ವಾರದ ಪುಸ್ತಕ

ಪತ್ರಕರ್ತರ ಕಥೆ ಹೇಳುವ ಆ ಪತ್ರಿಕೋದ್ಯಮ

ಸಿ.ಕೆ.ಮಹೇಂದ್ರ


ಅತಿ ಸುದೀರ್ಘ ಕಾಲ ಪತ್ರಕರ್ತರಾಗಿ ದುಡಿದಿರುವ ಹೆಸರಾಂತ ಪತ್ರಕರ್ತ ಜಿ,ಎನ್. ರಂಗನಾಥ ರಾವ್ ಅವರು ಬರೆದಿರುವ ಪುಸ್ತಕ “ಆ ಪತ್ರಿಕೋದ್ಯಮ”.

ಹೆಸರೇ ಹೇಳುವಂತೆ ಆ ಕಾಲದ ಪತ್ರಿಕೋದ್ಯಮದ ಬಗ್ಗೆ ಮಾತನಾಡುತ್ತಲೇ ಈ ಕಾಲದ ಪತ್ರಿಕೋದ್ಯಮವನ್ನು ತುಲನೆಗೆ ಹಚ್ಚಿದೆ.

ಇದು ಆತ್ಮಕಥೆ ಅಲ್ಲ ಎಂದು ಲೇಖಕರು ಆರಂಭದಲ್ಲೇ ಷರಾ ಬರೆದಿರುವುದರಿಂದ ಇದು ರಂಗನಾಥ ರಾವ್ ಅವರ ಅನುಭವ ಕಥನ ಎನ್ನುವುದಕ್ಕಿಂತಲೂ ಕರ್ನಾಟಕದ ಪತ್ರಿಕೋದ್ಯಮ, ಪತ್ರಕರ್ತರ ಮುಚ್ಚು ಮರೆಯ ಅನುಭವದ ಪುಸ್ತಕವಾಗಿದೆ.

ಪತ್ರಕರ್ತರು ಅಷ್ಟೇ ಅಲ್ಲದೇ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಇರುವರೆಲ್ಲರೂ, ಪತ್ರಿಕೆಗಳನ್ನು ಓದುವ ಹವ್ಯಾಸ ಇರುವ ಎಲ್ಲರೂ ಓದಬಹುದಾದ ಪುಸ್ತಕ ಇದಾಗಿದೆ.

ಮೀಡಿಯಾ ಮಿರ್ಚಿ ಅಂಕಣ ಬರಹದ ಮೂಲಕ ಪತ್ರಿಕೋದ್ಯಮವನ್ನು ಒರೆಗೆ ಹಚ್ಚಿದ್ದ ಜಿ.ಎನ್.ಮೋಹನ್ ಅವರ ನೇತೃತ್ವದ ಬಹರೂಪಿಯಿಂದ ಪುಸ್ತಕ ಪ್ರಕಟಿಸಲಾಗಿದೆ. ಪುಸ್ತಕದಲ್ಲಿರುವ ಲೇಖನಗಳು ಅವಧಿ ಜಾಲತಾಣದಲ್ಲಿ ಪ್ರಕಟಗೊಂಡ ಬರಹಗಳ ಸಂಕಲನವಾಗಿದೆ. ಬರಹಗಳ ಸಂಕಲನ ಎಂಬಂತೆ ಪುಸ್ತಕ ಕಾಣುವುದಿಲ್ಲ. ಪುಸ್ತಕವಾಗಿಯೇ ಬರೆಯಲಾಗಿದೆ ಎಂಬಂತೆ ಓದುತ್ತಾ ಓದಂತೆ ಭಾಸವಾಗುತ್ತದೆ.

ಜಿ.ಎನ್.ರಂಗನಾಥ ರಾವ್ ಹೆಸರಾಂತ ಪತ್ರಕರ್ತರು. ಬಹುತೇಕ ಅವರ ಪುಸ್ತಕಗಳಿಲ್ಲದ ಕಪಾಟು ಪತ್ರಕರ್ತರ ಮನೆಯಲ್ಲಿ ಇರಲಿಕ್ಕಿಲ್ಲ. ಸತ್ಯವನ್ನೇ ನಂಬುವಂತೆ ಹೇಳಿದ ತನ್ನ ತಂದೆಯ ಜಾಡು ಹಿಡಿದ ಹುಡುಗ ಏನ್ನೆಲ್ಲ ಮಾಡಬೇಕಾಯಿತು ಎಂಬುದು ಪುಸ್ತಕ ಓದುತ್ತಾ ಓದಂತೆ ಗೋಚರಿಸುತ್ತದೆ.

ಪತ್ರಕರ್ತನಾಗುವ ಕನಸನ್ನು ಎಂದಿಗೂ ಕಾಣದ ರಂಗನಾಥ್, ಲಂಚ ಪಡೆಯಬಾರದ ಕೆಲಸ ಹುಡುಕಲು ಹೋಗಿ, ಸರ್ಕಾರಿ ಕೆಲಸಗಳಿಗೆ ರಾಜೀನಾಮೆ ನೀಡುತ್ತಾ ನೀಡುತ್ತಾ ಕೊನೆಗೂ ಹೊಟ್ಟೆಪಾಡಿಗಾಗಿ ಲಂಚ ಪಡೆಯದ ಕೆಲಸ ಎಂಬಂತೆ ಕಾಣುವ ಪತ್ರಿಕೋದ್ಯಮದ ಬಾಗಿಲು ತಟ್ಟಿದವರು.

ಲಂಚದ ಪ್ರಪಂಚ, ಮೋಸದ ಪ್ರಪಂಚ ನೋಡಿದ ಹುಡುಗ, ಅಪ್ಪನ ಅಣತಿಯಂತೆ ಸತ್ಯದ ದಾರಿಯಲ್ಲಿ ನೆಡೆಯಲು ಹೋಗಿ ಹಲವು ಕೆಲಸಗಳನ್ನು ಬಿಡಬೇಕಾಗುತ್ತದೆ, ರಿಜಿಸ್ಟ್ರಾರ್ ಆಫೀಸ್ ನಲ್ಲಿ ಸಿಕ್ಕ ಮೊದಲ ಕೆಲಸದಲ್ಲಿ ಸಿಕ್ಕ ಲಂಚದ ಹಣವನ್ನು ಅಪ್ಪನ ಕೈಗೆ ಇಟ್ಟಾಗ ಅವರು ಹೇಳಿದ ಸತ್ಯದ ದಾರಿಯಲ್ಲಿ ನಡೆಯಲು ಹೋಗಿ ಪತ್ರಿಕೆ ಸೇರಿಕೊಂಡರು. ಪತ್ರಿಕೋದ್ಯದಮ ಸತ್ಯ. ಅಸತ್ಯದ ಮುಖವನ್ನು, ಪತ್ರಕರ್ತರೊಳಗಿನ ದೊಂಬರಾಟ, ಹೊಟ್ಟೆಕಿಚ್ಚು, ರಾಜಕೀಯ, ಮಾಲೀಕರ ಮರ್ಜಿ, ಸಂಪಾದಕರ ಕಷ್ಟ ಹೀಗೆ ಎಲ್ಲವನ್ನು ಎಳೆಎಳೆಯಾಗಿ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.

ರಂಗನಾಥ್ ರಾವ್ ಅವರು ತಾಯಿನಾಡಿನಲ್ಲಿ ವೃತ್ತಿ ಆರಂಭಿಸಿದವರು, ಸಂಯುಕ್ತ ಕರ್ನಾಟಕ, ಪ್ರಜಾವಾಣಿಯಲ್ಲಿ ವೃತ್ತಿ ಮಾಡಿದವರು, ಪ್ರಜಾವಾಣಿ, ಸುಧಾ, ಮಯೂರ, ಕಸ್ತೂರಿ ಪತ್ರಿಕೆಯ ಸಂಪಾದಕರಾಗಿ ದುಡಿದವರು. ಅವಧಿ ಮತ್ತು ವಾರ್ತಾ ಭಾರತಿ ಅಂಕಣಕಾರರಾಗಿದ್ದವರು. ಹೀಗಾಗಿ ಪುಸ್ತಕ ಪರ್ತಕರ್ತರು, ಪತ್ರಿಕೋದ್ಯಮದ ಒಳ. ಹೊರಮುಖವನ್ನು ಚೆನ್ನಾಗಿಯೇ ಅಭಿವ್ಯಕ್ತಿಸಿದೆ.

ಪತ್ರಕರ್ತನಾಗಿ ಅನುಭವ ಇರುವ ನನಗೆ, ಸಂಪಾದಕರು ಇಷ್ಟೊಂದು ಕಷ್ಟ ಅನುಭವಿಸಬಹುದೇ ಎಂಬುದು ಗೊತ್ತಿರಲಿಲ್ಲ. ಸಂಪಾದಕರು ಹೊಟ್ಟೆಯೊಳಗಿನ ಸಂಕಟಗಳನ್ನು ಪುಸ್ತಕ ತೆರೆದಿಟ್ಟಿದೆ.
ಪತ್ರಕರ್ತರ ವೃತ್ತಿಯೇ ಕಷ್ಟದ್ದು. ನಮ್ಮೆಲ್ಲರ, ಆಗಿನ ಪತ್ರಿಕೋದ್ಯಮ ಚೆನ್ನಾಗಿತ್ತು, ಪ್ರಾಮಾಣಿಕವಾಗಿತ್ತು ಎಂಬ ನಂಬಿಕೆಯನ್ನು ಪುಸ್ತಕ ಉಲ್ಟಾ ಪಲ್ಟಾ ಮಾಡುತ್ತದೆ. ಆ ಪತ್ರಿಕೋದ್ಯಮದಲ್ಲೂ ಭಕ್ಷೀಸು ಪಡೆಯುತ್ತಿದ್ದ, ರಾಜಕಾರಣಿಗಳ ಮರ್ಜಿ ಕಾಯುತ್ತಿದ್ದ, ಮಾಲೀಕರಿಗೆ, ಸಂಪಾದಕರಿಗೆ ಬಕೀಟು ಹಿಡಿಯುತ್ತಿದ್ದ ಪರ್ತಕರ್ತರ ಬಗ್ಗೆ ಪುಸ್ತಕ ಬೆಳಕು ಚೆಲ್ಲಿರುವುದರಿಂದ ಈ ಪತ್ರಿಕೋದ್ಯಮ ಸ್ವಲ್ಪ ಕೈ ಮುಂದು ನೀಡಿ ಎರವಲು ಪಡೆದುಕೊಂಡಿದೆ ಎನ್ನಿಸುತ್ತದೆ.

ಸಂಯುಕ್ತ ಕರ್ನಾಟಕ, ಪ್ರಜಾವಾಣಿ ಸೇರಿದಂತೆ ಆ ಕಾಲದ ಅನೇಕ ಪತ್ರಕರ್ತರ, ಪತ್ರಿಕೋದ್ಯಮದ ಅಪರೋಕ್ಷ ಜೀವನ ಚರಿತ್ರೆಯಂತೆಯೇ ಇರುವ ಪುಸ್ತಕವು ಪತ್ರಿಕೋದ್ಯಮವನ್ನು ಆಳವಾಗಿ ಪ್ರೀತಿಸುವವರು ಓದಿದರೆ ಅಲ್ಲಲ್ಲಿ ದುಂಖ ಉಮ್ಮಳಿಸಿ ಬಂದು ಕಣ್ಣೀರಾಗುವುದೇ ಹೆಚ್ಚು.

ಪುಸ್ತಕ ಬೇಕಿದ್ದವರು ಮೊಬೈಲ್ – 7019182729 ಸಂಪರ್ಕಿಸಬಹುದು ಅಥವಾ ಬೆಂಗಳೂರಿನ ಬಹುರೂಪಿ ಮಳಿಗೆಯಲ್ಲಿ ಖರೀದಿಸಬಹುದು.

Comment here