ಭಾನುವಾರದ ಕವಿತೆ

ಭಾನುವಾರದ ಕವನ : ಕಣ್ಣೀರು

ಡಾ. ರಜನಿ

ಕಣ್ಣೀರು


ಹುಡುಕಿದ
ಕೆಣಕಿದ…
ಆಹ್ವಾನ ನೀಡಿದ
ಕಣ್ಗಳಲ್ಲಿ …
ನೀರು ಹರಿಸಲು ನಿನಗೆ
ಮನಸ್ಸಾದರೂ ಹೇಗೆ ಬಂತು?

ಸುರಿಸಬೇಡ
ಎಂದು ಮೊರೆ
ಇಡುತ್ತಿದೆ ಕಣ್ಣೀರ ಬಿಂದು…
ರೆಪ್ಪೆಗಳ ಒಡ್ಡು ಹಾಕಿರುವೆ..
ಸುರಿಸಿದರೆ ಗೊತ್ತು….
ಜನ ಸುರಿಸುವುದನ್ನೆ ಕಾಯುತ್ತಿದ್ದಾರೆ ಎಂದು.

ನನ್ನ ರಗ್ಗೊಳಗೆ ಸುರಿಸಿದ
ಕಣ್ಣೀರು
ಪ್ರವಾಹವನ್ನೆ
ಸೃಷ್ಟಿಸಬಹುದಿತ್ತು.

ನೀನು ಅರ್ಥ
ಮಾಡಿಕೂಳ್ಳದ
ಭಾವನೆಗಳೇ
ನನ್ನ ಕಣ್ಣೀರು
ಎಂಬುದು ನಿನಗೆ
ಗೊತ್ತಾ?

ತುಳುಕಲಿ ಬಿಡು


ತುಂಬದೆ ತುಳುಕದು
ತುಂಬಿಕೊಂಡದ್ದಾದರೂ
ಏತಕ್ಕೆ?

ಕರೆದ ಕಣ್ಣುಗಳನ್ನೇ
ಕೊಳ ಮಾಡಿದವನ
ನೆನೆದು ?

ಹೃದಯದ ಭಾಷೆ
ಅರಿತವನಿಗೆ
ಕಣ್ಣು ಕೆರೆಯಾದದ್ದು ಕಾಣದೆ ?

ರೆಪ್ಪೆ
ಮುತ್ತಿಕ್ಕಿದವನಿಗೆ
ಕಣ್ಣೀರು ಕುಡಿಯಲಾಗದೆ ?

ಕಣ್ಣು
ಮೋಸ ಹೋಯಿತೆ?
ಹೃದಯ ಕಣ್ಣಿಗೆ
ಸನ್ನೆ ನೀಡಲಿಲ್ಲವೆ?

ತುಳುಕಿದರೆ
ತುಳಿಯುವರೆ?

ಅಲ್ಲೇ ಹಿಂಗಿಸಿ
ಸುಳ್ಳು ನಗು
ನಗುವೆಯಾ?

ಹೀರಿ
ಹಿಂಗಿದರೂ …
ಕೆಂಪಾಗಿ ಕಾಣದೆ ?

ಕೆನ್ನೆ ಕೆಂಪಾಗಿ
ಕಣ್ಣು ಅರಳಿದ್ದಕ್ಕೆ
ಈ ಶಿಕ್ಷೆಯೆ?

ನುಂಗು ನುಂಗು …
ಕಣ್ಣೀರ ಕೊಳಕ್ಕೂ
ಧುಮಕಿ ನಗಿಸುವ

ಚೋರ ಅವನು …

Comment here