ತುಮಕೂರು ಲೈವ್

ಮಕ್ಕಳು ಮತ್ತು ಯುವಕರು ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯ

ತುರುವೇಕೆರೆ-ಆಗಸ್ಟ್ 12
ಮಕ್ಕಳಲ್ಲಿ ಮತ್ತು ಯುವಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವ ಮೂಲಕ ಅಕ್ಷರ ಹಾಗೂ ಪುಸ್ತಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ತುರ್ತು ಅಗತ್ಯವಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು
ಸ್ಥಳೀಯ ಗ್ರಂಥಾಲಯದಲ್ಲಿ ಗುರುವಾರ ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವಮಾಧ್ಯಮಗಳ ಪರಿಣಾಮವಾಗಿ ಮಕ್ಕಳು ಪುಸ್ತಕಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ದೂರಿ ಪ್ರಯೋಜನವಿಲ್ಲ. ಅನ್‍ಲೈನ್ ಕನ್ನಡ ವೇದಿಕೆಗಳ ಮೂಲಕವೇ ಮಕ್ಕಳಿಗೆ ಪುಸ್ತಕ ಪರಿಚಯ ಮಾಡಿಕೊಟ್ಟು ಕನ್ನಡದ ಸಾರಸ್ವತ ಲೋಕಕ್ಕೆ ಅವರನ್ನು ಸೆಳೆಯಬೇಕು. ಸ್ಥಳೀಯ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಪಟ್ಟಣದಲ್ಲಿ ಶಾಶ್ವತ ಗ್ರಂಥಾಲಯ ಭವನಕ್ಕೆ ಒಂದು ಸೂಕ್ತ ನಿವೇಶನ ದೊರಕಿಸಿಕೊಟ್ಟು ಸುಸಜ್ಜಿತ ಗ್ರಂಥಾಲಯ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಾಪಕ ಶೈಲೇಶ್ ಮಾತನಾಡಿ ಸಾರ್ವಜನಿಕರಲ್ಲಿ ಪುಸ್ತಕಗಳ ಅರಿವು ಮೂಡಿಸಲು ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಅಭಿಯಾನಗಳು ನಡೆಯಬೇಕು. ಹಳೆಯ ಪೀಳಿಗೆಯ ಸಾಹಿತಿಗಳ ಜೊತೆಗೆ ಸಮಕಾಲೀನ ಬರಹಗಾರರ ಮೌಲಿಕ ಕೃತಿಗಳ ಕುರಿತು ಶಾಲೆ, ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು ಗ್ರಂಥಾಲಯ ವಿಜ್ಞಾನದ ಪಿತಾಮಹ ಎಸ್.ಆರ್.ರಂಗನಾಥನ್ ಅವರ ಕೊಡುಗೆಗಳನ್ನು ಸ್ಮರಿಸಿದರು.
ಗ್ರಂಥಪಾಲಕರಾದ ಎಂ.ಎಸ್.ಪ್ರಭಣ್ಣ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಗ್ರಾಮ ಪಂಚಾಯಿತಿ ಗ್ರಂಥಾಲಯದ ಮೇಲ್ವಿಚಾರಕರು ಹಾಗೂ ಓದುಗರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Comment here