದವು.
ಯುರೋಪಿನ ಹಳ್ಳಿಗಳಲ್ಲಿ ಪ್ರತಿಭಟನಾ ನಿರತರಾಗಿದ್ದಾಗ ಅಲ್ಲಿಯ ಪತ್ರಿಕೆಗಳು ಲಾಫಿಂಗ್ ಟೆರರಿಸ್ಟ್ ಬಂದಿದ್ದಾರೆಂದು ಸುದ್ದಿ ಪ್ರಕಟಿಸತೊಡಗಿದವು.

ನಮ್ಮನ್ನು ನೋಡಲು ಜನ. ಪತ್ರರರ್ತರು ಹುಡುಕಿ ಬರುತ್ತಿದ್ದರು. ಅಲ್ಲಿಯ ಹಳ್ಳಿಗಳಿಗೆ ನಾವು ಭೇಟಿ ನೀಡುವ ಮೊದಲು ಪತ್ರಿಕೆಗಳು ಸುದ್ದಿ ಮಾಡಿರುತ್ತಿದ್ದವು. ಲಾಫಿಂಗ್ ಟೆರರಿಸ್ಟ್ ಗಳನ್ನು ನೋಡಲು ಅನಿವಾಸಿ ಭಾರತೀಯರಾದಿಯಾಗಿ ಯುರೋಪಿನ್ ರೈತರೆಲ್ಲ ಮಾತನಾಡಿಸಲು ಬರುತ್ತಿದ್ದರು.

ಅನಿವಾಸಿ ಭಾರತೀಯರು ಒಮ್ಮೊಮ್ಮೆ ವೆಜಿಟೇಬಲ್ ಪಲಾವ್. ಬಿಸಿಬೇಳೆ ಬಾತ್ ಕೊಟ್ಟರು. ಸ್ವದೇಶಿ ಊಟ ಆಗಲೇ ಮರೆತು ಹೋದಂತಾಗಿತ್ತು ಎನ್ನುತ್ತದ್ದರು ದೇವಣ್ಣ.

ಮನೆಮನೆಯಲ್ಲೂ ಲೈಬ್ರರಿ
ಯುರೋಪಿನ ಬಹುತೇಕ ಕುಟುಂಬಗಳಲ್ಲಿ ಪ್ರತಿಯೊಂದು ಮನೆತನವು ಲೈಬ್ರರಿಗಳನ್ನು ಹೊಂದಿವೆ. ಅಷ್ಟೊಂದು ಅಕ್ಷರಸ್ಥ ಕುಟುಂಬಗಳನ್ನು ಅಲ್ಲಿ ಕಾಣಬಹುದಾಗಿದೆ. ಗ್ರಂಥಾಲಯ ರಹಿತ ಕುಟುಂಬ ವಿರಳ. ನಮ್ಮ ದೇಶದಲ್ಲಿ ಹಳ್ಳಿಗೊಂದು ಮುಂದುವರಿದ ಶಿಕ್ಷಣ ಕೇಂದ್ರ ತೆರೆದು ಅವುಗಳೆಲ್ಲ ಮುಚ್ಚಿಕೊಂಡವು. ಗ್ರಾಮ ಪಂಚಾಯತಿ ಗ್ರಂಥಾಲಯಗಳಿವೆ.

ಅವು ಗ್ರಾಮ ಪಂಚಾಯಿತಿ ನಿರುಪಯುಕ್ತ ಸಾಮಗ್ರಿಗಳನ್ನು ತುಂಬುವ ಕೊಠಡಿಗಳಾಗಿ ಕೆಲವು ಧೂಳಿಡಿದಿವೆ. ಯುರೋಪಿನಲ್ಲಿ ಮನೆಗೊಂದು ಗ್ರಂಥಾಲಯ . ಅಲ್ಲಿ ನಮ್ಮ ಮನೆ ನಮ್ಮ ಗ್ರಂಥಾಲಯಕ್ಕೆ ಮೊದಲನೇ ಆದ್ಯತೆ ಮನೆಗಳಲ್ಲಿ ಗ್ರಂಥಾಲಯಗಳರಬೇಕಾದುದರ ಅವಶ್ಯಕತೆಯನ್ನಯ ಅವರು ಒತ್ತಿ ಹೇಳುತ್ತಿದ್ದರು.

ಮನೆಯೇ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ವಿದ್ಯೆ ಕಲಿತ ಜನರು ಧನ್ಯರು!
ಹೀಗೆ ಹೇಳಿಕೊಂಡಿರುವ ನಮ್ಮ ದೇಶದಲ್ಲಿ ಇನ್ನೂ ಕೂಡ ಅನಕ್ಷರಸ್ಥ ಕುಟುಂಬಗಳಿವೆ. ವಯಸ್ಕರ ಶಿಕ್ಷಣ ನಡೆಯುತ್ತಲೇ ಇದೆ .ಮನೆಗಳಲ್ಲಿ ಗ್ರಂಥಾಲಯಗಳ ಆಗುವುದು ಯಾವಾಗ? ಎಂಬುದರ ಬಗ್ಗೆ ದೇವರಾಜು ಅವರಿಗೆ ಪಶ್ಚಾತ್ತಾಪವಿತ್ತು.

ಯುರೋಪಿನ ಹಳ್ಳಿಗಳಲ್ಲಿ ಚಳುವಳಿ ನಡೆಸಲು ಆ ರಾಷ್ಟ್ರಕ್ಕೆ ಹೋದವರೆಲ್ಲ ಭಾರತೀಯ ಹಳ್ಳಿಗಳ ಮೂಲದವರೇ. ತನಿಖೆಯಿಂದ ತಪ್ಪಿಸಿಕೊಂಡ ಗಡಿ ಸುಳ್ಳುಗಾರರ ಹಾಗೆ ರೈತರ ಜೇಬುಗಳಲ್ಲಿ ಮೋಟು ಬೀಡಿ, ಅಡಿಕೆ ಚೂರು, ಒಣಗಿದ ವಿಳ್ಳೇದೆಲೆ ತರಕಲು, ನೀರು ಬತ್ತಿದ ಎಲೆ ತೊಟ್ಟುಗಳು, ಸುಣ್ಣಕಾಯಿ, ಹೊಗೆಸೊಪ್ಪು, ಕಡ್ಡಿಪುಡಿಗಳೂ ಭಾರತೀಯ ಚಳುವಳಿಗಾರರ ಜೊತೆಯಲ್ಲಿ ಪ್ರವಾಸ ಹೋಗಿದ್ದವಂತೆ.

ನಾವು ಉಳಿಯಲು ಒಂದು ಮನೆಗೆ ಹೋಗಿದ್ದೆವು. ಅಡಿಕೆ ಚೂರು ತೆಗೆದು ಆ ಕುಟುಂಬದ ಮಹಿಳೆಗೆ ಕೊಟ್ಟೆವು. ಇದನ್ನು ನೀವು ಬೆಳೆಯುತ್ತೀರಿ ಎಂದು ಕೇಳಲಾಯಿತು. ಬೆಳೆಯುವ ವಿಧಾನ ವಿವರಿಸುವಂತೆ ಆ ಮಹಿಳೆ ಕುತೂಹಲದಿಂದ ಕೇಳಿದಳು. ಅಡಿಕೆ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು.

ಕೂಡಲೇ ಆ ಕುಟುಂಬದ ಮಹಿಳೆ ಅಟ್ಲಾಸ್ ತಂದರು. ಕರ್ನಾಟಕದ ಮಂಗಳೂರು ತೋರಿಸಿದರು. ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶದ ಭಾಗಗಳಿಂದ ನೀವೆಲ್ಲಾ ಬಂದಿದ್ದೀರಿ ಎಂದು ಆಕೆ ನಮ್ಮೂರಿನ ಬಗ್ಗೆ ನಮಗೇ ವಿವರಿಸಿದರು. ನಮ್ಮ ಶಾಲಾ-ಕಾಲೇಜುಗಳಲ್ಲಿ ಕನಿಷ್ಠಪಕ್ಷ ನಮ್ಮ ಕಲಿಕಾರ್ಥಿಗಳಿಗೆ ಸರಿಯಾಗಿ ಅಟ್ಲಾಸ್ ನೋಡುವುದನ್ನು ಹೇಳಿ ಕೊಟ್ಟಿದ್ದೇವೆಯೇ? ಎಂದು ಆಗಾಗ ಮಾತನಾಡುವ ಸಂದರ್ಭಗಳಲ್ಲಿ ಅವರು ಪ್ರಶ್ನೆ ಹಾಕುತ್ತಿದ್ದರು.

ಕೃಷಿ ಎಂದರೆ ಅಲ್ಲಿಯವರೆಗೆ ಅಷ್ಟೊಂದು ಆಸಕ್ತಿ. ಬೇಸಾಯ ಬಲ್ಲವರಾದರೂ ಮನೆಮಂದಿಯಲ್ಲ ಕೃಷಿ ಮಾಹಿತಿ ಓದಿ, ಸಂಗ್ರಹಿಸಿ ತಿಳಿಯುತ್ತಾರೆ. ಅಲ್ಲಿಯ ಮಕ್ಕಳಿಗೆ ಶಾಲೆಗಿಂತ ಮನೆಯಲ್ಲೇ ಹೆಚ್ಚು ಓದುವ ಅನುಕೂಲವಿದೆ. ಅಲ್ಲಿ ಪುಸ್ತಕ ರಹಿತ ಮನೆ ಜ್ಞಾನ ರಹಿತ ಗೃಹ.
ಸಿಲಬಸ್ ಶಿಕ್ಷಣಕ್ಕಿಂತ ಅವರದ್ದು ಸಾಮಾನ್ಯ ಜ್ಞಾನಕ್ಕೆ ಮೊದಲ ಆದ್ಯತೆ. ಸಾಮಾನ್ಯ ತಿಳುವಳಿಕೆ ಮನೆತನಕ್ಕೆ ಅನುಕೂಲ ಎಂದು ನಂಬಿರುವವರು. “ ಮೈಯಾಳು” ಪದ್ಧತಿ ಆದೇಶದಲ್ಲಿಯೂ ಇದೆ. ಆದರೂ ಅಲ್ಲಿಯೂ ಕೂಡ ಬದುಕು ತುಂಬಾ ದುಬಾರಿ. ದನ ಕಟ್ಟಿಕೊಂಡು ಬೇಸಾಯ ಮಾಡುವುದು ದುಬಾರಿಯಲ್ಲ. ಯಂತ್ರೋಪಕರಣ ಕಟ್ಟಿಕೊಂಡು ಕೃಷಿ ಮಾಡುವುದು ಕಷ್ಟ ಎಂಬುದು ಈಗಾಗಲೇ ಯುರೋಪಿಯನ್ ರೈತರಿಗೆ ಅರ್ಥವಾಗುವಂತಿದೆ.

ಎಕ್ಸ್ಪನ್ಸಿವ್ ಅಗ್ರಿಕಲ್ಚರಲ್ ಪ್ಯಾರಿಸ್ ಎಂದು ಪ್ರೊಫೆಸರ್ ಆಗಾಗ ಹೇಳುತ್ತಿದ್ದರು. 120 ಹೆಚ್ ಪಿ ಟ್ರ್ಯಾಕ್ಟರ್ ಬಳಸುತ್ತಾರೆ. ಕೃಷಿ ಯಾಂತ್ರೀಕರಣಗೊಂಡಿದೆ. ಅತಿಯಾದ ಯಂತ್ರೋಪಕರಣಗಳ ಬಳಕೆಯಿಂದ ಕೃಷಿ ಪರಿಸ್ಥಿತಿಯು ದುಬಾರಿ.

ನಮ್ಮಲ್ಲಿ 26 39 35 55 ಹೆಚ್ ಪಿ ಟ್ರ್ಯಾಕ್ಟರ್ ಬಳಕೆಯಾಗುತ್ತಿವೆ. ಕೃಷಿಗಳ ಮೇಲೆ ಇವುಗಳು ಒತ್ತಡ ಹಾಗೂ ದುಬಾರಿಯನ್ನುಂಟು ಮಾಡಿವೆ ಎಂದು ಯುರೋಪಿಯನ್‌ ಹಳ್ಳಿಗಳ ಹೊಲಗಳಲ್ಲಿ ಹಮ್ಮಿಕೊಂಡ ಒಂದೂವರೆ ತಿಂಗಳ ಅವಧಿಯ ಚಳುವಳಿಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.

ನಮ್ಮ ಭಾಗದಲ್ಲಿ ಚಳುವಳಿಯ ಹಿರಿಯ ಮುತ್ಸದ್ಧಿ ಬೆನ್ನಾಯಕನಹಳ್ಳಿ ದೇವರಾಜ್‌ ನಮ್ಮನ್ನೆಲ್ಲಾ ಅಗಲಿರುವುದೇ ವಿಶಾಧನೀಯ ಸಂಗತಿ. ಚಳುವಳಿಗಳ ಬಹುಮುಖ್ಯವಾದ ಕೃತಿಯೊಂದನ್ನು ಕಾಲ ನಮ್ಮಿಂದ ಕಸಿದುಕೊಂಡಂತಾಗಿದೆ.


ದೇವರಾಜಣ್ಣ ನೆನಪಿನ ಭಾಗವಾಗಿ ಈ ಲೇಖನ. ಅವರ ನೆನಪುಗಳನ್ನು ನೀವು ಬರೆಯಿರಿ. 9844817737

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?