ಕವನ

ನವರಾತ್ರಿ ಕವನ :ಕೆಂಪು

ಕೆಂಪು ಬಣ್ಣ ಪ್ರೀತಿಯ ಸಂಕೇತ. ಕೆಂಪು ಕಾತ್ಯಾಯನಿ ದೇವಿಗೆ ಪ್ರಿಯವಾದದ್ದು. ಕೆಂಪು ಬಣ್ಣದ ಕಂಪು ಹೇಗೆಲ್ಲಾ ಪಸರಿಸಿದೆ.
ಸಂಸಾರದ ಜಂಜಾಟದಲ್ಲಿ
ಬಡತನ, ಗಂಡನ ಕುಡಿತ, ಬಡಿತ
ಬೆಳೆದ ಮಗಳು..
ಅಸಹಾಯಕತೆ
ಇವುಗಳನ್ನು ನೋಡಿ
ಕೆಂಪು ಬಣ್ಣ ಬಡ ಸ್ತ್ರೀಗೆ ಹೇಗೆ
ಕಾಡಿದೆ ಎನ್ನುವುದೇ ದುರಂತವೆಂದು ಕವಯತ್ರಿ ಇಲ್ಲಿ ವ್ಯಕ್ತಪಡಿಸಿದ್ದಾರೆ.


ಕೆನ್ನೆ ಕೆಂಪೇರಿದ್ದನ್ನು
ನೋಡಿ
ತಂದು ಕೊಟ್ಟ ಕೆಂಪು ಗುಲಾಬಿ..

ತೊಂಡೆ ತುಟಿ,
ಅಂಗಾಲ
ತಿಳಿಗೆಂಪು ಬರು ಬರುತ್ತಾ ಮಾಸಿ..

ಮಧ್ಯೆ ….ಕೆಂಪು ಚಟ್ನಿ
ಟಮೋಟೋ ಗೊಜ್ಜು
ದಾಳಿಂಬೆ ಸುಳಿದು ..

ರೂಬಿ ಉಂಗುರದ ಡಂಗುರ
ಹಾಗೇ ಉಳಿದು ಹೋಗಿ
ಕುಡಿದು . ಕೆಂಗಣ್ಣು..

ಒಮ್ಮೊಮ್ಮೆ
ಕೆಂಪು
ಬಾಸುಂಡೆ …

ಮೂರನೇ
ಕಣ್ಣು ಬಿಟ್ಟು … ಕೆಂಪು
ಮೆಣಸಿನ ಕಾಯಿ ಖಾರ…

ಪುಟ್ಟ ಮಗಳಿಗೆ
ಕೆಂಪು
ಫ್ರಾಕು ..

ರೆಡ್ ವೆಲ್ವೆಟ್
ಕೇಕ್ … ಮೇಲೆ
ರೆಡ್ ಚೆರ್ರಿ ..

ಹಬ್ಬಕ್ಕೆ
ಕೆಂಪು ಉಗುರು
ಬಣ್ಣ… ಬ್ರೋಚು.. ಲಿಪ್ ಸ್ಟಿಕ್

ಗುಲಗಂಜಿ ಪ್ರೀತಿಗೆ
ಕಾದು ಕಾದು
ರೊಟ್ಟಿ ಹೆಂಚು ಕೆಂಪು..

ಮಗಳು
ಮೈ ನೆರೆದು
ಕೆಂಪು ಗುಲಾಬಿಗೆ ಕಾಯುತ್ತಾ …

ದಿನ ಸರಿದು
ದಿನ ಹುಟ್ಟಿ
ಆಕಾಶದಲ್ಲಿ ಪ್ರತಿ ನಿತ್ಯ ಕೆಂಪು..

ಸಂಸಾರದ ಜಂಜಾಟದಲ್ಲಿ
ಪ್ರೀತಿ ಸೇರಿತು..ಮಂಗಳ
ಗ್ರಹ..

ನಿರಂತರ ಕಾಯುವಿಕೆ
ಪ್ರೀತಿಗಾಗಿ
ಕೆಂಪು ಗುಲಾಬಿಗಾಗಿ

ಕೆಂಪು ಅನ್ನುವುದೇ ವಿಷ ಚಕ್ರ
ಬದುಕಿನಲ್ಲಿ
ನಿತ್ಯ ದಾಹ..

ಕಾಲ ಸರಿದು
ಕೆಂಪು ಗುಲಾಬಿ
ಬಿಳಿ ಯಾಗಿ
ಪಕಳೆ ಉದುರಿ

ರಕ್ತ ತಿಲಕ…
ಉರಿಗಣ್ಣು
ಸಿಡಿದು
ಜ್ವಾಲಾಮುಖಿ

ಡಾ|| ರಜನಿ

Comment here